ಮಹದಾಯಿ ನಾಟಕದ ಹಿಂದಿನ ರಾಜಕೀಯ ಬೂಟಾಟಿಕೆ!

ಸ್ಮಶಾನ ಬೂದಿಯಲ್ಲೂ ಮತ ಕೆದಕುವ ಮನಸ್ಥಿತಿಯ ನಮ್ಮ ರಾಜಕಾರಣಿಗಳಿಂದ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯುವುದು ಸಾಧ್ಯವೇ ಇಲ್ಲ. ಏಕೆಂದರೆ ವಿವಾದ ಬಗೆ ಹರಿಯುವುದು ಅವರಾರಿಗೂ ಬೇಕಿಲ್ಲ. ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಬೇಕು. ಅದನ್ನಿಟ್ಟುಕೊಂಡು ಒಂದು ಪಕ್ಷದವರು ಮತ್ತೊಂದು ಪಕ್ಷದವರ ವಿರುದ್ಧ ಕತ್ತಿ ಝಳಪಿಸಬೇಕು. ಹಾಗೆ ಕತ್ತಿ ಝಳಪಿಸುತ್ತಾ, ಝಳಪಿಸುತ್ತಲೇ ಜನರನ್ನು ವಂಚಿಸಿ ಮತ ದೋಚಿಕೊಳ್ಳಬೇಕು. ಇದು ಅವರ ಒರಿಜಿನಲ್ ಕಾರ್ಯಸೂಚಿ. ಹೀಗಾಗಿ ಉತ್ತರ ಕರ್ನಾಟಕದ ಜನ ವಿವಾದ ಬಗೆಹರಿಯುವ ಬಗ್ಗೆ ಯಾವುದೇ ಆಸೆ-ಆಕಾಂಕ್ಷೆ ಇಟ್ಟುಕೊಳ್ಳುವಂತಿಲ್ಲ. ಅಪ್ಪಿತಪ್ಪಿ ಏನಾದರೂ ನಿರೀಕ್ಷೆ ಇಟ್ಟುಕೊಂಡರೆ ಅದು ಅವರ ಮೂರ್ಖತನ ಎನಿಸುತ್ತದೆ ಅಷ್ಟೇ!

ಮಹದಾಯಿ ವಿಚಾರ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಬರೀ ಆರೋಪ, ಪ್ರತ್ಯಾರೋಪ, ಜಟಾಪಟಿ, ಒಣಪ್ರತಿಷ್ಠೆಯೇ ರಾರಾಜಿಸಿದೆ. ಒಬ್ಬರ ಮೇಲೊಬ್ಬರು ಕೈ ಎತ್ತಿಲ್ಲ ಅಷ್ಟೇ. ಆದರೆ ಅದಕ್ಕೂ ಮೀರಿದ ಕಾಳಗವನ್ನು ನಾಲಿಗೆಯೇ ನಿರ್ವಹಿಸಿದೆ. ಕೆಲವರು ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ್ದಾರೆ. ಸಭೆಯ ಅರ್ಧದಲ್ಲಿಯೇ ಎದ್ದು ಹೊರನಡೆದಿದ್ದಾರೆ. ಒಂದು ಗಂಭೀರ ವಿಚಾರದ ಚರ್ಚೆ ಬೇಡುವ ಸಂಯಮ, ಸತ್ಪಂಕಲ್ಪ, ಇಚ್ಛಾಶಕ್ತಿ ಕಿಂಚಿತ್ತೂ ಅಲ್ಲಿ ಕಂಡಿಲ್ಲ. ವಾದ ಮಂಡನೆ ಜಾಗವನ್ನು ಜಗಳಗಂಟತನ ಕಬಳಿಸಿದೆ. ಒಬ್ಬರ ಮಾತನ್ನು ಮತ್ತೊಬ್ಬರು ಕೇಳಿಲ್ಲ. ಕೇಳುವುದು ಯಾರಿಗೂ ಬೇಕಿರಲಿಲ್ಲ. ಪರಿಹಾರಕ್ಕೆ ಬೇಕಾದ ಸಲಹೆ, ಸೂಚನೆ, ಒಗ್ಗಟ್ಟು ಅಲ್ಲಿರಲಿಲ್ಲ. ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುವುದಷ್ಟೇ ತಮ್ಮ ಜವಾಬ್ದಾರಿ ಎಂದು ಪ್ರತಿಯೊಬ್ಬರು ಭಾವಿಸಿದ್ದರಿಂದ ಮಹದಾಯಿ ವಿವಾದವನ್ನು ಮೂಲಸ್ವರೂಪದಲ್ಲಿಯೇ ಉಳಿಸಿ, ಸಭೆ ಬರ್ಖಾಸ್ತಾಗಿದೆ.

ನಿಜ, ಮಹದಾಯಿ ವಿವಾದ ಬಗೆಹರಿಸಲು ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂಬುದು ಮೊದಲಿಂದಲೂ ಸಾಬೀತಾಗಿರುವ ಸತ್ಯ. ಅದಕ್ಕೆ  ಸಾರ್ವಕಾಲಿಕ ಲೇಬಲ್ ಹಚ್ಚಿದ್ದೊಂದೇ ನಿನ್ನೆಯ ಸಭೆಯ ಹೆಗ್ಗಳಿಕೆ. ಕರ್ನಾಟಕದಲ್ಲಿ ಕಾಲ-ಕಾಲಕ್ಕೆ ಪಾತ್ರ ಬದಲಿಸುವ ಆಡಳಿತ ಮತ್ತು ಪ್ರತಿಪಕ್ಷಗಳು ಗೋವಾ ಸರಕಾರ ಮತ್ತು ಅಲ್ಲಿನ ಪ್ರತಿಪಕ್ಷಗಳನ್ನುಸಂಕೇತವಾಗಿರಿಸಿಕೊಂಡು ಒಬ್ಬರ ಮೇಲೊಬ್ಬರು ಕೆಸರು ಚೆಲ್ಲುತ್ತಾ ಬಂದದ್ದು ಪ್ರತೀತಿ. ಅದು ನಿನ್ನೆಯ ಸಭೆಯಲ್ಲೂ ಢಾಳಾಗಿ ವಿಜೃಂಭಿಸಿದೆ. ಅದು ಆಡಳಿತ ಪಕ್ಷವಿರಬಹುದು, ಪ್ರತಿಪಕ್ಷವಾಗಿರಬಹುದು ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದಕ್ಕಿಂತ ಸಮೀಪದಲ್ಲೇ ಇರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈ ವಿಷಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರತ್ತ ತಮ್ಮ ತನು, ಮನವನ್ನು ಮುಡಿಪಾಗಿಟ್ಟಿರುವುದರಿಂದ ಪರಿಹಾರದ ಬದಲಿಗೆ ಪರಸ್ಪರ ಟೀಕೆ-ಟಿಪ್ಪಣಿಗಳಷ್ಟೇ  ರಾಕೆಟ್‌ನಂತೆ ಚಿಮ್ಮಿವೆ!

ಗೋವಾ ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ಸಿಗರನ್ನು ಒಪ್ಪಿಸದ ಹೊರತು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಇಲ್ಲಿನ ಪ್ರತಿಪಕ್ಷ ಬಿಜೆಪಿ ನಾಯಕರು ವಾದ ಮಂಡಿಸಿದ್ದಾರೆ. ಆದರೆ ಮೊದಲು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಭೆ ಕರೆಯಲಿ. ಆಮೇಲೆ ಅಲ್ಲಿನ ಕಾಂಗ್ರೆಸ್ ನಾಯಕರನ್ನು ಒಪ್ಪಿಸಲು ಪ್ರಯತ್ನಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು, ಇಲ್ಲದಿದ್ದರೆ ಪರಿಹಾರ ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿವಾದವಾಗಿದೆ. ಅವರು ಹೇಳಿದ್ದನ್ನು ಇವರು ಒಪ್ಪಿಲ್ಲ. ಇವರು ಹೇಳಿದ್ದನ್ನು ಅವರು ಒಪ್ಪಿಲ್ಲ. ಹೀಗಾಗಿ ಸರ್ವಪಕ್ಷ ಸಭೆ ಸರ್ವಾನುಮತದ ಕೊರತೆಯಿಂದ ವಿಫಲವಾಗಿದೆ.

ಇಲ್ಲಿ ಅರ್ಥವಾಗದ ಒಂದೇ ಒಂದು ವಿಚಾರ ಎಂದರೆ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವ ಬದಲು ಒಬ್ಬರ ವಾದವನ್ನು ಮತ್ತೊಬ್ಬರು ಒಪ್ಪಿದರೆ ಮುಗಿದು ಹೋಗುತ್ತದಲ್ಲ. ಆಯಿತು, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರಾಗಲಿ ಬೇರೆ ಯಾರೂ ಅಲ್ಲ. ತಮ್ಮದೇ ಪಕ್ಷದವರು, ಅವರನ್ನು ಒಪ್ಪಿಸುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಬಹುದಲ್ಲ. ಅದೇ ರೀತಿ, ಗೋವಾ ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ಸಿಗರನ್ನು ನಾವು ಒಪ್ಪಿಸುತ್ತೇವೆ, ಪಕ್ಷದ ಮುಖಂಡ ರಾಹುಲ್ ಗಾಂಧಿ ಮೂಲಕ ಒತ್ತಡ ತರುತ್ತೇವೆ, ಇಬ್ಬರೂ ಸೇರಿ ವಿವಾದ ಬಗೆಹರಿಸೋಣ ಎಂದು ಇಲ್ಲಿನ ಆಡಳಿತಾರೂಢ ಕಾಂಗ್ರೆಸ್ ಮುಖಂಡರೂ ಮುಂದಾಗಬಹುದಲ್ಲ. ಉತ್ತರ ಕರ್ನಾಟಕದ ಜನರ ಕುಡಿಯುವ ನೀರಿನ ಬವಣೆ ಬಗ್ಗೆ ನೈಜ ಕಾಳಜಿ, ಪ್ರಾಮಾಣಿಕ ಪ್ರತಿಸ್ಪಂದನೆ, ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲೇಬೇಕೆಂಬ ಇಚ್ಛಾಶಕ್ತಿ ಇದ್ದರೆ ರಾಜಕೀಯ ಸಮನ್ವಯತೆ ಸಾಧಿಸುವುದು ಎಷ್ಟೊತ್ತಿನ ಮಾತು? ಆಯಿತು ನಡೆಯಿರಿ, ಇಬ್ಬರೂ ಕೂಡಿಯೇ ವಿವಾದ ಬಗೆಹರಿಸೋಣ ಎಂದು ಎಲ್ಲರೂ ಒಗ್ಗೂಡಿ ಪ್ರಧಾನಿಯವರ ಬಳಿ ನಿಯೋಗದಲ್ಲಿ ತೆರಳಿ, ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಹಾರ ರೂಪಿಸುವಂತೆ ಮನವಿ ಮಾಡುವುದರಲ್ಲಿ ಕಳೆದುಕೊಳ್ಳುವುದಾದರೂ ಏನಿದೆ? ಅಂತಾರಾಜ್ಯ ವಿವಾದ ಬಗೆಹರಿಸಿಕೊಳ್ಳುವಾಗ ಬೇಕಿರುವುದು ಪ್ರತಿಷ್ಠೆಯಲ್ಲ, ಬದಲಿಗೆ ಬದ್ಧತೆ. ಕರ್ನಾಟಕದ ಜನರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಕರ್ನಾಟಕದ ರಾಜಕೀಯ ಪಕ್ಷಗಳ ನಡುವೆಯೇ ಸಮನ್ವಯತೆ ಇಲ್ಲದೆ ಹೋದರೆ, ಅವರ ನಡುವೆಯೇ ಒಮ್ಮತ ಇಲ್ಲದೆ ಹೋದರೆ ಅದನ್ನು ಅನ್ಯರಾಜ್ಯ ಗೋವಾದಿಂದ ನಿರೀಕ್ಷಿಸುವುದಾದರೂ ಹೇಗೆ? ನೀವೇ ಬೀದಿಯಲ್ಲಿ ನಿಂತು ಪರಸ್ಪರ ಬಡಿದಾಡಿಕೊಂಡು ಗೋವಾ ಗೆಳೆತನ ಬಯಸುವುದಾದರೂ ಎಷ್ಟರ ಮಟ್ಟಿಗೆ ಸರಿ?

ಮೊದಲೇ ಗೋವಾ ಮಹದಾಯಿ ವಿಚಾರದಲ್ಲಿ ಕರ್ನಾಟಕದ ಜತೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಅದು ಕೂಡ ಅವಕಾಶ ಆದಾಗಲೆಲ್ಲ ರಾಜಕೀಯವಾಗಿ ಸಾಕಷ್ಟು ಹಾಲು ಕರೆದುಕೊಂಡಿದೆ. ಅದು ಬಿಜೆಪಿ ಇರಬಹುದು, ಕಾಂಗ್ರೆಸ್ ಇರಬಹುದು. ಆಡಳಿತ ಪಥದಲ್ಲಿ ತಮ್ಮ-ತಮ್ಮ ಸರದಿ ಬಂದಾಗ ಮಹದಾಯಿಯನ್ನು ‘ಮತತಾಯಿ’ಯನ್ನಾಗಿಯೇ ಮಾಡಿಕೊಂಡಿದ್ದಾರೆ. ಇದರಲ್ಲಿ ಯಾರೂ ಕಡಿಮೆ ಇಲ್ಲ. ಎಲ್ಲರೂ ಸಮಪಾಲುದಾರರೇ. ತೀರಾ ಇತ್ತೀಚೆಗೂ ಇಂಥದೊಂದು ರಾಜಕೀಯ ಪ್ರಹಸನಕ್ಕೆ ಕರ್ನಾಟಕ ಮತ್ತು ಗೋವಾ ಒಟ್ಟೊಟ್ಟಿಗೆ ಸಾಕ್ಷಿಯಾಗಿದೆ.

ಅಲ್ಲಿನ ಮುಖ್ಯಮಂತ್ರಿ ಪರಿಕ್ಕರ್ ಅವರನ್ನು ನಂಬಿಕೊಂಡು ಯಡಿಯೂರಪ್ಪ ತಿಂಗಳೊಪ್ಪತ್ತಿನೊಳಗೆ ಕರ್ನಾಟಕಕ್ಕೆ ಮಹದಾಯಿ ನೀರು ತರುವುದಾಗಿ ಘೋಷಣೆ ಮಾಡಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತಗಳಿಕೆಗೆ ಒಂದಷ್ಟು ಸಹಾಯವಾಗುತ್ತದೆ ಎಂಬುದು ಅವರ ಚಿಂತನೆ ಆಗಿತ್ತು. ಹಾಗಂತಲೇ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಹೀಗಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪರಿಕ್ಕರ್ ಅವರನ್ನು ಕರೆದು ಯಡಿಯೂರಪ್ಪ ವಾಗ್ದಾನ ಪರಿಗಣಿಸುವಂತೆ ಸೂಚನೆ ಕೊಟ್ಟಿದ್ದರು. ಹೀಗಾಗಿ ಕುಡಿಯುವ ಉದ್ದೇಶಕ್ಕೆ ನೀರು ಬಿಡುಗಡೆ ಮಾಡುವುದಾಗಿ ಪರಿಕ್ಕರ್ ಅವರು ಯಡಿಯೂರಪ್ಪನವರಿಗೆ ಪತ್ರ ಬರೆದು ಭರವಸೆ ಕೊಟ್ಟಿದ್ದರು. ಆದರೆ ಇದು ಕರ್ನಾಟಕ ಮತ್ತು ಗೋವಾ ಎರಡೂ ಕಡೆ ವಿವಾದ ಸೃಷ್ಟಿಸಿತ್ತು. ಪರಿಕ್ಕರ್ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯದೆ ಪ್ರತಿಪಕ್ಷ ನಾಯಕರಿಗೆ ಪತ್ರ ಬರೆದು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ, ಇದರಲ್ಲಿ ಮತಗಳಿಕೆ ಕುತಂತ್ರ ಅಡಗಿದೆ ಎಂದು ಇಲ್ಲಿ ಕಾಂಗ್ರೆಸ್‌ನವರು ವಿವಾದ ಸೃಷ್ಟಿಸಿದರೆ, ಅತ್ತ ಗೋವಾದಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ಮಿತ್ರಪಕ್ಷ ಮುಖಂಡರೇ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೊಂಚ ವಿಚಲಿತರಾದ ಪರಿಕ್ಕರ್ ತಕ್ಷಣ ಪ್ಲೇಟು ಬದಲಿಸಿದರು. ಎಲ್ಲಕ್ಕಿಂತ ಮಿಗಿಲಾದದ್ದು ರಾಜಕೀಯ.

ಕರ್ನಾಟಕಕ್ಕೆ ನೀರು ಬಿಟ್ಟರೆಷ್ಟು, ಬಿಡದಿದ್ದರೆಷ್ಟು, ಅಲ್ಲಿನ ಜನ ಕುಡಿಯಲು ನೀರಿಲ್ಲದೆ ಒದ್ದಾಡಿದರೆಷ್ಟು, ಬಿಟ್ಟರೆಷ್ಟು ತಮಗೆ ಮತ ಮತ್ತು ಅದು ತರುವ ಅಧಿಕಾರ ಮುಖ್ಯ ಎಂದು ಬಗೆದ ಪರಿಕ್ಕರ್ ‘ಯೂಟರ್ನ್’ ತೆಗೆದುಕೊಂಡರು.  ಮೊದಲಿಗೆ ಅಲ್ಲಿನ ಜಲ ಸಂಪನ್ಮೂಲ ಸಚಿವ ಹಾಗೂ ಬಿಜೆಪಿ ಮುಖಂಡರಿಂದ ಕರ್ನಾಟಕಕ್ಕೆ ಒಂದು ತೊಟ್ಟು ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿಸಿದ ಪರಿಕ್ಕರ್ ನಂತರ ಖುದ್ದಾಗಿ ತಾವೇ ಪ್ರತಿಕ್ರಿಯೆ ಕೊಟ್ಟರು. ತಾವು ಯಡಿಯೂರಪ್ಪನವರಿಗೆ ಬರೆದ ಪತ್ರ ರಾಜಕೀಯ ಸ್ಟಂಟ್ ಅಷ್ಟೇ. ಯಾವುದೇ ಕಾರಣಕ್ಕೂ ನೀರು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿ ಗೋವಾದಲ್ಲಿ ತಮ್ಮ ಮುಖ ಉಳಿಸಿಕೊಂಡರು. ಕರ್ನಾಟಕದಲ್ಲಿ ಯಡಿಯೂರಪ್ಪ ವಿರುದ್ಧ ಝಳಪಿಸಲು ಎದುರಾಳಿ ಕಾಂಗ್ರೆಸ್‌ನವರಿಗೆ ಕತ್ತಿಯನ್ನೂ ಕೊಟ್ಟರು. ಈಗ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಕಿತ್ತಾಡಿಕೊಂಡಿರುವಾಗ ಗೋವಾ ಸಚಿವರು, ವಿಧಾನಸಭೆ ಸ್ಪೀಕರ್ ಮತ್ತಿತರ ನಿಯೋಗ ಸದ್ದಿಲ್ಲದೆ ಸರದಿ ಮೇಲೆ ಬೆಳಗಾವಿಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಮಹದಾಯಿ ನಾಲಾ ಕಾಮಗಾರಿಯನ್ನು ರಾಜಾರೋಷವಾಗಿ ಪರಿಶೀಲಿಸಿ ಹೋಗುತ್ತಿದೆ!

ಹೀಗೆ ಮತರಾಜಕೀಯ, ಅಧಿಕಾರದ ಮುಂದೆ ಎಲ್ಲವೂ ನಗಣ್ಯ ಆಗುವ ಕಾಲದಲ್ಲಿ, ವಿವಾದದ ಪಾಲುದಾರ ಗೋವಾ ಗೋಸುಂಬೆಯಂತೆ ಕ್ಷಣಕ್ಕೊಂದು ಬಣ್ಣ ಪ್ರದರ್ಶಿಸುತ್ತಿರುವ ಅವಧಿಯಲ್ಲಿ ಮಹದಾಯಿಯಂಥ ಸೂಕ್ಷ್ಮ ವಿಚಾರವನ್ನು ಕರ್ನಾಟಕ ಅತ್ಯಂತ ನಯವಾಗಿ ನಿರ್ವಹಿಸಬೇಕು. ಕರ್ನಾಟಕ ರಾಜಕೀಯ ಬದಿಗಿಟ್ಟರೂ ಇನ್ನೊಂದು ಬದಿಯ ಗೋವಾ ಅದಕ್ಕೆ ಪೂರಕವಾಗಿ ಸ್ಪಂದಿಸುವ ಸಾಧ್ಯತೆ ಕಡಿಮೆ ಇರುವ ಸಂದರ್ಭದಲ್ಲಿ ನಾಜೂಕಿನ ನಡೆ ಇಂದಿನ ಅಗತ್ಯ. ಅಂಥಾದ್ದರಲ್ಲಿ ಕರ್ನಾಟಕದ ನಾನಾ ರಾಜಕೀಯ ಪಕ್ಷಗಳೇ ಹತ್ತಿರದಲ್ಲಿರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಬಡಿದಾಡಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುವುದಾದರೂ ಹೇಗೆ?

ಬಹುಶಃ ಕಾಂಗ್ರೆಸ್ಸಿಗಾಗಲಿ, ಬಿಜೆಪಿಗಾಗಲಿ ಈ ಸಮಸ್ಯೆಗೆ ಪರಿಹಾರ ಸಿಗುವುದು ಬೇಕಿಲ್ಲ. ಹತ್ತಿರದಲ್ಲೇ ಇರುವ ಚುನಾವಣೆ ಮುಗಿಯುವವರೆಗಾದರೂ ವಿವಾದ ಜೀವಂತವಾಗಿರಬೇಕು. ಒಬ್ಬರು ಮತ್ತೊಬ್ಬರ ಮೇಲೆ ಗೂಬೆ ಕೂರಿಸಿಕೊಂಡು ಜನರನ್ನು ಮರುಳು ಮಾಡಬೇಕು. ಅಲ್ಲೇನಾದರೂ ಮತಗಿಟ್ಟುತ್ತದೆಯೇ ಎಂದು ಲೆಕ್ಕ ಹಾಕಬೇಕು. ವಿವಾದ ಅಷ್ಟಕ್ಕೇ ಸೀಮಿತವಾಗುವುದು ಅವರಿಗೆ ಬೇಕು. ಅದಕ್ಕಿಂತ ಹೆಚ್ಚಿಗೆ ಇಬ್ಬರಿಗೂ ಏನೂ ಬೇಕಿಲ್ಲ.

ಈಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮಾತನ್ನೇ ತೆಗೆದುಕೊಳ್ಳೋಣ. ಸಿದ್ದರಾಮಯ್ಯನವರ ಸರಕಾರ ಗೋವಾ ಕಾಂಗ್ರೆಸ್ಸಿಗರನ್ನು ಒಪ್ಪಿಸಿದರೆ ವಿವಾದ ಬಗೆಹರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹದಿನೈದು ದಿನದೊಳಗೆ ಮಹದಾಯಿ ನೀರು ತರುವುದಾಗಿ ಮಾತು ಕೊಡುವಾಗ ಅವರಿಗೆ ಗೋವಾ ಕಾಂಗ್ರೆಸ್ಸಿಗರನ್ನು ಒಪ್ಪಿಸಬೇಕಾಗುತ್ತದೆ ಎಂಬ ಅರಿವು ಇರಲಿಲ್ಲವೇ? ಇಷ್ಟಕ್ಕೂ ಅಲ್ಲಿ ನೀರು ಬಿಡುಗಡೆ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಪರಿಕ್ಕರ್ ಸರಕಾರ. ಈಗಾಗಲೇ ಅವರು ಆ ಬಗ್ಗೆ ವಾಗ್ದಾನವನ್ನೂ ಕೊಟ್ಟಿದ್ದರು. ಅವರು ವಾಗ್ದಾನ ಕೊಡುವಾಗ ಗೋವಾ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಗೊತ್ತಿರಲಿಲ್ಲವೇ? ಅವರದೇ ಸಂಪುಟದ ಸದಸ್ಯ ವಿನೋದ್ ಪಾಳೇಕರ್ ಆಕ್ಷೇಪ ಎತ್ತಿದಾಗ ಸುಮ್ಮನಿರಿಸಲಾಗದ ಪರಿಕ್ಕರ್ ಗೋವಾ ಕಾಂಗ್ರೆಸ್ಸಿಗರ ಸಹಮತ ನಿರೀಕ್ಷೆ ಮಾಡುವುದಾದರೂ ಹೇಗೆ? ಅದು ಅವರೇ ಕುಮ್ಮಕ್ಕು ನೀಡಿ ಕರ್ನಾಟಕ ವಿರೋಧಿ ಹೇಳಿಕೆಯನ್ನೂ ಪಾಳೇಕರ್ ಅವರಿಂದಲೇ ಕೊಡಿಸಿರುವಾಗ ಇವೆಲ್ಲ ಆಗದ-ಹೋಗದ ಮಾತು. ಬರೀ ಬೂಟಾಟಿಕೆ, ಕಾಲಹರಣ, ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಷ್ಟೇ!

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಚಾರಕ್ಕೆ ಬರೋಣ. ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮತ್ತೊಮ್ಮೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಈ ಹಿಂದೆ ಇದೇ ರೀತಿ ಅವರು ನಿಯೋಗ ತೆಗೆದುಕೊಂಡು ಹೋಗಿದ್ದಾಗ ಆಗಿದ್ದಾದರೂ ಏನು? ಆಗ ಪ್ರಧಾನಿಯವರು, ‘ಮೊದಲು ನೀವು ಗೋವಾ ಕಾಂಗ್ರೆಸ್ಸಿಗರನ್ನು ಒಪ್ಪಿಸಿ ಬನ್ನಿ, ಆಮೇಲೆ ಅಲ್ಲಿನ ಸರಕಾರಕ್ಕೆ ಸೂಚನೆ ಕೊಡುತ್ತೇನೆ’ ಎಂದು ಹೇಳಿದ್ದರು. ಈಗಲೂ ಬೇರೇನೂ ಆಗುವುದಿಲ್ಲ. ಪ್ರಧಾನಿಯವರು ಯಥಾಪ್ರಕಾರ ಹಳೇ ಗಾನವನ್ನೇ ರಿಪೀಟ್ ಮಾಡುತ್ತಾರೆ.

ಸಿದ್ದರಾಮಯ್ಯನವರಿಗೆ ಇದು ಗೊತ್ತಿಲ್ಲದ ವಿಚಾರವೇನೂ ಇಲ್ಲ. ಪ್ರಧಾನಿ ಹಾಗೆ ಹೇಳುವುದು ಸಿದ್ದರಾಮಯ್ಯನವರಿಗೂ ಬೇಕು. ಅದನ್ನೇ ಅವರು ಕರ್ನಾಟಕದ ಜನರ ಮುಂದಿಡಬೇಕು. ‘ನಾನು ಎಲ್ಲ ಪ್ರಯತ್ನ ಮಾಡಿದೆ. ಇತ್ತ ಪ್ರತಿಪಕ್ಷ ಬಿಜೆಪಿಯೂ ಸಹಕರಿಸಲಿಲ್ಲ. ಗೋವಾ ಮುಖ್ಯಮಂತ್ರಿಯೂ ಕೈಹಿಡಿಯಲಿಲ್ಲ. ಅತ್ತ ಪ್ರಧಾನಿ ನರೇಂದ್ರ ಮೋದಿ ಅವರೂ ಜವಾಬ್ದಾರಿಯಿಂದ ನುಣುಚಿಕೊಂಡರು’ ಎಂದು ಜನರ ಮುಂದೆ ಹೇಳಿಕೊಂಡು ತಿರುಗಬಹುದಲ್ಲ. ಹೀಗಾಗಿ ಮತ್ತೊಮ್ಮೆ ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾರೆ. ಬಿಜೆಪಿಯವರ ಬಾಣವನ್ನೇ ಅವರು ತಿರುಗುಬಾಣ ಮಾಡಲು ಹೊರಟಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಒಂದಿದೆ. ದೇಶದ ಹಲವೆಡೆ ಇದೇ ರೀತಿ ಅನೇಕ ಅಂತಾರಾಜ್ಯ ಜಲವಿವಾದಗಳಿವೆ. ಬಹುತೇಕ ವಿವಾದಗಳು ರಾಜಕೀಯ ದಾಳಗಳಾಗಿಯೇ ಬಳಕೆ ಆಗುತ್ತಿವೆ. ತೆಲುಗುಗಂಗಾ ಯೋಜನೆಯಂಥ ಒಂದೆರಡು ಉದಾಹರಣೆ ಬಿಟ್ಟರೆ ಉಳಿದೆಲ್ಲವೂ ಹಾಗೆಯೇ ಜ್ವಲಂತವಾಗಿವೆ, ಇಲ್ಲವೇ ನಾನಾ ನ್ಯಾಯಾಧೀಕರಣದ ಮುಂದೆ ಬಸ್ಕಿ ಹೊಡೆಯುತ್ತಿವೆ. ಅದು ಕಾವೇರಿಯಿಂದ ಮಹದಾಯಿವರೆಗೆ ಯಾವುದೇ ವಿವಾದ ಇರಬಹುದು. ನ್ಯಾಯಾಧೀಕರಣದ ಮುಂದೆ ಇತ್ಯರ್ಥ ಆದ ಕಾವೇರಿ ಜಲ ನಿರ್ವಹಣೆ ಆಯೋಗ ರಚನೆಗೆ ಕರ್ನಾಟಕದ ಆಕ್ಷೇಪ ಸುಪ್ರೀಂ ಕೋರ್ಟ್ ಮುಂದಿದೆ. ಮಹದಾಯಿ ನ್ಯಾಯಾಧೀಕರಣ ರಚನೆ ಆಗಿದ್ದು, ವಿಚಾರಣೆ ಶುರುವಾಗಿದೆ. ಮಹದಾಯಿ ಕುರಿತ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮಾತುಕತೆಗೆ ಮೂರೂವರೇ ದಶಕಗಳ ಇತಿಹಾಸವಿದೆ. ಮಾತುಕತೆಯಿಂದ ಬಗೆಹರಿಯುವುದಾಗಿದ್ದರೆ ನ್ಯಾಯಾಧೀಕರಣ ರಚನೆ ಆಗುತ್ತಲೇ ಇರಲಿಲ್ಲ. ಈಗ ರಾಜಕೀಯ ಪಕ್ಷಗಳೂ ಏನೆಲ್ಲ ಪಟ್ಟಾಂಗ ಹೊಡೆಯಲಿ, ಏನೆಲ್ಲ ಆರೋಪ-ಪ್ರತ್ಯಾರೋಪ ಮಾಡಿಕೊಂಡು ತಿರುಗಲಿ ಅದು ಇತ್ಯರ್ಥ ಆಗುವುದು ನ್ಯಾಯಾಧೀಕರಣದ ಮುಂದೆಯೇ. ಒಂದೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾದರೆ ಮಾತ್ರ ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬಹುದು. ಇದು ಆಗಿಯೇ ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ಹಾಗೊಂದು ಅವಕಾಶವಿದೆ ಎಂದಷ್ಟೇ ಹೇಳಬಹುದು. ಆದರೆ ಒಂದು ಮಾತು ಮಾತ್ರ ಸತ್ಯ. ರಾಜಕೀಯ ಲಾಭವಿಲ್ಲದೆ ಯಾರೂ ಏನೂ ಮಾಡುವುದಿಲ್ಲ. ಇದಕ್ಕೆ ಬಿಜೆಪಿಯೂ ಹೊರತಲ್ಲ. ಕಾಂಗ್ರೆಸ್ಸೂ ಹೊರತಲ್ಲ. ಒಂದು ಸಮಸ್ಯೆಗೆ ಪರಿಹಾರ ಸಿಕ್ಕಿಬಿಟ್ಟರೆ ಆ ಲಾಭ ಅಲ್ಲಿಗೆ ನಿಂತು ಹೋಗುತ್ತದೆ. ಹೀಗಾಗಿ ಮತಕರೆವ ಮಹದಾಯಿ ವಿವಾದವೆಂಬ ಕಾಮಧೇನುವನ್ನು ಅಷ್ಟು ಸುಲಭವಾಗಿ ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಅಲ್ಲಿಯವರೆಗೂ ಉತ್ತರ ಕರ್ನಾಟಕ ಜನರ ಬವಣೆ ತಪ್ಪಿದ್ದಲ್ಲ!

ಲಗೋರಿ: ಇತ್ಯರ್ಥ ಕಾಣದ ಸಮಸ್ಯೆಗೆ ಬೆಲೆ ಹೆಚ್ಚು!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply