ಕುಮಾರಸ್ವಾಮಿಯವರನ್ನು ಯಾರೂ ಉಪೇಕ್ಷೆ ಮಾಡುವಂತಿಲ್ಲ!

ರಾಜಕೀಯ ಲೆಕ್ಕಾಚಾರಗಳು ಬರೀ ಲೆಕ್ಕಾಚಾರಗಳಷ್ಟೇ. ಎಲ್ಲ ಬಾರಿಯೂ ಅವು ನಿಜವಾಗಬೇಕು ಎಂದೇನೂ ಇಲ್ಲ. ಏಕೆಂದರೆ ಅವು ಬರೀ ನಿರೀಕ್ಷೆ ಅಷ್ಟೇ. ಹೀಗಾಗಿ ಘಟಾನುಘಟಿ ರಾಜಕೀಯ ಪಂಡಿತರ ಎಣಿಕೆಗಳು ಮಖಾಡೆ ಮಲಗಿರುವುದು ಉಂಟು. ಲೆಕ್ಕಕ್ಕೆ ತೆಗೆದುಕೊಂಡವರು ವಿಳಾಸ ಪತ್ತೆ ಇಲ್ಲದಂತೆ ಹೋಗಿರುವುದು, ಲೆಕ್ಕಕ್ಕೆ ತೆಗೆದುಕೊಳ್ಳದಿರುವವರು ಫೀನಿಕ್‌ಸ್‌ ನಂತೆ ಎದ್ದು ಬಂದಿರುವ ಅನೇಕ ನಿದರ್ಶನಗಳು ರಾಜಕೀಯ ಇತಿಹಾಸದಲ್ಲಿ ದಾಖಲಾಗಿ ಹೋಗಿವೆ.

ಹೀಗಾಗಿ ಯಾರು ಏನೇ ಹೇಳಲಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾಸ್ವಾಮಿ ಅವರನ್ನು ಯಾರೂ ಉಪೇಕ್ಷೆ ಮಾಡುವಂತಿಲ್ಲ!

ನಿಜ, ಐದು ತಿಂಗಳು ಮೊದಲೇ ನಡೆದಿರುವ ಒಂದಷ್ಟು ಚುನಾವಣಾಪೂರ್ವ ಸಮೀಕ್ಷೆಗಳು ಬರೀ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಸುತ್ತಲೇ ಸುತ್ತುತ್ತಿವೆ. ಅವುಗಳ ಬಗ್ಗೆಯೇ ಮಾತಾಡುತ್ತಿವೆ. ಚುನಾವಣೆ ರೇಸ್‌ನಲ್ಲಿ ಅವುಗಳೇ ಮುಂದು ಎಂದು ಷರಾ ಬರೆಯುತ್ತಿವೆ. ಆದರೆ ಹಿಂದೆ ಅನೇಕ ರಾಜಕೀಯ ತಿರುವುಗಳಿಗೆ ಸಾಕ್ಷಿಯಾಗಿ ನಿಂತಿರುವ ಜೆಡಿಎಸ್, ಒಳಲೆಕ್ಕಾಚಾರದಿಂದಲೇ ಘಟಾನುಘಟಿ ಮುಖಂಡರಿಗೆ ಗಂಜಿ ನೀರು ಕುಡಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಕ್ಷ ಹಾಗೂ ನಾಯಕರನ್ನು ಪ್ರಾದೇಶಿಕ ಪಕ್ಷದ ಚೌಕಟ್ಟಿನೊಳಗೆ ಬಂಧಿಸಿಟ್ಟು, ರಾಜಕೀಯ ಸಾಧ್ಯತೆಗಳ ಬಳಿಯೂ ಸುಳಿಯದಂತೆ ನೋಡಿಕೊಂಡಿವೆ. ಮೊದಲಿಂದಲೂ ಅತಂತ್ರ ಸರಕಾರದ ಪರಿಧಿಯಲ್ಲೇ ನೋಡುತ್ತಾ ಬಂದಿದ್ದರೂ, ಈ ಬಾರಿ ಅದಕ್ಕೂ ಆಸ್ಪದವಿಲ್ಲದಂತ ಚಿತ್ರಣ ಈ ಸಮೀಕ್ಷೆಗಳಿಂದ ಮೂಡಿ ಬಂದಿದೆ.

ಆದರೆ…,

ರಾಜಕೀಯ ಲೆಕ್ಕಾಚಾರಗಳು ಇಲ್ಲಿಗೇ ಮುಗಿಯುವುದಿಲ್ಲ. ಹೀಗೆ ಎಂದು ಯಾರೂ ಗೆರೆ ಎಳೆಯಲೂ ಆಗುವುದಿಲ್ಲ. ಇವತ್ತಿನ ಸ್ಥಿತಿ ನಾಳೆಗೆ ಇರುವುದಿಲ್ಲ. ಅದು ನಿತ್ಯ ಬದಲಾಗುತ್ತಾ ಹೋಗುತ್ತದೆ. ಏಕೆಂದರೆ ರಾಜಕೀಯ ಎಂಬುದು ನದಿ ಇದ್ದಂತೆ. ಗೆರೆ ಎಳೆದಂತೆ ನೆಟ್ಟಗೆ ಹರಿಯುವುದಿಲ್ಲ. ನಾನಾ ತಿರುವುಗಳೊಂದಿಗೇ ಓಡುತ್ತದೆ. ಎಲ್ಲಿ ಯಾವ ತಿರುವು ಹೇಳಲು ಬರುವುದಿಲ್ಲ. ತಿರುವುಗಳಲ್ಲಿ ಹರಿಯುವ ಲಯ, ಸ್ವರೂಪವೂ ಒಂದೇ ರೀತಿ ಇರುವುದಿಲ್ಲ. ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಆಕಾರ, ಆಳ, ಎತ್ತರ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ಇನ್ನೈದು ತಿಂಗಳು ಬಾಕಿ ಇರುವ ಚುನಾವಣೆ ಚಿತ್ರಣ ಇವತ್ತಿನಂತೇ ಇರುತ್ತದೆ, ಈಗಿನಂತೇ ಮುಂದುವರಿಯುತ್ತದೆ ಎಂದು ಹೇಳಲು ಬರುವುದಿಲ್ಲ. ಅನಿರೀಕ್ಷಿತ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳು ಸ್ಥಿತಿಗತಿ ಬದಲಾಯಿಸಿ ಬಿಡುತ್ತದೆ. ಅದನ್ನೂ ಪಕ್ಕಕ್ಕಿಟ್ಟು ಇವತ್ತಿನ ರಾಜಕೀಯ ಪರಿಸ್ಥಿತಿಯನ್ನು ಕೂಲಂಕಷ ಪರಾಮರ್ಶೆಗೆ ಒಳಪಡಿಸುವುದಾದರೆ ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪಾತ್ರವನ್ನು ಅಷ್ಟು ಸುಲಭವಾಗಿ ಕೆಳಗಿಟ್ಟು ನೋಡುವಂತಿಲ್ಲ.

ಜೆಡಿಎಸ್ ರೈತ ಸಮುದಾಯವನ್ನು ನೆಚ್ಚಿಕೊಂಡಿರುವ ಪಕ್ಷ. ರೈತ ಸಮುದಾಯಕ್ಕೆ ಜಾತಿ, ಧರ್ಮ ಎಲ್ಲವೂ ಒಕ್ಕಲುತನವೇ. ಈ ಒಕ್ಕಲುತನದಲ್ಲಿ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರು, ಹಿಂದುಳಿದ ವರ್ಗದವರೂ ಇದ್ದಾರೆ. ಹಿಂದೆ ದೇವೇಗೌಡರು ಮತ್ತು ಕುಮಾರಸ್ವಾಮಿ ಸರಕಾರ ಅಸ್ತಿತ್ವದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಕುಮಾರಸ್ವಾಮಿ ಸರಕಾರದಲ್ಲಿ ಯಡಿಯೂರಪ್ಪನವರು ಉಪಮುಖ್ಯಮಂತ್ರಿ ಆಗಿದ್ದರು ಎಂಬುದು ಬೇರೆ ಮಾತು. ಆದರೆ ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಸಾಲಬಾಧೆ ತಾಳಲಾರದೆ ಸಾವಿರಾರು ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆ ಮೊದಲಿಂದಲೂ ಇದೆ. ಆದರೆ ಸರಕಾರ ಅದಕ್ಕೆ ಸೊಪ್ಪು ಹಾಕಿಲ್ಲ. ಒಂದೊಮ್ಮೆ ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ 53,000 ಕೋಟಿ ರುಪಾಯಿ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಾಮಿ ಘೋಷಿಸಿದ್ದಾರೆ. ಸಾಲ ಮನ್ನಾಕ್ಕೆ ಚಾತಕಪಕ್ಷಿಯಂತೆ ಕಾಯ್ದು ಕುಳಿತಿರುವ ರೈತಾಪಿ ವರ್ಗದಲ್ಲಿ ಈ ಭರವಸೆ ಕೊಂಚ ಕೆಲಸ ಮಾಡುವುದರಲ್ಲಿ ಸಂಶಯವಿಲ್ಲ. ಇದು ಸಹಜವಾಗಿಯೇ ಚುನಾವಣೆಯಲ್ಲಿ ಜೆಡಿಎಸ್ ಮತ್ತದರ ನಾಯಕ ಕುಮಾರಸ್ವಾಮಿ ಅವರಲ್ಲಿ ವಿಶ್ವಾಸದ ಬುಗ್ಗೆ ಚಿಮ್ಮಿಸಿದೆ. ಈ ವಿಶ್ವಾಸ ಮತಗಳಾಗಿ ಪರಿವರ್ತನೆ ಆದರೆ ಆಶ್ಚರ್ಯಪಡಬೇಕಿಲ್ಲ.

ಹೌದು, ಯಾರು ಏನೇ ಹೇಳಲಿ ಇವತ್ತಿಗೂ ಹಳೇ ಮೈಸೂರು, ಮಧ್ಯ ಕರ್ನಾಟಕ ಭಾಗದ ಹದಿಮೂರು ಜಿಲ್ಲೆಗಳಲ್ಲಿ ಜೆಡಿಎಸ್ ತಳಹದಿಯನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿ ಒಕ್ಕಲಿಗರು ಪ್ರಬಲರು. ಜತೆಗೆ ಲಿಂಗಾಯತರು, ಪರಿಶಿಷ್ಟರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಗಣನೀಯ ಪ್ರಮಾಣದಲ್ಲಿದ್ದಾರೆ. ಒಕ್ಕಲಿಗರು ಇಂದಿಗೂ ಪ್ರಮುಖವಾಗಿ ಜೆಡಿಎಸ್ ಜತೆಗೇ ಗುರುತಿಸಿಕೊಂಡಿದ್ದಾರೆ. ಅವರ ಪರ್ಯಾಯ ಆಯ್ಕೆ ಮೊದಲಿಗೆ ಕಾಂಗ್ರೆಸ್, ನಂತರ ಬಿಜೆಪಿ ಆಗಿತ್ತು. ಅಹಿಂದ ಪ್ರಬಲ ಪ್ರತಿಪಾದಕರಾದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ನಂತರ ಕಾಂಗ್ರೆಸ್‌ನಲ್ಲಾಗಲಿ, ಸರಕಾರದಲ್ಲಾದಲಿ ಒಕ್ಕಲಿಗರಿಗೆ ಹೇಳಿಕೊಳ್ಳುವಂಥ ಆದ್ಯತೆ ಸಿಕ್ಕಿಲ್ಲ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ ಅಂತನಿಸಿಕೊಂಡ ಡಿ.ಕೆ. ಶಿವಕುಮಾರ್ ಸೇರಿದಂತೆ ಒಕ್ಕಲಿಗ ನಾಯಕರನ್ನು ಮೆದುಮಾಡಿ ಪಕ್ಕಕ್ಕೆ ಸರಿಸಲಾಯಿತು. ಲಿಂಗಾಯತರ ಕತೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 1989 ರಲ್ಲಿ ವೀರೇಂದ್ರ ಪಾಟೀಲರನ್ನು ಅತ್ಯಂತ ಹೀನಾಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಕಾಂಗ್ರೆಸ್‌ನಿಂದ ವಿಮುಖರಾಗಿದ್ದ ಲಿಂಗಾಯತರು ಎಸ್.ಎಂ. ಕೃಷ್ಣ ಅವಧಿಯಲ್ಲಿ ಕಾಂಗ್ರೆಸ್ ಬಗ್ಗೆ ಕೊಂಚ ಮೃದು ಧೋರಣೆ ತಳೆದಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣಕ್ಕೆ 2008 ರಲ್ಲಿ ಬಿಜೆಪಿ ಜತೆ ಸಾರಸಾಗಟು ನಿಂತಿದ್ದ ಲಿಂಗಾಯತರು, ಅವರು ಪದತ್ಯಾಗ ಮಾಡಿ, 2013 ರ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ) ಕಟ್ಟಿದ ನಂತರ ಮತ್ತೆ ಚದುರಿ ಹೋಗಿದ್ದರು. ಕೆಜೆಪಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದು ಪಲ್ಲಟಗೊಂಡಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಳೇ ಮೈಸೂರು, ಉತ್ತರ ಕರ್ನಾಟಕ ಎಂಬ ಬೇಧವಿಲ್ಲದೆ ಲಿಂಗಾಯತ ನಾಯಕರನ್ನು ಒಳಗೊಳಗೇ ಅದುಮಲಾಯಿತು. ಸಂಪುಟದ ಒಳಗಾಗಲಿ, ಹೊರಗಾಗಲಿ ಅವರು ಉಸಿರೆತ್ತದಂತೆ ಮಾಡಲಾಗಿದೆ. ಈ ರೀತಿ ಪ್ರಬಲ ಕೋಮುಗಳೆರಡು ಸಿದ್ದರಾಮಯ್ಯನವರ ಅಹಿಂದವಾದದ ಮುಂದೆ ತಣ್ಣಗಾದವು.

ಇದರ ಜತೆಜತೆಗೆ ಸಿದ್ದರಾಮಯ್ಯನವರ ಪರೋಕ್ಷ ಪ್ರೇರಣೆಯಿಂದ ಮುನ್ನೆಲೆಗೆ ಬಂದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಲಿಂಗಾಯತರಲ್ಲೂ ಒಡಕು ತಂದಿಟ್ಟಿದೆ. ಲಿಂಗಾಯತರು ಮತ್ತು ವೀರಶೈವರು ದಿನ ಬೆಳಗಾದರೆ ಪರಸ್ಪರ ವಾಗ್ಯುದ್ಧ ನಿರತರಾಗಿದ್ದಾರೆ. ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ-ಪ್ರತ್ಯಾರೋಪ ಮಾಡುವುದೇ ಆಗಿದೆ. ಲಿಂಗಾಯತ ಒಳಪಂಗಡಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಹಿಂದೆಂದೂ ಈ ರೀತಿ ಬೀದಿಗೆ ಬಂದು ಜಗಳವಾಡಿಕೊಂಡಿರಲಿಲ್ಲ. ರಾಜಕೀಯ ನಿಲುವುಗಳಲ್ಲಿ ಒಮ್ಮತ ಒಡೆದಿರಲಿಲ್ಲ. ಆದರೆ ಈಗ ರಾಜಕೀಯ ಕಾರಣಕ್ಕೇ ಬಿರುಕು ಉಂಟಾಗಿದೆ. ಈ ಬಿರುಕಿನಲ್ಲಿ ಮತರಾಜಕೀಯ ಮಾಡಲಾಗುತ್ತಿದೆ.  ಈ ಒಡಕಿನಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತನಗೇನಾದರೂ ಲಾಭವಾಗುವುದೋ ಎಂದು ಕಾಂಗ್ರೆಸ್ ಲೆಕ್ಕಾಚಾರ ಮಾಡುತ್ತಿದೆ.

ಆದರೆ ಈ ನಡುವೆ ಇಲ್ಲೊಂದು ವಿಚಿತ್ರ ಬೆಳವಣಿಗೆ ಆಗಿದೆ. ವೀರೇಂದ್ರ ಪಾಟೀಲರ ನಂತರ ಯಾವ ಯಡಿಯೂರಪ್ಪನವರಲ್ಲಿ ರಾಜಕೀಯ ನಾಯಕನನ್ನು ಲಿಂಗಾಯತ ಸಮುದಾಯದವರು ಅನ್ವೇಷಿಸಿದ್ದರೋ ಆ ನಾಯಕನೇ ಸ್ವತಂತ್ರ ಧರ್ಮ ಹೋರಾಟದಲ್ಲಿ ಖಚಿತ ನಿಲುವು ತಳೆಯಲಿಲ್ಲ. ಅತ್ತ ಸ್ವತಂತ್ರ ಧರ್ಮ ಹೋರಾಟದ ಪರವೂ ನಿಲ್ಲಲಿಲ್ಲ, ಇತ್ತ ವೀರಶೈವರ ಪರವೂ ವಾದಿಸಲಿಲ್ಲ. ತಟಸ್ಥ ನಿಲುವಿಗೆ ಶರಣಾದರು. ವರಿಷ್ಠರ ಸೂಚನೆ ಇದ್ದುದರಿಂದ ಯಡಿಯೂರಪ್ಪ ತುಟಿ ಬಿಚ್ಚಲಿಲ್ಲ ಎಂಬುದು ಬರೀ ಸಮರ್ಥನೆ ಆಗುತ್ತದೆಯೇ ಹೊರತು ಸಕಾರಣವಾಗುವುದಿಲ್ಲ. ವರಿಷ್ಠರ ಸೂಚನೆ ಪಾಲಿಸುವುದಾಗಲಿ ಅಥವಾ ಆ ಯಡಿಯೂರು ಸಿದ್ದಲಿಂಗೇಶ್ವರನೇ ಬಂದು ಹೇಳಿದರೂ ಅದನ್ನು ಕೇಳುವುದಾಗಲಿ ಯಡಿಯೂರಪ್ಪನವರ ಜಾಯಮಾನವಲ್ಲ. ಬದಲಿಗೆ ತಮ್ಮ ನಿಲುವು ಪ್ರದರ್ಶಿಸಿಯೇ ಸಿದ್ಧ. ಅಂತಹದರಲ್ಲಿ ಯಡಿಯೂರಪ್ಪನವರು ಸ್ವತಂತ್ರ ಧರ್ಮ ಹೋರಾಟ ವಿಚಾರದಲ್ಲಿ  ನಿರ್ದಿಷ್ಟ ನಿಲುವು ತಳೆಯದೇ ಹೋದದ್ದು ಲಿಂಗಾಯತ ಸಮುದಾಯದ ಅಸಮಾಧಾನಕ್ಕೂ ಕಾರಣವಾಗಿದೆ. ಅತ್ತ ಕಾಂಗ್ರೆಸ್ ಇತ್ತ ಬಿಜೆಪಿ ಬಗ್ಗೆ ವಿಶ್ವಾಸ ಕಳೆದುಕೊಂಡಿರುವ ಸಮುದಾಯದಲ್ಲಿ ಕೆಲವರಿಗೆ ಜೆಡಿಎಸ್ ಅನಿವಾರ್ಯ ಪರ್ಯಾಯವಾಗಿ ಕಂಡರೆ ಆಶ್ಚರ್ಯವೇನಿಲ್ಲ.

ಅದೇ ರೀತಿ ಸಿದ್ದರಾಮಯ್ಯನವರು ಬಲವಾಗಿ ಪ್ರತಿಪಾದಿಸಿದ ಅಹಿಂದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಆ ಸಮುದಾಯಗಳ ನಾಯಕರ ಅವಗಣನೆಯಿಂದಾಗಿ ಈಗಲೂ ಹಿಂದಿನ ಸ್ಥಿತಿಯಲ್ಲೇ ಇದೆ ಎಂದು ಹೇಳಲು ಬರುವುದಿಲ್ಲ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು, ತಮ್ಮ ಆಕಾಂಕ್ಷೆಯನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಕುಗ್ಗಿಸಿಕೊಂಡರೂ ಪರಮೇಶ್ವರ ಅವರು ಸಂಪುಟ ಸೇರಲು ಎರಡು ವರ್ಷಗಳೇ ಕಾಯಬೇಕಾಯಿತು.

ಪರಮೇಶ್ವರರ ಅಸಮಾಧಾನ, ಹತಾಶೆ ‘ದಲಿತ ಸಿಎಂ’ ಕೂಗಿನವರೆಗೂ ಬಂದು ನಿಂತಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಲ್ಲೂ ಮುಂದುವರಿದಿದ್ದ ಆಸೆಗೆ ಸಿದ್ದರಾಮಯ್ಯನವರ ರಾಜಕೀಯ ರಣತಂತ್ರವೇ ತಣ್ಣೀರಾಯಿತು. ಇನ್ನು ಅಲ್ಪಸಂಖ್ಯಾತರ ವಿಚಾರಕ್ಕೆ ಬಂದರೆ ಸರಕಾರದ ಭರವಸೆಗಳು ಮೂಗಿಗೆ ತುಪ್ಪ ಸವರಿದಂತಷ್ಟೇ ಆಗಿವೆ. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಒಂದು ಹಂತದಲ್ಲಿ ಮುನಿಸಿಕೊಂಡು ಸಿದ್ದರಾಮಯ್ಯನವರಿಂದ ದೂರ ಸರಿದಿದ್ದರು. ಅಷ್ಟೇ ಅಲ್ಲದೆ ಅವರನ್ನು ಅವಕಾಶ ಸಿಕ್ಕಾಗಲೆಲ್ಲ ಜರಿದಿದ್ದರು. ಅವರನ್ನು ತಣ್ಣಗೆ ಮಾಡಲು ಮೇಲ್ಮನೆ ಸದಸ್ಯತ್ವ ಕೊಡಬೇಕಾಯಿತು. ಅದೇ ರೀತಿ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಮೊಮ್ಮಗ ಹೆಬ್ಬಾಳ ಮರುಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯನವರ ಒಳರಾಜಕೀಯವೇ ಕಾರಣ ಎಂಬುದು ಈಗ ಗುಟ್ಟಾಗೇನೂ ಉಳಿದಿಲ್ಲ. ಈ ವಿಚಾರ ಮುಂದಿಟ್ಟುಕೊಂಡೇ ಜಾಫರ್ ಷರೀಫ್ ಅವರು ಸಿದ್ದರಾಮಯ್ಯನವರನ್ನು ಇಬ್ರಾಹಿಂ ಜತೆ ಪೈಪೋಟಿಗೆ ಬಿದ್ದವರಂತೆ ನಿಂದಿಸಿದ್ದೂ ಆಯಿತು. ಇದರ ಜತೆಗೆ ಮುಸ್ಲಿಮರಿಗೆಂದೇ ಅನುಷ್ಠಾನಕ್ಕೆ ತಂದ ಶಾದಿ ಭಾಗ್ಯ ಯೋಜನೆಯೂ ಯಶಸ್ವಿಯಾಗಿಲ್ಲ. ಪ್ರತಿ ತಾಲೂಕಿಗೆ ಕೊಟ್ಟ ಒಂದೂವರೇ ಲಕ್ಷ ರುಪಾಯಿ ತಲಾ ಐವತ್ತು ಸಾವಿರ ರುಪಾಯಿಯಂತೆ ಬರೀ ಮೂರು ಜೋಡಿಗಷ್ಟೇ ತಲುಪಿದೆ. ಸಾವಿರಾರು ಶಾದಿಗಳಿಗೆ ಸಾಕ್ಷಿಯಾಗುವ ತಾಲೂಕಿಗೆ ಬರೀ ಮೂರು ಕೊಡುಗೆ ಎಷ್ಟರ ಮಟ್ಟಿಗೆ ಎಟುಕುತ್ತದೆ. ಈ ಯೋಜನೆ ಒಂದು ಸ್ಯಾಂಪಲ್ ಅಷ್ಟೇ. ಜಮೀರ್ ಅಹಮದ್, ಇಕ್ಬಾಲ್ ಅನ್ಸಾರಿ ಜೆಡಿಎಸ್‌ನಿಂದ ವಿಮುಖವಾಗಿರುವುದು ನಿಜ. ಆದರೆ ಇದಕ್ಕೆ ಮತ್ತದೇ ಕಾಂಗ್ರೆಸ್ ಪ್ರೇರಣೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಈ ಸಂಗತಿಗಳು ಕೂಡ ಎಲ್ಲೋ ಒಂದು ಜೆಡಿಎಸ್ ಅನ್ನು ಮತ್ತದೇ ಅನಿವಾರ್ಯ ಪರ್ಯಾಯ ಜಾಗಕ್ಕೆ ತಂದು ನಿಲ್ಲಿಸಿತು ಎಂಬುದು ಪಕ್ಷದ ಮುಖಂಡರ ನಿರೀಕ್ಷೆ.

ಇದರ ಜತೆಗೆ ಕುಮಾರಸ್ವಾಮಿ ಹಿಂದೆ ಜನರ ಮಧ್ಯೆ ಬೆರೆತು ನೀಡಿರುವ ಉತ್ತಮ ಆಳ್ವಿಕೆ, ಹತ್ತು ವರ್ಷಗಳಿಂದ ಅಧಿಕಾರ ವಂಚಿತವಾಗಿರುವ ಬಗ್ಗೆ ಇರುವ ಅನುಕಂಪ ಕೂಡ ಗುಪ್ತಗಾಮಿನಿಯಂತೆ ಕೆಲಸ ಮಾಡುತ್ತಿದೆ. ಇದರರ್ಥ ಕುಮಾರಸ್ವಾಮಿ ಬಹುಮತ ಪಡೆದು ಅಧಿಕಾರಕ್ಕೆ ಬಂದೇ ಬಿಡುತ್ತಾರೆ ಎಂಬುದಲ್ಲ. ಆದರೆ ಬಾಹ್ಯ ಸಮೀಕ್ಷೆಗಳು ಹೇಳುವಂತೆ ಅವರು ಹೀನಾಯ ಸ್ಥಿತಿಯಲ್ಲಂತೂ ಇಲ್ಲವೇ ಇಲ್ಲ. ಏಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆಗಳು ಜೆಡಿಎಸ್ ಅನ್ನು ಸುರಕ್ಷಿತ ಸ್ಥಾನದಲ್ಲಿರಿಸಿವೆ. ಅಂದರೆ ಜೆಡಿಎಸ್ ಅನ್ನು ಬಿಟ್ಟು ಸರಕಾರ ಮಾಡದ ಸ್ಥಿತಿ ನಿರ್ಮಾಣ ಆಗುತ್ತದೆ ಎಂಬುದು. ಈಗಿರುವ ಹಾಗೂ ದಿನೇ ದಿನೇ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ನಲ್ವತ್ತು ಸ್ಥಾನಗಳನ್ನು ಪಡೆಯುವ ಸಂಭವವಿದೆ. ಇಷ್ಟು ಸ್ಥಾನ ಬಂದರೆ ಅಥವಾ ಈ ಸಂಖ್ಯೆ ಹೆಚ್ಚಳವಾಗುತ್ತಾ ಹೋದರೆ ಏಕಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಕುಸಿಯುತ್ತಾ ಹೋಗುತ್ತದೆ. ಮೈತ್ರಿ ಸರಕಾರದ ಸಂಭವ ಹೆಚ್ಚುತ್ತಾ ಹೋಗುತ್ತದೆ. ಅಂದರೆ ಆ ಮೈತ್ರಿ ಪಾತ್ರ ಜೆಡಿಎಸ್‌ನದೇ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು.

ಇದರ ಜತೆಗೆ ರಾಜ್ಯದ ರಾಜಕೀಯ ಚಿತ್ರಣ ದಿನಕ್ಕೊಂದು ರಂಗು ಪಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸೆರೆರಚಾಟ, ವಾಗ್ಯುದ್ಧವೇ ಚುನಾವಣೆ ರಣತಂತ್ರ ಎಂದು ಪರಿಭಾವಿಸಿದಂತಿದೆ. ತತ್ಪರಿಣಾಮ ಜನಮಾನಸವನ್ನು ಕದಡುವಂಥ ಪದಪುಂಜಗಳು ಪುಂಖಾನುಪುಂಖವಾಗಿ ಉದುರುತ್ತಿವೆ. ಬಿಜೆಪಿ, ಆರ್‌ಎಸ್‌ಎಸ್ ಉಗ್ರಗಾಮಿ ಸಂಘಟನೆಗಳು, ಅವುಗಳನ್ನು ಮೊದಲು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ದಿನೇಶ್ ಗುಂಡೂರಾವ್ ದೂರುವುದು, ಅವರ ವಿರುದ್ಧ ಬಿಜೆಪಿಯವರು ಕಾರುವುದು, ಮುಸ್ಲಿಂ ಸಂಘಟನೆಗಳು ಹಾಗೂ ಉಗ್ರಗಾಮಿಗಳ ಜತೆ ಕಾಂಗ್ರೆಸ್ ಸಂಬಂಧ ತಳಕು ಹಾಕುವುದು, ಜೈಲ್‌ ಭರೋ ಚಳವಳಿ ನೆಸುವುದು, ಹಿಂದುತ್ವದ ಸೌಮ್ಯ ಧೋರಣೆ ತಳೆಯುತ್ತಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಈ ರೀತಿ ಮಾತಾಡದಂತೆ ಕರ್ನಾಟಕದ ಅಧೀನ ನಾಯಕರಿಗೆ ಎಚ್ಚರಿಕೆ ಸಂದೇಶ ನೀಡುವುದು ಇವೆಲ್ಲವೂ ಚುನಾವಣೆ ತಿರುಗಣಿಯಲ್ಲಿ ಎಲ್ಲಿ ಹೋಗಿ ನಿಲ್ಲುತ್ತವೆ ಎಂದು ಹೇಳಲು ಬರುವುದಿಲ್ಲ. ರಾಷ್ಟ್ರೀಯ ಪಕ್ಷಗಳಲ್ಲಿ ಕಾದಾಟ, ಗೊಂದಲ ಹೆಚ್ಚಿದಷ್ಟು ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಲಾಭ. ಇದು ಆ ಪಕ್ಷದ, ಪಕ್ಷದ ನಾಯಕ ಕುಮಾರಸ್ವಾಮಿ ಅವರ ಅಧಿಕಾರ ನಿರೀಕ್ಷೆಯನ್ನು ಜೀವಂತವಾಗಿಟ್ಟಿದೆ.

ಲಗೋರಿ: ಕೆಲವೊಮ್ಮೆ ದೊಡ್ಡ ಬಲೆಗೆ ಸಿಗದ ಮೀನು ಸಣ್ಣ ಗಾಳಕ್ಕೂ ಬೀಳಬಹುದು.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply