ನೋವು ನುಂಗಿ ಯಡಿಯೂರಪ್ಪ ಏಕಾಂಗಿ ಹೋರಾಟ!

ಡಿಜಿಟಲ್ ಕನ್ನಡ ಟೀಮ್:

ಎಲ್ಲ ಒಗ್ಗಟ್ಟಿಂದ ಹೋಗಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು ಅಂದ್ರೆ ಒಗ್ಗಟ್ಟು ಬಹಳ ಮುಖ್ಯ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದೇ ಹೇಳಿದ್ದು. ಆದರೆ ತುಮಕೂರಿನ ಶಿರಾ, ಕೊರಟಗೆರೆ, ಪಾವಗಡ, ಮಧುಗಿರಿಯಲ್ಲಿ ಗುರುವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಏಕಾಂಗಿಯಾಗಿದ್ದ ಯಡಿಯೂರಪ್ಪ ಅವರನ್ನು ನೋಡಿದಾಗ ಅಮಿತ್ ಶಾ ಪಾಠ ಇನ್ನೂ ನಾಟಿಲ್ಲ ಎಂಬುದು ಢಾಳಾಗಿ ರಾರಾಜಿಸುತ್ತಿತ್ತು!

ಅಮಿತ್ ಶಾ ನೀಡಿರುವ ಹಲವು ಭೇಟಿಗಳ ಹಿಂದಿನ ಉದ್ದೇಶ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹಕ್ಕೆ ಬೇಲಿ ಹಾಕುವುದೇ ಆಗಿತ್ತು. ಅವರು ಬಂದಾಗಲೆಲ್ಲ ಒಗ್ಗಟ್ಟಿನ ಮಂತ್ರ ಬೋಧಿಸಿದ್ದಾರೆ. ಚುನಾವಣೆ ಪ್ರಚಾರದಲ್ಲಿ ಎದುರಾಳಿಗಳ ದೌರ್ಬಲ್ಯ ಎತ್ತಿ ತೋರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಿರೋಧಿಗಳಿಗೆ ತಮ್ಮ ಪಕ್ಷದ ಲೋಪದೋಷಗಳು ಕೈಗೆ
ಟುಕದಂತೆ ವರ್ತಿಸುವುದು ಎಂದು ಒತ್ತಿ, ಒತ್ತಿ ಹೇಳಿದ್ದಾರೆ. ಆದರೆ ಅದು ರಾಜ್ಯ ನಾಯಕರ ದಪ್ಪ ಚರ್ಮಕ್ಕೆ ಇಳಿದಿಲ್ಲ ಅಥವಾ ಇಳಿಸಿಕೊಳ್ಳುವುದು ಅವರಿಗೆ ಬೇಕಿಲ್ಲ ಎನ್ನುವುದು ತುಮಕೂರಿನ ನಾನಾ ಕಡೆ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೊಬ್ಬರೇ ಭಾಗವಹಿಸಿ ಹಿಂತಿರುಗಿರುವುದು.

ವಿಧಾನ ಮಂಡಲ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಪ್ರಮುಖ ನಾಯಕರಾರೂ ಯಡಿಯೂರಪ್ಪ ಜತೆಗಿರಲಿಲ್ಲ. ಇದು ರಾಜ್ಯ ನಾಯಕರ ವಿಚಾರವಾಯಿತು. ತುಮಕೂರು ಜಿಲ್ಲಾ ನಾಯಕರೂ  ಇರಲಿಲ್ಲ. ಮಾಜಿ ಸಚಿವ ಸೊಗಡು ಶಿವಣ್ಣ, ಸ್ಥಳೀಯ ನಾಯಕರಾದ ನಂದೀಶ್, ಕಾಂತರಾಜು ಗೈರು ತುಮಕೂರು ಜಿಲ್ಲಾ ಬಿಜೆಪಿಯಲ್ಲಿನ ಬಿರುಕಿಗೆ ಕನ್ನಡಿ ಹಿಡಿದಿತ್ತು.
ಪಕ್ಷ ಸಂಘಟನೆಗೆ ಇತರ ನಾಯಕರು ಸಹಕರಿಸುತ್ತಿಲ್ಲ. ಕೆಲವರು ಒಳಗೊಳಗೇ ಪಿತೂರಿ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪನವರು ಹಲವು ಬಾರಿ ಬಹಿರಂಗವಾಗಿಯೇ ಕಾರಿಕೊಂಡಿದ್ದರು. ಆದರೆ ಇವತ್ತು ಯಡಿಯೂರಪ್ಪನವರು ಮೌನದ ಮೊರೆ ಹೋದರು. ಆ ಮೌನದಲ್ಲಿ ನೋವು, ಹತಾಶೆ ಮಡುಗಟ್ಟಿತ್ತು. ಯಡಿಯೂರಪ್ಪನವರು ಅವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ ಮುಖಭಾವ ಮಾತ್ರ ಆದಕ್ಕೆ ಆಸ್ಪದ ಕೊಟ್ಟಿರಲಿಲ್ಲ!

Leave a Reply