ಕರ್ನಾಟಕ- ಬೆಂಗಳೂರು ಬಂದ್… ಯಾರಿಗೆ ಲಾಭ? ಯಾರಿಗೆ ನಷ್ಟ?

ಡಿಜಿಟಲ್ ಕನ್ನಡ ಟೀಮ್:

ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ನಿರಂತರ ಹೋರಾಟ ಬೆಂಬಲಿಸಿ ಜನವರಿ 25 ರಂದು ಕರ್ನಾಟಕ ಬಂದ್ ಹಾಗೂ ಫೆಬ್ರವರಿ 4 ರಂದು ಬೆಂಗಳೂರು ಬಂದ್ ಮಾಡಲು ಸಂಘಟನೆಗಳು ಕರೆ ನೀಡಿವೆ. ಒಂದೇ ವಾರದಲ್ಲಿ ಎರಡು ಬಂದ್ ಗಳು ನಡೆಯುತ್ತಿರೋದ್ರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಆಗೋದು ಶತಸಿದ್ಧ. ಆದರೆ ರಾಜ್ಯ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ಬಂದ್ ನಡೆಯುವಂತೆ ನೋಡಿಕೊಳ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಯಾಕಂದ್ರೆ ಮೈಸೂರಿನಲ್ಲಿ ಜನವರಿ 25ರಂದು ನಡೆಯುವ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಹಾಗೂ ಫೆಬ್ರವರಿ 4 ರಂದು ಬೆಂಗಳೂರಿನ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗ್ತಾರೆ. ಇವೆರಡೂ ಕಾರ್ಯಕ್ರಮ ಹಾಳು ಮಾಡುವ ಉದ್ದೇಶದಿಂದ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ ಅನ್ನೋ ಮಾತು ಶುರುವಾಗಿದೆ.

ಸತ್ಯ, ಯಾವುದೇ ಒಂದು ರಾಜಕೀಯ ಪಕ್ಷ ಮತ್ತೊಂದು ರಾಜಕೀಯ ಪಕ್ಷದ ತಂತ್ರಗಾರಿಕೆ ಹಾಗೂ ಪಟ್ಟುಗಳನ್ನು ಹಾಳು ಮಾಡುವುದು ರಾಜಕೀಯ ತಂತ್ರಗಾರಿಕೆಯ ಮತ್ತೊಂದು ಮುಖ.ಆದ್ರೆ ಸರ್ಕಾರವೇ ಮುಂದೆ ನಿಂತು ಬಂದ್ ಮಾಡಿಸುತ್ತಿದೆ ಅಂದ್ರೆ ನಂಬಲು ಕಷ್ಟ. ಯಾಕಂದ್ರೆ ಹೋರಾಟ ಸಂಘಟನೆಗಳ ಉಸಿರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಸಿ ಮುಟ್ಟಿಸಲು ಸಂಘಟನೆಗಳು ಈ ಕೆಲಸಕ್ಕೆ ಮುಂದಾಗಿರಬಹುದು. ಕೇವಲ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಾಟಾಳ್ ನಾಗರಾಜ್ ಅವರು ಸಿದ್ದರಾಮಯ್ಯ ಅವರನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಭೇಟಿ ಮಾಡಿದ ಮಾತ್ರಕ್ಕೆ ಸರ್ಕಾರದ ಪ್ರಾಯೋಜಿತ ಎನ್ನಲಾಗದು. ಮುಂದೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಯಾವುದೇ ಸರ್ಕಾರ ಇದ್ದರೂ ಕೆಲವೊಮ್ಮೆ ಭೇಟಿ, ಮಾತುಕತೆ ಸಹಜ.

ಒಂದು ವೇಳೆ ಇದು ಕಾಂಗ್ರೆಸ್ ಪಕ್ಷದ ಪ್ಲಾನ್ ಆಗಿದ್ದರೆ, ರಾಜಕೀಯವಾಗಿ ಉತ್ತಮ ನಡೆ  ಯಾಕಂದ್ರೆ ಈಗಾಗಲೇ ಬಿಜೆಪಿಯನ್ನು ಹಲವು ವಿಚಾರಗಳಲ್ಲಿ ಕಟ್ಟಿ ಹಾಕಿರುವ ಕಾಂಗ್ರೆಸ್ ಪಕ್ಷ ಪರಿವರ್ತನಾ ಯಾತ್ರೆಯನ್ನೂ ಹದಗೆಡಿಸಿಬಿಟ್ಟರೆ ಬಿಜೆಪಿಗೆ ಮುಜುಗರ ಆಗೋದು ಶತಸಿದ್ದ. ಇದರಿಂದ ರಾಜಕೀಯ ಲಾಭ ಕಾಂಗ್ರೆಸ್ ಪಾಲಾಗುತ್ತದೆ.ಇದನ್ನೇ ಒಂದು ಚಾಲೆಂಜ್ ಆಗಿ ಕಮಲ ಪಾಳಯ ಸ್ವೀಕರಿಸಿದರೆ ಲಾಭ ಮಾಡಿಕೊಳ್ಳೋದು ದೊಡ್ಡ ವಿಚಾರವಲ್ಲ.

ಹೇಗೆ ಅಂದ್ರೆ ಜನವರಿ 26 ಗಣರಾಜ್ಯೋತ್ಸವ ಪ್ರಯುಕ್ತ ಸರ್ಕಾರಿ ರಜೆ. ಎಲ್ಲಾ ಕಂಪನಿಗಳು, ಗಾರ್ಮೆಂಟ್ ಗಳು ರಜೆ ಘೋಷಣೆ ಮಾಡೋದ್ರಿಂದ ಎಲ್ಲರೂ ಜನವರಿ 24 ರಂದೇ ನಗರವನ್ನು ತೊರೆದು ಹಳ್ಳಿಗಳತ್ತ ತೆರಳುತ್ತಾರೆ. ಅವರನ್ನು ಪೊಲೀಸ್ ಭದ್ರತೆಯಲ್ಲಿ ಮೈಸೂರಿನತ್ತ ಕರೆದುಕೊಂಡು ಹೋಗಿ ಸಮಾವೇಶ ಯಶಸ್ವಿ ಮಾಡಬಹುದು. ಫೆಬ್ರವರಿ 4ರಂದೂ ಅಷ್ಟೇ ಎಲ್ಲಾ ಕಾರ್ಮಿಕರು ರಜೆ ಇರೋದ್ರಿಂದ ಜನರನ್ನು ಸೇರಿಸೋದು ತುಂಬಾ ಸುಲಭದ ಕೆಲಸ. ಒಂದು ವೇಳೆ ಬಂದ್ ಕಾರಣವನ್ನೇ ಮುಂದಿಟ್ಟುಕೊಂಡು ಕಾರ್ಯಕ್ರಮಕ್ಕೆ ಅವಕಾಶ ನಿರಾಕರಣೆ ಮಾಡಲು ಇದು ದೊಡ್ಡ ಮಟ್ಟದ ಕಾರ್ಯಕ್ರಮ ಆಗಿರೋದ್ರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಅನ್ನೋ ತಿಳುವಳಿಕೆ ಸರ್ಕಾರಕ್ಕಿದ್ದೇ ಇರುತ್ತದೆ. ಒಟ್ಟಾರೆ ಎರಡೂ ಪಕ್ಷಗಳ ರಾಜಕೀಯದಲ್ಲಿ ನಷ್ಟ ಅನುಭವಿಸೋದು ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು.

Leave a Reply