ಬಿಜೆಪಿ ಆರ್‌ಎಸ್‌ಎಸ್ ಭಜರಂಗದಳ ನಿಷೇಧಿಸಬೇಕು: ಸಿದ್ರಾಮಯ್ಯ, ದಿನೇಶ್

ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ, ಆರ್‌ಎಸ್‌ಎಸ್, ಭಜರಂಗ ದಳದವರೇ ಉಗ್ರಗಾಮಿಗಳು. ಅವರನ್ನು ಮೊದಲು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತ್ಯೇಕ ಹೇಳಿಕೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಧರ್ಮ ಮತ್ತು ಕೋಮು ಆಧರಿಸಿ ರಾಜಕೀಯ ಮಾಡುತ್ತಿರುವುದು ಬಿಜೆಪಿಯವರು. ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಅದನ್ನು ಸಹಿಸುವುದಿಲ್ಲ.  ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಭಜರಂಗ ದಳದವರು ಉಗ್ರಗಾಮಿಗಳಂತೆ ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇತ್ತ ಆನಂದರಾವ್ ವೃತ್ತದಲ್ಲಿ ಧನ್ಯಶ್ರೀ ಮೇಲೆ ನಡೆದ ಲೈಂಗಿಕ ದೌರ್ಜನ್ಯ ವಿರೋಧಿಸಿ ಎನ್‌ಎಸ್‌ಯುಐ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ, ಬಿಜೆಪಿ, ಆರ್‌ಎಸ್‌ಎಸ್, ಭಜರಂಗ ದಳವನ್ನು ನಿಷೇಧಿಸಬೇಕು. ನಿಜವಾದ ಜಿಹಾದಿಗಳೇ ಅವರು ಎಂದು ಆರೋಪಿಸಿದ್ದಾರೆ.
ಸಮಾಜದ ಶಾಂತಿ ಕದಡುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕೂಡ ಭಯೋತ್ಪಾದಕರು. ಹಿಂದೂ ಸಂಘಟನೆ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಮೊದಲು ಆರ್‌ಎಸ್‌ಎಸ್‌ನನ್ನು ನಿಷೇಧಿಸಬೇಕು ಎಂದು ಗುಡುಗಿದ್ದಾರೆ.
ಲೈಂಗಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಧನ್ಯಶ್ರೀ ಬಗ್ಗೆ ದನಿ ಎತ್ತದ ಶೋಭಾ ಕರಂದ್ಲಾಜೆ ಯಾವ ಸಿದ್ಧಾ0ತದಲ್ಲಿದ್ದಾರೆ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಕೋಮು ಹೆಸರಿನಲ್ಲಿ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

Leave a Reply