ಪಿಎಫ್ಐ, ಎಸ್ಡಿಪಿಐ, ಭಜರಂಗದಳ, ಶ್ರೀರಾಮಸೇನೆ ನಿಷೇಧಕ್ಕೆ ರಾಜ್ಯ ಸರಕಾರ ಸಜ್ಜು!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರಕಾರ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದುರುಳಿಸಲು ಸಜ್ಜಾಗಿದೆ. ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿರುವ ತಲಾ ಎರಡು ಮುಸ್ಲಿಂ ಹಾಗೂ ಹಿಂದೂ ಸಂಘಟನೆಗಳ ನಿಷೇಧಕ್ಕೆ ಅದು ಮುಂದಾಗಿದೆ.

ಪೀಪಲ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಭಾರತೀಯ ಸಮಾಜವಾದಿ ಪ್ರಜಾಸತ್ತಾತ್ಮಕ ಪಕ್ಷ (ಎಸ್ಡಿಪಿಐ), ಭಜರಂಗದಳ ಹಾಗೂ ಶ್ರೀರಾಮಸೇನೆ ನಿಷೇಧಕ್ಕೆ ಗೃಹ ಇಲಾಖೆ ವರದಿ ಸಿದ್ಧಪಡಿಸಿದೆ.

ಪ್ರಸ್ತುತ ‘ಸಾಧನೆ ಸಂಭ್ರಮ’ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬೆಂಗಳೂರಿಗೆ ಮರಳಲಿದ್ದು, ಗೃಹ ಇಲಾಖೆ ಜತೆ ಮತ್ತೊಂದು ಸುತ್ತಿನ ಕೂಲಂಕಷ ಸಮಾಲೋಚನೆ ನಂತರ ಅತಿ ಶೀಘ್ರದಲ್ಲೇ ಕೇಂದ್ರ ಸರಕಾರಕ್ಕೆ ಈ ಸಂಬಂಧ ಶಿಫಾರಸ್ಸು ಮಾಡಲಿದ್ದಾರೆ. ಈ ವಿಚಾರವನ್ನು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಈ ನಾಲ್ಕು ಸಂಘಟನೆಗಳು ಬರೀ ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ಮಹಾರಾಷ್ಟ್ರ, ಗೋವಾ ದೇಶದ ನಾನಾ ರಾಜ್ಯಗಳಲ್ಲಿ ಸಕ್ರಿಯವಾಗಿರುವುದರಿಂದ ರಾಜ್ಯ ಸರಕಾರಕ್ಕೆ ಇವುಗಳನ್ನು ನಿಷೇಧಿಸುವ ಅಧಿಕಾರವಿಲ್ಲ. ಬದಲಿಗೆ ಸಕಾರಣಗಳನ್ನು ಕೊಟ್ಟು ತಮ್ಮ ರಾಜ್ಯದಲ್ಲಿ ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬಹುದು. ಇತ್ತೀಚೆಗೆ ಕರಾವಳಿ ಸೇರಿದಂತೆ ರಾಜ್ಯದ ನಾನಾ ಕಡೆ ನಡೆದಿರುವ ಕೋಮು ಹತ್ಯೆಗಳ ಹಿನ್ನೆಲೆಯಲ್ಲಿ ಪಿಎಫ್ಐ, ಎಸ್ ಡಿಪಿಐ ನಿಷೇಧಕ್ಕೆ ಬಿಜೆಪಿ ಪ್ರಬಲ ಒತ್ತಡ ಹೇರಿತ್ತು ಹಾಗೂ ಇದೇ ವಿಷಯವನ್ನು ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆ ಪ್ರಚಾರದ ಪ್ರಮುಖ ವಿಷಯವಾಗಿ ಕೈಗೆತ್ತಿಕೊಂಡಿತ್ತು. ಜತೆಗೆ ರಾಜ್ಯದ ಜನ ಕೂಡ ಆಕ್ರೋಶಗೊಂಡಿದ್ದರು. ಆದರೆ ಮುಸ್ಲಿಂ ಸಂಘಟನೆಗಳನ್ನು ಮಾತ್ರ ನಿಷೇಧಿಸಿದರೆ ಕಾಂಗ್ರೆಸ್ ಮತಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರನ್ನು ಎದಿರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಭೀತಿಯಿಂದ ‘ನೈತಿಕ ಪೊಲೀಸ್ ಗಿರಿ’ ನಡೆಸುತ್ತಿರುವ ಹಿಂದುತ್ವದ ಪ್ರಬಲ ಪ್ರತಿಪಾದಕರಾದ ಭಜರಂಗದಳ ಹಾಗೂ ಶ್ರೀರಾಮಸೇನೆಯನ್ನೂ ಅದರೊಟ್ಟಿಗೆ ನಿಷೇಧಿಸಲು ರಾಜ್ಯ ಸರಕಾರ ಮುಂದಾಗಿದೆ.

ಇಲ್ಲಿ ಇನ್ನೂ ಒಂದು ಪ್ರಮುಖ ವಿಚಾರವೆಂದರೆ ಎಸ್ಡಿಪಿಐ ಇತ್ತೀಚೆಗೆ ಚುನಾವಣೆ ರಾಜಕೀಯಕ್ಕೆ ಧುಮಕಿತ್ತು. ಕರಾವಳಿ, ಬೆಂಗಳೂರು ಸೇರಿದಂತೆ ಕೆಲವು ಕಡೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲವನ್ನೂ ಕಂಡಿತ್ತು. ಮೊದಲಿಂದಲೂ ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಪ್ರಮುಖ ವೋಟ್ ಬ್ಯಾಂಕ್. ಆದರೆ ಎಸ್ಡಿಪಿಐ ಈ ವೋಟ್ ಬ್ಯಾಂಕ್ ಗೆ ಕನ್ನ ಕೊರೆದಿತ್ತು. ಹಲವೆಡೆ ಕಾಂಗ್ರೆಸ್ ಸ್ಥಾನಹಾನಿಗೂ ಕಾರಣವಾಗಿತ್ತು. ಇದು ಕೂಡ ಸಂಘಟನೆ ನಿಷೇಧದ ಹಿಂದಿರುವ ಒಳಾಂಶಗಳಲ್ಲಿ ಒಂದಾಗಿದೆ.

Leave a Reply