ಬಿಜೆಪಿ, ಕಾಂಗ್ರೆಸ್ ಕಾಲ್ಚೆಂಡಾದ ಗಣಿ ಅಕ್ರಮ!

ಅಪರಾಧ ಮಾಡಿದವರಿಗೆಲ್ಲ ಶಿಕ್ಷೆ ಆಗುವುದಿಲ್ಲ. ಹಾಗೆಂದು ಅವರು ನಿರಪರಾಧಿಗಳು ಎಂದು ಅರ್ಥವಲ್ಲ. ಅಪರಾಧ ಮಾಡಿಯೂ ಸಾಕ್ಷ್ಯಾಧಾರದ ಕೊರತೆ, ರಾಜೀ ಸಂಧಾನದಿಂದ ಅನೇಕರು ಮಾಡಿದ ಅಪರಾಧಗಳಿಂದ ಪಾರಾಗಿರುವುದು ಉಂಟು. ಅದೇ ರೀತಿ ಅಪರಾಧ ಎಸಗದವರು ಕೆಲವೊಮ್ಮ ಪರಿಸ್ಥಿತಿಯ ಕೈಗೊಂಬೆಯಾಗಿ ಶಿಕ್ಷೆಗೆ ಗುರಿ ಆಗಿರುವುದು ಉಂಟು. ಅಂದ ಮಾತ್ರಕ್ಕೆ ಅವರು ಅಪರಾಧಿಗಳು ಎಂದೇನೂ ಅಲ್ಲ. ಆದರೆ ಶಿಕ್ಷೆಗೆ ಗುರಿ ಆಗುವುದರಿಂದ ಜನರ ಕಣ್ಣಲ್ಲಿ ಅಪರಾಧಿಗಳಾಗುತ್ತಾರೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿರುವ ಹುಳುಕುಗಳು ಈ ರೀತಿ ಪ್ರಮಾದಕ್ಕೆ ಹಿಂದೆಯೂ ಆಸ್ಪದ ಕೊಟ್ಟಿವೆ, ಈಗಲೂ ಕೊಡುತ್ತಿವೆ, ಮುಂದೆಯೂ ಕೊಡುತ್ತವೆ!

ಆದರೆ ರಾಜಕೀಯ ಕಾರಣಗಳಿಗಾಗಿ ಅಪರಾಧ ಪ್ರಕರಣಗಳು ಬಳಕೆ ಆಗುವುದು, ಅಪರಾಧ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುವುದು, ರಾಜಕೀಯ ಎದುರಾಳಿಗಳನ್ನು ಸದೆಬಡಿಯಲು ಬಳಕೆ ಮಾಡಿಕೊಳ್ಳುವುದು, ರಾಜಕೀಯವಾಗಿ ಆಗುವ ನಷ್ಟದಿಂದ ತಪ್ಪಿಸಿಕೊಳ್ಳಲು ಅಪರಾಧ ಪ್ರಕರಣಗಳನ್ನು ಮುಚ್ಚಿ ಹಾಕುವುದು ನಡೆಯುತ್ತಲೇ ಬಂದಿದೆ. ಇದರಲ್ಲಿ ಯಾವುದೇ ರಾಜಕೀಯ ಪಕ್ಷವೂ ಹಿಂದೆ ಬಿದ್ದಿಲ್ಲ. ಸಿಕ್ಕ ಅವಕಾಶಗಳನ್ನು ಯಾರೂ ಬಳಕೆ ಮಾಡಿಕೊಳ್ಳದೆ ಬಿಟ್ಟಿಲ್ಲ. ಈ ರೀತಿ ರಾಜಕೀಯ ಕಾರಣಗಳಿಗಾಗಿ ಹಳ್ಳ ಹಿಡಿಯುತ್ತಿರುವ ಪ್ರಕರಣಗಳಲ್ಲಿ ಬಹು ಮುಖ್ಯವಾದದ್ದು ರಾಜ್ಯದ ಕಬ್ಬಿಣದ ಅದಿರನ್ನು ದೇಶದ ನಾನಾ ಬಂದರುಗಳ ಮೂಲಕ ವಿದೇಶಗಳಿಗೆ ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣ.

ಕರ್ನಾಟಕದ ನವಮಂಗಳೂರು, ಬೇಲೇಕೇರಿ, ಗೋವಾದ ಮರ್ಮಗೋವಾ, ಪಣಜಿ, ಆಂಧ್ರ ಪ್ರದೇಶದ ಕೃಷ್ಣಪಟ್ಟಣಂ, ಕಾಕಿನಾಡ, ವಿಶಾಖಪಟ್ಟಣ ಹಾಗೂ ತಮಿಳುನಾಡಿನ ಎನ್ನೋರ್, ಚೆನ್ನೈ ಬಂದರುಗಳ ಮೂಲಕ ರಾಜ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಗಳಿಗೆ ಸಾಗಣೆ ಮಾಡಲಾಗಿತ್ತು. ರಾಜ್ಯದ ನವಮಂಗಳೂರು ಮತ್ತು ಬೇಲೇಕೇರಿ ಬಂದರುಗಳಿಂದಲೇ 12,000 ಕೋಟಿ ರುಪಾಯಿ ಮೌಲ್ಯದ 77.80 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಸಾಗಿಸಿದ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ವರದಿ ಸಲ್ಲಿಸಿದ್ದರು. ಅಕ್ರಮ ಗಣಿಗಾರಿಕೆ ಕುರಿತು ದಾಖಲೆ ಸಮೇತ ಅವರು ಸಲ್ಲಿಸಿದ್ದ ಎರಡು ವರದಿಗಳನ್ನು ಆಧರಿಸಿ ಸುಪ್ರೀಂ ಕೋರ್ಟ್ ಪ್ರಕರಣ ಕುರಿತು ಸಿಬಿಐ ತನಿಖೆಗೆ ಆದೇಶಿಸಿತ್ತು. ಆದರೆ ಸಿಬಿಐ ಬರೀ ಪ್ರಾಥಮಿಕ ತನಿಖೆಗೆ ನಾಲ್ಕೂವರೇ ವರ್ಷ ತೆಗೆದುಕೊಂಡಿತ್ತು. ಸಾಕ್ಷ್ಯಾಧಾರದ ಕೊರತೆ, ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರದ ಅನುಮತಿ ನಿರಾಕರಣೆ ಕಾರಣ ನೀಡಿ ಸಿಬಿಐ ಪ್ರಕರಣ ತನಿಖೆ ಕೈಬಿಟ್ಟಿತ್ತು. ರಾಜ್ಯ ಸರಕಾರವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆದು ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಇದೀಗ ಸಿದ್ದರಾಮಯ್ಯನವರ ಸರಕಾರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಒಪ್ಪಿಸಲು ನಿರ್ಣಯಿಸಿದೆ.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಸರಕಾರದ ಅವಧಿಯಲ್ಲಿ ನಡೆದ ಬೋಫೋರ್ಸ್ ಪ್ರಕರಣದಿಂದ ಹಿಡಿದು ಕರ್ನಾಟಕದ ಅಕ್ರಮ ಅದಿರು ಸಾಗಣೆವರೆಗೂ ದೇಶದಲ್ಲಿ ರಾಜಕೀಯ ತಲ್ಲಣಗಳನ್ನು ಉಂಟು ಮಾಡಿದ ನಾನಾ ಹಗರಣಗಳನ್ನು ಸಿಬಿಐ ತನಿಖೆ ಮಾಡಿದೆ. ಆದರೆ ಸಿಬಿಐ ತನಿಖೆ ನಿಸ್ಪಹವಾಗಿ ನಡೆದ ಉದಾಹರಣೆಗಳು ಮಾತ್ರ ಕಡಿಮೆಯೇ. ಬೋಪೋರ್ಸ್ ಪ್ರಕರಣದ ಆರೋಪಿಗಳಿಗೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದಾಗ ಕ್ಲೀನ್‌ಚಿಟ್ ನೀಡಲಾಯಿತು. ಇದೀಗ ಪ್ರಕರಣದ ಮರುತನಿಖೆಗೆ ಆದೇಶವಾಗಿರುವುದು ಬೇರೆ ಮಾತು. ಅಂದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅದರ ಮೂಗಿನ ನೇರಕ್ಕೆ ನಿರ್ಣಯಗಳು ಹೊರಬೀಳುವುದು, ಅದೇ ರೀತಿ ಅನ್ಯ ಸರಕಾರಗಳು ಅಧಿಕಾರದಲ್ಲಿದ್ದಾಗ ಅವುಗಳ ಅನುಕೂಲಕ್ಕೆ ತಕ್ಕಂತೆ ಅದೇಶಗಳಾಗುವುದು ನಡೆದು ಬಂದಿರುವ ಪ್ರತೀತಿ. ಈಗ ಅಕ್ರಮ ಅದಿರು ಸಾಗಣೆ ವಿಚಾರದಲ್ಲಿಯೂ ಆಗಿರುವುದೂ ಅದೇ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಡೆದ ಈ ಅಕ್ರಮಕ್ಕೆ ರಕ್ಷಣೆ ಸಿಗಲು ಕೇಂದ್ರದಲ್ಲಿನ ಬಿಜೆಪಿ ಸರಕಾರವೇ ಕಾರಣ. ಅಂದರೆ ಕೇಂದ್ರದಲ್ಲಿ ಕಾಲಕಾಲಕ್ಕೆ ಅಧಿಕಾರದಲ್ಲಿರುವ ಸರಕಾರಗಳ ಕೈಗೊಂಬೆಯಾಗಿ, ಅವುಗಳ ಅಣತಿಯಂತೆ ಅದು ವರ್ತಿಸುತ್ತಾ ಬಂದಿದೆ. ಅದಕ್ಕೆ ನಾನಾ ನಿದರ್ಶಗಳು ನಮ್ಮ ಕಣ್ಣ ಮುಂದೆಯೇ ಇದೆ. ಹೀಗಾಗಿ ಸಿಬಿಐ ತನಿಖೆ ಬಗ್ಗೆ ವಿಶ್ವಾಸಾರ್ಹತೆಯಾಗಲಿ, ನಂಬುಗೆಯಾಗಲಿ ಜನಮಾನಸದಲ್ಲಿ ಉಳಿದಿಲ್ಲ.

ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರ ತನಿಖೆಗೆ ಅನುಮತಿ ನೀಡದ ಕಾರಣ ಪ್ರಕರಣದ ತನಿಖೆಯನ್ನು ಕೈಬಿಡಲಾಗಿದೆ ಎಂದು ಸಿಬಿಐ ಹೇಳಿದೆ. ಏನಿದರ ಅರ್ಥ? ಒಂದೊಮ್ಮೆ ಪ್ರಕರಣದ ತನಿಖೆ ಬಗ್ಗೆ ಸಿಬಿಐ ಗಂಭೀರವಾಗಿದ್ದಿದ್ದೇ ಆದರೆ ಕೇಂದ್ರ ಹಾಗೂ ತಮಿಳುನಾಡು ಸರಕಾರ ಅನುಮತಿ ಸಿಗಲು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲು ಅವಕಾಶವಿತ್ತು. ಅದು ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ನಾಲ್ಕೂವರೇ ವರ್ಷವನ್ನು ಬರೀ ಪ್ರಾಥಮಿಕ ತನಿಖೆಗಷ್ಟೇ ವಿನಿಯೋಗ ಮಾಡಿದ್ದರ ಹಿಂದೆ ಯಾವುದೇ ಸದುದ್ದೇಶ ಕಾಣುತ್ತಿಲ್ಲ. ಅದು ನೀಡಿರುವ ಕಾರಣ ನೋಡಿದರೆ ಕೇಂದ್ರ ಸರಕಾರದ ಕೈಗೊಂಬೆಯಾಗಿಯೇ ಕೆಲಸ ಮಾಡಿದೆ ಎಂಬ ಸಂದೇಶ ಸ್ಪಷ್ಟವಾಗಿ ರವಾನೆ ಆಗುತ್ತದೆ. ಇದೇ ಕೆಲಸವನ್ನು ಸಿಬಿಐ ಎರಡು ವರ್ಷಗಳ ಮೊದಲೇ ಮಾಡಬಹುದಿತ್ತು. ರಾಜ್ಯ ಸರಕಾರವೇ ಕ್ರಮ ತೆಗೆದುಕೊಳ್ಳಲಿ ಆಗಲೇ ಹಿಂದೆ ಸರಿಯಬಹುದಿತ್ತು.

ಅದು ಹಾಳಾಗಿ ಹೋಗಲಿ, ಈ ಪ್ರಕರಣದ ತನಿಖೆಗೆ ಕೇಂದ್ರ ಸರಕಾರ ಅನುಮತಿ ಕೊಟ್ಟಿಲ್ಲ ಎಂದರೆ ತನಿಖೆ ನಡೆಯುವುದು ಅದಕ್ಕೆ ಬೇಕಿಲ್ಲ ಎಂದೇ ಅರ್ಥ. ಏಕೆಂದರೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರೋ, ಇನ್ಯಾರೋ ರಾಜಕೀಯ ಎದುರಾಳಿಗಳು ಇದ್ದಿದ್ದರೆ ಖಂಡಿತವಾಗಿಯೂ ಅದು ತನಿಖೆಗೆ ಅನುಮತಿ ಕೊಡದೇ ಇರುತ್ತಿರಲಿಲ್ಲ. ಪ್ರಕರಣ ನಡೆದಾಗ ಇಲ್ಲಿದ್ದುದು ಬಿಜೆಪಿ ಸರಕಾರ. ಯಡಿಯೂರಪ್ಪ ಆ ಸರಕಾರದ ಮುಖ್ಯಮಂತ್ರಿ. ಅವರ ಸಂಪುಟದಲ್ಲಿದ್ದ ಜನಾರ್ದನ ರೆಡ್ಡಿ ಮತ್ತವರ ಹಿಂಬಾಲಕ ಶಾಸಕರು ಇದರಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಇವರೆಲ್ಲರೂ ಜೈಲಿಗೂ ಹೋಗಿ ಬಂದಿದ್ದಾರೆ. ತನಿಖೆ ನಡೆದು ಆರೋಪ ಸಾಬೀತಾದರೆ ಕರ್ನಾಟಕದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ, ಲೋಕಸಭೆ ಚುನಾವಣೆಯಲ್ಲಿ ಯಡವಟ್ಟಾಗಬಹುದು. ಹೀಗಾಗಿ ಅದರ ತಂಟೆಯೇ ಬೇಡ ಎಂದು ಮೂಲದಲ್ಲೇ ಪ್ರಕರಣದ ತನಿಖೆಗೆ ಎಳ್ಳುನೀರು ಬಿಟ್ಟಿದ್ದಾರೆ. ಅವರೇ ಅನುಮತಿ ಕೊಟ್ಟಿಲ್ಲ ಎಂದ ಮೇಲೆ ಸಿಬಿಐ ತನಿಖೆ ನಡೆಯುವುದಾದರೂ ಹೇಗೆ? ಅಲ್ಲಿಗೆ ಸಿಬಿಐ ಅನ್ನು ತನಗೆ ಅನುಕೂಲವಾಗುವ ರೀತಿಯಲ್ಲಿ ಬಗ್ಗಿಸಾಗಿದೆ. ಸುರಿದ ನೀರು ಆಯಾ ಪಾತ್ರೆ, ಚೆಂಬು, ಲೋಟದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುವಂತೆ ಸಿಬಿಐ ಪ್ರಕರಣದ ಕಡತ ಮುಚ್ಚಿ, ಆಕಳಿಸಿದೆ.

ಈಗ ಸಿಬಿಐ ಪ್ರಕರಣವನ್ನು ಮುಚ್ಚಿಹಾಕಿದಷ್ಟೇ ವೇಗವಾಗಿ ಸಿದ್ದರಾಮಯ್ಯನವರ ಸರಕಾರ ಎಸ್‌ಐಟಿಗೆ ವಹಿಸಲು ನಿರ್ಣಯಿಸಿರುವುದರ ಹಿಂದೆ ಅಡಗಿರುವುದು ಮತ್ತದೇ ರಾಜಕೀಯವೇ. ಅಕ್ರಮ ಅದಿರು ಸಾಗಣೆಯಲ್ಲಿ ಕೇಂದ್ರ ಹಾಗೂ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ಲುಕ್ಸಾನು ಮಾಡಿದವರನ್ನು ಹಾಗೆ ಬಿಡಲು ಆಗುವುದಿಲ್ಲ, ಅವರನ್ನು ಹಾಗೆ ಬಿಡಬಾರದು ಎಂಬುದು ಸರಿಯೇ. ಅಕ್ರಮ ಸಾಗಣೆಯಿಂದ ಆಗಿರುವ ನಷ್ಟವನ್ನು ತಪ್ಪಿತಸ್ಥ ರಫ್ತುದಾರರು, ದಾಸ್ತಾನುಗಾರರು, ಸಾಗಣೆದಾರರು, ವ್ಯಾಪಾರಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ವಸೂಲು ಮಾಡಲು ನಿರ್ಣಯಿಸಿರುವುದು ಸ್ವಾಗತಾರ್ಹವೇ. ಏಕೆಂದರೆ ಅಕ್ರಮ ಅದಿರು ಸಾಗಣೆ ಬಗ್ಗೆ ಸುಖಾಸುಮ್ಮನೆ ಆರೋಪಗಳು ಬಂದಿರಲಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ವರ್ಷಗಟ್ಟಲೆ ಕೂಲಂಕಷ ತನಿಖೆ ನಡೆಸಿ ಸಮಗ್ರ ವರದಿ ತಯಾರಿಸಿದ್ದರು. ಈ ವರದಿಯನ್ನು ಇನ್ಯಾರೋ ರಾಜಕಾರಣಿಗಳನ್ನು ಒಳಗೊಂಡ ಸಮಿತಿಯೇನಾದರೂ ಕೊಟ್ಟಿದ್ದರೆ ಅದರಲ್ಲಿ ರಾಜಕೀಯ ಕಾರಣ ಹುಡುಕಬಹುದಿತ್ತು. ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ಪ್ರಮುಖ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಾಮಾಣಿಕತೆಗೆ ಹೆಸರಾದ ಸಂತೋಷ್ ಹೆಗ್ಡೆ ಅವರು ಕೊಟ್ಟಿದ್ದ ವರದಿ ಸಹಜವಾಗಿಯೇ ಗಾಂಭಿರ್ಯ ಹಾಗೂ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಅಂಥವರು ಕೊಟ್ಟ ವರದಿ ಆಧರಿಸಿ ದಾಖಲಿಸಿದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಸಿಬಿಐ ಹಿಂದೆ ಸರಿದಾಗ ರಾಜ್ಯ ಸರಕಾರಕ್ಕೆ ಅನ್ಯ ಮಾರ್ಗಗಳೇ ಉಳಿದಿರಲಿಲ್ಲ. ಒಂದೊಮ್ಮೆ ಈ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಯೋ, ಮಂತ್ರಿಯೋ ಆರೋಪ ಎದುರಿಸುತ್ತಿದ್ದರೆ ಸಿದ್ದರಾಮಯ್ಯನವರ ಸರಕಾರ ಇದೇ ಕೆಲಸ ಮಾಡುತ್ತಿತ್ತೇ ಎಂಬುದು ಚರ್ಚಾರ್ಹ ವಿಷಯ. ಆದರೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತನಗೆ ಸಿಕ್ಕ ಅವಕಾಶವನ್ನು ಸಿದ್ದರಾಮಯ್ಯನವರ ಸರಕಾರ ಶಕ್ತಿಮೀರಿ ಬಳಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿಯೇ ಎಸ್‌ಐಟಿ ತನಿಖೆಗೆ ಮುಂದಾಗಿದೆ.

ಸಿದ್ದರಾಮಯ್ಯನವರ ಸರಕಾರದ ಪ್ರಸ್ತುತ ಅವಧಿ ನಾಲ್ಕು ತಿಂಗಳಲ್ಲಿ ಮುಗಿಯಲಿದೆ. ಮುಂದಿನ ಬಾರಿ ಯಾವ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಬರುವುದಿಲ್ಲ. ಈಗ ಎಸ್‌ಐಟಿ ತನಿಖೆ ಕೈಗೆತ್ತಿಕೊಂಡರೂ ನಾಲ್ಕು ತಿಂಗಳ ಒಳಗೇ ತನಿಖೆ ಮುಗಿಯುತ್ತದೆ ಎಂದು ಹೇಳಲು ಬರುವುದಿಲ್ಲ. ಆದರೆ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿರುವ ಜನಾರ್ದನ ರೆಡ್ಡಿ ಮತ್ತವರ ಬಳಗ ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈ ಹಗರಣದ ರೂವಾರಿ ರೆಡ್ಡಿ ಸಹೋದರರೇ ಆಗಿದ್ದಾರೆ. ಹಿಂದಿನ ಚುನಾವಣೆಗೆ ಮುನ್ನ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲೇ ಕಾಂಗ್ರೆಸ್ ರೆಡ್ಡಿ ಸಹೋದರರ ವಿರುದ್ಧ ಬೆಂಗಳೂರಿಂದ ಬಳ್ಳಾರಿವರೆಗೂ ಪ್ರತಿಭಟನಾ ನಡಿಗೆ ಮಾಡಿತ್ತು. ಈ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಪ್ರಚಾರ ಅಸ್ತ್ರವೇ ಗಣಿ ಹಗರಣವಾಗಿತ್ತು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಈ ಹಗರಣವೇ ಸೋಪಾನವಾಗಿತ್ತು. ಅದರ ರುಚಿ ಸಿದ್ದರಾಮಯ್ಯನವರ ಸ್ಮತಿ ಪಟಲದಿಂದ ಇನ್ನೂ ಅಳಿಸಿ ಹೋಗಿಲ್ಲ. ಈಗ ಮತ್ತೆ ಚುನಾವಣೆ ಸಮೀಪಿಸಿರುವಾಗಲೇ ಗಣಿ ಅಕ್ರಮ ಅಸ್ತ್ರ ಅನಾಯಾಸವಾಗಿ ಅವರ ಕೈಗೆ ಸಿಕ್ಕಿದೆ. ಎಸ್‌ಐಟಿ ಅವರದೇ ಸರಕಾರದ ಕೂಸು. ಹೀಗಾಗಿ ರೆಡ್ಡಿ ಸಹೋದರರನ್ನು ರಾಜಕೀಯವಾಗಿ ಹಣಿಯಲು ಈ ಸಾಂದರ್ಭಿಕ ಅಸ್ತ್ರವನ್ನು ಅವರು ಬಳಸಿಕೊಳ್ಳದೆ ಇರಲಾರರು. ಚುನಾವಣೆ ವೇಳೆಗೆ ತನಿಖೆ ಮುಗಿಯುತ್ತದೋ, ಬಿಡುತ್ತದೋ ಅದು ಬೇರೆ ಪ್ರಶ್ನೆ. ಆದರೆ ಎಸ್‌ಐಟಿ ತನಿಖೆ ಮೂಲಕ ಈ ವಿಚಾರ ಜೀವಂತವಾಗಿಟ್ಟುಕೊಂಡು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಯಡಿಯೂರಪ್ಪ, ರೆಡ್ಡಿ ಸಹೋದರರು ಸೇರಿದಂತೆ ಬಿಜೆಪಿಯನ್ನು ಟೀಕಿಸಲು, ಇಕ್ಕಟ್ಟಿಗೆ ಸಿಕ್ಕಿಸಲಂತೂ ಬಳಸಿಕೊಳ್ಳಬಹುದು. ಸಿದ್ದರಾಮಯ್ಯನವರಿಗೆ ಬೇಕಾಗಿರುವುದು ಅಷ್ಟೇ.

ಇಲ್ಲಿ ಕಾಡುವ ಪ್ರಶ್ನೆ ಒಂದೆರಡಲ್ಲ. ನಾನಾ ಪ್ರಶ್ನೆಗಳು ಮನಸ್ಸನ್ನು ಕದಡುತ್ತವೆ, ಮುದುಡುವಂತೆ ಮಾಡುತ್ತವೆ. ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ, ಕಾಂಗ್ರೆಸ್ ಸರಕಾರವಾಗಲಿ, ಬಿಜೆಪಿ ಸರಕಾರವಾಗಲಿ ಎಲ್ಲರೂ ಈ ಪ್ರಕರಣವನ್ನು ಒಂದೇ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಅದುವೆ ರಾಜಕೀಯ ಲಾಭ ಹೇಗೆ ಮಾಡಿಕೊಳ್ಳಬಹುದು ಎಂದು. ಒಂದು ಹಗರಣವನ್ನು ಹಗರಣವನ್ನಾಗಿ ನೋಡದೆ ಹೋದರೆ, ತಪ್ಪಿತಸ್ಥರನ್ನು ತಪ್ಪಿತಸ್ಥರನ್ನಾಗಿ ಕಾಣದೆ ಹೋದರೆ ಈ ನೆಲದ ಕಾನೂನಿಗೆ ಗೌರವ ಬರುವುದಾದರೂ ಹೇಗೆ? ಕಾನೂನನ್ನು ಬರೀ ರಾಜಕೀಯ ಅಸ್ತ್ರವಾಗಿ ಬಳಸುವ ಪರಿಪಾಠ ಹೀಗೆಯೇ ಮುಂದುವರಿದರೆ ಅಪರಾಧ ಸಾಭೀತಾಗುವುದಾದರೂ ಹೇಗೆ? ಅಪರಾಧಿಗಳಿಗೆ ಶಿಕ್ಷೆ ಆಗುವುದಾದರೂ ಹೇಗೆ? ಒಂದೊಂದು ರಾಜಕೀಯ ಪಕ್ಷವೂ, ಸರಕಾರವೂ ತನ್ನ ಅನುಕೂಲವನ್ನೇ ಅನ್ವೇಷಿಸುತ್ತಾ ಹೋದರೆ, ಅವರ ಈ ಅನ್ವೇಷಣೆಯಲ್ಲಿ ತಪ್ಪಿತಸ್ಥರು ಪಾರಾಗುತ್ತಾ ಹೋದರೆ ಮುಂದೆ ಜನ ಯಾಕಾಗಿಯಾದರೂ ಈ ಕಾನೂನಿಗೆ ಹೆದರುತ್ತಾರೆ? ಕಾನೂನಿನ ಭಯ ಇಲ್ಲದೇ ಹೋದರೆ ಅಕ್ರಮ, ಅನ್ಯಾಯ ಎಸಗುವ ಪರಂಪರೆ ಹೀಗೆ ಮುಂದುವರಿಯುತ್ತಾ ಹೋಗುವುದಿಲ್ಲವೇ? ದೇಶದ ಸಂಪತ್ತು ಲೂಟಿ ಮಾಡುವವರಿಗೆ, ಅನ್ಯಾಯ ಮಾಡುವವರಿಗೆ ಕಾಲ ಎನ್ನುವುದಾದರೆ ಜನ ಪ್ರಾಮಾಣಿಕವಾಗಿ ಇರಲು ಹೇಗೆ ಸಾಧ್ಯ? ಅನ್ಯಾಯವನ್ನು ಸರಕಾರಗಳೇ ಪೋಷಣೆ ಮಾಡಿದಂತೆ ಆಗುವುದಿಲ್ಲವೇ?

ಈಗ ಸಿದ್ದರಾಮಯ್ಯನವರ ಸರಕಾರ ಎಸ್‌ಐಟಿ ತನಿಖೆಗೆ ವಹಿಸಿದೆ. ಮುಂದೆ ಬರುವ ಸರಕಾರ ಈ ಪ್ರಕರಣದ ಹಣೆಬರಹ ನಿರ್ಧರಿಸುತ್ತದೆ. ಕಾಂಗ್ರೆಸ್ ಸರಕಾರವೇ ಅಧಿಕಾರಕ್ಕೆ ಬಂದರೆ ಮುಂದುವರಿಯಬಹುದು ಅಥವಾ ಅದರ ಚುಕ್ಕಾಣಿ ಹಿಡಿದವರ ಮನೋಗತಿಗೆ ಅನುಗುಣವಾಗಿ ಏನು ಬೇಕಾದರೂ ಆಗಬಹುದು. ಒಂದೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಎಸ್‌ಐಟಿ ತನಿಖೆ ಮುಂದುವರಿಯುತ್ತದೆ ಎಂಬ ಯಾವುದೇ ನಂಬಿಕೆ ಇಲ್ಲ. ತನಿಖೆ ರದ್ದು ಮಾಡಬಹುದು, ಇಲ್ಲವೇ ತನ್ನ ಹಿಡಿತಕ್ಕೆ ಸಿಗುವ ಎಸ್‌ಐಟಿಯನ್ನು ಬಳಸಿ ಪ್ರಕರಣವನ್ನು ಮುಚ್ಚಿ ಹಾಕಿಬಿಡಬಹುದು. ದೇಶದ ಸಂಪತ್ತು ಲೂಟಿಯಾಯಿತು, ಹಾಗೆ ಲೂಟಿ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂಬ ರಾಜಕೀಯ ಇಚ್ಛಾಶಕ್ತಿ ಈ ಪ್ರಕರಣದ ತನಿಖೆ ಹಿಂದೆ ಕಾಣದೇ ಇರುವುದು ಘೋರ ದುರಂತ.

ಲಗೋರಿ : ನಂಬಿದಂತೆ ನಟಿಸುವವನ ಸೋಲಲ್ಲೂ ಗೆಲುವಿಗಿಂತ ಮಿಗಿಲಾದ ಗುರಿ ಇರುತ್ತದೆ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply