ರೋಹಿಣಿ ಸಿಂಧೂರಿ ವರ್ಗ ಅಸಿಂಧು ಎಂದ ಚು.ಆಯೋಗ; ಸಿದ್ದು ಸರಕಾರಕ್ಕೆ ಮುಖಭಂಗ!

ಡಿಜಿಟಲ್ ಕನ್ನಡ ಟೀಮ್:

ಹಾಸನ ಜಿಲ್ಲಾಧಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ರದ್ದುಪಡಿಸುವಂತೆ ರಾಜ್ಯ ಚುನಾವಣೆ ಆಯೋಗ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದು, ಇದರಿಂದ ರಾಜ್ಯ ಸರಕಾರಕ್ಕೆ ಮುಖಭಂಗವಾದಂತಾಗಿದೆ.
ಚುನಾವಣೆ ವರ್ಷದಲ್ಲಿ  ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿಸಿಕೊಂಡಿರುವ ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡುವಂತಿಲ್ಲ. ಒಂದೊಮ್ಮೆ ತೀವ್ರ ಅನಿವಾರ್ಯ ಎನಿಸಿದರೆ ಚುನಾವಣೆ ಆಯೋಗದ ಗಮನಕ್ಕೆ ತಂದು, ಪೂರ್ವಾನುಮತಿ ಪಡೆಯಬೇಕೆಂದು ಈಗಾಗಲೇ ಸೂಚನೆ ನೀಡಲಾಗಿತ್ತು. ಇದನ್ನು ಉಲ್ಲಂಘಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನುವರ್ಗಾವಣೆ ಮಾಡಿರುವುದು ಅಸಿಂಧುವಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಈ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರೋಹಿಣಿ ಎತ್ತಂಗಡಿ ರದ್ದು ಮಾಡುವುದು ಸರಕಾರಕ್ಕೆ ಅನಿವಾರ್ಯವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ರೋಹಿಣಿ ಅವರು ನಿರತರಾಗಿರುವುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಮಿಷನ್ ಜೊಲ್ಲಿಗೆ ಕಲ್ಲು: ಈ ಮಧ್ಯೆ, ಹಾಸನ ಉಸ್ತುವಾರಿ ಸಚಿವ ಎ. ಮಂಜು ಅವರಿಗೆ ಮಹಾಮಸ್ತಕಾಭಿಷೇಕ ಕಾಮಗಾರಿಗಳಲ್ಲಿ ಕಮಿಷನ್ ಕಬಳಿಸಲು ಬಿಡದೇ ಹೋದದ್ದೇ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿದ್ದಾರೆ.
ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಗೊಮ್ಮಟೇಶ್ವರ ಮೂರ್ತಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು 112 ಕೋಟಿ ರುಪಾಯಿ ಮೊತ್ತದ ನಾನಾ ಕಾಮಗಾರಿಗಳು ನಡೆಯುತ್ತಿವೆ. ಆದರೆ ಇದರಲ್ಲಿ ಕಮಿಷನ್ ಹೊಡೆಯಲು ಸಚಿವ ಎ. ಮಂಜು ಹವಣಿಕೆಗಳಿಗೆ ರೋಹಿಣಿ ಅವರು ಆಸ್ಪದ ಮಾಡಿಕೊಡಲಿಲ್ಲ. ಹೀಗಾಗಿ ಅವರು ಹಾಸನ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದ ಆರೇ ತಿಂಗಳಲ್ಲಿ ಎತ್ತಂಗಡಿ ಆಗಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಕುಡಿಯುವ ನೀರು, ಅಟ್ಟಣಿಗೆ ನಿರ್ಮಾಣ, ರಸ್ತೆ, ಒಳಚರಂಡಿ, ತಾತ್ಕಾಲಿಗ ನಗರ ನಿರ್ಮಾಣ ಕಾರ್ಯ ಶ್ರವಣಬೆಳಗೊಳದಲ್ಲಿ ರೋಹಿಣಿ ಅವರ ಉಸ್ತುವಾರಿಯಲ್ಲಿ ನಡೆದಿತ್ತು. ಪ್ರಾಮಾಣಿಕ ಅಧಿಕಾರಿ ರೋಹಿಣಿ ಅವರು ಎಲ್ಲಿಯೂ ಪೈಸೆ ಪೋಲಾಗದಂತೆ ಎಚ್ಚರ ವಹಿಸಿದ್ದರು. ಇವರು ಇರುುವವರೆಗೂ ಕಮಿಷನ್ ಹೊಡೆಯಲು ಆಗುವುದಿಲ್ಲ ಎಂದು ಅವರನ್ನು ಸಚಿವ ಮಂಜು ವರ್ಗ ಮಾಡಿಸಿದ್ದಾರೆ. ಜತೆಗೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಇದರ ಹಿಂದಿರುವುದು ದುಡ್ಡು ಹೊಡೆಯುವ ಕಾರ್ಯಕ್ರಮ ಅಷ್ಟೇ ಎಂದು ಗೌಡರು ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ಹೇಳಿದರು.
ಸಿದ್ದು ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ: ದಕ್ಷ ಅಧಿಕಾರಿ ರೋಹಿಣಿ ಅವರ ಎತ್ತಂಗಡಿ ವಿರೋಧಿಸಿ ಫೆ. 7 ರಂದು ಶ್ರವಣಬೆಳಗೊಳದಲ್ಲಿ ನಡೆಯುವ ರಾಷ್ಟ್ರಪತಿಗಳಿಂದ ಮಹಾಮಸ್ತಕಾಭಿಷೇಕ ಉದ್ಘಾಟನೆ  ಕಾರ್ಯಕ್ರಮವನ್ನು ಬಹಿಷ್ಕರಿಸಲಾಗುವುದು. ಪ್ರಾಮಾಣಿಕ ಅಧಿಕಾರಿಗಳನ್ನು ಸಹಿಸದ ಇಂಥ ಕೆಟ್ಟ ಸರಕಾರವನ್ನೂ ಎಲ್ಲೂ ಕಂಡಿಲ್ಲ. ಅದರ ರೂವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಜೀವಮಾನದಲ್ಲಿ ಮುಂದೆಂದೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದೂ ಗೌಡರು ಗುಡುಗಿದರು.
ರಾಜಕೀಯ ಇಲ್ಲ: ರೋಹಿಣಿ ಅವರ ವರ್ಗಾವಣೆಯಲ್ಲಿ ಯಾವುದೇ ಒತ್ತಡವಾಗಲಿ, ರಾಜಕೀಯವಾಗಲಿ ಇಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ವರ್ಗ ಮಾಡಲಾಗಿದೆ. ಅವರು ಮಹಿಳೆ ಎಂದಮಾತ್ರಕ್ಕೆ ವರ್ಗಾವಣೆ ಮಾಡಬಾರದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Leave a Reply