ಹಜ್ ಸಬ್ಸಿಡಿ ಬದಲು ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹಣ! ವೋಟ್ ಬ್ಯಾಂಕ್ ರಾಜಕೀಯಕ್ಕಿಂತ ಪ್ರಗತಿಗೆ ಈ ನಿರ್ಧಾರ!

ಡಿಜಿಟಲ್ ಕನ್ನಡ ವಿಶೇಷ:

ಸ್ವತಂತ್ರ ಭಾರತದಲ್ಲಿ ಕಳೆದ ಆರು ದಶಕಗಳಿಂದಲೂ ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಗೆ ಕೇಂದ್ರ ಸರ್ಕಾರ ಈಗ ಬ್ರೇಕ್ ಹಾಕಿದೆ.

2012ರಲ್ಲೇ ಸುಪ್ರೀಂ ಕೋರ್ಟ್ ಹಜ್ ಸಬ್ಸಿಡಿಯನ್ನು 2022ರ ಒಳಗಾಗಿ ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ತಿಳಿಸಿತ್ತು. ಅದರಂತೆ ಈ ವರ್ಷದಿಂದ ಹಜ್ ಯಾತ್ರಿಕರಿಗೆ ಯಾವುದೇ ಸಬ್ಸಿಡಿ ನೀಡುವುದಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಸುಮಾರು 60ವರ್ಷಗಳ ನಂತರ ಭಾರತದಿಂದ ಸಬ್ಸಿಡಿ ರಹಿತವಾಗಿ ಜನರು ಹಜ್ ಯಾತ್ರೆ ಮಾಡಲಿದ್ದಾರೆ. ಸರ್ಕಾರದ ಈ ನಿರ್ಧಾರ ಪ್ರಕಟಿಸಿರುವ ಸಚಿವ ನಖ್ವಿ, ‘ಹಜ್ ಸಬ್ಸಿಡಿ ನಿಲ್ಲಿಸುವುದರಿಂದ ವರ್ಷಕ್ಕೆ ಸುಮಾರು 700 ಕೋಟಿ ಉಳಿಕೆಯಾಗಲಿದೆ. ಇದನ್ನು ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಬಳಸಲಾಗುವುದು’ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರದ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನ ಬಲವಾಗಿದೆಯಾದರೂ ಈ ನಿರ್ಧಾರ ಸಹಜವಾಗಿಯೇ ಮೋದಿ ಮುಸ್ಲಿಂ ಸಮುದಾಯದ ಪರ- ವಿರೋಧದ ಕುರಿತ ಆಲೋಚನೆಗಳು ಬಹುತೇಕರ ಮನದಲ್ಲಿ ಮೂಡಿದೆ. ಈ ಪ್ರಶ್ನೆಗೆ ಮುಂಚಿತವಾಗಿಯೇ ನಖ್ವಿ ಅವರು ಉತ್ತರ ನೀಡಿದ್ದು, ‘ಅಲ್ಪಸಂಖ್ಯಾತರ ಏಳಿಗೆ ನಮ್ಮ ಅಜೆಂಡಾ ಆಗಿದ್ದು, ಅದರ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದ ಅನುದಾನ ಪಡೆಯದೇ ಅಲ್ಪಸಂಖ್ಯಾತರನ್ನು ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಉದ್ದೇಶ’ ಎಂಬ ಸಮರ್ಥನೆ ನೀಡಿದ್ದಾರೆ.

2012ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿರುವ ಸೂಚನೆಯಲ್ಲಿ ಹಜ್ ಸಬ್ಸಿಡಿಗೆ ನೀಡುವ ಹಣವನ್ನು ಅಲ್ಪಸಂಖ್ಯಾತರ ಶಿಕ್ಷಣಕ್ಕೆ ವೆಚ್ಚ ಮಾಡುವಂತೆ ಸಲಹೆ ನೀಡಿತ್ತು. ಹೀಗಾಗಿ ಈ ನಿರ್ಧಾರ ಶ್ಲಾಘನೀಯ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದಿಂದಲೇ ದಾಖಲೆ ಪ್ರಮಾಣದ ಹಜ್ ಯಾತ್ರಿಗಳು ಸೌದಿ ಅರೆಬಿಯಾಗೆ ತೆರಳುತ್ತಿದ್ದಾರೆ. ಈ ಬಾರಿ ಸೌದಿ ಸರ್ಕಾರ ಹೆಚ್ಚುವರಿ 5 ಸಾವಿರ ಭಾರತೀಯರಿಗೆ ಹಜ್ ಯಾತ್ರೆಗೆ ಅವಕಾಶ ನೀಡಿದ್ದು, ಈ ವರ್ಷ 1.75 ಲಕ್ಷ ಮಂದಿ ಹಜ್ ಯಾತ್ರೆ ಮಾಡುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರಕ್ಕೆ ಹಜ್ ಯಾತ್ರೆ ಸಬ್ಸಿಡಿಯಲ್ಲಿ ವಿಮಾನ ಪ್ರಯಾಣದ ಸಬ್ಸಿಡಿಯೇ ಹೆಚ್ಚಾಗಿದೆ. 2007ನೇ ಇಸವಿಯನ್ನೇ ಉದಾಹರಣೆಗೆ ತೆಗೆದುಕೊಂಡರೆ ಸರ್ಕಾರ ಪ್ರತಿ ಹಜ್ ಯಾತ್ರಿಗೂ ವಿಮಾನ ಪ್ರಯಾಣದ ಸಬ್ಸಿಡಿ ರೂಪದಲ್ಲಿ ಸುಮಾರು ₹ 45 ಸಾವಿರ ಖರ್ಚು ಮಾಡುತ್ತಿತ್ತು. ಇನ್ನು ಹೆಚ್ಚುವರಿಯಾಗಿ ಯಾತ್ರಿಕರಿಗೆ ₹  2-3 ಸಾವಿರ ನೀಡುತ್ತಿತ್ತು. ವಿಮಾನ ಪ್ರಯಾಮದ ಸಬ್ಸಿಡಿ ಕೇಂದ್ರದ ಬೊಕ್ಕಸಕ್ಕೆ ಭಾರವಾಗಿತ್ತು. ಭಾರತ ಸರ್ಕಾರದ ಅಧೀನದಲ್ಲಿರುವ ಏರ್ ಇಂಡಿಯಾ ಈ ಪ್ರಯಾಣದ ಖರ್ಚು ನೋಡಿಕೊಳ್ಳುತ್ತಿತ್ತು. ಸದ್ಯ ಏರ್ ಇಂಡಿಯಾ ಆರ್ಥಿಕ ನಷ್ಟದಿಂದ ತತ್ತರಿಸಿದ್ದು, ಸಬ್ಸಿಡಿ ಇಲ್ಲದ ಕಾರಣ ಮುಂದಿನ ಹಜ್ ಯಾತ್ರೆ ವೇಳೆ ಏರ್ ಇಂಡಿಯಾ ಚೇತರಿಕೆ ಕಾಣುವ ಸಾಧ್ಯತೆ ಇದೆ. ಇನ್ನು ತೈಲ ಬೆಲೆ ಏರಿಕೆಯಿಂದ ಸಮುದ್ರ ಮಾರ್ಗದ ಪ್ರಯಾಣಕ್ಕೆ ಬ್ರೇಕ್ ಬಿದ್ದಿತ್ತು. ಈಗ ಕೇಂದ್ರ ಸರ್ಕಾರ ಸೌದಿ ಅರೆಬಿಯಾ ಸರ್ಕಾರದೊಂದಿಗೆ ಚರ್ಚಿಸಿ ಮತ್ತೆ ಸಮುದ್ರ ಮಾರ್ಗ ಪ್ರಯಾಣ ಆರಂಭಿಸಲು ಸಜ್ಜಾಗಿದೆ. ಹೀಗೆ ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ದೃಷ್ಠಿಕೋನದ ಯೋಚನೆಗಿಂತ ಸುಪ್ರೀಂ ಕೋರ್ಟ್ ನ ಪ್ರಗತಿಯ ಆಲೋಚನೆ ಉತ್ತಮ ಬೆಳವಣಿಗೆ.

Leave a Reply