ಗೋರಕ್ಷಣೆ ಕುರಿತು ಬಿಜೆಪಿಯಲ್ಲೇ ‘ಡಬಲ್ ಗೇಮ್’: ಯೋಗಿ, ಯಡಿಯೂರಪ್ಪಗೆ ಮುಜುಗರ ತಂತು ಪರಿಕ್ಕರ್  ನಿಲುವು!

ಡಿಜಿಟಲ್ ಕನ್ನಡ ಟೀಮ್:
ಗೋರಕ್ಷಣೆ, ಗೋಮಾಂಸ ಸಾಗಣೆ ವಿಚಾರದಲ್ಲಿ ಬಿಜೆಪಿಯಲ್ಲೇ ಗೊಂದಲವಿದೆ.ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಬಿಜೆಪಿ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಸಾಯಿಖಾನೆಗಳನ್ನೇ ಬಂದ್ ಮಾಡಿಸಿದ್ದಾರೆ. ಆದರೆ ಅದೇ ಪಕ್ಷ ಪ್ರತಿನಿಧಿಸುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕರ್ನಾಟಕದಿಂದ ತಮ್ಮ ರಾಜ್ಯಕ್ಕೆ ಗೋಮಾಂಸ ಸಾಗಣೆಗೆ ತಡೆ ಒಡ್ಡುವ ಗೋರಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಗೋಹತ್ಯೆ, ಗೋಮಾಂಸ ಸಾಗಣೆ ಮತ್ತು ಗೋಮಾಂಸ ಸೇವನೆ ಸಂಬಂಧ ಬಿಜೆಪಿಯಲ್ಲೇ ಇರುವ ದ್ವಂದ್ವಗಳಿಗೆ ಇದು ಕನ್ನಡಿ ಹಿಡಿದಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ತಾವೂ ಕೂಡ ಹಿಂದೂ, ಹಿಂದುತ್ವ ಯಾರೊಬ್ಬರ ಸ್ವತ್ತಲ್ಲ ಎಂದು ಗುಡುಗಿದ್ದರು. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ಕೊಟ್ಟಿದ್ದ ಯೋಗಿ ಆದಿತ್ಯನಾಥ ಅವರು ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸದ ಸಿದ್ದರಾಮಯ್ಯ ಯಾವ ಸೀಮೆ ಹಿಂದು ಎಂದು ಪ್ರಶ್ನಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಂತೂ ಹೋದಲ್ಲಿ ಬಂದಲ್ಲಿ ಇದೇ ವಿಚಾರ ಹಿಡಿದುಕೊಂಡು ಸಿದ್ದರಾಮಯ್ಯ ಅವರನ್ನು ಹಿಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮನೋಹರ್ ಪರಿಕ್ಕರ್ ಅವರು ಗೋರಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿರುವುದು, ಅದಕ್ಕಿಂತ ಮಿಗಿಲಾಗಿ ಕರ್ನಾಟಕದಿಂದಲೇ ಗೋವಾಕ್ಕೆ ಗೋಮಾಂಸ ತರಲು ಪ್ರೇರಣೆ ನೀಡುತ್ತಿರುವುದು ಬಿಜೆಪಿಯಲ್ಲಿರುವ ‘ದ್ವಿಮುಖ ನೀತಿ’ಯ ಧ್ಯೋತಕವಾಗಿದ್ದು, ಹಿಂದೂವಾದಿಗಳಿಗೆ ಮುಜುಗರ ತಂದಿದೆ.
ಏಕೆಂದರೆ ಕರ್ನಾಟಕದಲ್ಲಿ ಗೋಹತ್ಯೆಯಾಗದೆ ಗೋವಾಕ್ಕೆ ಗೋಮಾಂಸ ಸಾಗಣೆ ಮಾಡಲು ಸಾಧ್ಯವಿಲ್ಲ. ಗೋವಾಕ್ಕೆ ಗೋಮಾಂಸ ಬೇಕೇಂದರೆ ಕರ್ನಾಟಕದಲ್ಲಿ ಗೋಹತ್ಯೆ ಆಗಲೇಬೇಕು. ಅಲ್ಲಿಗೆ ಪರಿಕ್ಕರ್ ಗೋಹತ್ಯೆ ಪರ ಇದ್ದಾರೆಂದೇ ಆಯಿತು. ಪರಿಸ್ಥಿತಿ ಹೀಗಿರುವಾಗ ಯೋಗಿ ಅದಿತ್ಯನಾಥ ಅವರಾಗಲಿ, ರಾಜ್ಯ ಬಿಜೆಪಿ ಮುಖಂಡರಾಗಲಿ ಸಿದ್ದರಾಮಯ್ಯ ಅವರನ್ನು ಟೀಕಿಸುವುದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

Leave a Reply