ಜೆಡಿಎಸ್ ಪ್ರಚಾರಕ್ಕೆ ಪವನ್ ಕಲ್ಯಾಣ್ ಪವರ್!

ಡಿಜಿಟಲ್ ಕನ್ನಡ ಟೀಮ್:
ಜೆಡಿಎಸ್ ಪರ ಪ್ರಚಾರಕ್ಕೆ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಬರಲಿದ್ದಾರೆ ಎಂಬ ವಿಚಾರಕ್ಕೆ ಮತ್ತಷ್ಟು ಪುಷ್ಟಿ ಬಂದಿದೆ. ಇದಾಗಲೇ ಪವನ್ ಕಲ್ಯಾಣ್ ರೊಂದಿಗೆ ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ತೆಲುಗು ಭಾಷಿಕರು ಹೆಚ್ಚಿರುವ ಬಳ್ಳಾರಿ ಸೇರಿದಂತೆ ಗಡಿನಾಡಿನ ಅನೇಕ ಕಡೆ ಪವನ್ ಮೂಲಕ ಜೆಡಿಎಸ್ ಗೆ ಮತ ಬಾಚುವ ಲೆಕ್ಕಾಚಾರ ಎಚ್ಡಿಕೆಯವರದ್ದು.
ತಮ್ಮ ಟ್ವಿಟ್ಟರ್  ಖಾತೆ ಮುಖಾಂತರ ಪವನ್ ಕಲ್ಯಾಣ್ ಸಿನಿಮಾ ಅಜ್ಞಾತವಾಸಿಗೆ  ಶುಭ ಕೋರಿ ಎಚ್ಡಿಕೆ ಟ್ವೀಟ್ ಮಾಡಿದ್ದಾರೆ. ಸಿನಿಮಾ ಯಶಸ್ವಿಯಾಗಲಿ, ಪ್ರಶಸ್ತಿ ತಂದುಕೊಡಲಿ ಎಂದಿದ್ದಾರೆ. ಸಾಮಾನ್ಯವಾಗಿ ಟ್ವೀಟ್ ಗೀಟ್ ಅಂತೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿಯವರು ಪವನ್ ಮೇಲೆ ವಿಶೇಷ ಪ್ರೀತಿ ವ್ಯಕ್ತಪಡಿಸಿರೋದ್ರಲ್ಲಿ ರಾಜಕೀಯ ಲೆಕ್ಕಾಚಾರವೇ ಎದ್ದುಕಾಣುತ್ತಿದೆ. ಕನ್ನಡ  ನಟರ ಸಿನಿಮಾಗಳಿಗೆ ಶುಭ ಹಾರೈಸಿ ಟ್ವೀಟ್ ಮಾಡಿರೋದು ಅಷ್ಟರಲ್ಲೇ ಇದೆ. ಈಗ ಪವನ್ ಕಲ್ಯಾಣ್ ಬಗ್ಗೆ ವಿಶೇಷ ಆಸಕ್ತಿ ತೋರಿಸಿರೋದು ಮುಂದಿನ ರಾಜಕೀಯಕ್ಕೆ ಪ್ರತಿಬೆಂಬಲದ ನಿರೀಕ್ಷೆ ಎನ್ನಬಹುದು.
ತಮ್ಮ ಪುತ್ರನ ಸಿನಿಮಾ ಬಿಡುಗಡೆ ವೇಳೆಯಲ್ಲೂ ಎಚ್ಡಿಕೆ ಪವನ್ ಕಲ್ಯಾಣ್ ರನ್ನ ಖುದ್ದಾಗಿ ಭೇಟಿ ಮಾಡಿದ್ದರು. ರಾಜಧಾನಿ ಬೆಂಗಳೂರನ್ನೂ ಒಳಗೊಂಡು ಸುತ್ತಮುತ್ತಲಲ್ಲಿ ಪವನ್ ಗೆ ಅಪಾರ ಅಭಿಮಾನಿಗಳಿರುವುದು ಕುಮಾರಸ್ವಾಮಿಯವರಿಗೆ ಅರಿವಿದೆ. ಪವನ್ ಜೆಡಿಎಸ್ ಪರ ಪ್ರಚಾರಕ್ಕೆ ಬಂದಲ್ಲಿ ಮತಗಳನ್ನು ಬುಟ್ಟಿಗೆ ಸೇರಿಸಬಹುದು ಎಂಬ ದೂರದೃಷ್ಟಿಯೇ ಇಂದಿನ ಟ್ವೀಟ್ ಹಿಂದಿರುವ ಲೆಕ್ಕಾಚಾರ. ಆದರೆ ಪವನ್ ಮಾತ್ರ ಇನ್ನೂ ಗುಟ್ಟು  ಬಿಟ್ಟು ಕೊಟ್ಟಿಲ್ಲ.
ಚುನಾವಣೆ ಹತ್ತಿರಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಎಲ್ಲ ದಿಕ್ಕುಗಳಿಂದಲೂ ಮತಗಳನ್ನು ಸೆಳೆಯಲು ಪ್ರಯತ್ನಿಸುವುದು ಹೊಸದೇನಲ್ಲ. ಇತ್ತೀಚೆಗಷ್ಟೇ ಎಚ್ಡಿಕೆ ಸ್ಯಾಂಡಲ್ ವುಡ್ ನಟ ಸುದೀಪ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದು ಫಲ ಕಂಡ ಸೂಚನೆಗಳಂತೂ ಸದ್ಯಕ್ಕಿಲ್ಲ.

Leave a Reply