ಮೋದಿ ಮೇಲೆ ಮಿತ್ರ ಪಕ್ಷಗಳ ಮುನಿಸು? ಶಿವಸೇನೆ ನಂತರ ಎನ್ಡಿಎ ಮೈತ್ರಿ ಬಗ್ಗೆ ಟಿಡಿಪಿ ಅಪಸ್ವರ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಗೆ ಬಾಕಿ ಉಳಿದಿರೋದು ಕೇವಲ ಒಂದು ವರ್ಷ ಮಾತ್ರ. ಈ ಸಮಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರೋ ಎನ್ಡಿಎ ಮಿತ್ರಪಕ್ಷಗಳಲ್ಲಿ ದಿನೇ ದಿನೇ ಬಿರುಕು ಹೆಚ್ಚುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ಅತ್ತ ಶಿವಸೇನೆ ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆಗೆ ಅಧಿಕಾರ ರಚಿಸಿದ್ದರೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹಿರಂಗ ಹೇಳಿಕೆ ಕೊಟ್ಟಿದೆ. ಇನ್ನು ಕೇಂದ್ರ ಸರ್ಕಾರದ ವಿರುದ್ಧ ಆಗಾಗ್ಗೆ ಗುಟುರು ಹಾಕುತ್ತಿದೆ. ಈ ಮಧ್ಯೆ ಕಳೆದ ಹತ್ತುದಿನಗಳಲ್ಲಿ ಎನ್ಡಿಎ ಮೈತ್ರಿಕೂಟದ ಮತ್ತೊಂದು ಪಕ್ಷ ಟಿಡಿಪಿ ಸಹ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಕೆಲ ದಿನಗಳ ಹಿಂದೆ ‘ಬಿಜೆಪಿಗೆ ನಮ್ಮ ಮೈತ್ರಿ ಬೇಡವೆಂದರೆ ಎನ್ಡಿಎನಿಂದ ಹೊರ ಬಂದು ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ’ ಎಂದು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಹಿರಂಗ ಹೇಳಿಕೆ ಕೊಟ್ಟಿದ್ದರು.

ಈಗ ಮತ್ತೆ ಅವರು ಕೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಾರಿ ಅವರ ಅಪಸ್ವರ ಕೇಳಿ ಬಂದಿರೋದು ಬಜೆಟ್ ವಿಚಾರವಾಗಿ. ಹೌದು, ಜೇಟ್ಲಿ ಬಜೆಟ್ ಕುರಿತಾಗಿ ಟಿಡಿಪಿ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೇಟ್ಲಿ ಬಜೆಟ್ ಮಂಡನೆಯಾಗುತ್ತಿದ್ದಂತೆ ನವದೆಹಲಿಯಲ್ಲಿರುವ ಸಂಸದರ ಜತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚಿಸಿದ್ದಾರೆ. ಟಿಡಿಪಿ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದವುಗಳು

  • ಆಂಧ್ರ ಪ್ರದೇಶ ಪುನರ್ ಸಂಘಟನಾ ಕಾಯ್ದೆ
  • ವಿಶಾಖಪಟ್ಟಣಕ್ಕೆ ರೈಲ್ವೇ ವಲಯ ನೀಡುವ ಭರವಸೆ
  • ನೂತನ ರಾಜಧಾನಿ ಅಮರಾವತಿಗೆ ಸ್ಥಾಪನೆಗೆ ಅನುದಾನ

ಈ ವಿಷಯಗಳು ಬಜೆಟ್ ನಲ್ಲಿ ಪ್ರಸ್ತಾಪವಾಗದೇ ಇರುವುದು ಟಿಡಿಪಿ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಪಿ ಸಂಸದ ಟಿಜಿ ವೆಂಕಟೇಶ್ ಹೇಳಿರುವುದಿಷ್ಟು…

‘ನಾವು ಯುದ್ಧವನ್ನು ಘೋಷಿಸುತ್ತೇವೆ. ನಮ್ಮ ಮುಂದೆ ಮೂರು ಆಯ್ಕೆಗಳಿವೆ. 1.ನಮ್ಮ ಬೇಡಿಕೆ ಈಡೇರುವವರೆಗೆ ಮತ್ತೆ ಪ್ರಯತ್ನಿಸುವುದು. 2.ನಮ್ಮ ಸಂಸದರು ರಾಜಿನಾಮೆ ನೀಡುವುದು. 3.ಎನ್ಡಿಎ ಜತೆಗಿನ ಮೈತ್ರಿ ಮುರಿದುಕೊಳ್ಳುವುದು. ಈ ಮೂರು ಆಯ್ಕೆಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕು ಎಂಬುದನ್ನು ಭಾನುವಾರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆಗಿನ ಸಭೆಯಲ್ಲಿ ನಿರ್ಧರಿಸಲಾಗುವುದು.’

Leave a Reply