ಕೇವಲ ಬಾಯಾರಿಕೆ ಮಾತ್ರವಲ್ಲ- ಹುತಾತ್ಮ ಯೋಧರ ಕುಟುಂಬದ ಕಷ್ಟ ನಿವಾರಿಸಲು ಬಂದಿದೆ ‘ಸೇನಾ ಜಲ್’!

ಡಿಜಿಟಲ್ ಕನ್ನಡ ಟೀಮ್:

ಮುಂದಿನ ಬಾರಿ ನೀವು ಪ್ರಯಾಣ ಮಾಡುವಾಗ ಅಥವಾ ಹೊರಗೆ ಇದ್ದಾಗ ಬಾಯಾರಿಕೆಯಾಯ್ತ ವಿವಿಧ ಬ್ರ್ಯಾಂಡ್ ಮಿನರಲ್ ನೀರಿನ ಬದಲಿಗೆ ‘ಸೇನಾ ಜಲ್’ವನ್ನೇ ಕುಡಿಯಿರಿ. ಆ ಮೂಲಕ ಹುತಾತ್ಮ ಯೋಧರ ಕುಟುಂಬಕ್ಕೆ ನೀವು ನೆರವಾಗಿ!

ಹೌದು, ಇನ್ನುಮುಂದೆ ನೀವು ಸೇನಾ ಜಲ್ ಕುಡಿದಾಗೆಲ್ಲಾ ಪರೋಕ್ಷವಾಗಿ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗಲಿದ್ದೀರಿ. ಅದು ಹೇಗೆ ಎಂದರೆ… ಆರ್ಮಿ ವೈಫ್ಸ್ ವೆಲ್ಫೇರ್ ಅಸೋಸಿಯೇಷನ್ (ಎಡ್ಬ್ಲ್ಯೂಡ್ಬ್ಲ್ಯೂಎ) ಎಂಬ ಸಂಸ್ಥೆ ಸೇನಾ ಜಲ ಎಂಬ ಕುಡಿಯುವ ನೀರು ಮಾರಾಟವನ್ನು ಆರಂಭಿಸಿದೆ. ವಿಶೇಷ ಎಂದರೆ ಇದರಿಂದ ಸಂಗ್ರಹವಾಗುವ ಹಣವನ್ನು ಹುತಾತ್ಮ ಯೋಧರ ಪತ್ನಿ ಹಾಗೂ ಕುಟುಂಬಕ್ಕೆ ನೀಡಲಾಗುವುದು.

ಕಳೆದ ವರ್ಷ ಅಕ್ಟೋಬರ್ ನಲ್ಲೇ ಸೇನಾ ಜಲ ಆರಂಭವಾಗಿದ್ದು, ಹಂತ ಹಂತವಾಗಿ ಮಾರುಕಟ್ಟೆಯನ್ನು ವಿಸ್ತರಿಸಲಾಗುತ್ತಿದೆ. ₹ 6 ರಿಂದ ₹ 10ರವರೆಗೂ ಸೇನಾ ಜಲ ಸಿಗಲಿದ್ದು, ಗ್ರಾಹಕರಿಗೆ ಕಡಿಮೆ ಮೊತ್ತದಲ್ಲಿ ನೀರು ಪೂರೈಸುತ್ತಿದೆ. ಇಲ್ಲಿ ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಈ ಎಡ್ಬ್ಲ್ಯೂಡ್ಬ್ಲ್ಯೂಎ ಸಂಸ್ಥೆ ನಡೆಸುತ್ತಿರೋದು ಬೇರಾರು ಅಲ್ಲ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್!

ಈ ಸಂಸ್ಥೆ ಭಾರತದ ದೊಡ್ಡ ಸ್ವಯಂ ಸೇವಕರ ಸಂಸ್ಥೆಗಳಲ್ಲಿ ಒಂದಾಗಿದ್ದು, ಯೋಧರ ಕುಟುಂಬಸ್ಥರ ಕೌಶಲ್ಯ ಅಭಿವೃದ್ಧಿ ಮತ್ತು ಸಬಲೀಕರಣ ಉದ್ದೇಶವನ್ನು ಹೊಂದಿದೆ. ಯೋಧರ ಪತ್ನಿಯರು ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸಿಕೊಡುವುದು, ಅವರಿಗೆ ಆರ್ಥಿಕ ಸಹಾಯ ಮಾಡುವುದು ಈ ಸಂಸ್ಥೆಯ ಉದ್ದೇಶ. ಎಡ್ಬ್ಲ್ಯೂಡ್ಬ್ಲ್ಯೂಎ ಕೇವಲ ಕುಡಿಯುವ ನೀರಿನ ಯೋಜನೆ ಮಾತ್ರವಲ್ಲದೆ, ಕಾಗದ ಮರುಬಳಕೆ, ಮೇಣದ ಬತ್ತಿ ತಯಾರಿಕೆ, ಹೊಲಿಗೆ, ಊಟ ತಯಾರಿಸಿ ಮಾರಾಟ, ಕರಕುಶಲವಸ್ತು ತಯಾರಿಕೆಯಂತಹ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

ಸೈನಿಕರ ಕುಟುಂಬಕ್ಕೆ ನೆರವಾಗಲು ಅಥವಾ ಈ ಸಂಸ್ಥೆಯ ಉತ್ಪನ್ನಗಳ ಮಾರಾಟಗಾರರಾಗಲು ನವದೆಹಲಿಯ ರಕ್ಷಣಾ ಮುಖ್ಯ ಕಾರ್ಯಾಲಯವನ್ನು ಸಂಪರ್ಕಿಸಬಹುದು. ಸೇನಾ ಜಲ ತಯಾರಿಕಾ ಘಟಕ ಹಾಗೂ ಅದರ ಉದ್ಘಾಟನೆ ಚಿತ್ರಗಳು ಇಲ್ಲಿವೆ…

Leave a Reply