ಈ ಬಾರಿಯು ನಿಜ ಹೀರೋಗಳ ಮುಡಿಯಲ್ಲಿ ಮಿನುಗಲಿದೆ ‘ಪದ್ಮ’ ಪ್ರಶಸ್ತಿ!

ಡಿಜಿಟಲ್ ಕನ್ನಡ ಟೀಮ್:

ಕಳೆದ ವರ್ಷದಂತೆ ಈ ಬಾರಿಯೂ ಕೂಡ ಪದ್ಮಶ್ರೀ ಪ್ರಶಸ್ತಿ ಪಟ್ಟಿಯಲ್ಲಿ ನಮಗೆ ಕಾಣಸಿಗುವುದು ತೆರೆಮರೆಯಲ್ಲಿ ಶಿಖರದೆತ್ತರದ ಸಾಧನೆ ಮಾಡಿದವರೇ. ಕರ್ನಾಟಕದ ಸೂಲಗತ್ತಿ ನರಸಮ್ಮನಿಂದ ಹಿಡಿದು ಪಶ್ಚಿಮ ಬಂಗಾಳದ ಸುಭಾಷಿಣಿ ಮಿಸ್ತ್ರಿವರೆಗೂ. ತಮಿಳುನಾಡಿನ ರಾಜಗೋಪಾಲನ್ ವಾಸುದೇವನ್ ರಿಂದ ಹಿಮಾಚಲ ಪ್ರದೇಶದ ಯೆಶಿ ಧೋದೆನ್ ವರೆಗೂ ಒಬ್ಬೊಬ್ಬರೂ ಸಾಮಾನ್ಯರಾಗಿ ಬದುಕುತ್ತಲೇ ಅಸಮಾನ್ಯ ಸಾಧನೆ ಮಾಡಿರುವರು!

ಮೋದಿ ಸರ್ಕಾರ ಕಳೆದ ವರ್ಷದಿಂದ ಪದ್ಮ ಶ್ರೀ ಪುರಸ್ಕಾರವನ್ನು ಸಾಮಾನ್ಯರಾಗಿದ್ದುಕೊಂಡೇ ಸಮಾಜಕ್ಕೆ ಮಹತ್ತರ ಸೇವೆ ನೀಡಿದವರಿಗೆ, ಬಡವರಿಗೆ ನೀಡಲು ಆರಂಭಿಸಿದೆ. ಕಳೆದ ವರ್ಷ ಕೂಡ ಕರ್ನಾಟಕದ ಸುಕ್ರಿ ಬೊಮ್ಮಗೌಡ, ಚಿಂತಾಕಿಂದಿ ಮಲ್ಲೇಶಂ, ಮೀನಾಕ್ಷಿ ಅಮ್ಮ, ಕರೀಮುಲ್ ಹಕ್, ಅನುರಾಧ ಕೊಯಿರಾಲ ಹೀಗೆ ಅನೇಕ ನಿಜವಾದ ಸಾಧಕರನ್ನು ನಮ್ಮ ಮುಂದೆ ನಿಲ್ಲಿಸಿತ್ತು. ಈ ಬಾರಿಯೂ ಕೇಂದ್ರ ಸರ್ಕಾರ ಹಾಗೂ ಪದ್ಮ ಪ್ರಶಸ್ತಿ ಆಯ್ಕೆ ಸಮಿತಿ ಅಂತಹುದೇ ಸಾಧಕರನ್ನು ನಮಗೆ ಪರಿಚಯಿಸುತ್ತಿದೆ.

ರೈತ ಮಹಿಳೆಯಾಗಿದ್ದುಕೊಂದು ತನ್ನ ಜೀವನದುದ್ದಕ್ಕೂ 15 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಉಚಿತವಾಗಿ ಮಾಡಿರುವ ಕನ್ನಡತಿ ನರಸಮ್ಮ, ಪಶ್ಮಿಮ ಬಂಗಾಳದ ಗ್ರಾಮವೊಂದರ ಬಡ ಮಹಿಳೆ 20 ವರ್ಷಗಳ ಕಾಲ ಮನೆಕೆಲಸ ಮಾಡಿಕೊಂಡು ತನ್ನ ಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸಿರುವ ಸುಭಾಷಿಣಿ ಮಿಸ್ತ್ರಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ನಿರ್ಮಾಣದಲ್ಲಿ ಬಳಸಿಕೊಳ್ಳುವ ವಿಧಾನ ಕಂಡು ಹಿಡಿದಿರುವ ತಮಿಳುನಾಡಿನ ರಾಜಗೋಪಾಲನ್ ವಾಸುದೇವನ್, ಮಹಾರಾಷ್ಟ್ರದ ನಕ್ಸಲ್ ಪೀಡಿತ ಪ್ರದೇಶ ಗಡ್ಚಿರೋಲಿ ಪ್ರದೇಶದಲ್ಲಿ30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರಾದ ರಾಣಿ ಮತ್ತು ಅಭ್ಯಾ ಬಂಗ್, ದೇವದಾಸಿ ಮತ್ತು ದಲಿತರ ಅಭಿವೃದ್ಧಿ ಹಾಗೂ ಹಕ್ಕಿಗಾಗಿ ಹೋರಾಟ ನಡೆಸಿದ ಸೀತವ್ವ ಜೊದತ್ತಿ ಹೀಗೆ ಅನೇಕ ರತ್ನಗಳು ಪದ್ಮಶ್ರೀ ಪ್ರಶಸ್ತಿ ಪಟ್ಟಿಗೆ ಸೇರಿ ಅದರ ಘನತೆಯನ್ನು ಹೆಚ್ಚುವಂತೆ ಮಾಡಿದ್ದಾರೆ.

ಉಳಿದಂತೆ ಖ್ಯಾತನಾಮರ ಸಾಲಿನಲ್ಲಿ ಭಾರತದ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಆಡ್ವಾಣಿ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪದ್ಮ ಭೂಷಣ ಪ್ರಶಸ್ತಿ ಸಿಕ್ಕರೆ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ.

ಕರ್ನಾಟಕದ ಸಾಧಕರು…

ಪದ್ಮಶ್ರೀ: ದೊಡ್ಡರಂಗೇಗೌಡ, ಸೀತವ್ವ ಜೋಡ್ತಿ, ಸೂಲಗಿತ್ತಿ ನರಸಮ್ಮ, ಆರ್.ಸತ್ಯನಾರಾಯಣ, ಇಬ್ರಾಹಿಂ ಸುತಾರ್, ಶ್ರೀ ಸಿದ್ದೇಶ್ವರ ಸ್ವಾಮೀಜಿ, ರುದ್ರಪಟ್ಟಣ ಸೋದರರು (ತಾರಾನಾಥ್- ತ್ಯಾಗರಾಜನ್).

ಪದ್ಮ ಭೂಷಣ: ಪಂಕಜ್ ಆಡ್ವಾಣಿ.

ಕಳೆದ ಬಾರಿ ಪದ್ಮಶ್ರೀ ಪ್ರಶಸ್ತಿಯಲ್ಲಿ ಕಾಣಿಸಿಕೊಂಡ ನಿಜ ಹೀರೋಗಳ ಸಾಧನೆಗಾಥೆಯನ್ನು ಡಿಜಿಟಲ್ ಕನ್ನಡ ‘ಪದ್ಮಶ್ರೀ ಹೆಮ್ಮೆ’ ಎಂಬ ಸರಣಿ ಲೇಖನ ಪ್ರಕಟಿಸಿತ್ತು. ಈ ಬಾರಿಯೂ ತೆರೆಮರೆಯಲ್ಲೇ ಆಕಾಶದೆತ್ತರದ ಸಾಧನೆ ಮಾಡಿರುವ ಈ ಸಾಧಕರ ಸ್ಫೂರ್ತಿದಾಯಕ ಹಾದಿಯನ್ನು ನಿಮ್ಮ ಮುಂದೆ ಇಡಲಿದ್ದೇವೆ.

Leave a Reply