ಜೇಟ್ಲಿ ಲೆಕ್ಕ ಚುನಾವಣೆಗೆ ಪಕ್ಕಾ!

ಡಿಜಿಟಲ್ ಕನ್ನಡ ಟೀಮ್:

ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿಗೆ ಮನ್ನಣೆ, ರಕ್ಷಣೆ, ತೆರಿಗೆ, ಬ್ಯಾಂಕಿಂಗ್ ಬಹುತೇಕ ತಟಸ್ಥ ಇವು ಗುರುವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ 2018-19ನೇ ಸಾಲಿನ ಬಜೆಟ್ ಚಿತ್ರಣ.

ಜಿಎಸ್ಟಿ ಜಾರಿಯಿಂದ ತೆರಿಗೆದಾರರ ಸಂಖ್ಯೆ ಹೆಚ್ಚಿದ್ದರೂ ತೆರಿಗೆ ಪ್ರಮಾಣ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹವಾಗಿಲ್ಲ. ಜಿಎಸ್ಟಿ ಪ್ರಭಾವದಿಂದ ಆರ್ಥಿಕತೆ ಚೇತರಿಕೆಯ ಒತ್ತಡ ಒಂದುಕಡೆಯಾದರೆ, ಮತ್ತೊಂದು ಕಡೆ ಇಂಧನ ತೈಲ ಬೆಲೆ ಏರಿಕೆಯಿಂದ ಹಣದುಬ್ಬರದ ಭೀತಿ ಜೇಟ್ಲಿಗೆ ಸವಾಲಾಗಿದೆ. ಈ ಸವಾಲನ್ನು ಎದುರಿಸುತ್ತಲೇ ಮುಂಬರುವ ವಿವಿಧ ರಾಜ್ಯಗಳ ಚುನಾವಣೆ ಹಾಗೂ ಮುಂದಿನ ವರ್ಷದ ಕೇಂದ್ರ ಚುನಾವಣೆಗೆ ಪೂರಕವಾಗುವಂತಹ ಬಜೆಟ್ ಮಂಡಿಸಿ ತಮ್ಮ ಜಾಣ್ಮೆ ಪ್ರದರ್ಶಿಸಿದ್ದಾರೆ. ಕರ್ನಾಟಕದ ಚುನಾವಣೆಗೆ ಈ ಬಜೆಟ್ ಪೂರಕ ಅಲ್ಲ ಎನಿಸಿದರೂ ಈಶಾನ್ಯ ರಾಜ್ಯಗಳು ಸೇರಿದಂತೆ ಉಳಿದ ಚುನಾವಣೆಗೆ ಈ ಬಜೆಟ್ ಹೆಚ್ಚು ಸೂಕ್ತವಾಗುತ್ತವೆ.

ಹೆಚ್ಚು ಜನರನ್ನು ಖುಷಿ ಪಡಿಸುವ ಸಲುವಾಗಿ ಕೃಷಿ, ಆರೋಗ್ಯ ಮತ್ತು ಗ್ರಾಮಗಳ ಅಭಿವೃದ್ಧಿಗೆ ಜೇಟ್ಲಿ ಬಜೆಟ್ ಸಿಂಹಪಾಲು ನೀಡಿದೆ. ಇನ್ನು ಪ್ರತಿ ವರ್ಷ ಹೆಚ್ಚು ಸದ್ದು ಮಾಡುತ್ತಿದ್ದ ಮಿಲಿಟರಿ, ರೈಲ್ವೇ ಹಾಗೂ ತೆರಿಗೆ ವಿಚಾರಗಳು ಸುಮ್ಮನಾಗುವಂತೆ ಮಾಡಿದೆ. ಜೇಟ್ಲಿ ಬಜೆಟ್ ನ ಪ್ರಮುಖ ಅಂಶಗಳು ಹೀಗಿವೆ…

ತೆರಿಗೆ

 • ವೈಯಕ್ತಿಕ ತೆರಿಗೆ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
 • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಾರ್ಷಿಕ ಆದಾಯ 250ರ ವರೆಗೂ ಇರುವ ಕಂಪನಿಗಳ ತೆರಿಗೆ ಶೇ.30 ರಿಂದ ಶೇ.25ಕ್ಕೆ ಇಳಿಕೆ.
 • ವಾರ್ಷಿಕ 100 ಕೋಟಿ ವಹಿವಾಟಿನ ಕೃಷಿ ಉತ್ಪನ್ನ ಕಂಪನಿಗಳಿಗೆ ಶೇ.100ರಷ್ಟು ತೆರಿಗೆ ವಿನಾಯಿತಿ.
 • ಹಿರಿಯ ನಾಗರೀಕರಿಗೆ ವೈದ್ಯಕೀಯ ವಿಮಾ ತೆರಿಗೆ ವಿನಾಯಿತಿ 10 ಸಾವಿರದಿಂದ 50 ಸಾವಿರಕ್ಕೆ ವಿಸ್ತರಣೆ. ಹಾಗೂ ಇವರ ಆದಾಯದಲ್ಲಿ ಟಿಡಿಎಸ್ ಕಡಿತ ಇಲ್ಲ.
 • ಶಿಕ್ಷಣ ಸೆಸ್ ಶೇ.4ಕ್ಕೆ ಏರಿಕೆ.

ಸುಂಕ ಬದಲಾವಣೆಯಿಂದ ದುಬಾರಿ, ಅಗ್ಗದ ಪದಾರ್ಥಗಳು

 • ದುಬಾರಿ: ಕಾರು, ಬೈಕು, ಮೊಬೈಲ್, ಚಿನ್ನ, ಬೆಳ್ಳಿ, ತರಕಾರಿ, ಟಿವಿ, ಸಿನೆಮಾ, ಹೊಟೇಲ್, ವಜ್ರ, ಎಲೆಕ್ಟ್ರಾನಿಕ್ ವಸ್ತುಗಳು.
 • ಅಗ್ಗ: ಕಚ್ಚಾ ಗೊಡಂಬಿ, ಸೌರಶಕ್ತಿ ಗ್ಲಾಸ್, ಸೋಲಾರ್ ಪ್ಯಾನೆಲ್, ಚಪ್ಪಲಿ ಇತ್ಯಾದಿ.

ಕೃಷಿ:

 • ಕೃಷಿ ಮಾರುಕಟ್ಟೆ ನಿಧಿಗೆ 2 ಸಾವಿರ ಕೋಟಿ
 • ಕೃಷಿ ಬೆಳೆಗೆ 1.5 ಪಟ್ಟು ಕನಿಷ್ಠ ದರ
 • ಆಹಾರ ತಯಾರಿಕಾ ಘಟಕಕ್ಕೆ 14 ಸಾವಿರ ಕೋಟಿ
 • ಮೀನುಗಾರಿಕೆ,  ಪಶುಸಂಗೋಪನೆ, ಹೈನುಗಾರಿಕೆಗೆ ತಲಾ 10 ಸಾವಿರ ಕೋಟಿ.
 • ಆಪರೇಷನ್ ಗ್ರೀನ್ ಯೋಜನೆ 500 ಕೋಟಿ.
 • ಬಂಬೂ ಬೆಳೆಗೆ ಅವಕಾಶ ನೀಡಿ ಅದರ ಉತ್ತಜನಕ್ಕೆ 12 ಸಾವಿರ ಕೋಟಿ
 • ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
 • ಕೃಷಿ ಸಾಲಕ್ಕೆ 11 ಲಕ್ಷ ಕೋಟಿ ಗುರಿ

ಗ್ರಾಮೀಣ

 • 8 ಕೋಟಿ ಗೃಹಿಣಿಯರಿಗೆ ಉಚಿತ ಎಲ್ ಪಿಜಿ ಗ್ಯಾಸ್ ಸಂಪರ್ಕ
 • 4 ಕೋಟಿ ಬವರಿಗೆ ವಿದ್ಯುತ್ ಸಂಪರ್ಕ.
 • ಸ್ವಚ್ಛ ಭಾರತ ಯೋಜನೆಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ 2 ಕೋಟಿ ಶೌಚಾಲಯ ನಿರ್ಮಾಣ
 • ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 1 ಕೋಟಿ ಮನೆ ನಿರ್ಮಾಣ

ಶಿಕ್ಷಣ

 • ಡಿಜಿಟಲ್ ಶಿಕ್ಷಣಕ್ಕೆ ಒತ್ತು, ಬ್ಲ್ಯಾಕ್ ಬೋರ್ಡ್ ಬದಲಿಗೆ ಡಿಜಿಟಲ್ ಬೋರ್ಡ್.
 • ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೀಸಲು
 • ನವೋದಯ ಮಾದರಿಯಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ಶಾಲೆ.

ಆರೋಗ್ಯ

 • ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ವೈದ್ಯಕೀಯ ವಿಮೆ.
 • ಪ್ರತಿ 3 ಲೋಕಸಭಾ ಕ್ಷೇತ್ರಗಳಿಗೆ 1 ವೈದ್ಯಕೀಯ ಕಾಲೇಜು ಸ್ಥಾಪನೆ ಗುರಿ.
 • ಆಯುಷ್ಮಾನ್ ಭಾರತ ಕಾರ್ಯಕ್ರಮದಲ್ಲಿ 1.5 ಲಕ್ಷ ಆರೋಗ್ಯ ಕೇಂದ್ರ

ರೈಲ್ವೆ

 • ರೈಲ್ವೇಗಾಗಿ 1.48 ಲಕ್ಷ ಕೋಟಿ ಮೀಸಲು.
 • 2 ವರ್ಷಗಳಲ್ಲಿ ಅನಗತ್ಯ 4267 ಕ್ರಾಸಿಂಗ್ ನಿರ್ಮೂಲನೆ
 • ರೈಲ್ವೇ ನಿಲ್ದಾಣಗಳಲ್ಲಿ ಎಸ್ಕಲೇಟರ್.
 • ಮುಂಬೈ ರೈಲು ಸಂಪರ್ಕಕ್ಕೆ 11 ಸಾವಿರ ಕೋಟಿ.
 • ಬೆಂಗಳೂರು ಉಪ ನಗರ ಸಂಪರ್ಕಕ್ಕೆ 150 ಕಿ.ಮೀಗೆ  17 ಸಾವಿರ ಕೋಟಿ.
 • ರೈಲ್ವೇ ನಿಲ್ದಾಣಗಳಲ್ಲಿ ವೈಫೈ ಹಾಗೂ ಸಿಸಿಟಿವಿ ಅಳವಡಿಕೆ.

ಇತರೆ

 • ಭಾರತಮಾಲಾ ಯೋಜನೆಯಡಿ ದೇಶದಾದ್ಯಂತ 35 ಸಾವಿರ ಕಿ.ಮೀಟರ್ ಹೆದ್ದಾರಿಗೆ 5.35 ಲಕ್ಷ ಕೋಟಿ.
 • ಗಡಿ ಪ್ರದೇಶಗಳ ಸಂಪರ್ಕಕ್ಕೆ ಸುರಂಗ ರಸ್ತೆ ನಿರ್ಮಾಣ.
 • 100 ಸ್ಮಾರ್ಟ್ ಸಿಟಿಗಳ ಪೈಕಿ 99 ನಗರ ಆಯ್ಕೆ.
 • ವಿಮಾನ ಸಾಮರ್ಥ್ಯದಲ್ಲಿ 5 ಪಟ್ಟು ಹೆಚ್ಚಳಕ್ಕೆ ಗುರಿ ಮತ್ತು ವರ್ಷಕ್ಕೆ 1 ಬಿಲಿಯನ್ ಸಂಚಾರ ಗುರಿ.
 • 5 ಕೋಟಿ ಗ್ರಾಮೀಣ ಜನರಿಗೆ ಬ್ರಾಡ್ ಬ್ಯಾಂಡ್ ಸಂಪರ್ಕಕ್ಕಾಗಿ 5 ಲಕ್ಷ ವೈಫೈ ಸ್ಪಾಟ್ ನಿರ್ಮಾಣಕ್ಕೆ 10 ಸಾವಿರ ಕೋಟಿ
 • ಕಾರ್ಪೋರೇಟ್ ಕ್ಷೇತ್ರಕ್ಕೆ ಆಧಾರ್.
 • ಜವಳಿ ಉದ್ಯಮಕ್ಕೆ 7,148 ಕೋಟಿ ಅನುದಾನ.
 • ಈಶಾನ್ಯ ರಾಜ್ಯಗಳ ವಿವಿಧ ಕಾಮಗಾರಿಗಳಿಗೆ ಸುಮಾರು 2500ಕ್ಕೂ ಹೆಚ್ಚು ಅನುದಾನ.

Leave a Reply