ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿ! ಈ ಬಾರಿ ಜನರ ನಿರೀಕ್ಷೆ ಈಡೇರಿದ್ದು ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಬಿಗ್ ಬಾಸ್ ಕನ್ನಡ ಸೀಸನ್ ಐದರ ವಿಜೇತರಾಗಿ ಕನ್ನಡ ರಾಪರ್ ಚಂದನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಮಾರುಕಟ್ಟೆಯ ತಂತ್ರಗಾರಿಕೆಯನ್ನು ಪಕ್ಕಕ್ಕಿಟ್ಟು ಈ ಬಾರಿ ಜನರ ನಿರೀಕ್ಷೆಯಂತೆ ವಿನ್ನರ್ ಘೋಷಣೆಯಾಗಿರೋದು ಪ್ರೇಕ್ಷಕರಿಗೆ ಸಂತಸದ ವಿಚಾರ. ಬಿಗ್ ಬಾಸ್ ಎಂದರೆ ಜನರ ನಿರೀಕ್ಷೆಗೆ ವಿರುದ್ಧವಾಗಿ ವಿನ್ನರ್ ಆಯ್ಕೆ ಮಾಡಿ ನೆಗೆಟಿವ್ ಪಬ್ಲಿಸಿಟಿ ಪಡೆಯುವ ಕಾರ್ಯಕ್ರಮ ಎಂಬ ಮಾತನ್ನು ಈ ಬಾರಿ ಸುಳ್ಳು ಮಾಡಲಾಗಿದೆ.

ಮೊದಲ ಆವೃತ್ತಿ ಹೊರತಾಗಿ ನಂತರದ ಮೂರು ಆವೃತ್ತಿಗಳ ವಿಜೇತರ ಬಗ್ಗೆ ಈಗಲೂ ಜನ ಅಸಮಧಾನ ವ್ಯಕ್ತಪಡಿಸಿದರೂ ಮಾತನಾಡುತ್ತಲೇ ಇದ್ದಾರೆ. ಅದೇ ನೆಗೆಟಿವ್ ಪಬ್ಲಿಸಿಟಿಯ ಶಕ್ತಿ. ಕಳೆದ ಮೂರು ಆವೃತ್ತಿಗಳಲ್ಲಿನ ಈ ತಂತ್ರಗಾರಿಕೆಯನ್ನು ಬದಿಗಿಟ್ಟು ಈ ಬಾರಿ ಜನರ ಅಪೇಕ್ಷೆಯಂತೆ ಚಂದನ್ ಶೆಟ್ಟಿ ಅವರನ್ನು ಗೆಲ್ಲಿಸಿರೋದು ನಿಜಕ್ಕೂ ಪ್ರೇಕ್ಷಕರಿಗೆ ನೆಮ್ಮದಿ ತಂದಿದೆ. ಚಂದನ್ ಶೆಟ್ಟಿ ಗೆಲುವಿನ ಹಿಂದೆ ಆತನ ಪರಿಶ್ರಮ ಹಾಗೂ ಆತ ಜನರಿಗೆ ನೀಡಿದ ಮನರಂಜನೆಯ ಫಲವಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಾರಿ ಆತನನ್ನು ಹೊರತಾಗಿ ಉಳಿದರನ್ನು ಆಯ್ಕೆ ಮಾಡಲು ಸಮರ್ಥ ಕಾರಣಗಳೇ ಇರಲಿಲ್ಲ.

ಕಳೆದ ಮೂರು ಆವೃತ್ತಿಗಳಲ್ಲಿ ಪ್ರೇಕ್ಷಕರ ನಿರಾಸೆ, ಬಿಗ್ ಬಾಸ್ ಕಾರ್ಯಕ್ರಮದ ಪ್ರಸಾರ ವಾಹಿನಿ ಬದಲಾಗಿರುವುದು, ಬೇರೆ ವಾಹಿನಿಗಳ ಧಾರವಾಹಿ ಹಾಗೂ ರಿಯಾಲಿಟಿ ಶೋಗಳ ಜನಪ್ರಿಯತೆ ನಡುವೆ ಈ ಬಾರಿಯ ಬಿಗ್ ಬಾಸ್ ಆವೃತ್ತಿ ಕಳೆದ ಆವೃತ್ತಿಗಳಿಗಿಂತ ಕೊಂಚ ಹಿಂದುಳಿದಿದ್ದನ್ನು ಒಪ್ಪಿಕೊಳ್ಳಲೇಬೇಕು. ಈ ಎಲ್ಲ ಕಾರಣಗಳ ಮಧ್ಯೆ ಈ ಬಾರಿಯ ಬಿಗ್ ಬಾಸ್ ಪ್ರೇಕ್ಷಕರ ಬಾಯಲ್ಲಿ ಹೆಚ್ಚು ಚರ್ಚೆಯಾಗಲು ಕಾರಣ, ಚಂದನ್ ಶೆಟ್ಟಿ. ಆತನ ಸಂಗೀತದ ಮೇಲಿನ ಪ್ರೇಮ ಹಾಗೂ ಪ್ರತಿಭೆಯನ್ನು ಕನ್ನಡಿಗರು ಮನಪೂರ್ವಕವಾಗಿ ಒಪ್ಪಿಕೊಂಡರು. ಒಂದು ವೇಳೆ ಈ ಬಾರಿಯ ಬಿಗ್ ಬಾಸ್ ಅನ್ನು ಚಂದನ್ ಶೆಟ್ಟಿ ಹೊರತಾಗಿ ನೋಡಲು ಪ್ರೇಕ್ಷಕರಿಗೆ ನಿಜಕ್ಕೂ ಅಸಾಧ್ಯ.

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಅಥಿತಿಗಳಾಗಲಿ, ಸ್ಪರ್ಧಿಗಳ ಕುಟುಂಬಸ್ಥರಾಗಲಿ, ಹೊರಗಿರುವ ಪ್ರೇಕ್ಷಕರಾಗಲಿ ಅಂತಿಮ ಸುತ್ತಿಗೆ ಆಯ್ಕೆ ಮಾಡಲು ತೆಗೆದುಕೊಳ್ಳುತ್ತಿದ್ದ ಮೊದಲ ಹೆಸರೇ ಚಂದನ್ ಶೆಟ್ಟಿ. ವಾರದ ದಿನಗಳಲ್ಲಿ ಚಂದನ್ ಶೆಟ್ಟಿಗಾಗಿ ಹಾಗೂ ವಾರಾಂತ್ಯದಲ್ಲಿ ಸುದೀಪ್ ಅವರನ್ನು ನೋಡಲು ಹೆಚ್ಚಿನ ಪ್ರೇಕ್ಷಕ ವರ್ಗ ಬಿಗ್ ಬಾಸ್ ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಂಡಿತ್ತು. ಆ ಮಟ್ಟಿಗೆ ಚಂದನ್ ಜನರನ್ನು ರಂಜಿಸಿದ್ದ. ತನ್ನ ತಾಳ್ಮೆ, ಸಮಯ ಪ್ರಜ್ಞೆ, ಟಾಸ್ಕ್ ಮಾಡುತ್ತಿದ್ದ ರೀತಿಗೆ ಬೇರೆ ಸ್ಪರ್ಧಿಗಳು ಸಮರ್ಥ ಪೈಪೋಟಿ ನೀಡುತ್ತಿರಲಿಲ್ಲ. ಜಗಳದಿಂದ ಸದ್ದು ಮಾಡುವ ಬದಲು ತನ್ನ ಪ್ರತಿಭೆಯಿಂದಲೇ ಜನರನ್ನು ರಂಜಿಸಿದರು. ಈ ಎಲ್ಲ ಕಾರಣದಿಂದ ಚಂದನ್ ಶೆಟ್ಟಿ ಗೆದ್ದಿದ್ದು, ಈತನ ಗೆಲುವಿನಿಂದ ಪ್ರೇಕ್ಷಕರ ಸಮೂಹ ಸಂತೋಷಗೊಂಡಿರುವುದು ಫೇಸ್ ಬುಕ್ ವಾಲ್ ಗಳಲ್ಲಿ ವಾಟ್ಸಪ್ ಸ್ಟೇಟಸ್ ಗಳಲ್ಲಿ ಗೊತ್ತಾಗುತ್ತಿವೆ.

ಚಂದನ್ ಜತೆಗೆ ಸಾಮಾನ್ಯ ವ್ಯಕ್ತಿ ವಿಭಾಗದಿಂದ ಪ್ರವೇಶ ಪಡೆದಿದ್ದ ದಿವಾಕರ್ ರನ್ನರ್ ಅಪ್ ಆದರೆ, ಜಯರಾಂ ಕಾರ್ತಿಕ್ ಮೂರನೇ ಸ್ಥಾನ ಪಡೆದಿದ್ದಾರೆ.

Leave a Reply