ಭಾರತ- ಇಸ್ರೇಲ್ ಸ್ನೇಹಕ್ಕೆ ಸಾಕ್ಷಿಯಾಗಿ ನಿಲ್ಲಲಿದೆ ಬೆಂಜಮಿನ್ ನೆತನ್ಯಾಹು ಪ್ರವಾಸ!

ಡಿಜಿಟಲ್ ಕನ್ನಡ ಟೀಮ್:

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಭಾರತದ ಆತ್ಮೀಯ ಸ್ನೇಹಿತನಾಗಿ ಇಸ್ರೇಲ್ ಹೊರಹೊಮ್ಮುತ್ತಿರುವುದು ಗಮನಾರ್ಹ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ಅಮೆರಿಕ ಹಾಗೂ ಇಸ್ರೇಲ್ ಜತೆಗಿನ ಸ್ನೇಹವನ್ನು ಗಟ್ಟಿಗೊಳಿಸಿಕೊಳ್ಳುತ್ತಿರುವುದಕ್ಕೆ ಕಳೆದೆರಡು ವರ್ಷಗಳಲ್ಲಿ ಭಾರತದೊಂದಿಗೆ ಆ ರಾಷ್ಟ್ರಗಳ ಸಂಬಂಧವೇ ಸಾಕ್ಷಿ. ಈಗ ಇಸ್ರೇಲ್ ಜತೆಗಿನ ಸ್ನೇಹ ಎಂತಹದು ಎಂಬುದನ್ನು ಇಡೀ ವಿಶ್ವಕ್ಕೆ ಸಾರಲಿದೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭಾರತ ಪ್ರವಾಸ!

ಹೌದು, ಜೆರುಸಲೆಮ್ ಅನ್ನು ಇಸ್ರೇಲಿನ ರಾಜಧಾನಿಯನ್ನಾಗಿ ಮಾಡುವ ಅಮೆರಿಕ ಪ್ರಯತ್ನಕ್ಕೆ ಭಾರತ ಮತ ಚಲಾಯಿಸಿ ಇನ್ನು ಒಂದು ತಿಂಗಳು ಕೂಡ ಆಗಿಲ್ಲ. ಇಸ್ರೇಲ್ ವಿರೋಧಿಸುವ ಈ ನಿರ್ಧಾರಕ್ಕೆ ಭಾರತ ಮತ ಚಲಾಯಿಸಿದೆ. ಅಲ್ಲದೆ ಇಸ್ರೇಲಿನಿಂದ 8000 ಟ್ಯಾಂಕರ್ ಉಡಾಯಿಸುವ ಕ್ಷಿಪಣಿ ಖರೀದಿ ಒಪ್ಪಂದವನ್ನು ಭಾರತ ರದ್ದುಗೊಳಿಸಿತ್ತು. ಭಾರತದ ಈ ನಡೆಗಳು ಇಸ್ರೇಲ್ ಜತೆಗಿನ ಸ್ನೇಹ ಸಂಬಂಧಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಬೆಂಜಮಿನ್ ನೆತನ್ಯಾಹು ಸರ್ಕಾರ ಭಾರತದ ಮೇಲಿಟ್ಟಿರುವ ನಂಬಿಕೆ ಈ ವಿಶ್ಲೇಷಣೆಗಳನ್ನು ಸುಳ್ಳಾಗಿಸುತ್ತಿದೆ. ಇದಕ್ಕೆ ಪೂರಕವಾಗಿ ಉಭಯ ದೇಶಗಳ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲಿನ ಭಾರತದ ರಾಯಭಾರಿ ಡೇನಿಯಲ್ ಕಾರ್ಮೊನ್ ‘ಭಾರತ ಹಾಗೂ ಇಸ್ರೇಲ್ ನಡುವಣ ಸ್ನೇಹ ಕೇವಲ ಒಂದು ಮತ ಚಲಾವಣೆಯಿಂದ ಕಿತ್ತು ಹೋಗುವ ಸಂಬಂಧವಲ್ಲ’ ಎಂದಿದ್ದಾರೆ.

ಭಾನುವಾರ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಆಗಮಿಸಲಿದ್ದು, ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿದ್ದಾರೆ. ಆರು ದಿನಗಳ ಈ ಪ್ರವಾಸದಲ್ಲಿ ಎರಡು ರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ಒಪ್ಪಂದಗಳು ಏರ್ಪಡಲಿವೆ. ಭಾರತ ಹಾಗೂ ಇಸ್ರೇಲ್ ನಡುವಣ ಸಂಬಂಧ ಹಾಗೂ ನೆತನ್ಯಾಹು ಪ್ರವಾಸದ ಕುರಿತ ಪ್ರಮುಖ ಹೈಲೈಟ್ಸ್ ಗಳು ಹೀಗಿವೆ…

  • ಭಾರತ ಹಾಗೂ ಇಸ್ರೇಲ್ ನಡುವಣ ರಾಜತಾಂತ್ರಿಕ ಸಂಬಂಧ ಆರಂಭವಾಗಿದ್ದು 1992ರಲ್ಲಿ. ಈಗ 26 ವರ್ಷಗಳಾಗಿವೆ.
  • ಈ ಎರಡೂವರೆ ದಶಕದ ಅವಧಿಯಲ್ಲಿ ಕಳೆದ ಮೂರ್ನಾಲ್ಕು ವರ್ಷದಲ್ಲಿ ಭಾರತ ಹಾಗೂ ಇಸ್ರೇಲ್ ನಡುವಣ ಸಂಬಂಧ ವೇಗವಾಗಿ ಬೆಸೆದುಕೊಳ್ಳುತ್ತಿದೆ. ಈ ಹಿಂದೆ ಉಭಯ ದೇಶಗಳ ಅನೇಕ ನಾಯಕರುಗಳು ಪರಸ್ಪರ ದೇಶಗಳಿಗೆ ಭೇಟಿ ನೀಡಿದ್ದರು.
  • ಈ ಬಾರಿಯ ಬೆಂಜಮಿನ್ ಅವರ ಪ್ರವಾಸ ಮಹತ್ವ ಪಡುಕೊಂಡಿದೆ. ಕಳೆದ ವರ್ಷ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾದರು. ಅದರಲ್ಲಿ 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಅದರಲ್ಲಿ ಎರಡು ಪ್ರಮುಖ ಒಪ್ಪಂದಗಳು ನೀರು ಹಾಗೂ ನೀರಿನ ಶುದ್ಧೀಕರಣಕ್ಕೆ ಸಂಬಂಧಿಸಿದ್ದು.
  • ಕಳೆದ ವರ್ಷ ಡಿಸೆಂಬರ್ ನಲ್ಲಿ ತಮಿಳುನಾಡಿನಲ್ಲಿ ಇಸ್ರೇಲ್ ಜತೆಗೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಜ್ಞ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಕೇಂದ್ರದಲ್ಲಿ ನೂರಾರು ರೈತರಿಗೆ ತರಬೇತಿ ನೀಡಲಾಗಿತ್ತು. ಇಂತಹ 20 ತಜ್ಞ ಕೇಂದ್ರಗಳು ಭಾರತದ ವಿವಿಧೆಡೆಗಳಲ್ಲಿ ಆರಂಭವಾಗಿವೆ.
  • ಕೃಷಿ ಜತೆಗೆ ಉಭಯ ದೇಶಗಳು ತಂತ್ರಜ್ಞಾನ ಹಾಗೂ ಆವಿಷ್ಕಾರ ಸಂಶೋಧನೆ ಕ್ಷೇತ್ರದಲ್ಲೂ ಕೈ ಜೋಡಿಸಿವೆ. ಇದಕ್ಕಾಗಿ 40 ಮಿಲಿಯನ್ ಡಾಲರ್ ನಷ್ಟು ಸಂಶೋಧನಾ ನಿಧಿಯನ್ನು ಸ್ಥಾಪಿಸಲಾಗಿದೆ. ಅದರೊಂದಿಗೆ ಭಾರತ ಹಾಗೂ ಇಸ್ರೇಲಿನ ಉದ್ಯಮಿಗಳಿಗೆ ನರವು ನೀಡಲಾಗುತ್ತಿದೆ.
  • ಬೆಂಜಮಿನ್ ಅವರು ಈ ಬಾರಿ ಏಕಾಂಗಿಯಾಗಿ ಭಾರತ ಪ್ರವಾಸ ಕೈಗೊಳ್ಳುತ್ತಿಲ್ಲ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 130 ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಆಗಮಿಸುತ್ತಿದ್ದಾರೆ.
  • ಈ ಬಾರಿಯ ಪ್ರವಾಸದಲ್ಲಿ ಕೃಷಿ, ವ್ಯಾಪಾರ, ರಕ್ಷಣೆ ಕ್ಷೇತ್ರಗಳಿಗೆ ಎರಡೂ ರಾಷ್ಟ್ರಗಳು ಹೆಚ್ಚಿನ ಮಹತ್ವ ನೀಡಲಿವೆ.

Leave a Reply