ಹೆಣದ ಮೇಲಿನ ರಾಜಕೀಯ ಬಿಜೆಪಿಗೆ ಕಾಯಿಲೆಯಂತೆ ಅಂಟಿಕೊಂಡಿದ್ಯಾ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಚುನಾವಣೆಗಾಗಿ ಬಿಜೆಪಿ ನಿರಂತರವಾಗಿ ಬೆವರು ಹರಿಸುತ್ತಿದೆ. ಆದರೆ ರಾಜ್ಯದ ಜನರ ಒಲವು ಇನ್ನೂ ಕಾಂಗ್ರೆಸ್ ಪರವಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಕಂಗಾಲಾಗಿರುವ ಕಮಲಪಾಳಯ ಸಿಕ್ಕ ಸಿಕ್ಕ ಪ್ರಕರಣಗಳನ್ನು ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ಅಸ್ತ್ರವಾಗಿ ಬಳಸಿಕೊಳ್ಳಲು ಶುರು ಮಾಡಿಕೊಂಡಿದೆ. ಇದೀಗ ಸಂತೋಷ್ ಕೊಲೆ ಪ್ರಕರಣದಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದು, ನಾಳೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆ ನಡೆಸುವಂತೆ ಕರೆ ನೀಡಿದೆ. ಈ ಬಗ್ಗೆ ಸಭೆ ನಡೆಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹಿಂದೂಗಳ ಹತ್ಯೆ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ ಇಂತಹ ಘಟನೆ ನಡೆದಾಗ ವಿರೋಧ ಪಕ್ಷಗಳು ಪ್ರತಿಕ್ರಿಯಿಸೋದು ಸಾಮಾನ್ಯ. ರಾಜಧಾನಿಯಲ್ಲಿ ಒಂದು ಕೊಲೆ ನಡೆದಿರೋದನ್ನು ವಿರೋಧ ಪಕ್ಷವಾಗಿ ಸಮರ್ಥವಾಗಿ ಖಂಡಿಸೋದು ಒಳ್ಳೆಯದೇ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ಎಡವುತ್ತಿದೆ ಅಂತಾ ಟೀಕಿಸಿ ಸರ್ಕಾರವನ್ನು ಎಚ್ಚರಿಸುವುದು ಅದರ ಜವಾಬ್ದಾರಿ. ಆದರೆ ಒಂದು ಕೊಲೆಯನ್ನು ರಾಜಕೀಯವಾಗಿಬಳಸಿಕೊಳ್ಳಲು ಹಿಂದೂ ಧರ್ಮದವರ ಹತ್ಯೆಯಾಗ್ತಿದೆ, ಮುಸ್ಲಿಂ ಸಮುದಾಯಕ್ಕೆ ಸೇರಿದವರು ಹತ್ಯೆ ಮಾಡ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಹತ್ಯೆಕೋರ ಬೆಂಬಲಿಸುತ್ತಿದೆ ಎಂಬ ಹೇಳಿಕೆಗಳಿಗೆ ಮತೀಯ ಬಣ್ಣ ಬಳೆಯೋದು ಎಷ್ಟು ಸರಿ ಎಂಬುದೇ ಸದ್ಯ ಉದ್ಬವಿಸಿರೋ ಪ್ರಶ್ನೆ. ಬಿಜೆಪಿ ಅವರ ನಡೆ ನಿಜಕ್ಕೂ ಲಾಭವಾಗುತ್ತೋ ಬಿಡುತ್ತೋ ಆದರೆ ಅವರನ್ನು ಕೋಮುವಾದಿ ಎನ್ನುವವರ ವಾದಕ್ಕೆ ಮತ್ತಷ್ಟು ಪುಷ್ಠಿ ಸಿಗುವುದಂತೂ ಖಚಿತ.

ಇನ್ನು ಸಂತೋಷ್ ಕೊಲೆಗೆ ಕಾರಣ ನೋಡಿದರೆ ಅಲ್ಲಿ ಧರ್ಮ ದ್ವೇಷದ ಯಾವುದೇ ವಿಷಯ ಬರುವುದಿಲ್ಲ. ಜೆಸಿ ನಗರದ ಚಿನ್ನಪ್ಪ ಗಾರ್ಡನ್ ನಿವಾಸಿ ಸಂತೋಷ್ ಕೊಲೆ ನಡೆದಿದ್ದು ಗಾಂಜಾ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಬಂಧಿತರಾಗಿರುವ ನಾಲ್ವರು ಯುವಕರು, ಏರಿಯಾ ತುಂಬೆಲ್ಲಾ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ವಿಚಾರ ತಿಳಿದ ಸಂತೋಷ್ ಪ್ರಶ್ನೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಆರೋಪಿಗಳು ಸಂತೋಷ್ ಗೆ ಚಾಕು ಇರಿದು ಗಾಯಗೊಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಸಾವನ್ನಪ್ಪಿದ್ದಾರೆ. ಈ ಮಾತನ್ನು  ಸ್ವತಃ ಸಂತೋಷ್ ಸ್ನೇಹಿತರೇ ಹೇಳಿದ್ದಾರೆ. ಇಲ್ಲಿ ಗಾಂಜಾ ಮಾರುತ್ತಿದ್ದವರು ಯಾವುದೇ ಸಮುದಾಯಕ್ಕೆ ಸೇರಿರಲಿ, ಹತ್ಯೆಯಾದವ ಬೇರೊಂದು ಸಮುದಾಯಕ್ಕೆ ಸೇರಿರಲಿ ಇದನ್ನು ಎಲ್ಲರೂ ಖಂಡಿಸಬೇಕು. ಆದರೆ ಇದನ್ನೇ ಚುನಾವಣೆಗೆ ಬಳಸಿಕೊಳ್ಳಲು ಧರ್ಮಗಳ ನಡುವಣ ದ್ವೇಷ ಬಿತ್ತುವುದು ಸರಿಯಲ್ಲ. ಇದೇ ಕಾರಣಕ್ಕೆ ಬಿಜೆಪಿಯವರಿಗೆ ಹೆಣದ ಮೇ ರಾಜಕೀಯ ಮಾಡುವ ರೋಗ ಬಂದಿದೆಯೇ ಎಂಬ ಅನುಮಾನಗಳು ಮೂಡುತ್ತಿರೋದು.

Leave a Reply