ತೊಗಾಡಿಯಾ ಎನ್ ಕೌಂಟರ್ ಗೆ ಪ್ಲಾನ್? ಎಷ್ಟು ನಿಜ, ಎಷ್ಟು ಸುಳ್ಳು?

ಡಿಜಿಟಲ್ ಕನ್ನಡ ಟೀಮ್:

ಪ್ರವೀಣ್ ತೊಗಾಡಿಯಾ ಹೆಸರು ಹೇಳ್ತಿದ್ದ ಹಾಗೆ ಒಂದು ಹಿಂದುತ್ವದ ಚಹರೆ ಕಣ್ಣು ಮುಂದೆ ಹಾದು ಹೋಗುತ್ತೆ. ಭಾಷಣ ಮಾಡಲು ನಿಂತರೆ ಪ್ರಖರ ಹಿಂದುತ್ವ ಎಂತವರನ್ನೂ ಕ್ಷಣಮಾತ್ರ ಸೆಳೆಯದೆ ಇರಲ್ಲ. ಇಂತಹ ವ್ಯಕ್ತಿತ್ವ ಇರುವ ವ್ಯಕ್ತಿಗಳಿಗೆ ಪ್ರೀತಿಸುವವರು ಎಷ್ಟು ಜನರಿರುತ್ತಾರೋ ಅಷ್ಟೇ ಪ್ರಮಾಣದಲ್ಲಿ ವಿರೋಧಿಗಳು ಇರುತ್ತಾರೆ ಅನ್ನೋದು ಕಟುಸತ್ಯ. ಅದರೆ ಅನ್ಯ ಕೋಮಿಗೆ ಸೇರಿದ ವ್ಯಕ್ತಿಗಳು ಇವರನ್ನು ಟಾರ್ಗೆಟ್ ಮಾಡಿದ್ರೆ ಇರಬಹುದೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತೆ. ಆದರೆ ಇವರನ್ನು ಟಾರ್ಗೆಟ್ ಮಾಡಿರೋದು ಕಾನೂನು ಸುವ್ಯವಸ್ಥೆ ಕಾಪಾಡಲು ಖಾಕಿ ತೊಟ್ಟ ಆರಕ್ಷರಂತೆ. ಈ ಮಾತನ್ನು ಸ್ವತಃ ವಿಶ್ವ ಹಿಂದೂ ಪರಿಷತ್ ನ  ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಅವರೇ ಹೇಳಿದ್ದಾರೆ.

ಹೇಳಿಕೆ ಹಿಂದೆ ಸಾಕಷ್ಟು ಅನುಮಾನ.. ಯಾಕೆ..?

ಪ್ರವೀಣ್ ಭಾಯ್ ತೊಗಾಡಿಯಾ ಹೇಳಿಕೇಳಿ ರಾಜಸ್ಥಾನದ ಹಿಂದುತ್ವವಾದಿ. ಅಲ್ಲಿ ಅಧಿಕಾರ ನಡೆಸುತ್ತಿರೋದು ಭಾರತೀಯ ಜನತಾ ಪಾರ್ಟಿ. ಹಿಂದುತ್ವವೇ ಆ ಪಕ್ಷದ ಪ್ರಮುಖ ಅಜೆಂಡ. ಪೊಲೀಸ್ ಇಲಾಖೆ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಸ್ಥಿತಿಯಲ್ಲಿ ಓರ್ವ ಪ್ರಮುಖ ನಾಯಕನನ್ನು ಪೊಲೀಸರು ಎನ್ ಕೌಂಟರ್ ಮಾಡಿ ಮುಗಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಎಂಥವರನ್ನೂ ಕಾಡದೆ ಇರಲು ಸಾಧ್ಯವಿಲ್ಲ. ಒಂದು ವೇಳೆ ಪ್ರವೀಣ್ ತೊಗಾಡಿಯಾ ಅವರ ಮಾತು ಸತ್ಯವೇ ಆಗಿದ್ದು, ರಾಜಸ್ಥಾನ ಸರ್ಕಾರವೇ ಮುಂದೆ ನಿಂತು ತೊಗಾಡಿಯಾರನ್ನು ಎನ್ ಕೌಂಟರ್ ಹೆಸರಲ್ಲಿ ಮುಗಿಸಲು ಸಂಚು ರೂಪಿಸಿದೆ ಅಂದ್ರೆ, ಸಣ್ಣ ವಿಚಾರವಲ್ಲ. ತೊಗಾಡಿಯಾ ಹಿಂದೂ ನಾಯಕರ ಸಾಲಿನಲ್ಲಿ ಪ್ರಮುಖ ಸ್ಥಾನ ಹೊಂದಿರುವ ನಾಯಕ. ರಾಷ್ಟ್ರ ಮಟ್ಟದಲ್ಲಿ ಅದರಲ್ಲೂ ಹಿಂದೂ ಧರ್ಮದ ನಾಯಕನನ್ನು ರಾಜ್ಯ ಸರ್ಕಾರ ಎನ್ ಕೌಂಟರ್ ಹೆಸರಿನಲ್ಲಿ ಮುಗಿಸಲು ಪ್ಲಾನ್ ಮಾಡಿದೆ ಅಂದ್ರೆ ನಂಬಲು ಸಾಧ್ಯವಾಗದ ಮಾತು. ಒಂದು ವೇಳೆ ರಾಜ್ಯ ಸರ್ಕಾರ ತೊಗಾಡಿಯಾರನ್ನು ಮುಗಿಸಲು ಸಂಚು ರೂಪಿಸಿದೆ ಅಂದ್ರೆ ಅದರಲ್ಲಿ ಕೇಂದ್ರದ ಸಂಚು ಅಡಗಿದೆ ಎಂದೇ ಅರ್ಥ.

ಆಗಿರೋದು ಇಷ್ಟೆ ಮೊನ್ನೆ ರಾಜಸ್ಥಾನದ ಪೊಲೀಸರ ತಂಡ ತೊಗಾಡಿಯಾ ಬಂಧನಕ್ಕೆ ಅರೆಸ್ಟ್ ವಾರೆಂಟ್ ಪಡೆದು ಮನೆ ಬಳಿಗೆ ಹೋಗಿದ್ರು. ಪೊಲೀಸರ ಆಗಮನದ ವಿಚಾರ ತಿಳಿದ ತೊಗಾಡಿಯಾ ಮನೆಯಿಂದ ಎಸ್ಕೇಪ್ ಆಗಿದ್ರು. ಖಾಲಿ ಕೈಲಿ ವಾಪಸ್ ಆದ ಪೊಲೀಸರ ಎದುರು ವಿಹಿಂಪ ಕಾರ್ಯಕರ್ತರು ಮುತ್ತಿಗೆ ಹಾಕುತ್ತಿದ್ದಂತೆ ಗಾಬರಿಯಾದ ಪೊಲೀಸರು, ತೊಗಾಡಿಯ ಪತ್ತೆಗೆ ತಂಡ ರಚನೆ ಮಾಡಿದ್ರು. ಆ ಬಳಿಕ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪಾರ್ಕ್ ಒಂದರಲ್ಲಿ ಬಿದ್ದಿದ್ದರು ಎಂದಿದ್ದ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ರು. ಲೋ ಬ್ಲಡ್ ಶುಗರ್ ನಿಂದ ಬಳಲುತ್ತಿದ್ದ ಪ್ರವೀಣ್ ತೊಗಾಡಿಯಾ ಅವರಿಗೆ ಚಿಕಿತ್ಸೆ ಕೊಡಿಸಲಾಯ್ತು. ಆದ್ರೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ತೊಗಾಡಿಯಾ ಪೊಲೀಸರು ನನ್ನನ್ನು ಎನ್ ಕೌಂಟರ್ ಮಾಡಲು ಪ್ಲಾನ್ ಮಾಡಿದ್ದಾರೆ. ನನ್ನ ದನಿಯನ್ನು ಅಡಗಿಸಲು ಕೆಲವರು ಮುಂದಾಗಿದ್ದಾರೆ ಅಂತ ವಾಗ್ದಾಳಿ ಮಾಡಿದ್ರು. ಆದ್ರೆ ಅವರು ಯಾರು ಅನ್ನೋದನ್ನು ಬಿಟ್ಟುಕೊಡಲಿಲ್ಲ. ರಾಜಸ್ಥಾನದಲ್ಲಿ ವಸುಂದರ ರಾಜೇ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಹೀಗಿದ್ದರೂ ಓರ್ವ ಹಿಂದೂ ಮುಖಂಡನ ಹತ್ಯೆಗೆ ಪೊಲೀಸರೇ ಮುಂದಾಗಿದ್ದಾರೆ ಅನ್ನೋದೇ ಆದ್ರೆ ಎಲ್ಲೋ ಏನೋ ಹೆಚ್ಚು ಕಡಿಮೆ ಆಗಿದೆ ಅಂತಾನೇ ಅರ್ಥ. ಅದರಲ್ಲೂ ಗುಜರಾತ್ ನ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಭೇಟಿ ಮಾಡಿ ಮಾತನಾಡಿರುವುದು ಹಾಗೂ ಕಾಂಗ್ರೆಸ್ ಮುಖಂಡರು ತೊಗಾಡಿಯಾ ಮಾತನ್ನು ಬೆಂಬಲಿಸಿರೋದು ಭಾರಿ ಕುತೂಹಲಕಾರಿ ಆಗಿದೆ. ಇದು ಇಷ್ಟಕ್ಕೆ ಮುಕ್ತಾಯ ಆಗುವ ಪ್ರಕರಣವಲ್ಲ. ಮುಂದೇನಾಗುತ್ತೆ ಅನ್ನೋ ಕೌತುಕ ಹೆಚ್ಚಾಗಿದೆ.

Leave a Reply