ಸಚಿವ ಖಾದರ್ ಆಪ್ತ, ‘ಟಾರ್ಗೆಟ್ ಗ್ರೂಪ್’ ನಾಯಕ ಇಲಿಯಾಸ್ ಬರ್ಬರ ಹತ್ಯೆ!

ಡಿಜಿಟಲ್ ಕನ್ನಡ ಟೀಮ್:
ಮಂಗಳೂರಿನ ದೀಪಕ್ ರಾವ್ ಮರ್ಡರ್ ಆರೋಪಿಗಳ ಸಖ್ಯ ಹೊಂದಿದ್ದ ‘ಟಾರ್ಗೆಟ್ ಗ್ರೂಪ್’ ಮುಖಂಡ ಇಲಿಯಾಸ್ ನನ್ನು ಉಳ್ಳಾಲ ಸಮೀಪದ ಆತನ ಮನೆಯಲ್ಲೇ ಶನಿವಾರ ಬೆಳಗ್ಗೆ ಕತ್ತಿಯಿಂದ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಯುವ ಕಾಂಗ್ರೆಸ್ ಉಳ್ಳಾಲ ಘಟಕದ ಉಪಾಧ್ಯಕ್ಷ ಕೂಡ ಆಗಿದ್ದ ಇಲಿಯಾಸ್ ನನ್ನು ಮಂಗಳೂರಿನ ಜಪ್ಪು, ಕುಡುಪಾಡಿಯಲ್ಲಿರುವ ಆತನ ಮನೆಗೆ ಬೆಳಗ್ಗೆ 9 ರ ಸುಮಾರಿಗೆ ಮನೆಗೆ ನುಗ್ಗಿದ ಅವನದೇ ಸಮುದಾಯದ ಇಬ್ಬರು ಈ ಕಗ್ಗೊಲೆ ಮಾಡಿದ್ದಾರೆ. ಕೊಲೆ, ಸುಲಿಗೆ, ಕೊಲೆಯತ್ನ, ಅತ್ಯಾಚಾರ ಸೇರಿದಂತೆ ಸುಮಾರು ಹದಿನೆಂಟು ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಇಲಿಯಾಸ್ ನಿನ್ನೆಯಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ. ಬೆಳಗ್ಗೆ 9 ಗಂಟೆಯಲ್ಲಿ ಅತ ಮಲಗಿದ್ದಾಗ ಬಾಗಿಲು ಬಡಿದ ಸದ್ದು ಕೇಳಿ ಪತ್ನಿ ಬಾಗಿಲು ತೆಗೆದಾಗ ಎದುರಾಳಿ ತಂಡದ ಸದಸ್ಯರು ಒಳಕ್ಕೆ ನುಗ್ಗಿ ಮಾರಾಕಾಸ್ತ್ರಗಳಿಂದ ಅತನನ್ನು ಕೊಚ್ಚಿ ಹಾಕಿದ್ದಾರೆ.
ಇಲಿಯಾಸ್ ಮೂಲತಃ ಕುಖ್ಯಾತ ರೌಡಿ. ಕಾಂಗ್ರೆಸ್ ಸೇರಿ ಸಚಿವ ಯು.ಟಿ. ಖಾದರ್, ಶಾಸಕ ಮೊಯಿದ್ದಿನ್ ಬಾವಾ ಸಖ್ಯ ಬೆಳೆಸಿಕೊಂಡಿದ್ದ. ಅವರ ಜತೆ ಊಟ ಮಾಡುತ್ತಿದ್ದ ಫೋಟೋಗಳು ಇತ್ತೀಚೆಗೆ ವೈರಲ್ ಅಗಿತ್ತು. ಕಾಂಗ್ರೆಸ್ ಮುಖಂಡರ ಸಖ್ಯದಿಂದಲೇ ಉಳ್ಳಾಲ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆತ ಸೋತಿದ್ದ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತವರನ್ನು ಉಪಾಧ್ಯಕ್ಷ ಮಾಡುವುದು ಪ್ರತೀತಿ. ಹೀಗಾಗಿ ಆತ ಉಪಾಧ್ಯಕ್ಷನಾಗಿ ಮುಂದುವರಿದಿದ್ದ.
ಆತ ಸಕ್ರಿಯನಾಗಿದ್ದ ಟಾರ್ಗೆಟ್ ಗುಂಪು ಕುಖ್ಯಾತವಾಗಿತ್ತು. ಸುಂದರ ಯುವತಿಯರನ್ನು ಮುಂದಿಟ್ಟುಕೊಂಡು ಶ್ರೀಮಂತರು, ಉದ್ಯಮಿಗಳು ಅವರ ಸಖ್ಯ ಬೆಳೆಸುವಂತೆ ಮಾಡಿ, ವಿಡಿಯೋ ಚಿತ್ರೀಕರಣ, ನಗ್ನ ಫೋಟೋಗಳನ್ನು ತೆಗೆದು ಅವರನ್ನು ಬ್ಲಾಕ್ ಮೇಲ್ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಕೊಲೆ ಆಗಿರಬಹುದು ಎಂದು ಶಂಕಿಸಲಾಗಿದೆ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ದೀಪಕ್ ರಾವ್ ಹತ್ಯೆ ಆರೋಪಿಗಳ ಜತೆ ಇಲಿಯಾಸ್ ನಿಕಟ ಸಂಬಂಧ ಹೊಂದಿದ್ದ. ಹೀಗಾಗಿ ಆರಂಭದಲ್ಲಿ ಈ ಹತ್ಯೆಯಲ್ಲಿ ಇಲಿಯಾಸ್ ಕೈವಾಡವನ್ನು ಶಂಕಿಸಲಾಗಿತ್ತು.

Leave a Reply