ಕಾಂಗರೂಗಳನ್ನು ಮಟ್ಟಹಾಕಿ ದಾಖಲೆ ಬರೆದ ಭಾರತ ಕಿರಿಯರು! ಕಡೆಗೂ ದ್ರಾವಿಡ್ ಗೆ ಒಲಿದ ವಿಶ್ವಕಪ್

ಡಿಜಿಟಲ್ ಕನ್ನಡ ಟೀಮ್:

ಪ್ರಬಲ ಆಸ್ಚ್ರೇಲಿಯಾ ವಿರುದ್ಧ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಂಘಟಿತ ದಾಳಿ ನಡೆಸಿದ ಭಾರತ ತಂಡ ಕಿರಿಯರ ವಿಶ್ವಕಪ್ ಗೆದ್ದು, ನಾಲ್ಕನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಹೆಚ್ಚು ಬಾರಿ ಕಿರಿಯರ ವಿಶ್ವಕಪ್ ಗೆದ್ದ ದಾಖಲೆ ಬರೆದಿದೆ.

ನ್ಯೂಜಿಲೆಂಡ್ ನಲ್ಲಿ ನಡೆದ ಕಿರಿಯರ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 216 ರನ್ ಗಳಿಗೆ ಆಲೌಟ್ ಆಗಿತ್ತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ಕೇವಲ 2 ವಿಕೆಟ್ ನಷ್ಟಕ್ಕೆ 220 ರನ್ ದಾಖಲಿಸಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು.

ಭಾರತದ ಪರ ಆರಂಭಿಕ ಮನ್ಜೋತ್ ಕಾಲ್ರಾ ಅಮೋಘ ಶತಕ ಬಾರಿಸಿ ತಂಡ ಅನಾಯಾಸ ಜಯ ಸಾಧಿಸುವಂತೆ ಮಾಡಿದರು. 102 ಎಸೆತಗಳಲ್ಲಿ, 8 ಬೌಂಡರಿ, 3 ಸಿಕ್ಸರ್ ಗಳೊಂದಿಗೆ ಅಜೇಯ 101 ರನ್ ಗಳಿಸಿದರು. ಉಳಿದಂತೆ ನಾಯಕ ಪೃಥ್ವಿ ಶಾ 29, ಗಿಲ್ 31 ಹಾಗೂ ದೇಸಾಯಿ ಅಜೇಯ 47 ರನ್ ದಾಖಲಿಸಿದರು. ಭಾರತದ ಪರ ಬೌಲಿಂಗ್ ನಲ್ಲಿ ಮಿಂಚಿದ ಇಶಾನ್, ಶಿವ, ನೈಗರಕೋಟಿ ಮತ್ತು ಅಂಕುಶ್ ತಲಾ 2 ಹಾಗೂ ಶಿವಂ 1 ವಿಕೆಟ್ ಪಡೆದರು.

ಭಾರತದ ದಾಳಿಗೆ ನಲುಗಿದ ಆಸ್ಚ್ರೇಲಿಯಾ ಸುಲಭವಾಗಿ ಭಾರತದ ಮುಂದೆ ತಲೆ ಬಾಗಿತು.

ಭಾರತದ ಈ ಯಶಸ್ಸಿನ ಹಿಂದೆ ಕೋಚ್ ರಾಹುಲ್ ದ್ರಾವಿಡ್ ಕೊಡುಗೆ ಮಹತ್ವದ್ದಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಿರಿಯರ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಭಾರತದ ಭವಿಷ್ಯದ ತಾರೆಗಳನ್ನು ಸರಿಯಾದ ಮಾರ್ಗದರ್ಶನ ನೀಡುತ್ತಿದ್ದಾರೆ. ಆಟಗಾರನಾಗಿದ್ದಾಗ ವಿಶ್ವಕಪ್ ಗೆಲ್ಲಲಿಲ್ಲ ಎಂಬ ಕೊರಗು ಕೇವಲ ದ್ರಾವಿಡ್ ಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಇತ್ತು. ಕಳೆದ ಬಾರಿ ಕಿರಿಯರ ವಿಶ್ವಕಪ್ ನಲ್ಲೇ ಈ ಕೋರಗು ನೀಗುವ ನಿರೀಕ್ಷೆ ಇತ್ತು ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತು ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆ ಕೊರತೆ ಈ ಬಾರಿ ನೀಗಿದೆ.

Leave a Reply