ಜೈಲು ಗಿರಾಕಿಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮೋದಿ ಭಾಷಣ; ಸಿದ್ದರಾಮಯ್ಯ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:
ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡಿರುವ ನರೇಂದ್ರ ಮೋದಿ ಅವರು ತಮ್ಮನ್ನು ಪ್ರಧಾನಿ ಸ್ಥಾನದಿಂದ ಯಡಿಯೂರಪ್ಪನವರ ಲೆವಲ್ಗೆ ಕುಗ್ಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯ ಗೌರವ-ಘನತೆಗೆ ತಕ್ಕಂತೆ ಮಾತಾಡಿಲ್ಲ. ಬದಲಿಗೆ ಯಡಿಯೂರಪ್ಪನವರ ಮಟ್ಟಕ್ಕೆ ಇಳಿದು ಮಾತಾಡಿದ್ದಾರೆ. ರಾಜ್ಯ ಸರಕಾರದ ಮೇಲೆ ಅವರು ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ರಾಜ್ಯ ಸರಕಾರದ ವಿರುದ್ಧ ಪಿತೂರಿ ಮಾಡುವ ಮಟ್ಟಕ್ಕೆ ಅವರು ಇಳಿಯಬಾರದಿತ್ತು. ಅವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮದವರಿಗೆ ಸೋಮವಾರ ತಿಳಿಸಿದರು. ಅವರು ಹೇಳಿದ್ದಿಷ್ಟು:
‘ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ ಎಂದು ಮೋದಿ ಹೇಳಿದ್ದಾರೆ. ಅದೆಲ್ಲ ಸುಳ್ಳು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಅಪರಾಧ ಪ್ರಕರಣಗಳ ಜತೆ ತುಲನೆ ಮಾಡಿ ನೋಡಲಿ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಅಪರಾಧಗಳ ಪಟ್ಟಿಯಲ್ಲಿ ಮೇಲಿವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ತಾನ, ಮಹಾರಾಷ್ಟ್ರ ಗುಜರಾತ್, ಹರಿಯಾಣ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ.’
‘ಕೋಮು ಹಿಂಸಾಚಾರ ಕರ್ನಾಟಕದಲ್ಲಿ ಹೆಚ್ಚು ಎಂದು ಹೇಳಿದ್ದಾರೆ. ಆದರೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಗೋದ್ರಾ ಹತ್ಯಾಕಾಂಡದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸತ್ತರು. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಹ್ರಾಬುದ್ದಿನ್ ಎನ್ಕೌಂಟರ್ ಪ್ರಕರಣದಲ್ಲಿ ಗಡೀಪಾರಾಗಿದ್ದರು. ಇದನ್ನೆಲ್ಲ ಮೋದಿ ಹೇಗೆ ಮರೆತರು?
‘ಕರ್ನಾಟಕದಲ್ಲಿ ಹತ್ತು ಪರ್ಸೆಂಟೇಜ್ ಕಮಿಷನ್ ಪಡೆವ ಸರಕಾರವಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ದಾಖಲೆ ಕೊಟ್ಟು ಮಾತಾಡಲಿ. ಸುಮ್ಮನೆ ಪುಂಗಿ ಊದುವುದು ಬೇಡ. ಭ್ರಷ್ಟಾಚಾರದ ಬಗ್ಗೆ ಇಷ್ಟೆಲ್ಲ ಕಾಳಜಿ ತೋರುವ ಮೋದಿ ತಾವು ಅಧಿಕಾರದಲ್ಲಿದ್ದ ಗುಜರಾತ್ ನಲ್ಲಿ ಲೋಕಾಯುಕ್ತ ಸಂಸ್ಥೆ ಏಕೆ ತೆರೆಯಲಿಲ್ಲ. ಪ್ರಧಾನಿಯಾಗಿರುವ ಮೂರೂವರೇ ವರ್ಷದಲ್ಲಿ ಲೋಕಪಾಲರನ್ನೇಕೆ ನೇಮಕ ಮಾಡಲಿಲ್ಲ’.
‘ಮಹದಾಯಿ ವಿಚಾರದಲ್ಲಿ ಅನೇಕ ಬಾರಿ ಪತ್ರ ಬರೆದಿದ್ದೇನೆ. ಅವಕಾಶ ಕೊಟ್ಟರೆ ಮತ್ತೊಮ್ಮೆ ಸರ್ವಪಕ್ಷ ನಿಯೋಗ ಕರೆದೊಯ್ಯುತ್ತೇನೆ. ಆದರೆ ವಿವಾದ ಬಗೆಹರಿಸಲು ಅವರಿಗೆ ಮನಸ್ಸಿಲ್ಲ. ಎರಡು ತಿಂಗಳಿಂದ ಹೋರಾಟ ನಡೆಯುತ್ತಿದ್ದರೂ ಈ ಬಗ್ಗೆ ತುಟಿ ಬಿಚ್ಚಿಲ್ಲ. ಕರ್ನಾಟಕದ ಬಗ್ಗೆ ಇವರಿಗೆಷ್ಟು ಕಾಳಜಿ ಇದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.’
‘ನರೇಂದ್ರ ಮೋದಿ ಅವರು ಇನ್ನೂ ನೂರು ಬಾರಿ ಕರ್ನಾಟಕಕ್ಕೆ ಬರಲಿ, ಅಮಿತ್ ಶಾ ಇಲ್ಲೇ ಝಾಂಡಾ ಹೂಡಿ ಪ್ರಚಾರ ನಡೆಸಲಿ. ಆದರೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ಸೇ. ಇದು ನೂರಕ್ಕೆ ನೂರರಷ್ಟು ಸತ್ಯ.’

Leave a Reply