ತಪ್ಪು ಮಾಡಿದ್ದು ಎಎಪಿ, ದೂರು ಕೊಟ್ಟಿದ್ದು ಕಾಂಗ್ರೆಸ್, ಟೀಕೆ ಮಾತ್ರ ಬಿಜೆಪಿಗೆ!

ಡಿಜಿಟಲ್ ಕನ್ನಡ ಟೀಮ್:

ಸದ್ಯದ ದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಯಾರಿಗೆ ಏನೇ ಕೆಟ್ಟದ್ದಾದರೂ ಅದು ಅವರ ತಪ್ಪಿನಿಂದಲ್ಲ ಬದಲಿಗೆ ಮೋದಿಯಿಂದ ಎನ್ನುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ದೆಹಲಿಯಲ್ಲಿ ಲಾಭದಾಯಕ ಹುದ್ದೆ ಅಲಂಕರಿಸಿ 20 ಶಾಸಕರು ಅಮಾನತುಗೊಂಡಿರುವ ಪ್ರಕರಣ.

ಹೌದು, ಈ ಪ್ರಕರಣವನ್ನೊಮ್ಮೆ ನೋಡೋಣ. 70 ಶಾಸಕರ ಸಾಮರ್ಥ್ಯ ಹೊಂದಿರುವ ದೆಹಲಿ ವಿಧಾನ ಸಭೆಗೆ 67 ಸಂಖ್ಯಾಬಲ ಪಡೆದು ಆಯ್ಕೆಯಾದ ಆಮ್ ಆದ್ಮಿ ಪಕ್ಷ ತರಾತುರಿಯಲ್ಲಿ ಶಾಸಕರುಗಳು ಸಂಸತ್ತಿನ ಕಾರ್ಯದರ್ಶಿ ಹುದ್ದೆ ಅಲಂಕರಿಸಲು ಬೇಕಾದ ಎಲ್ಲ ರೀತಿಯ ಕಾನೂನು ತಿದ್ದುಪಡಿ ಮಾಡಿಕೊಂಡಿತು. ಆದರೆ ದೆಹಲಿಯ ಆಡಳಿತದಲ್ಲಿ ಪ್ರಮುಖರಾಗಿರುವ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಯನ್ನು ಮಾತ್ರ ಸಿಗಲಿಲ್ಲ. ಹೀಗಿದ್ದಾಗ ಶಾಸಕರು ಆ ಹುದ್ದೆ ಅಲಂಕರಿಸುವುದು ಕಾನೂನು ಬಾಹೀರ ಎಂದು ಗೊತ್ತಿದ್ದರೂ 21 ಶಾಸಕರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿ ತಪ್ಪು ಮಾಡಿದ್ದು ಆಮ್ ಆದ್ಮಿ ಪಕ್ಷ.

ಅಜಯ್ ಮಕೇನ್ ನೇತೃತ್ವದಲ್ಲಿ ಎಎಪಿಯ ಈ ತಪ್ಪು ಹೆಜ್ಜೆಯನ್ನು ಬಳಸಿಕೊಳ್ಳಲು ಮುಂದಾಗಿದ್ದು ಕಾಂಗ್ರೆಸ್. ಮೊದಲು ಕಾಂಗ್ರೆಸ್ ಪಕ್ಷ ಅರವಿಂದ ಕೇಜ್ರಿವಾಲರ ಕಾನೂನು ಬಾಹೀರ ನೇಮಕವನ್ನು ಪ್ರಶ್ನಿಸಿದ್ದಲ್ಲದೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ಕಾಂಗ್ರೆಸ್. ಇದೊಂದೇ ವಿಚಾರದಲ್ಲಿ ಮಾತ್ರವಲ್ಲ. ದೆಹಲಿಯಲ್ಲಿ ತನ್ನ ಮತಗಳನ್ನು ಕಿತ್ತುಕೊಂಡ ಎಎಪಿ ವಿರುದ್ಧ ಕಾಂಗ್ರೆಸ್ ಅನೇಕ ಬಾರಿ ಹೋರಾಟ ನಡೆಸಿದೆ. ಕಾಂಗ್ರೆಸ್ ದೂರು ಸ್ವೀಕರಿಸಿದ ಚುನಾವಣಾ ಆಯೋಗ ತನ್ನ ಜವಾಬ್ದಾರಿ ನಿರ್ವಹಿಸಿ ರಾಷ್ಟ್ರಪತಿ ಅವರಿಗೆ ಈ 20 ಶಾಸಕರನ್ನು ಅಮಾನತುಗೊಳಿಸುವಂತೆ ಶಿಫಾರಸ್ಸು ಮಾಡಿದರು. ಈ ಶಿಫಾರಸ್ಸಿಗೆ ಭಾನುವಾರ ರಾಷ್ಚ್ರಪತಿಗಳು ಅಂಕಿತವಾಡಿ 20 ಶಾಸಕರನ್ನು ಅಮಾನತು ಮಾಡಿತು.

ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದಾಗಿನಿಂದ ಕಾಂಗ್ರೆಸ್ ಹೊರತುಪಡಿಸಿ ಮಿಕ್ಕೆಲ್ಲಾ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರೋದು ಬಿಜೆಪಿ ವಿರುದ್ಧ. ಚುನಾವಣಾ ಆಯೋಗದ ಮುಖ್ಯಸ್ಥರ ಅವಧಿ ಮುಕ್ತಾಯವಾಗಲು ಮೂರು ದಿನ ಬಾಕಿ ಇರುವಾಗ ಮೋದಿ ಅವರು ಈ ಶಿಫಾರಸ್ಸು ಮಾಡುವಂತೆ ಒತ್ತಡ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು. ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಬಹುದಾದರೆ ಅದರ ಅಧ್ಯಕ್ಷರು ಯಾರಾದರೇನು? ಒತ್ತಡ ಹಾಕಬಹುದಿತ್ತು. ಅಂದಹಾಗೆ ಇಲ್ಲಿ ಬಿಜೆಪಿಗೆ ಏನೂ ತಿಳಿದಿಲ್ಲ ಎಂದಲ್ಲ. ಎಲ್ಲವೂ ತಿಳಿದಿತ್ತು. ಎಎಪಿ ಅಧಿಕಾರದ ಮದದಲ್ಲಿ ಇಟ್ಟ ತಪ್ಪು ಹೆಜ್ಜೆ, ಕಾಂಗ್ರೆಸ್ ಅದರ ವಿರುದ್ಧ ಮಾಡಿದ ಹೋರಾಟವನ್ನು ಅರಿತ ಬಿಜೆಪಿ ಈ ವಿಷಯದಲ್ಲಿ ಮೂಗು ತೂರಿಸದೇ ತೆರೆಮರೆಯಲ್ಲಿ ಇದರಿಂದಾಗಬಹುದಾದ ರಾಜಕೀಯ ಲಾಭ ಪಡೆದುಕೊಳ್ಳಲು ಕಾದು ಕುಳಿತಿತ್ತು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವುದು ಸಿಪಿಐಎಂ, ಎನ್ಸಿಪಿ, ಟಿಎಂಸಿ ಪಕ್ಷಗಳು ಹರಿಹಾಯ್ದಿರುವುದು ಕೇವಲ ಬಿಜೆಪಿಯನ್ನು. ತನ್ನ ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ಧ ಚಕಾರ ಎತ್ತದೇ ಕೇವಲ ಬಿಜೆಪಿ ತನ್ನ ಅಧಿಕಾರ ಬಳಸಿ ಎಎಪಿ 20 ಶಾಸಕರನ್ನು ಕೆಳಗಿಳಿಸಿದೆ ಎಂಬ ಆರೋಪ ಕೇಳಿಬರುತ್ತಿದೆ. ಒಟ್ಟಿನಲ್ಲಿ ತಪ್ಪು ಮಾಡಿದ ಎಎಪಿ ಬೆಂಬಲಕ್ಕೆ ನಿಂತವರು ಕಾಂಗ್ರೆಸ್ ಪ್ರಯತ್ನಗಳನ್ನು ಮರೆತು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಮೇಲೆ ಟೀಕಾಪ್ರಹಾರ ನಡೆಸುತ್ತಿರುವುದು ಸ್ಪಷ್ಟವಾಗಿದೆ.

Leave a Reply