ಇಕ್ಬಾಲ್ ಅನ್ಸಾರಿಗೆ ರವಿ ಪೂಜಾರಿ ವಾರ್ನಿಂಗ್?

ಡಿಜಿಟಲ್ ಕನ್ನಡ ಟೀಮ್:

ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಜೀವ ಬೆದರಿಕೆ ಕರೆಯೊಂದು ಬಂದಿದೆ. ಭೂಗತ ಲೋಕದಲ್ಲಿ ಮೆರೆಯುತ್ತಿರುವ ರವಿ ಪೂಜಾರಿ ಶಾಸಕ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಏಕವಚನದಲ್ಲಿಯೇ ಬೆದರಿಕೆ ಹಾಕಿರು ಪಾತಕಿ ರವಿ ಪೂಜಾರಿ, ಇನ್ನೊಮ್ಮೆ ಶ್ರೀರಾಮನ ಭಕ್ತರ ಬಗ್ಗೆ ವಿವಾದತ್ಮಾಕ ಹೇಳಿಕೆ ನೀಡಿದ್ರೆ, ಕೊಲೆ ಮಾಡುವುದಾಗಿ ಹೇಳಿದ್ದಾನೆ. ಜನವರಿ 30ರಂದು ಶಾಸಕರು ಮನೆಯಿಂದ ಹೊರ ಹೋಗಿದ್ದ ವೇಳೆ ಕರೆ ಬಂದಿದ್ದು, ಮನೆಯ ಕೆಲಸಗಾರರ ಫೋನ್ ನಲ್ಲಿ ಮಾತನಾಡಿದ್ದಾನೆ. ಈ ವೇಳೆ ಏರುದನಿಯಲ್ಲಿ ಮಾತನಾಡಲಾಗಿದೆ. ಶಾಸಕರ ಮನೆಯ ಪೊನ್ ಕರೆ ರೆಕಾರ್ಡ್ ಆಗಿದ್ದು, ಅದರ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.

ಕರೆ ಮಾಡಿದವ ನಿಜವಾಗಿಯೂ ರವಿ ಪೂಜಾರಿಯೇ ಎಂಬ ಅನುಮಾನ ಹುಟ್ಟುವುದು ಸಹಜ. ಕಾರಣ ತಂತ್ರಜ್ಞಾನದಲ್ಲಿ ಭಾರತವೂ ಸಾಕಷ್ಡು ಮುಂದುವರಿದಿದ್ದು, ಅಭಿವೃದ್ಧಿ ದೇಶಗಳ ಸಾಲಿನಲ್ಲಿ ನಿಲ್ಲುತ್ತಿದೆ. ಈ ಸಮಯದಲ್ಲಿ ತಂತ್ರಜ್ಞಾನದ ಸಹಾಯದಿಂದ ಯಾರಿಗೆ ಯಾರು ಬೇಕಾದರೂ ಇಂಟರ್ನೆಟ್ ಕಾಲ್ ಮಾಡಿ ಯಾರದೋ ಹೆಸರಿನಲ್ಲಿ ಬೆದರಿಕೆ ಹಾಕಬಹುದು. ಈ ರೀತಿಯ ಸಮಸ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಸೈಬರ್ ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ. ಕಂಪ್ಯೂಟರ್ ಐಪಿ ಅಡ್ರೆಸ್ ಮೂಲಕ ಪತ್ತೆ ಮಾಡಬಹುದಾದರೂ ಅಷ್ಟೊಂದು ಸುಲಭವಾದ ಕೆಲಸವಲ್ಲ ಅನ್ನೋದು ಸೈಬರ್ ವಿಭಾಗದ ಹಿರಿಯ ಅಧಿಕಾರಿಗಳ ಮಾತು. ಆದರೆ ಈ ಪ್ರಕರಣದಲ್ಲಿ ಸ್ವತಃ ರವಿ ಪೂಜಾರಿಯೇ ಕರೆ ಮಾಡಿರೋದು ಅನ್ನೋದು ಸತ್ಯ ಎನ್ನಲು ಕೆಲವೊಂದು ಆಧಾರಗಳಿವೆ.

ಜನವರಿ 30 ರ ಸಂಜೆ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಗುರುವಾರ ದೂರು ದಾಖಲು ಮಾಡಿದ್ದು, ಶುಕ್ರವಾರ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಈ ವೇಳೆ ರವಿ ಪೂಜಾರಿ ಜೊತೆ ಸಂಪರ್ಕ ಹೊಂದಿರುವ ಟಿವಿ ಚಾನೆಲ್ ಒಂದು ರವಿ ಪೂಜಾರಿಯ ಪ್ರತಿಕ್ರಿಯೆಗಾಗಿ ಸಂಪರ್ಕ ಮಾಡಿತ್ತು. ಅದರಲ್ಲಿ ಮಾತನಾಡಿದ ರವಿ ಪೂಜಾರಿ, ಹೌದು ನಾನೇ ಕರೆ ಮಾಡಿದ್ದು ಎಂದು ಹೇಳಿಕೊಂಡಿದ್ದಾನೆ‌. ಆದರೂ ಪೊಲೀಸರು ತನಿಖೆ ನಡೆಸಿ, ಧ್ವನಿ ರವಿ ಪೂಜಾರಿದ್ದ ಅಥವಾ ಹೆದರಿಸಲು ಇಕ್ಬಾಲ್ ಅನ್ಸಾರಿ ವಿರೋಧಿಗಳು ಮಾಡಿರೋದ ಅನ್ನೋ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕಿದೆ.

ಇನ್ನು ಆ ಕರೆ ಮಾಡಿರುವುದು ರವಿ ಪೂಜಾರಿ ಅಲ್ಲ ಎನ್ನುವುದಕ್ಕೂ ಕೆಲವು ಅಂಶಗಳು ಪುಷ್ಠಿ ನೀಡುತ್ತವೆ. ರವಿ ಪೂಜಾರಿ ಮೂಲತಃ ಮಂಗಳೂರು ಮೂಲದವನಾಗಿದಗದು, ಮಾತನಾಡುವ ಶೈಲಿಯಲ್ಲಿ ಕರಾವಳಿಯ ಸೊಗಡು ಕಾಣಿಸಬೇಕು. ಜೊತೆಗೆ ಈ ಹಿಂದೆ ಹಲವಾರು ಜನರಿಗೆ ಇದೇ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದು ಅಥವಾ ಹಫ್ತಾ ವಸೂಲಿಗಾಗಿ ಫೋನ್ ಮೂಲಕ ಹೆದರಿಸಿರೋದು ಗೊತ್ತಿದೆ. ಅಲ್ಲಿ ಸಾಕಷ್ಟು ಬಾರಿ ರವಿ ಪೂಜಾರಿ ಮಾತೃ ಭಾಷೆ ತುಳುವಿನಲ್ಲಿ ಮಾತನಾಡಿರೋದು ಸ್ಪಷ್ಟ. ಆದರೆ ಇಕ್ಬಾಲ್ ಅನ್ಸಾರಿ ಮನೆಗೆ ಫೋನ್ ಮಾಡಿದಾಗ ಮಾತನಾಡಿರೋದು ಹಿಂದಿಯಲ್ಲಿ. ಹೀಗಾಗಿ ಬೇರೆ ಯಾರೋ ಕರೆ ಮಾಡಿ ರವಿ ಪೂಜಾರಿ ಹೆಸರಲ್ಲಿ ಹೆದರಿಸಿದ್ರಾ ಅನ್ನೋ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಮತ್ತೆ ಇಕ್ಬಾಲ್ ಅನ್ಸಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಅನ್ನೋ ಕಾರಣಕ್ಕೆ ಹಿಂದಿಯಲ್ಲಿ ಮಾತನಾಡಿರುವ ಸಾಧ್ಯತೆಯೂ ಇದೆ  ಅನ್ನೋ ಮಾತುಗಳೂ ಕೇಳಿಬರುತ್ತಿವೆ. ಒಟ್ಟಾರೆ ಜೆಡಿಎಸ್ ನಿಂದ ಬಂಡಾಯವೆದ್ದು ಕಾಂಗ್ರೆಸ್ ಬಾಗಿಲಲ್ಲಿ ನಿಂತಿರುವ ಶಾಸಕ ಇಕ್ಬಾಲ್ ಅನ್ಸಾರಿಗೆ ಜೀವ ಬೆದರಿಕೆ ಒಡ್ಡಿರೋದು ಆತಂಕ ಸೃಷ್ಟಿಸಿರೋದಂತು ಸತ್ಯ.

Leave a Reply