ಪದ್ಮಶ್ರೀ ಹೆಮ್ಮೆ: 7ನೇ ವಯಸ್ಸಿಗೆ ದೇವದಾಸಿಯಾದ ಸೀತವ್ವ ನಂತರ ಬೆಳೆದಿದ್ದು ಸಿಇಒ ಮಟ್ಟಕ್ಕೆ!

ಡಿಜಿಟಲ್ ಕನ್ನಡ ಟೀಮ್:

ಕೆಲವೊಮ್ಮೆ ಜೀವನದಲ್ಲಿ ಕಷ್ಟಗಳು ಎದುರಾಗುವುದೇ ನಮ್ಮನ್ನು ಯಸಸ್ಸಿನ ಹಾದಿಗೆ ಕರೆದೊಯ್ಯಲು. ಆ ಕಷ್ಟಗಳನ್ನು ಹೇಗೆ ನಿಭಾಯಿಸುತ್ತೇವೆ, ಹೇಗೆ ಮೆಟ್ಟಿ ನಿಲ್ಲುತ್ತೇವೆ ಎಂಬುದರ ಮೇಲೆ ನಮ್ಮ ಯಸಸ್ಸು ವೈಫಲ್ಯ ನಿರ್ಧಾರವಾಗುತ್ತದೆ. ಅದಕ್ಕೆ ಸೂಕ್ತ ಉದಾಹರಣೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರೋ ಸೀತವ್ವ ಜೋಡತ್ತಿ.

ಕೇವಲ ಏಳು ವರ್ಷವಿರುವಾಗಲೇ ಸಮಾಜದ ಅನಿಷ್ಠ ಪದ್ಧತಿ ದೇವದಾಸಿಗೆ ಸಿಲುಕಿದ ಸೀತವ್ವ ಇಂದು ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ (MASS) ಯ ಸಿಇಒ ಆಗಿದ್ದಾರೆ. ಈಕೆಯ ಈ ಸಾಧನೆ ಇರೋದು ಅವರು ತಮ್ಮ ಜೀವನದಲ್ಲಿ ಎದುರಾದ ಸವಾಲುಗಳನ್ನು ಮೆಟ್ಟು ನಿಂತು ಹೋರಾಟ ಮಾಡಿದ ಛಲ. ಸೀತವ್ವನ ಜೀವನದ ಹಾದಿ ಪ್ರತಿಯೋಬ್ಬ ಮಹಿಳೆ ಹಾಗೂ ಯುವಕರಿಗೆ ಸ್ಫೂರ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗಾದ್ರೆ ಆಕೆ ನಡೆದು ಬಂದ ಹಾದಿ ಹೇಗಿತ್ತು ನೋಡೋಣ ಬನ್ನಿ…

ಸೀತವ್ವ ಹುಟ್ಟಿದ್ದು, ಒಂದು ಬಡ ಕುಟುಂಬದಲ್ಲಿ. ಈಕೆಯ ತಂದೆ ತಾಯಿಗೆ ಒಂಬತ್ತು ಜನ ಹೆಣ್ಣು ಮಕ್ಕಳು, ಈಕೆಯ ಮೂವರು ಸಹೋದರಿಯರು ಚಿಕ್ಕ ವಯಸ್ಸಿನಲ್ಲೇ ಸತ್ತ ಕಾರಣ, ಪೋಷಕರು ದೇವಿ ಯೆಲ್ಲಮ್ಮನಿಗೆ ಸೀತವ್ವನನ್ನು ನೀಡಿ ದೇವದಾಸಿ ಮಾಡಲು ನಿರ್ಧರಿಸಿದರು. ಆಟವಾಡುವ ವಯಸ್ಸಿನಲ್ಲಿ ಸಮಾಜದ ಈ ಅನಿಷ್ಠ ಪದ್ಧತಿಯ ಬಗ್ಗೆ ಕೊಂಚವೂ ಅರಿವಿಲ್ಲದ ಏಳನೇ ವಯಸ್ಸಿನಲ್ಲಿ ಈಕೆಯನ್ನು ದೇವದಾಸಿಯಾಗಿ ಮಾಡಿ ಆ ಗ್ರಾಮದ ಹೊಲಕೇರಿಗೆ ಕಳುಹಿಸಿದರು. ಆ ಚಿಕ್ಕ ವಯಸ್ಸಿನಲ್ಲಿ ಶಾಸ್ತ್ರದ ಹೆಸರಿನಲ್ಲಿ ತನ್ನನ್ನು ದೇವದಾಸಿ ಪದ್ಧತಿಗೆ ದೂಡಿದ್ದನ್ನು ಸೀತವ್ವ ನೆನೆಸಿಕೊಳ್ಳೋದು ಹೀಗೆ…

‘ಏಳು ವರ್ಷವಿರುವಾಗಲೇ ನನ್ನನ್ನು ದೇವದಾಸಿಯನ್ನಾಗಿ ಮಾಡಿದರು. ಆಗ ನಾನು 1ನೇ ತರಗತಿಯಲ್ಲಿದ್ದೆ. ನನಗೆ ಹೊಸ ಬಟ್ಟೆ ಹಾಕಿಸಿದ್ದರು, ಕೈಗೆ ಹಸಿರು ಗಾಜಿನ ಬಳೆ ತೊಡಿಸಿದ್ದರು. ಎಲ್ಲರೂ ನನ್ನ ಬಗ್ಗೆಯೇ ಮಾತನಾಡುತ್ತಿದ್ದರು. ಆಗ ಎಲ್ಲರೂ ನನ್ನನ್ನೇ ಕೇಂದ್ರಬಿಂದುವಾಗಿ ನೋಡುತ್ತಿದ್ದದ್ದು ಖುಷಿಯಾಗಿತ್ತು. ಪೂಜಾರಿ ಮಂತ್ರ ಹೇಳುತ್ತಾ ನನ್ನ ಕೊರಳಿಗೆ ಕೆಂಪು ಮತ್ತು ಬಿಳಿ ಮಾಲೆ ಕಟ್ಟಿದರು. ಆಗ ಏನಾಗುತ್ತಿದೆ ಎಂಬುದು ನನಗೆ ಸ್ವಲ್ಪವೂ ಅರಿವಾಗಿರಲಿಲ್ಲ. ಒಂಬತ್ತು ದಿನಗಳ ಕಾಲ ನನಗೆ ಅರಿಶಿನ ಹಚ್ಚಿ ಬೇವಿನ ನೀರಿನಲ್ಲಿ ಸ್ನಾನ ಮಾಡಿಸಿದರು. ನಂತರ ನನಗೆ ಮೊದಲ ಬಾರಿಗೆ ಸೀರೆ ಉಡಿಸಿದರು. ನನ್ನ ಸುತ್ತಲೂ ದಾರ ಕಟ್ಟಿ ಧಾನ್ಯಗಳನ್ನು ನನ್ನ ಮೇಲೆ ಎಸೆದರು.’

ಈ ಮಧ್ಯೆ ಸೀತವ್ವನ ತಂದೆ ಅನಾರೋಗ್ಯಕ್ಕೆ ತುತ್ತಾದರು. ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಏಕೈಕ ಪುರುಷ ಹಾಸಿಗೆ ಹಿಡಿದ. ಆಗ ಸೀತವ್ವರನ್ನು ದೇವದಾಸಿಯ ಎರಡನೇ ಹಂತದ ಪದ್ಧತಿ ಮಾಡಿ ಮುಗಿಸಿ ಸೀತವ್ವನನ್ನು ದೇವದಾಸಿಯಾಗಿ ಮಾಡಿದರು. ಸೀತವ್ವನನ್ನು ದೇವದಾಸಿಯನ್ನಾಗಿ ಮಾಡಿ ವ್ಯಕ್ತಿಯೊಬ್ಬನಿಗೆ ನೀಡಿದರು. ಆರಂಭದಲ್ಲಿ ಪುಡಿಗಾಸು ಹಾಗೂ ದಿನಸಿ ಸಿಕ್ಕಿತು. ಹೀಗೆ ಕೆಲವು ವರ್ಷಗಳಲ್ಲಿ ಸೀತವ್ವ ಎರಡು ಮಕ್ಕಳ ತಾಯಿಯಾದಳು. ಆದರೆ ಸೀತವ್ವಳ ತಾಯಿ ಇನ್ನಷ್ಟು ಹೆಚ್ಚು ಹಣ ಕೊಡುವ ವ್ಯಕ್ತಿಗೆ ಸೀತವ್ವನನ್ನು ನೀಡಲು ನಿರ್ಧರಿಸಿದರು. ಆಗ ಜೋಡತ್ತಿಯ ಜಮೀನುದಾರರಿಗೆ ಸೀತವನ್ನನ್ನು ನೀಡಿದರು. ಆತ ಈಕೆಯನ್ನು ಚೆನ್ನಾಗಿಯೇ ನೋಡಿಕೊಂಡ. ಎಲ್ಲಾ ಅಗತ್ಯಗಳನ್ನು ಪೂರೈಸಿದ. ಆತನ ಇಬ್ಬರು ಹೆಂಡತಿಯರ ಕುಟುಂಬದ ಜತೆಗೆ ಈಕೆಯ ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಿದ್ದ. ಆಗಾಗ್ಗ ಹೊಲಕೇರಿಗೆ ಬಂದು ಕಾಣುತ್ತಿದ್ದ. ಆದರೆ ಸಮಾಜದ ಸಂಪ್ರದಾಯ ಇವರಿಬ್ಬರನ್ನು ಮದುವೆಯಾಗಲು ಅವಕಾಶ ನೀಡಲಿಲ್ಲ.

ಹೀಗೆ ಸೀತವ್ವನ ಜೀವನ ದೇವದಾಸಿ ಪದ್ಧತಿಯಲ್ಲೇ ಕಳೆದು ಹೋಗುತ್ತದೆ ಎಂಬ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ದೇವದಾಸಿ ನಿರ್ಮೂಲನಾ ಕಾಯ್ದೆ (1987) ಜಾರಿಗೆ ತಂದಿತು. ಆಗ ಸೀತವ್ವಳಿಗೆ ದೇವದಾಸಿ ಪದ್ಧತಿಯಿಂದ ಹೊರ ಬಂದರು ಸೀತವ್ವ. 1990ರ ದಶಕದ ಆರಂಭದಲ್ಲಿ ಮಾಜಿ ದೇವದಾಸಿಗಳೆಲ್ಲಾ ಸೇರಿ ಸ್ವಯಂ ಸೇವಾ ಗುಂಪು ಕಟ್ಟಿಕೊಂಡರು. ಆ ಗುಂಪಿನ ಸಭೆಗಳಿಗೆ ಸೀತವ್ವ ಭಾಗಿಯಾಗಲು ಆರಂಭಿಸಿದಳು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಸಂಸ್ಥೆ ಮೂಲಕ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಸೀತವ್ವ ಕೆಲಸ ಮಾಡಿದರು. 1990ರ ದಶಕದ ಅಂತ್ಯದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಈ ಸಂಸ್ಥೆ ಸ್ಥಗಿತಗೊಂಡಿತು. ಅದೇ ಸಮಯದಲ್ಲಿ ಸೀತವ್ವ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ನಂತರ ಈ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರೂ ಆದರು. ಈ ಸಂಸ್ಥೆ ಮೂಲಕ ದೇವದಾಸಿ ಮಹಿಳೆಯರ ಹಕ್ಕು, ಮಕ್ಕಳ ಹಕ್ಕು, ಲೈಂಗಿಕ ರೋಗಗಳು ಸೇರಿದಂತೆ ಮಹಿಳೆಯರ ಹಿತಕ್ಕಾಗಿ ಹೋರಾಟ ನಡೆಸಿದರು.

ಸೀತವ್ವ ಮಾಸ್ ಸಂಸ್ಥೆಯನ್ನು ಹುಕ್ಕೇರಿ, ಚಿಕ್ಕೋಡಿ ಮತ್ತು ರಾಯಭಾಗ್ ತಾಲೂಕುಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಲುವ ಜವಾಬ್ದಾರಿ ಹೊತ್ತರು. ಈ ಭಾಗದ ಮಹಿಳೆಯರಿಗೆ ಸ್ವಯಂ ಸೇವಾ ಗುಂಪು ಸ್ಥಾಪಿಸಿ ಕೊಟ್ಟು ತರಬೇತಿ ನೀಡಿದರು. ಈ ಸಂಸ್ಥೆ ಮೂಲಕ ಮಹಿಳೆಯರಿಗೆ ಉಚಿತವಾಗಿ ಕಾನೂನಿನ ಸಮಸ್ಯೆ ಎದುರಿಸಲು ನೆರವಾದರು. 2012ರಲ್ಲಿ ಮಾಸ್ ಸಂಸ್ಥೆಯ ಸಿಇಒ ಆಗಿ ಆಯ್ಕೆಯಾದರು.

ಹೀಗೆ ತಮ್ಮ ಜೀವನದಲ್ಲಿ ಬಂದ ಕಷ್ಟಗಳನ್ನು ಮೆಟ್ಟಿ ನಿಂತ ಸೀತವ್ವಗೆ ಈಗ ಪದ್ಮಶ್ರೀ ಪುರಸ್ಕಾರ ಲಭಿಸಿರುವುದು ನಿಜಜಕ್ಕೂ ಸಂತೋಷದ ವಿಚಾರ. ಸೀತವ್ವನ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಿದ ಪ್ರಶಸ್ತಿ ಆಯ್ಕೆ ಸಮಿತಿಗೆ ಒಂದು ಧನ್ಯವಾದ.

Leave a Reply