ಕ್ರಿಮಿನಲ್ ವಿರುದ್ಧ ಯೋಗಿ ಸಮರ! ಉತ್ತರ ಪ್ರದೇಶದಲ್ಲಿ ಕಳೆದ ಹನ್ನೊಂದು ತಿಂಗಳಲ್ಲಿ ಆಗಿದೆ ಮಹತ್ವದ ಬದಲಾವಣೆ

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶದಲ್ಲಿ ಯೋದಿ ಆದಿತ್ಯನಾಥ್ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ  ರೌಡಿಗಳು, ಕ್ರಿಮಿನಲ್ ಗಳ ವಿರುದ್ಧ ದೊಡ್ಡ ಸಮರವೇ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ 4 ಎನ್ ಕೌಂಟರ್ ಗಳು, 8 ಮಂದಿ ಕ್ರಿಮಿನಲ್ ಗಳ ಬಂಧನವಾಗಿದೆ. ಇದು ಉತ್ತರ ಪ್ರದೇಶ ಪೊಲೀಸರು ಯೋಗಿ ಆದಿತ್ಯನಾಥರ ಸರ್ಕಾರದಲ್ಲಿ ಮಾಡುತ್ತಿರುವ ಸಾಧನೆಯ ಒಂದು ಸ್ಯಾಂಪಲ್!

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿ ಕುರ್ಚಿ ಅಲಂಕರಿಸಿದಾಗಿನಿಂದ ಇಲ್ಲಿಯವರೆಗೂ ಉತ್ತರ ಪ್ರದೇಶ ಪೊಲೀಸರು ಮಾಡಿರುವ ಸಾಧನೆ ಪಟ್ಟಿ ನೋಡಿದರೆ ನಿಮಗೆಲ್ಲರಿಗೂ ಆಶ್ಚರ್ಯವಾಗೋದರಲ್ಲಿ ಅನುಮಾನವೇ ಇಲ್ಲ. ಯೋಗಿ ಸರ್ಕಾರ ಕ್ರಿಮಿನಲ್ ಗಳ ವಿರುದ್ಧದ ಸಮರದ ಸಾಧನೆ ಏನು ಎಂಬುದು ಹೀಗಿವೆ (ಜನವರಿ ತಿಂಗಳ ಮೊದಲ ವಾರದವರೆಗಿನ ಅಂಕಿ ಅಂಶಗಳು)…

  • ಹತ್ತು ತಿಂಗಳ ಅವಧಿಯಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆಸಿರುವ ಎನ್ ಕೌಂಟರ್ ಗಳ ಸಂಖ್ಯೆ 940.
  • 3900 ಅಪರಾಧಿಗಳ ಬಂಧನ.
  • 31 ನಟೋರಿಯಸ್ ರೌಡಿಗಳ ಶೂಟೌಟ್.
  • 112 ಕ್ರಿಮಿನಲ್ ಗಳನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧನ.
  • 126 ಅಪರಾಧಿಗಳಿಂದ 1000 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ವಶ.
  • ಉತ್ತರ ಪ್ರದೇಶ ಪೊಲೀಸರ ಭಯಕ್ಕೆ ಬಿಹಾರ, ದೆಹಲಿ, ಹರಿಯಾಣ, ಉತ್ತರಾಖಂಡ ನ್ಯಾಯಾಲಯಗಳಲ್ಲಿ 80ಕ್ಕೂ ಹೆಚ್ಚು ಕ್ರಿಮಿನಲ್ ಗಳು ಶರಣಾಗತಿ.
  • 40 ರೌಡಿಗಳು ತಮಗೆ ಜಾಮೀನು ಸಿಕ್ಕಿದ್ದರೂ ಅದನ್ನು ರದ್ದುಗೊಳಿಸಿಕೊಂಡು ಮತ್ತೆ ಜೈಲು ಸೇರಿದ್ದಾರೆ.

ಹೀಗೆ ಯೋಗಿ ಆದಿತ್ಯನಾಥರ ಸರ್ಕಾರದಲ್ಲಿ ಪೊಲೀಸ್ ಇಲಾಖೆ ಭರ್ಜರಿ ಬೇಟೆ ನಡೆಸಿದ್ದು, ಪುಂಡ ಪೋಕರಿಗಳು ಬಾಲ ಮುದುರಿಕೊಂಡು ಬಿಲ ಸೇರಿಕೊಳ್ಳುವಂತೆ ಭಯ ಹುಟ್ಟಿಸಿದ್ದಾರೆ. ಇದರೊಂದಿಗೆ ಚುನಾವಣೆಗೂ ಮುನ್ನ  ಜನರಿಗೆ ನೀಡಿದ್ದ ಭರವಸೆಯಂತೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಜನರಿಗೆ ನೆಮ್ಮದಿಯ ವಾತಾವವರಣ ಕಲ್ಪಿಸಲು ಪ್ರಯತ್ನವಾಗುತ್ತಿದೆ.

ಯೋಗಿ ಆದಿತ್ಯನಾಥರ ಈ ಕಠಿಣ ನಿರ್ಧಾರದ ಹಿಂದೆ ಒಂದು ಲೆಕ್ಕಾಚಾರವೂ ಇದೆ. ಅದೇನೆಂದರೆ ಉತ್ತರ ಪ್ರದೇಶಕ್ಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯುವುದು. ಹೌದು ಇದೇ ತಿಂಗಳು ಉತ್ತರ ಪ್ರದೇಶ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುತ್ತಿದೆ. ಉತ್ತರ ಪ್ರದೇಶದಲ್ಲಿ ರೌಡಿಗಳು, ಕ್ರಿಮಿನಲ್ ಗಳನ್ನು ಮಟ್ಟಹಾಕಿ ಉತ್ತರ ಪ್ರದೇಶವನ್ನು ಸುರಕ್ಷಿತ ಪ್ರದೇಶವನ್ನಾಗಿ ಬಿಂಬಿಸುವುದು ಯೋಗಿ ಅವರ ಲೆಕ್ಕಾಚಾರ.

Leave a Reply