ಜೆಡಿಎಸ್ ಕಡೆ ವಲಸೆ ಹೊರಟ್ರಾ ಇಬ್ರಾಹಿಂ?

ಡಿಜಿಟಲ್ ಕನ್ನಡ ವಿಶೇಷ:

ಜನತಾ ಪಕ್ಷದಿಂದ ನಾಯಕರಾಗಿ ಬೆಳೆದು ಬಂದ ಸಿಎಂ ಇಬ್ರಾಹಿಂ ಮತ್ತೆ ಜನತಾ ಪರಿವಾರದ ಕಡೆಗೆ ಮುಖ ಮಾಡಿದ್ದಾರಾ ಅನ್ನೋ ಅನುಮಾನ ಕಾಡಲಾರಂಭಿಸಿವೆ. ಇದಕ್ಕೆ ಕಾರಣ ಅಂದ್ರೆ ಸಂಕ್ರಾಂತಿ ಶುಭಾಶಯ ಕೋರುವ ನೆಪದಲ್ಲಿ ಪದ್ಮನಾಭನಗರದಲ್ಲಿರುವ ದೊಡ್ಡ ಗೌಡರ ಮನೆಗೆ ಇಬ್ರಾಹಿಂ ಹೋಗಿದ್ದು. ಕಾಂಗ್ರೆಸ್ ನಲ್ಲಿ ಇತ್ತೀಚಿಗೆ ಪರಿಷತ್ ಸದಸ್ಯರಾಗಿರುವ ಸಿಎಂ ಇಬ್ರಾಹಿಂ ಸಿಎಂ ಸಿದ್ದರಾಮ್ಮಯ್ಯ ಅವರ ಸಂಪುಟದಲ್ಲಿ ಸಚಿವರಾಗುವ ಕನಸು ಕಂಡಿದ್ದರು. ಸಚಿವ ಸ್ಥಾನದ ಬಗ್ಗೆ ಸಿಎಂ ಜೊತೆ ಹಲವು ಬಾರಿ ಚರ್ಚೆ ಕೂಡ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಕೂಡ ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದರು ಅನ್ನೋದು ಇಬ್ರಾಹಿಂ ಆಪ್ತ ವಲಯದ ಮಾತು.

ಇಬ್ರಾಹಿಂರನ್ನ ನಿರ್ಲಕ್ಷ್ಯ ಮಾಡಿದ್ರಾ ಸಿಎಂ..?

ಸಿಎಂ ಇಬ್ರಾಹಿಂ ಅಖಾಡದ ರಾಜಕಾರಣಿಗಳ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಅಲ್ಲದಿದ್ದರೂ ದೇವೇಗೌಡರ ಜೊತೆ ಗುರ್ತಿಸಿಕೊಂಡು ರಾಜಕಾರಣದಲ್ಲಿ ಉತ್ತುಂಗ ಹಂತ ತಲುಪಿದ್ದ ರಾಜಕಾರಣಿ. ದೆಹಲಿ ಮಟ್ಟದಲ್ಲೂ ಅಧಿಕಾರ ಹಿಡಿದಿದ್ದ ಇಬ್ರಾಹಿಂ ಕಾಲಾ ನಂತರ ಎಲ್ಲಾ ರಾಜಕಾರಣದಲ್ಲಿ ನಡೆದ ಮನ್ವಂತರದಲ್ಲಿ ಜೆಡಿಎಸ್ ತೊರೆದು, ಸಿದ್ದರಾಮಯ್ಯ ನಿರ್ಧಾರ ಬೆಂಬಲಿಸಿ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಆ ಬಳಿಕ ನಡೆದಿದ್ದು ಇತಿಹಾಸ. ಕಾಂಗ್ರೆಸ್ ನಲ್ಲಿ ಇದ್ದೂ ಇಲ್ಲದಂತೆ ತೆರೆಯ ಹಿಂದೆ ಸರಿದ ಇಬ್ರಾಹಿಂ, ಸ್ನೇಹಿತ ಸಿದ್ದರಾಮಯ್ಯ ರಾಜ್ಯಭಾರ ಮಾಡುತ್ತಿದ್ದರೂ ಮುನ್ನಲೆ ಬರಲಾಗದೆ ಇತಿಹಾಸದ ಪುಟದಲ್ಲಿ ಅಚ್ಚಾದರು.

ಪರಿಷತ್ ಸದಸ್ಯ ಆಗಿದ್ದೇ ದೊಡ್ಡ ವಿಚಾರ..!?

ಸಿಎಂ ಸಿದ್ದರಾಮಯ್ಯ ಅವರ ಆಪ್ತರಾದ ಮುಸ್ಲಿಂ ನಾಯಕ ಇಬ್ರಾಹಿಂ, ಕಾಂಗ್ರೆಸ್ ನಲ್ಲಿ ಅಧಿಕಾರ ಸಿಗದೆ ಕಂಗಾಲಾಗಿ ಮುಗಿಸಿಕೊಂಡು ನೈಪತ್ಯಕ್ಕೆ ಸರಿದಿದ್ರು. ಈ ವೇಳೆ ಜೆಡಿಎಸ್ ಸೇರ್ಪಡೆ ಆಗುವ ಬಗ್ಗೆ ವರದಿಗಳು ಬಂದಿದ್ವು. ಆಗ ಸಿಎಂ ಸಿದ್ದರಾಮಯ್ಯ ಅವರೇ ಇಬ್ರಾಹಿಂ ಅವರ ಮನೆಗೆ ತೆರಳಿ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ರು. ಆ ಬಳಿಕ ಕೊಟ್ಟ ಮಾತಿನಂತೆ ಪರಿಷತ್ ಗೆ ಆಯ್ಕೆ ಮಾಡಿಸುವಲ್ಲಿ ಸಿಎಂ ನಡೆದುಕೊಂಡರು. ಆದ್ರೆ ಸಚಿವ ಸ್ಥಾನಕ್ಕೆ ಇಬ್ರಾಹಿಂ ಲಾಬಿ ಮಾಡುತ್ತಿದ್ದಾಗ, ಸಚಿವರನ್ನಾಗಿ ಮಾಡ್ತೀರಾ ಅನ್ನೊ ಮಾತಿಗೆ ಸಿಎಂ ಸಿದ್ದರಾಮಯ್ಯ, ಪರಿಷತ್ ಗೆ ಆಯ್ಕೆ ಮಾಡಿದ್ದೇ ದೊಡ್ಡದು, ಸಚಿವರನ್ನಾಗಿ ಮಾಡಲ್ಲ ಅಂತಾ ಹೇಳುವ ಮೂಲಕ ಇಬ್ರಾಹಿಂ ಅವರ ಬಗ್ಗೆ ಕೇವಲವಾಗಿ ಮಾತನಾಡಿದ್ರು. ಆ ಬಳಿಕ ಮೌನಕ್ಕೆ ಶರಣಾಗಿದ್ದ ಸಿಎಂ ಇಬ್ರಾಹಿಂ ಈ ಬಾರಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಕಷ್ಟ ಅನ್ನೋದನ್ನು ಕನ್ಫರ್ಮ್ ಮಾಡಿಕೊಂಡು ಮತ್ತೆ ಹಳೇ ಹೆಂಡ್ತಿ ಪಾದವೇ ಗತಿ ಅನ್ನೋ ಹಾಗೆ ಜನತಾ ದಳದತ್ತ ಮುಖ ಮಾಡಿದ್ದಾರೆ.

ಸಿಎಂ ಇಬ್ರಾಹಿಂ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದರೂ, ಓದಿದ್ದು ಬೆಳದಿದ್ದು ಮಠ ಮಾನ್ಯಗಳಲ್ಲಿ. ಹಾಗಾಗಿ ಇಬ್ರಾಹಿಂ ಮುಸ್ಲಿಂ ಸಮುದಾಯದಲ್ಲಿ ಗುರ್ತಿಸಿಕೊಂಡಿದ್ದಕ್ಕಿಂತ ಮಠಗಳ ಬಾಂಧವ್ಯವೇ ಹೆಚ್ಚಾಗಿದೆ. ವಾಚಾಳಿಯಾದ ಇಬ್ರಾಹಿಂ ನಾಲಿಗೆ ಮೇಲೆ ಬಸವಣ್ಣನ ವಚನಗಳು ನಲಿದಾಡುತ್ತವೆ. ಕ್ಷಣಮಾತ್ರದಲ್ಲಿ ಅಕ್ಕಮಹಾದೇವಿ ಕಣ್ಣ ಮುಂದೆ ನಿಲ್ಲಿಸುವ ಸಾಮರ್ಥ್ಯವೂ ಇಬ್ರಾಹಿಂ ಅವರಲ್ಲಿದೆ. ಕೆಲವೊಮ್ಮೆ ಮಾತಿನ ಬರದಲ್ಲಿ ಏನನ್ನಾದರೂ ಮಾತನಾಡಿಬಿಡ್ತಾರೆ ಅನ್ನೋದನ್ನು ಬಿಟ್ಟರೆ ಕೆಟ್ಟ ರಾಜಕಾರಣಿ ಅಂತೂ ಅಲ್ಲ. ಆದರೆ ಚುನಾವಣಾ ಅಖಾಡದಲ್ಲಿ ಗೆಲುವಿನ ಮಂದಹಾಸ ಬೀರಲು ಸಾಧ್ಯವಾಗದ ಇಬ್ರಾಹಿಂ, ಮತ್ತೆ ದೊಡ್ಡ ಗೌಡರ ಪಡೆ ಸೇರಲು ಯತ್ನಿಸುತ್ತಿರೋದು ಸುಳ್ಳಲ್ಲ.

Leave a Reply