ಇಸ್ರೋನಿಂದ 100ನೇ ಉಪಗ್ರಹ! ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ!

ಡಿಜಿಟಲ್ ಕನ್ನಡ ಟೀಮ್:

ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತರ ಪ್ರಬಲ ರಾಷ್ಟ್ರಗಳ ಜತೆ ಮುಂಚೂಣಿಯಲ್ಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಈಗಾಗಲೇ ಅನೇಕ ದಾಖಲೆ ನಿರ್ಮಿಸಿದ್ದು, ಶುಕ್ರವಾರ 100ನೇ ಉಪಗ್ರಹ ಕಾರ್ಚೊಸ್ಯಾಟ್-2 ಉಡಾವಣೆ ಮಾಡುವ ಮೂಲಕ ಮತ್ತೊಂದು ಇತಿಹಾಸ ಬರೆದಿದೆ.

ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಕ್ಕೆ 9.28ಕ್ಕೆ ಕಾರ್ಟೊಸ್ಯಾಟ್-2 ಹಾಗೂ30 ಇತರೆ ಉಪಗ್ರಹವನ್ನು  ಇಸ್ರೋ ತನ್ನ ನಂಬಿಕಸ್ಥ ಉಪಗ್ರಹ ವಾಹನ (ರಾಕೆಟ್) ಪಿಎಸ್ಎಲ್ ವಿ-ಸಿ40 ಮೂಲಕ ಉಡಾವಣೆ ಮಾಡಿದೆ. ಈ ಉಪಗ್ರಹಗಳು ನಿರ್ದಿಷ್ಟ ಕಕ್ಷೆಗೆ ಸೇರುವ ಪ್ರಕ್ರಿಯೆ ಪೂರ್ಣಗೊಳ್ಳಲು 2.21 ಗಂಟೆ ಸಮಯ ತೆಗೆದುಕೊಳ್ಳಲಿದೆ. ಒಟ್ಟು 31 ಉಪಗ್ರಹಗಳನ್ನು ಒತ್ತು ಸಾಗಿದ ರಾಕೆಟ್ 613 ಕೆ.ಜಿ ತೂಕದ್ದಾಗಿದ್ದು, ಈ ಉಪಗ್ರಹಗಳನ್ನು ಎರಡು ಹಂತದ ಕಕ್ಷೆಗಳಿಗೆ ಸೇರಿಸಲಾಗುತ್ತದೆ.

ಕಾರ್ಟೊಸ್ಯಾಟ್-2 ಉಪಗ್ರಹದ ಜತೆಗೆ ಭಾರತದ ಇತರೆ ಎರಡು ಸಣ್ಣ ಉಪಗ್ರಹಗಳಿದ್ದು, ಉಳಿದ 28 ಉಪಗ್ರಹಗಳು ಕೆನಡಾ, ಫಿನ್ ಲೆಂಡ್, ಫ್ರಾನ್ಸ್, ಕೊರಿಯಾ, ಬ್ರಿಟನ್ ಹಾಗೂ ಅಮೆರಿಕ ಉಪಗ್ರಹಗಳಾಗಿವೆ. ಈ ಉಪಗ್ರಹವನ್ನು ಮಲ್ಟಿಪಲ್ ಬರ್ನ್ ತಂತ್ರಜ್ಞಾನದ ಮೂಲಕ ಹಾರಿಸಿದ್ದು, 31 ಉಪಗ್ರಹಗಳ ಪೈಕಿ 30 ಉಪಗ್ರಹಗಳು 550 ಕಿ.ಮೀ ಅಂತರದ ಕಕ್ಷೆಯನ್ನು ಸೇರಿದರೆ, ಮತ್ತೊಂದು ಉಪಗ್ರಹ ಭೂಮಿಯಿಂದ 359 ಕಿ.ಮೀ ದೂರದ ಕಕ್ಷೆಗೆ ಸೇರಲಿದೆ.

ಇಸ್ರೋ ಕಾರ್ಟೊಸ್ಯಾಟ್ ಶ್ರೇಣಿಯ ಮೂರನೇ ಉಪಗ್ರಹವನ್ನು ಹಾರಿಸಿದ್ದು, ಈ ಹಿಂದೆ 2016ರಲ್ಲಿ ಎರಡನೇ ಕಾರ್ಟೊಸ್ಯಾಟ್ ಸರಣಿ ಉಪಗ್ರಹ ಹಾರಿಸಿತ್ತು. ಈ ಸರಣಿ ಉಪಗ್ರಹಗಳು ಭಾರತದ ನೆರೆ ರಾಷ್ಟ್ರಗಳ ಮೇಲೆ ನಿಗಾ ಇಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಳೆದ ವರ್ಷ ಆಗಸ್ಟ್ 31ರಂದೇ ಇಸ್ರೋ ಈ ಕಾರ್ಟೊಸ್ಯಾಟ್ ಶ್ರೇಣಿಯ ಉಪಗ್ರಹವನ್ನು ಹಾರಿಸುವ ಪ್ರಯತ್ನ ಮಾಡಿತ್ತು. ಆದರೆ ಅನಿರೀಕ್ಷಿತ ಅಪಘಾತದಿಂದ ಈ ಪ್ರಯತ್ನ ವಿಫಲವಾಗಿತ್ತು. ಇನ್ನು ಈ ಬಾರಿ ಇಸ್ರೋ ಹಾರಿಸಿದ್ದು, 42 ಪಿಎಸ್ಎಲ್ ವಿ ರಾಕೆಟ್ ಆಗಿದೆ.

Leave a Reply