‘ಪದ್ಮಾವತ್’ ಬಿಡುಗಡೆಗೂ ಮುನ್ನ ಮಾಡಿದಷ್ಟು ಸದ್ದು ತೆರೆ ಮೇಲೆ ಇಲ್ಲ!

ಡಿಜಿಟಲ್ ಕನ್ನಡ ಟೀಮ್:

ವಿವಾದ, ದೊಂಬಿ, ಬೆದರಿಕೆಗಳಿಂದಲೇ ಹೆಚ್ಚು ಪ್ರಚಾರ ಪಡೆದಿದ್ದ ಪದ್ಮಾವತ್ ಚಿತ್ರ ತೆರೆ ಮೇಲೆ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಬಿಡುಗಡೆಗೂ ಮುನ್ನ ಮಾಡಿದಷ್ಟು ಸದ್ದು ತೆರೆ ಮೇಲೆ ಮಾಡಲು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿಫಲರಾಗಿದ್ದಾರೆ.

ರಜಪೂತರ ರಾಣಿ ಪದ್ಮಾವತಿಯ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಿದ ಈ ಚಿತ್ರ ತೆರೆ ಕಾಣುವ ಮುನ್ನ ಮಾಡಿದ್ದ ಸದ್ದು ಅಷ್ಟಿಷ್ಟಲ್ಲ. ಚಿತ್ರೀಕರಣದ ವೇಳೆ ಸೆಟ್ ಗಳ ಮೇಲೆ ದಾಳಿಯಿಂದ ಹಿಡಿದು, ಚಿತ್ರ ಬಿಡುಗಡೆ ಸಮಯದಲ್ಲಿ ದೀಪಿಕಾ ಪಡುಕೋಣೆ ಹಾಗೂ ಸಂಜಯ್ ಲೀಲಾ ಬನ್ಸಾಲಿ ಅವರ ತಲೆ ಕಡಿಯುವ ಬೆದರಿಕೆವರೆಗೂ ಸದ್ದು ಮಾಡಿತ್ತು. ಅಲ್ಲದೆ ಸುಪ್ರೀಂ ಕೋರ್ಟಿನಲ್ಲೂ ಕಾನೂನು ಹೋರಾಟ ಮಾಡಿ ತೆರೆಗೆ ಬಂದ ಪದ್ಮಾವತ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ.

ಹೀಗೆ ವಿವಾದಗಳಿಂದಲೇ ಸುದ್ದಿ ಮಾಡಿ ಗಮನ ಸೆಳೆದಿದ್ದ ಚಿತ್ರವನ್ನು ನೋಡಲು ಹೋದ ಪ್ರೇಕ್ಷಕರಿಗೆ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರದಲ್ಲಿ ಕೇವಲ ವಸ್ತ್ರ ವಿನ್ಯಾಸಗಳು ರಾರಾಜಿಸಿದವೇ ಹೊರತು, ಕಥೆಯ ತಿರುಳಲ್ಲ. ಕಥೆ ತೀರಾ ಜಾಲಾಗಿದ್ದು, ಬನ್ಸಾಲಿ ತಮ್ಮ ಮೇಲಿದ್ದ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಚಿತ್ರದಲ್ಲಿ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣ್ವೀರ್ ಸಿಂಗ್ ಕೊಂಚ ಮಟ್ಟಿಗೆ ಗಮನ ಸೆಳೆಯುತ್ತಾರಾದರೂ ಉಳಿದಂತೆ ಶಾಹಿದ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಬನ್ಸಾಲಿ ಸಂಪೂರ್ಣ ವಿಫಲರಾಗಿದ್ದಾರೆ. ಒಟ್ಟಿನಲ್ಲಿ ತೆರೆಗೆ ಬರುವ ಮುನ್ನ ಪದ್ಮಾವತ್ ಚಿತ್ರ ಅಬ್ಬರ ಎಷ್ಟಿತ್ತೋ, ಅಷ್ಟೇ ಪ್ರಮಾಣದಲ್ಲಿ ತೆರೆಕಂಡ ನಂತರ ನಿರಾಸೆ ಮೂಡಿಸಿದೆ.

Leave a Reply