ಜೇಟ್ಲಿ ಬಜೆಟ್ ನಲ್ಲಿ ಸಿಗುವುದೇ ತೆರಿಗೆ ವಿನಾಯಿತಿ? ನಗರ ಪ್ರದೇಶ ಉದ್ಯೋಗಿಗಳ ನಿರೀಕ್ಷೆಗಳೇನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ವರ್ಷ ಮಂಡನೆಯಾದ ಬಜೆಟ್ ನಲ್ಲಿ ತೆರಿಗೆ ವಿಭಾಗಗಳಲ್ಲಿ ಯಾವುದೇ ಬದಲಾವಣೆ ಮಾಡದ ಹಣಕಾಸು ಸಚಿವ ಅರುಣ್ ಜೇಟ್ಲಿ ತೆರಿಗೆದಾರರಿಗೆ ಇದ್ದ ಬಿಗಿಯನ್ನು ಸ್ವಲ್ಪ ಸಡಿಲಗೊಳಿಸಿದ್ದರು. ₹2.5 ಲಕ್ಷದಿಂದ ₹ 5 ಲಕ್ಷದವರೆಗಿನ ವಾರ್ಷಿಕ ಆದಾಯ ಹೊಂದಿರುವವರ ತೆರಿಗೆಯನ್ನು ಶೇ.10ರಿಂದ ಶೇ.5ಕ್ಕೆ ಇಳಿಸಲಾಗಿತ್ತು. ಹೀಗಾಗಿ ಈ ಬಾರಿಯ ಜೇಟ್ಲಿ ಯಾವ ಘೋಷಣೆ ಮಾಡಲಿದ್ದಾರೆ  ಎಂಬ ಕುತೂಹಲ ಹುಟ್ಟಿದೆ.

ಮುಂದಿನ ವರ್ಷ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಜೆಟ್ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ಜನರ ನಿರೀಕ್ಷೆಯೂ ಹೆಚ್ಚಾಗಿದೆ. ಹಾಗಾದ್ರೆ ತೆರಿಗೆ ವಿಚಾರದಲ್ಲಿ ಜನ ಸಾಮಾನ್ಯನ ನಿರೀಕ್ಷೆಗಳೇನು ನೋಡೋಣ ಬನ್ನಿ…

  • ಉದ್ಯೋಗಿಗಳ ವೇತನದಲ್ಲಿ ಹಳೆ ಮಾದರಿಯ ವಿವಿಧ ತೆರಿಗೆ ಕಡಿತದ ಬದಲಿಗೆ ಗುಣಮಟ್ಟದ ಕಡಿತವನ್ನು ಮತ್ತೆ ಜಾರಿಗೆ ತರಬೇಕು. ಈ ವಿಧಾನದಲ್ಲಿ ಉದ್ಯೋಗಿಗಳ ವೇತನದಿಂದ ನಿರ್ದಿಷ್ಟ ಪ್ರಮಾಣದ ತೆರಿಗೆ ಕಡಿತವಾಗುತ್ತದೆ. ಹೀಗಾಗಿ ವಿವಿಧ ಕಾರಣಗಳಿಂದ ತೆರಿಗೆ ಕಡಿತದ ಬದಲಾಗಿ ನಿರ್ದಿಷ್ಟ ತೆರಿಗೆ ಕಡಿತ ಮಾಡಬೇಕು ಎಂಬುದು ಜನರ ನಿರೀಕ್ಷೆ. 2006-07ನೇ ಸಾಲಿನವರೆಗೂ ಈ ಪದ್ಧತಿ ಜಾರಿಯಲ್ಲಿತ್ತಾದರೂ ನಂತರ ಅದನ್ನು ತೆರವುಗೊಳಿಸಲಾಗಿತ್ತು. ಈ ಬಾರಿ ಮತ್ತೆ ಅದು ಜಾರಿಗೆ ಬರುವ ನಿರೀಕ್ಷೆ ಇದೆ.
  • ತೆರಿಗೆ  ಶ್ರೇಣಿ ಪುನಾರಚನೆ: ಜನ ಸಾಮಾನ್ಯರು ಹಾಗೂ ಸಣ್ಣ ಉದ್ದಿಮೆದಾರರಿಗೆ ನೆರವಾಗುವ ಉದ್ದೇಶದಿಂದ ₹ 2.5 ಲಕ್ಷದವರೆಗಿರುವ ತೆರಿಗೆ ವಿನಾಯಿತಿಯನ್ನು ₹3 ಲಕ್ಷಕ್ಕೆ ವಿಸ್ತರಿಸಬೇಕು ಎಂಬುದು ಜನರ ಬೇಡಿಕೆಯಾಗಿದೆ.
  • ವೈದ್ಯಕೀಯ ಭತ್ಯೆ: 1999ರಲ್ಲಿ ವಾರ್ಷಿಕವಾಗಿ ₹15 ಸಾವಿರದಷ್ಟು ಹಣ ಮಿತಿಯನ್ನು ವೈದ್ಯಕೀಯ ಖರ್ಚನ್ನು ತುಂಬಿಸಿಕೊಡಲು ನಿರ್ಧರಿಸಲಾಗಿತ್ತು. ಈಗ ಅದನ್ನು ಪ್ರತಿ ವರ್ಷಕ್ಕೆ ₹ 50 ಸಾವಿರಕ್ಕೆ ವಿಸ್ತರಿಸಬೇಕು.
  • ಮನೆ ಬಾಡಿಗೆ ಭತ್ಯೆ (ಎಚ್ಆರ್ ಎ) ವಿಸ್ತರಣೆ: ಭಾರತದನಾಲ್ಕು ಮಹಾನಗರಗಳಾದ ಮುಂಬೈ, ಕೋಲ್ಕತಾ, ದೆಹಲಿ ಹಾಗೂ ಚೆನ್ನೈನಲ್ಲಿ ಎಚ್ಆರ್ ಎಗಾಗಿ ತೆರಿಗೆಯಲ್ಲಿ ವಿನಾಯಿತಿ  ನೀಡಲಾಗುತ್ತಿದ್ದು. ಉಳಿದ ನಗರಗಳಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಬೆಂಗಳೂರು ಹಾಗೂ ಹೈದರಾಬಾದ್ ನಂತಹ ನಗರಗಳಿಗೂ ಈ ನಾಲ್ಕು ನಗರಗಳಲ್ಲಿನ ಬಾಡಿಗೆ ಪ್ರಮಾಣಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಪರಿಣಾಮ ಈ ಎಚ್ಆರ್ ಎಯನ್ನು ಇತರ ನಗರ ಪ್ರದೇಶಗಳಿಗೂ ವಿಸ್ತರಿಸಬೇಕು.
  • ರಜೆ ಪ್ರವಾಸ ಭತ್ಯೆ: ಸದ್ಯಯ ತೆರಿಗೆ ನೀತಿ ಪ್ರಕಾರ ಭಾರತದೊಳಗಿನ ಪ್ರವಾಸಕ್ಕೆ ನಾಲ್ಕು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಭತ್ಯೆನೀಡುವ ಅವಕಾಶವಿದೆ. ಈ ನೀತಿಯನ್ನು ತೆಗೆದು ಹಾಕಿ ಪ್ರತಿ ವರ್ಷಕ್ಕೆ ಒಂದೊಂದು ರಜೆ ಪ್ರವಾಸ ಭತ್ಯೆ ನೀಡಬೇಕು.

Leave a Reply