ನೀಲಿಚಿತ್ರ ತಾರೆ ಜತೆಗಿನ ಸಂಬಂಧ ಮುಚ್ಚಿಡಲು ಟ್ರಂಪ್ ಹಣ ಕೊಟ್ಟಿದ್ರಾ?

ಡಿಜಿಟಲ್ ಕನ್ನಡ ಟೀಮ್:

‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಸಂದರ್ಭದಲ್ಲಿ ನೀಲಿಚಿತ್ರ ತಾರೆ ಜತೆಗಿನ ಸಂಬಂಧ ಮುಚ್ಚಿಡಲು ಆಕೆಗೆ ಹಣ ನೀಡಿದ್ದರು’ ಎಂಬ ಗಂಭೀರ ಆರೋಪ ಟ್ರಂಪ್ ವಿರುದ್ಧ ಕೇಳಿ ಬಂದಿದೆ.

‘ಟ್ರಂಪ್ ಆಪ್ತ ಹಾಗೂ ನಂಬಿಕಸ್ತ ವಕೀಲ ಸೈಕಲ್ ಕೊಹೆನ್ 2016ರಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ಕಾವು ಹೆಚ್ಚಾಗಿದ್ದ ಸಂದರ್ಭದಲ್ಲಿ ನೀಲಿಚಿತ್ರ ತಾರೆ  ಸ್ಚೆಫಾನಿಯಾ ಕ್ಲಿಫೋರ್ಡ್ (ಸ್ಚೋರ್ಮಿ ಡೇನಿಯಲ್ಸ್) ಅವರಿಗೆ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರಲು 1.30 ಲಕ್ಷ ಅಮೆರಿಕನ್ ಡಾಲರ್ ಹಣ ನೀಡಿದ್ದರು. 2006ರಲ್ಲಿ ಅಂದರೆ ಟ್ರಂಪ್ ತಮ್ಮ ಮೂರನೇ ಪತ್ನಿ ಮೆಲನಿಯಾ ಅವರನ್ನು ವಿವಾಹವಾದ ಮರು ವರ್ಷವೇ ಸ್ಟೋರ್ಮಿ ಜತೆಗೆ ಸಂಬಂಧ ಹೊಂದಿದ್ದರು. ಈ ಅಂಶವನ್ನು ಎಲ್ಲಿಯೂ ಬಾಯಿಬಿಡದಂತಿರಲು ದೊಡ್ಡ ಮೊತ್ತವನ್ನು ನೀಡಲಾಗಿದೆ. ಈ ಹಣವನ್ನು ಕೊಹೆನ್ ಅವರು ಲಾಸ್ ಏಂಜಲೀಸ್ ನಲ್ಲಿರುವ ಸಿಟಿ ನ್ಯಾಷನಲ್ ಖಾತೆಗೆ ಜಮಾಯಿಸಿದ್ದರು’ ಎಂದು ಪ್ರತಿಷ್ಠಿತ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಆದರೆ ಈ ಆರೋಪವನ್ನು ಟ್ರಂಪ್ ಆಪ್ತ ವಕೀಲ ಕೊಹೆನ್ ಹಾಗೂ ಸ್ಟೋರ್ಮಿ ಇಬ್ಬರು ನಿರಾಕರಿಸಿದ್ದಾರೆ. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಕೊಹೆನ್, ‘2011ರಿಂದಲೂ ಈ ರೀತಿ ವದಂತಿಗಳು ಆಗಾಗ್ಗೆ ಬರುತ್ತಲೇ ಇವೆ. ಸ್ಟೋರ್ಮಿ ಅವರ ಜತೆ ತಾವು ಯಾವುದೇ ಸಂಬಂಧ ಹೊಂದಿಲ್ಲ ಎಂದು ಟ್ರಂಪ್ ಈ ವರದಿಯನ್ನು ತಳ್ಳಿಹಾಕಿದ್ದಾರೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಆರೋಪದಲ್ಲಿ ಹಣ ಪಡೆದಿದ್ದಾರೆ ಎನ್ನಲಾಗಿರುವ ಸ್ಟೋರ್ಮಿ ಪತ್ರಿಕಾ ಪ್ರಕಟಣೆ ಮೂಲಕ ನೀಡಿರುವ ಸ್ಪಷ್ಟನೆ ಹೀಗಿದೆ… ‘ಡೊನಾಲ್ಡ್ ಟ್ರಂಪ್ ಅವರಿಂದ ದೊಡ್ಡಮಟ್ಟದಲ್ಲಿ ಹಣ ಪಡೆದಿದ್ದೇನೆ ಎಂಬುದು ಕೇವಲ ವದಂತಿ. ಒಂದು ವೇಳೆ ಡೊನಾಲ್ಡ್ ಟ್ರಂಪ್ ಜತೆಗೆ ಸಂಬಂಧ ಹೊಂದಿದ್ದೇ ಆಗಿದ್ದರೆ. ನೀವು ಆ ವಿಚಾರವನ್ನು ಸುದ್ದಿಯಾಗಿ ದುತ್ತಿರಲಿಲ್ಲ. ನಾನೇ ನನ್ನ ಪುಸ್ತಕದಲ್ಲಿ ಬರೆದು ತಿಳಿಸುತ್ತಿದ್ದೆ.’

Leave a Reply