ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲಿ ಒಡಕು; ಸಿಜೆ ವಿರುದ್ಧ ನಾಲ್ವರು ನ್ಯಾಯಮೂರ್ತಿಗಳ ದಂಗೆ!

  ಡಿಜಿಟಲ್ ಕನ್ನಡ ಟೀಮ್:
  ನ್ಯಾಯದಾನ ವ್ಯವಸ್ಥೆಯಲ್ಲಿ ದೇಶದ ಪರಮೋಚ್ಛ ಸ್ಥಾನದಲ್ಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಡುವೆ ಒಡಕು ಕಾಣಿಸಿಕೊಂಡಿದೆ. ಒಳಗೊಳಗೇ ನಡೆಯುತ್ತಿದ್ದ ತಿಕ್ಕಾಟ ಇದೀಗ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಹಿರಂಗವಾಗಿಯೇ ತಿರುಗಿ ಬೀಳುವ ಮೂಲಕ ಸಾರ್ವಜನಿಕವಾಗಿ ಅನಾವರಣಗೊಂಡಿದೆ.
  ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯದಾನ ವ್ಯವಸ್ಥೆ ಸರಿಯಿಲ್ಲ. ಸಾಕಷ್ಟು ಲೋಪದೋಷಗಳಿಗೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕಾರ್ಯವೈಖರಿಯೂ ಪ್ರಶ್ನಾರ್ಹವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್,ಕುರಿಯನ್ ಜೋಸೆಫ್ ಹಾಗೂ ಲೋಕೂರ್ ಅವರು ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಸಿಡಿಸಿರುವ ಮಾತಿನ ಬಾಂಬ್ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
  ಸುಪ್ರೀಂ ಕೋರ್ಟ್ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಪ್ರಕರಣಗಳನ್ನು ಪೀಠಗಳಿಗೆ ವಹಿಸುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಪ್ರಮುಖ ಪ್ರಕರಣಗಳನ್ನು ಮುಖ್ಯ ನ್ಯಾಯಮೂರ್ತಿಗಳಿರುವ ಪೀಠಕ್ಕೆ ವಹಿಸಿಕೊಳ್ಳುತ್ತಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತಿತರ ಸಾಮಾನ್ಯ ಪ್ರಕರಣಗಳನ್ನು ಅನ್ಯರಿಗೆ ವಹಿಸಲಾಗುತ್ತಿದೆ. ಅಲ್ಲದೇ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡುತ್ತಿರುವ ಕೆಲವು ತೀರ್ಪುಗಳು ಹೈಕೋರ್ಟ್ ಗಳ ಆತ್ಮವಿಶ್ವಾಸವನ್ನು ಕುಗ್ಗಿಸುವುದರ ಜತೆಗೆ ನ್ಯಾಯದಾನ ಪ್ರಕ್ರಿಯೆಯಲ್ಲಿ ಅವುಗಳ ಮಹತ್ವವನ್ನು ತಗ್ಗಿಸುವ ಕೆಲಸ ನಡೆಯುತ್ತಿದೆ. ಇದು ಅಸಂಗತ ಹಾಗೂ ಅನಪೇಕ್ಷಣೀಯ ಎಂದು ಸೇವಾ ಹಿರಿತನದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನಂತರದ ಸ್ಥಾನದಲ್ಲಿರುವ ಚಲಮೇಶ್ವರ್ ನೇತೃತ್ವದ ಈ ನ್ಯಾಯಮೂರ್ತಿಗಳ ತಂಡ ಆಪಾದನೆ ಮಾಡಿದೆ.
  ಸುಪ್ರೀಂ ಕೋರ್ಟ್ ಕಾರ್ಯ ವೈಖರಿಯಲ್ಲಿನ ಲೋಪದೋಷಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿತ್ತು. ಜತೆಗೆ ಇವತ್ತು ಅವರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ಆತಂಕವನ್ನು ವಿವರಿಸಿದ್ದರೂ ಸರಿಯಾಗ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ಮಾಧ್ಯಮಗಳ ಮುಂದೆ ಬರುವುದು ಅನಿವಾರ್ಯವಾಯಿತು ಎಂದು ಅವರು ಈ ನಾಲ್ವರು ನ್ಯಾಯಮೂರ್ತಿಗಳ ಹೇಳಿದರು.
  ಸಿಜೆ ಮೀಟಿಂಗ್: ಈ ನಾಲ್ವರು ನ್ಯಾಯಮೂರ್ತಿಗಳು ಮಾಧ್ಯಮಗೋಷ್ಠಿ ನಡೆಸಿದ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಟಾರ್ನಿ ಜನರಲ್ ಅವರ ಜತೆ ಸಮಾಲೋಚನೆ ನಡೆಸಿದರು.
  ಸುಪ್ರೀಂ ಕೋರ್ಟ್ ನಲ್ಲಿ ಒಟ್ಟಾರೆ ಮೂವತ್ತು ನ್ಯಾಯಮೂರ್ತಿಗಳಿದ್ದು, ಆ ಪೈಕಿ ಹದಿನೈದು ಮಂದಿ ಚಲಮೇಶ್ವರ್ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನ್ಯಾಯಮೂರ್ತಿಗಳು ಇಬ್ಭಾಗವಾಗಿ ಹೋಗಿದ್ದಾರೆ.

  Leave a Reply