ಉದ್ಯಮಿಗಳಿಗೆ ಆಮಂತ್ರಣ ನೀಡುತ್ತಲೇ ವಿಶ್ವಕ್ಕೆ ಎಚ್ಚರಿಕೆ ರವಾನಿಸಿದ ಮೋದಿ!

ಡಿಜಿಟಲ್ ಕನ್ನಡ ಟೀಮ್:

ಎರಡು ದಶಕಗಳ ಬಳಿಕ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ವೇದಿಕೆಯಲ್ಲಿ ನಿಂತು ಮಾತನಾಡಿದ್ದಾರೆ. ಅಭಿವೃದ್ಧಿ ಹಾದಿಯಲ್ಲಿ ವೇಗವಾಗಿ ಸಾಗುತ್ತಿರುವ ಭಾರತದಲ್ಲಿ ಬಂಡವಾಳ ಹೂಡುವುದಕ್ಕೆ ಜಾಗತಿಕ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಷ್ಟೇ ಅಲ್ಲದೇ ಜಾಗತಿಕ ಸಮಸ್ಯೆಗಳ ಬಗ್ಗೆಯೂ ಎಚ್ಚರಿಕೆ ರವಾನಿಸಿದರು. ಎಂದಿನಂತೆ ತಮ್ಮ ವಾಕ್ಚಾತುರ್ಯ ಮೆರೆದ ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖ ಅಂಶಗಳು ಹೀಗಿವೆ…

 • ಗಾಯಗೊಂಡಿರುವ ವಿಶ್ವದಲ್ಲಿ ಉತ್ತಮ ಭವಿಷ್ಯ ಹಂಚಿಕೊಳ್ಳುವುದು ಈ ಬಾರಿಯ ವಿಶ್ವ ಆರ್ಥಿಕ ಶೃಂಗಸಭೆಯ ಘೋಷವಾಗಿದೆ. ಇದು ಪ್ರಸ್ತುತ ಪರಿಸ್ಥಿತಿಗೆ ಹೆಚ್ಚು ಸೂಕ್ತವಾಗಿದೆ.
 • ಈ ಸಭೆ ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ತಮ ವೇದಿಕೆ.
 • ಭಾರತ ಏಕತೆ ಹಾಗೂ ಒಗ್ಗಟ್ಟಿನಲ್ಲಿ ನಂಬಿಕೆ ಇಟ್ಟಿರುವ ರಾಷ್ಟ್ರ. ವಿಶ್ವವೇ ಒಂದು ಕುಟುಂಬ ಎಂಬುದನ್ನು ಸಾರುವ ವಸುದೈವ ಕುಟುಂಬಕಂ ಸಿದ್ಧಾಂತವನ್ನು ಪಾಲಿಸುತ್ತೇವೆ.
 • ವೈವಿಧ್ಯತೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು ಎಂದು ಭಾರತೀಯರು ಹೆಮ್ಮೆ ಪಡುತ್ತೇವೆ.
 • ನಿಮಗೆ ಶಾಂತಿ ಸೌಹಾರ್ದತೆ ಬೇಕೆ ಭಾರತಕ್ಕೆ ಬನ್ನಿ,.. ನಿಮಗೆ ಆರೋಗ್ಯ ಮತ್ತು ಸಮೃದ್ಧಿ ಬೇಕೆ ಭಾರತಕ್ಕೆ ಬನ್ನಿ… ನೀವು ಭಾರತಕ್ಕೆ ಬರಲು ಸದಾ ಸ್ವಾಗತ.
 • ವಿಶ್ವಸಂಸ್ಥೆಯ ಶಾಂತಿ ಕಾಪಾಡುವ ಕಾರ್ಯಕ್ಕೆ ಭಾರತದ್ದೇ ಸಿಂಹಪಾಲು ಕೊಡುಗೆ ಇದೆ.
 • ರಿಫಾರ್ಮ್ (ಸುಧಾರಣೆ), ಫರ್ಮಾಮ್ (ಕೆಲಸ) ಹಾಗೂ ಟ್ರಾನ್ಸ್ ಫಾರ್ಮ್ (ಬದಲಾವಣೆ) ನಮ್ಮ ಮಂತ್ರ.
 • ಭಾರತದಲ್ಲಿ ವಿಳಂಭ ನೀತಿಯನ್ನು ನಿರ್ಮೂಲನೆ ಮಾಡಿದ್ದು, ವಿದೇಶಿ ಬಂಡವಾಳ ಹೂಡಿಕಗೆ ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಬಂಡವಾಳ ಹೂಡಿಕೆದಾರರಿಗೆ ನಾವು ರತ್ನಗಂಬಳಿ ಹಾಸಿದ್ದೇವೆ.
 • ಈ ಯುಗದಲ್ಲಿ ತಂತ್ರಜ್ಞಾನ ಮಹತ್ವದ್ದಾಗಿದ್ದು, ಕಳೆದ ಬಾರಿ 1997ರಲ್ಲಿ ಭಾರತದ ಪ್ರಧಾನಿ ದೇವೇಗೌಡ ಅವರು ಈ ಸಭೆಯಲ್ಲಿ ಭಾಗವಹಿಸಿದ್ದಾಗ ನಮ್ಮ ದೇಶದ ಆರ್ಥಿಕತೆ 400 ಬಿಲಿಯನ್ ಡಾಲರ್ ನಷ್ಟಿತ್ತು. ಈಗ ಅದು ಆರು ಪಟ್ಟು ಹೆಚ್ಚಾಗಿದೆ.
 • 2025ರ ವೇಳೆಗೆ ಭಾರತದ ಆರ್ಥಿಕತೆ ಮೂರು ಟ್ರಿಲಿಯನ್ ಡಾಲರ್ ನಷ್ಟು ಭಾರತದ ಆರ್ಥಿಕತೆ ಬೆಳೆಯಲಿದೆ.
 • ಇತ್ತೀಚಿನ ದಿನಗಳಲ್ಲಿ ಕೆಲವು ರಾಷ್ಟ್ರಗಳು ತಮ್ಮ ಹಿತಾಸಕ್ತಿ ಬಗ್ಗೆ ಮಾತ್ರ ಚಿಂತಿಸುತ್ತಾ ವ್ಯಾಪಾರ ರಕ್ಷಣೆಗೆ ಜೋತು ಬೀಳುತ್ತಿವೆ. ಇದು ಜಾಗತೀಕರಣದ ಅರ್ಥವನ್ನೇ ಕಳೆಗುಂದುವಂತೆ ಮಾಡಿದೆ.
 • ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಜನರು ಭಯೋತ್ಪಾದನೆಯಲ್ಲೂ ಒಳ್ಳೆಯದು ಹಾಗೂ ಕೆಟ್ಟದ್ದು ಎಂಬ ವ್ಯತ್ಯಾಸ ಕಾಣುತ್ತಿರುವುದು ಆತಂಕ ಮೂಡಿಸಿದೆ.
 • ಹವಾಮಾನ ಬದಲಾವಣೆ ಜಗತ್ತು ಎದುರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಅರ್ಕಾಟಿಕ್ ನಲ್ಲಿ ಹಿಮಗಳು ಕರಗುತ್ತಿವೆ. ಹಿಮ ಪ್ರದೇಶಗಳು ಕುಸಿಯುತ್ತಿವೆ. ಭವಿಷ್ಯದಲ್ಲಿ ಇದರಿಂದ ಅಪಾಯವಿದೆ.
 • ಶಾಂತಿ ಕಾಪಾಡುವುದು, ರಕ್ಷಣೆ ಕಾಪಾಡಿಕೊಳ್ಳುವುದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

Leave a Reply