ಮೋದಿಯನ್ನು ಬೈದ ಬೇಗ್‌ಗೆ ಇಡಿ ಛಡಿ ಏಟು!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ‘ಸೂ… ಮಗ, ಬೋ… ಮಗ’ ಎಂದೆಲ್ಲ ಜರಿದಿದ್ದ ಕಾಂಗ್ರೆಸ್ ನಾಯಕ ಹಾಗೂ ನಗರಾಭಿವೃದ್ಧಿ ಸಚಿವ ರೋಷನ್ ಗೆ ಈಗ ಜಾರಿ ನಿರ್ದೇಶನಾಲಯದಿಂದ ನೋಟೀಸ್ ಬಂದಿದೆ. ಮೋದಿಯನ್ನು ನಿಂದಿಸಿದರು ಎಂಬ ಕಾರಣಕ್ಕೆ ಈ ನೋಟಿಸ್ ಬಂದಿಲ್ಲ. ಬದಲಿಗೆ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ರೋಷನ್ ಬೇಗ್‌ ಮತ್ತವರ ಕುಟುಂಬ ಸದಸ್ಯರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿಗೊಳಿಸಿದೆ.

ಬೇಗ್ ಕುಟುಂಬದ ಒಡೆತನದಲ್ಲಿರುವ ರುಮಾನ್ ಎಂಟರ್ ಪ್ರೈಸಸ್ ಕಂಪನಿ ಕಳೆದ ಏಳೆಂಟು ವರ್ಷದಿಂದ ಗಾಲ್ಫ್ ರಾಷ್ಟ್ರಗಳಿಂದ ಹಣ ಪಡೆದುಕೊಂಡಿದ್ದು, ಹಣದ ಖರ್ಚು ವೆಚ್ಚದ ದಾಖಲೆಗಳನ್ನು ನೀಡದೇ ಇರುವ ಕಾರಣಕ್ಕೆ ಫೆಮಾ ಕಾಯ್ದೆ ಉಲ್ಲಂಘನೆ ಮತ್ತು ಹವಾಲ ವ್ಯವಹಾರದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಈ ಕ್ರಮಕ್ಕೆ ಮುಂದಾಗಿದೆ.

ಕೊಟ್ಯಂತರ ರು.ಗಳನ್ನು ವಿದೇಶದಿಂದ ಬೇಗ್ ಒಡೆತನದ ಕಂಪನಿಯ ಖಾತೆಗೆ ಸಂದಾಯ ಮಾಡಲಾಗಿದೆ. ಆದರೆ, ಸಂದಾಯವಾದ  ಹಣ ಎಲ್ಲಿ ಹೋಯಿತು, ಆ ಹಣ ಯಾವುದಕ್ಕೆ ಬಳಕೆಯಾಯ್ತು ಎನ್ನುವುದಕ್ಕೆ ಸೂಕ್ತ ದಾಖಲೆಗಳೇ ಇಲ್ಲ. ಹೀಗಾಗಿ ಇಲ್ಲಿ ಅಕ್ರಮವಾಗಿ ಹಣ ಹರಿದಾಡಿರುವುದು ಸ್ಪಷ್ಟವಾಗಿದ್ದು, ಇದು ರೋಷನ್ ಬೇಗ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ ಸವಾಲಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರೋಷನ್ ಬೇಗ್ ಹೇಳೋದಿಷ್ಟು… ‘ಕಾರ್ಯ ನಿಮಿತ್ತ ಊರಿಗೆ ಹೋಗಿ ಬಂದಿದ್ದೇನೆ. ಇಡಿ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಈ ಸಂಬಂಧ ನನ್ನ ಕಚೇರಿ ಸಿಬ್ಬಂದಿ ಬಳಿ ವಿಚಾರಿಸಿದ್ದೇನೆ, ಅವರಿಗೂ ಯಾವ ಮಾಹಿತಿ ಇಲ್ಲ. ಇದುವರೆಗೂ ಯಾವುದೇ ನೋಟಿಸ್ ನನ್ನ ಕೈಸೇರಿಲ್ಲ.’

ರೋಷನ್ ಬೇಗ್ ಅವರು ಮೋದಿ ವಿರುದ್ಧ ಅವಾಚ್ಯ ಶಬ್ಧಗಳೊಂದಿಗೆ ನಿಂದಿಸಿದ ಕರಿತು ಡಿಜಿಟಲ್ ಕನ್ನಡ ಈ ಹಿಂದೆ ಲೇಖನ ಪ್ರಕಟಿಸಿತ್ತು.

Leave a Reply