ಬಿಜೆಪಿ-ಓವೈಸಿ ಒಪ್ಪಂದಕ್ಕಿಂತ ಚೆಂದ ಕಾಂಗ್ರೆಸ್ ಹಿಂದುತ್ವ!

ಔದುಂಬರಾಣಿ ಪುಷ್ಪಾಣಿ
ಶ್ವೇತವರ್ಣಂ ಚ ವಾಯಸಂ
ಮತ್ಸ್ಯಪಾದಂ ಜಲೇ ಪಶ್ಚೇತ್
ನ ನಾರೀ ಹೃದಯಂ ಸ್ಥಿತಃ!

ಈ ಮೇಲ್ಕಂಡ ಸಂಸ್ಕೃತ ಶ್ಲೋಕದ ಅರ್ಥ- ‘ಅತ್ತಿ ಮರದಲ್ಲಿ ಹೂವನ್ನು ಕಾಣಬಹುದು, ಬಿಳಿ ಕಾಗೆಯನ್ನೂ ನೋಡಬಹುದು, ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನೂ ಪತ್ತೆ ಮಾಡಬಹುದು, ಆದರೆ ನಾರಿ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.’

ಈ ಶ್ಲೋಕ ಬರೆದವರಿಗೆ ಅದ್ಯಾವ ಅನುಭವದ ಪ್ರೇರಣೆ ಆಗಿತ್ತೋ, ಅದ್ಯಾವ ಉದಾಹರಣೆ ಸಿಕ್ಕಿತ್ತೋ ಗೊತ್ತಿಲ್ಲ. ಏಕೆಂದರೆ ಚಿತ್ತಚಾಂಚಲ್ಯಕ್ಕೆ ಲಿಂಗಭೇದ ಎಂಬುದು ಇಲ್ಲ. ಅದು ಯಾರೊಬ್ಬರ ಸ್ವತ್ತೂ ಅಲ್ಲ. ಆದರೆ ಇದನ್ನು ಬರೆದವರು ಈಗೇನಾದರೂ ಬದುಕಿದ್ದಿದ್ದರೆ ಖಂಡಿತವಾಗಿಯೂ ‘ನಾರೀ’ ಜಾಗದಲ್ಲಿ ‘ರಾಜಕಾರಣಿ’ಯನ್ನು ತಂದು ಕೂರಿಸುತ್ತಿದ್ದುದು ಮಾತ್ರ ಸುಳ್ಳಲ್ಲ!

ನಿಜ, ರಾಜಕಾರಣಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಗೋಸುಂಬೆ ಕ್ಷಣಕ್ಷಣಕ್ಕೆ ಬದಲಿಸುವ ಬಣ್ಣ ಪತ್ತೆ ಮಾಡಿಬಿಡಬಹುದು. ಆದರೆ ಈ ರಾಜಕಾರಣಿಗಳ ಬಣ್ಣ ಕಂಡು ಹಿಡಿಯಲು ಆಗುವುದಿಲ್ಲ. ಬಿಳಿಯಾಗಿ ಕಂಡವರು ಮರುಕ್ಷಣವೇ ಕಪ್ಪಾಗಿ ಗೋಚರಿಸುತ್ತಾರೆ. ನೀಲಿಯಾಗಿ ಕಂಡವರು, ಇನ್ನೇನು ನೀವು ನೀಲಿ ಎಂದು ಮನಸ್ಸಿನಲ್ಲಿ ಒಪ್ಪಿಟ್ಟುಕೊಳ್ಳಬೇಕು ಎನ್ನುವಷ್ಟರಲ್ಲಿ ಕೆಂಪಾಗಿ ಪರಿವರ್ತಿತರಾಗಿರುತ್ತಾರೆ. ಮತದಾರರ ಕಣ್ಣು ಮತ್ತು ಮನಸ್ಸು ಎರಡನ್ನೂ ಏಕಕಾಲಕ್ಕೆ ವಂಚಿಸುವ ತಂತ್ರವಿದ್ಯೆ ಅವರಿಗೆ ಕರತಲಾಮಕ.

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಪಕ್ಷ ರಾಜಕೀಯ ನಾನಾ ತಿರುವುಗಳಿಗೆ ಸಾಕ್ಷಿಯಾಗುತ್ತಿದೆ. ಅವುಗಳ ತತ್ವ, ಸಿದ್ಧಾಂಂತ,ಮೂಡಿಸಿರುವ ನಂಬಿಕೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ.

ಯಾರನ್ನೂ ಯಾವ ಕಣ್ಣಿಂದ ನೋಡಬೇಕು ಎಂಬುದೇ ತಿಳಿಯುತ್ತಿಲ್ಲ. ಎಲ್ಲರೂ ಒಂದೇ ರೀತಿ ಗೋಚರಿಸುವುದರಿಂದ ತಮಗೇನಾದರೂ ಕಾಮಾಲೆ ಕಾಯಿಲೆ ಬಡಿದುಕೊಂಡಿದೆಯೋ ಎಂಬ ಅನುಮಾನ ಮತದಾರರನ್ನೇ ಕಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯ ಮುಸ್ಲಿಂ ವೋಟ್ ಬ್ಯಾಂಕ್ ಸುತ್ತ ನಾನಾ ಪಕ್ಷಗಳು ಕಟ್ಟುತ್ತಿರುವ ರಾಜಕೀಯ ಅಟಾಟೋಪದ ಕೊಡುಗೆ ಇದು.

ಭಾರತ ರಾಜಕಾರಣದಲ್ಲಿ ಪಾರಂಪರಿಕ ನಂಬಿಕೆಯೊಂದಿದೆ. ಯಾವತ್ತಿಗೂ ಮುಸ್ಲಿಮರು ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಎಂಬುದು. ಇಲ್ಲಿ ಆ ರಾಜ್ಯ, ಈ ರಾಜ್ಯ ಎಂಬ ಬೇಧವಿಲ್ಲ. ಎಲ್ಲೆಡೆಯೂ ಇದೇ ನೆರಳು. ಕಾಲ ಬದಲಾದರೂ, ರಾಜಕೀಯ ಕಾಲುವೆಯಲ್ಲಿ ಹತ್ತಾರು ಸರಕಾರಗಳು ಹರಿದು ಹೋದರೂ ಆ ನಂಬುಗೆ ಮಾತ್ರ ಇಂದಿಗೂ ಬದಲಾಗಿಲ್ಲ. ಆದರೆ ವಸ್ತುಸ್ಥಿತಿಯೇ ಬೇರೆ. ಇವತ್ತು ಮುಸ್ಲಿಮರು ಯಾವುದೇ ಒಂದು ಪಕ್ಷದ ಆಸ್ತಿಯಾಗಿ ಉಳಿದಿಲ್ಲ. ಹಾಗೆಂದು ಅವರು ಯಾರಿಗೂ ಬರೆದುಕೊಟ್ಟಿಲ್ಲ. ರಾಜಕೀಯ ವರಸೆಗಳು ಬದಲಾದಂತೆ ಅವರೂ ಬದಲಾಗಿದ್ದಾರೆ. ರಾಜಕೀಯ ಪಕ್ಷಗಳೂ ಅವರನ್ನು ಬದಲಿಸಿವೆ. ಅವರೂ ರಾಜಕೀಯ ಪಕ್ಷಗಳ ನಂಬಿಕೆ ಬದಲಿಸಿದ್ದಾರೆ. ಅನುಕೂಲಸಿಂಧು ಎಂಬುದು ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿ ಕೂರಿಸಿದೆ. ಕಾಲಕಾಲಕ್ಕೆ ಏರಿಳಿತ ಕಂಡರೂ, ಇಬ್ಬರೂ ಅದರ ಪಾಲುದಾರರಾಗಿರುವುದರಿಂದ ಮೇಲುಗೈ ಎಂಬುದು ಯಾರಿಗೂ ದಕ್ಕಿಲ್ಲ. ಒಬ್ಬರನ್ನು ಮತ್ತೊಬ್ಬರು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದೇ ಇಂದಿನ ರಾಜಕೀಯ ವೈಶಿಷ್ಟ್ಯ.

ಭಾರತ ಮತ್ತು ಹಿಂದೂಗಳನ್ನು ನಿಂದಿಸಿಕೊಂಡೇ ತನ್ನದೇ ಆದ ರಾಜಕೀಯ ನೆಲೆ ಕಂಡುಕೊಂಡಿರುವ ಅಖಿಲ ಭಾರತ ಮಜ್ಲೀಸೆ ಇತ್ತೆಹದುಲ್ ಮುಸ್ಲಿಮೀನ್ (ಏಐಎಂಐಎಂ) ಪಕ್ಷದ ಅಧ್ಯಕ್ಷ, ಸಂಸದ ಅಸಾದ್ದೀನ್ ಓವೈಸಿ ಈಗ ದೇಶಾದ್ಯಂತ ಪಕ್ಷ ಹಾಗೂ ಕೋಮು ಆಧರಿತ ವೈರುಧ್ಯಗಳಿಗೆ ಚರ್ಚೆಯ ವಸ್ತುವಾಗಿದ್ದಾರೆ. ಅವರ ಪಕ್ಷವನ್ನು ಸಂಕ್ಷಿಪ್ತವಾಗಿ ‘ಮಿಮ್’ ಎಂದೇ ಕರೆಯಲಾಗುತ್ತದೆ. ಉತ್ತರ ಪ್ರದೇಶ, ತೆಲಂಗಣ, ಬಿಹಾರ, ತಮಿಳುನಾಡು, ಮಹಾರಾಷ್ಟ್ರದಿಂದ ಹಿಡಿದು ಇದೀಗ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದವರೆಗೆ ರಾಜಕೀಯ ತಲ್ಲಣಗಳಿಗೆ ಕಾರಣರಾಗಿದ್ದಾರೆ. ದೇಶದ್ರೋಹಿ ಎಂಬ ಪಟ್ಟ ಹೊತ್ತಿದ್ದರೂ, ಹಿಂದೂಗಳ ಪರಮನಿಂದಕನಾದರೂ ಹಿಂದುತ್ವ ಆಧರಿತ ಬಿಜೆಪಿ ಜತೆ ಒಳಸಖ್ಯವಿದೆ ಎಂಬ ಆರೋಪ ಈ ರಾಜಕೀಯ ತಲ್ಲಣದ ಮೂಲಬಿಂದು. ಒಂದು ಕಡೆ ಬಿಜೆಪಿ ಕಾರ್ಯಕರ್ತರಿಗೂ ಇದನ್ನು ಕನಸಲ್ಲೂ ಆರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನೊಂದೆಡೆ ಮುಸ್ಲಿಂ ಓಲೈಕೆ ರಾಜಕಾರಣದ ಗುತ್ತಿಗೆ ಹಿಡಿದಂತೆ ವರ್ತಿಸುತ್ತಿದ್ದ ಕಾಂಗ್ರೆಸ್ ಮುಖಂಡರಂತೂ ಹಾವು ತುಳಿದವರಂತೆ ಹೌಹಾರಿ ಹೋಗಿದ್ದಾರೆ.

ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಬಂದಿರುವ ಓವೈಸಿ ನೇತೃತ್ವದ ಮಿಮ್ 2014 ರ ತೆಲಂಗಣ ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇಕಡಾ 3.8 ರಷ್ಟನ್ನು ಬುಟ್ಟಿಗೆ ಹಾಕಿಕೊಳ್ಳುವುದರ ಜತೆಗೆ ಏಳು ಸ್ಥಾನಗಳನ್ನು ಗೆದ್ದಿತು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎರಡು ಸೀಟುಗಳನ್ನು ಗೆದ್ದಿತು. ಉತ್ತರ ಪ್ರದೇಶ, ಬಿಹಾರದಲ್ಲಿ ಖಾತೆ ತೆರೆಯಲು ಆಗದಿದ್ದರೂ ಭಾರೀ ಪ್ರಮಾಣದಲ್ಲಿ ಮುಸ್ಲಿಂ ಮತಗಳನ್ನು ಕಬಳಿಸಿ ಕಾಂಗ್ರೆಸ್ ಗೆಲುವಿಗೆ ಮುಳುವಾಯಿತು. ಉತ್ತರ ಪ್ರದೇಶದಲ್ಲಂತೂ ಮುಸ್ಲಿಂ ಸಮುದಾಯ ಹೆಚ್ಚಿರುವ ಕಡೆಯೂ ಬಿಜೆಪಿಯೇ ಗೆದ್ದು ಕಾಂಗ್ರೆಸ್ ಮುಗುಚಿಕೊಳ್ಳಲು ಓವೈಸಿ ಪಕ್ಷದ ಮುಸ್ಲಿಂ ಮತಬೇಟೆಯೇ ಪ್ರಮುಖ ಕಾರಣ. ಮಹಾರಾಷ್ಟ್ರ, ಬಿಹಾರದಲ್ಲೂ ಮಿಮ್ ಮತಕಬಳಿಕೆ ಹೊಡೆತಕ್ಕೆ ಹಲವೆಡೆ ಕಾಂಗ್ರೆಸ್ ಸೊಂಟ ಮುರಿದುಕೊಂಡು ಬಿತ್ತು. ಉತ್ತರ ಪ್ರದೇಶ ಚುನಾವಣೆ ಫಲಿತಾಂಶವನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ ನಂತರ ಓವೈಸಿ ಮತ್ತು ಬಿಜೆಪಿ ನಡುವೆ ರಹಸ್ಯ ಒಪ್ಪಂದ ಏರ್ಪಟ್ಟಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡಿತ್ತು. ಆದರೆ ಮಹಾರಾಷ್ಟ್ರದಲ್ಲೂ ಅದೇ ತೆರನ ರಾಜಕೀಯ ಚಿತ್ರ ಮರುಕಳಿಸಿದ ನಂತರ ಅದೀಗ ಬಹಿಂರಗ ಸತ್ಯ ಎಂಬಲ್ಲಿಗೆ ಬಂದು ನಿಂತಿದೆ. ಮಿಮ್ ಸ್ಪರ್ಧಿಸಿದ ಬಹುತೇಕ ಕಡೆ ಕಾಂಗ್ರೆಸ್ ಮಲಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದು ಬೀಗಿದೆ. ತನ್ನ ಸ್ಪರ್ಧೆಯಿಂದ ಬಿಜೆಪಿಗೆ ಎಷ್ಟು ಲಾಭವಾಯಿತು, ಕಾಂಗ್ರೆಸ್ಸಿಗೆ ಎಷ್ಟು ನಷ್ಟವಾಯಿತು ಎಂಬುದು ತನಗೆ ಬೇಡದ ವಿಚಾರ. ಮತ ವಿಭಜನೆ ತನ್ನ ಉದ್ದೇಶವಲ್ಲ. ಸ್ಪರ್ಧೆಯಷ್ಟೇ ಮುಖ್ಯ. ಯಾರಿಗೆ ಏನಾದರೆ ತನಗೇನಾಗಬೇಕು. ತ್ರಿವಳಿ ತಲಾಖ್ ನಿಷೇಧ ವಿಧೇಯಕವನ್ನು ಕಾಂಗ್ರೆಸ್ ಬೆಂಬಲಿಸಿದೆ. ಮುಸ್ಲಿಂ ಸಮುದಾಯದ ಬಗ್ಗೆ ಅದಕ್ಕೆ ಕಾಳಜಿ ಇದಿದ್ದರೆ ಅದನ್ನು ವಿರೋಧಿಸಬೇಕಿತ್ತು. ಅಲ್ಪಸಂಖ್ಯಾತರನ್ನು ನಂಬಿಸಿ ರಾಜಕೀಯ ಬೇಳೆ ಬೇಯಿಸಿಕೊಂಡು ಬಂದಿದ್ದ ಕಾಂಗ್ರೆಸ್ ನಿಜರೂಪ ಏನೆಂಬುದು ಇಲ್ಲಿ ಬಹಿರಂಗವಾಗಿದೆ ಎಂಬ ಮಿಮ್ ಮುಖಂಡರ ಮಾತು ಅವರ ಅಂತರಂಗದ ಹಿಡಿಕೆ ಯಾರ ಕೈಯಲ್ಲಿದೆ ಎಂಬುದಕ್ಕೆ ಪರೋಕ್ಷ ಸಾಕ್ಷಿ!

ಕಾಂಗ್ರೆಸ್ ಅಧಿಕಾರದಲ್ಲಿರುವ ಅತಿದೊಡ್ಡ ರಾಜ್ಯ ಕರ್ನಾಟಕ. ಇನ್ನು ಮೂರು ತಿಂಗಳ ಅಸುಪಾಸಿನಲ್ಲಿ ವಿಧಾನಸಬೆ ಚುನಾವಣೆ ನಡೆಯಲಿದೆ. ಕರ್ನಾಟಕದ 60 ಕ್ಕೂ ಹೆಚ್ಚು ಕಡೆ ಮಿಮ್ ಕಣಕ್ಕಿಳಿಸಲು ಓವೈಸಿ ಸಿದ್ಧತೆ ನಡೆಸಿದೆ. ಈಗಾಗಲೇ 28 ವಿಧಾನಸಭೆ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ. ಉಳಿದವುಗಳನ್ನು ಗುರುತಿಸಲಾಗುತ್ತಿದೆ. ಮುಸ್ಲಿಂ ಸಮುದಾಯ ಹೆಚ್ಚಿರುವ ಕ್ಷೇತ್ರಗಳನ್ನೇ ಹುಡುಕಿ, ಹುಡುಕಿ ಅಖೈರು ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ರಾಷ್ಟ್ರ ಹಾಗೂ ರಾಜ್ಯ ಮುಖಂಡರ ತಳಮಳಕ್ಕೆ ಕಾರಣವಾಗಿದೆ. ಜತೆಗೆ ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ಕಾಂಗ್ರೆಸ್ ಜತೆ ಜಿದ್ದಿಗೆ ಬಿದ್ದಿದ್ದ ಜೆಡಿಎಸ್ ನಿದ್ದೆಯನ್ನೂ ಕೆಡಿಸಿದೆ.

ನಿಜ, ಸಮಾಜ ಕಲ್ಯಾಣ ಇಲಾಖೆ ಕಳೆದ ವರ್ಷ ಅನಧಿಕೃತವಾಗಿ ಬಿಡುಗಡೆ ಮಾಡಿರುವ ಜಾತೀವಾರು ಜನಗಣತಿ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 12 ರಷ್ಟು ಮುಸ್ಲಿಂ ಸಮುದಾಯದವರೇ ಇದ್ದಾರೆ. ಪರಿಶಿಷ್ಟರು ಶೇಕಡಾ 18 ರಷ್ಟು ಅಂದರೆ 1.26 ಕೋಟಿ ಮಂದಿ ಇದ್ದಾರೆ. ಅವರ ನಂತರದ ಸ್ಥಾನ ಮುಸ್ಲಿಮರದು. ಅಂದರೆ 76 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರಿಬ್ಬರ ನಂತರದ ಸ್ಥಾನದಲ್ಲಿ ಲಿಂಗಾಯತರು ಶೇಕಡಾ 9.6 ಹಾಗೂ ಒಕ್ಕಲಿಗರು ಶೇಕಡಾ 8 ರಷ್ಟು ಇದ್ದಾರೆ. ತನ್ನ ಬರವಣಿಗೆಗಳ ಮೂಲಕ ಮುಸ್ಲಿಂ ಮತಾಂಧತೆ ವಿರುದ್ಧ ಹೋರಾಡಿದ ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್ ಹಾಗೂ ಭಾರತೀಯ ಮೂಲದ ಬ್ರಿಟನ್ ಲೇಖಕ ಸಲ್ಮಾನ್ ರಶ್ದಿ ವಿರುದ್ಧ ಫತ್ವಾ ಹೊರಡಿಸಿದ್ದೂ ಅಲ್ಲದೇ, ಹೈದರಾಬಾದ್ ಗೆ ಬಂದಿದ್ದ ತಸ್ಲೀಮಾ ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದ ಓವೈಸಿ ಬಳಗದ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಒಂದು ರೀತಿ ಕೋಮುಪ್ರೀತಿ ಅರಳಿರುವುದು ಸುಳ್ಳಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು ರಕ್ಷಕ ಹಾಗೂ ಪ್ರತಿಪಾದಕ ಎಂಬ ಕಾರಣಕ್ಕೆ. ಅದು ತೆಲಂಗಣ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಚುನಾವಣೆಗಳಲ್ಲಿ ಓವೈಸಿ ಪಕ್ಷಕ್ಕೆ ಬಿದ್ದಿರುವ ಮತಗಳ ಪ್ರಮಾಣ ಈ ಕೋಮು ವ್ಯಾಮೋಹಕ್ಕೆ ಕನ್ನಡಿ ಹಿಡಿದಿದೆ. ಮೊದಲಿಗೆ ಪ್ರಾದೇಶಿಕ ಪಕ್ಷದ ಸ್ಥಾನಮಾನ ಪಡೆದಿದ್ದ ಮಿಮ್ ಇದೀಗ ರಾಷ್ಟ್ರೀಯ ಪಕ್ಷವಾಗುವತ್ತ ದಾಪುಗಾಲು ಹಾಕಿದೆ. ಹೈದರಾಬಾದ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ಅಭ್ಯರ್ಥಿ ವಿರುದ್ಧ ಮಿಮ್ ನ ಹಿಂದೂ ಅಭ್ಯರ್ಥಿ ಕಣಕ್ಕಿಳಿಸಿ ಗೆದ್ದಿರುವುದೂ ಉಂಟು. ಅಲ್ಲದೇ ಮಿಮ್ ಹಿಂದೂ ಅಭ್ಯರ್ಥಿಗಳೂ ಮೇಯರ್ ಕೂಡ ಆಗಿದ್ದಾರೆ. ಇಂಥ ಹಿಂದೂ-ಮುಸ್ಲಿಂ ಸಮೀಕರಣವೂ ಓವೈಸಿಯಲ್ಲುಂಟು. ಹೀಗಾಗಿ ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಅಂಥವರ ಪಕ್ಷ ಕರ್ನಾಟಕದಲ್ಲಿ 60 ಕ್ಕೂ ಹೆಚ್ಚು ಕಡೆ ಕಣಕ್ಕಿಳಿಯುತ್ತದೆ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಲವಾಗಿ ಪ್ರತಿಪಾದಿಸುತ್ತಿರುವ ‘ಅಹಿಂದ’ದ ಒಂದು ಭಾಗವಾಗಿರುವ ಅಲ್ಪಸಂಖ್ಯಾತರ ಮತಗಳನ್ನು ಅತಿಯಾಗಿ ನೆಚ್ಚಿಕೊಂಡಿರುವ ಕಾಂಗ್ರೆಸ್ಸಿಗೆ ಆತಂಕ ತರದೇ ಇರುತ್ತದೆಯೇ?.

ಆದರೆ ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿರುವುದು ಓವೈಸಿ ಜತೆ ಬಿಜೆಪಿ ಒಳಒಪ್ಪಂದ ಮಾಡಿಕೊಂಡಿದೆ ಎಂಬುದು. ಹೈದಬಾರಾದ್ ನಲ್ಲಿ ಬಿಜೆಪಿ ಮುಖಂಡರು ಓವೈಸಿ ಜತೆ ಚುನಾವಣೆ ಮೈತ್ರಿ ಕುರಿತು ಮಾತುಕತೆ ನಡೆಸಿರುವುದಕ್ಕೆ ತಮ್ಮ ಬಳಿ ಪುರಾವೆ ಇದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಿಮ್ ಸ್ಪರ್ಧಿಸಿತ್ತಾದರೂ ಕರ್ನಾಟಕ ವಿಧಾನಸಭೆ ಕಣಕ್ಕಿಳಿಯುತ್ತಿರುವುದು ಇದೇ ಮೊದಲು. ಓವೈಸಿ ಮೂಲ ಕಾರ್ಯಸ್ಥಾನವಾಗಿರುವ ತೆಲಂಗಣ ವಿಧಾನಸಭೆ ಚುನಾವಣೆಯಲ್ಲೇ ಮಿಮ್ ಸ್ಪರ್ಧಿಸಿದ್ದು ಕೇವಲ 20 ಕಡೆ ಮಾತ್ರ. ಅದೇ ರೀತಿ ಮಹಾರಾಷ್ಟ್ರದಲ್ಲಿ 24 ಕಡೆ, ಬಿಹಾರದಲ್ಲಿ 6 ಕಡೆ, ತಮಿಳುನಾಡಿನಲ್ಲಿ ಕೇವಲ 2 ಕಡೆ ಮಾತ್ರ ಕಣಕ್ಕಿಳಿದಿತ್ತು. ಆದರೆ ಹಿಂದೆಂದೂ ಕರ್ನಾಟಕದ ಒಂದೇ ಒಂದು ವಿಧಾನಸಭೆ ಕ್ಷೇತ್ರದಲ್ಲಿಯೂ ಸ್ಪರ್ಧಿಸದಿದ್ದ ಓವೈಸಿ ಈಗ ಏಕ್ ದಂ 60 ವಿಧಾನಸಭೆ ಕ್ಷೇತ್ರಗಳಲ್ಲಿ ತನ್ನ ಪಕ್ಷವನ್ನು ಕಣಕ್ಕಿಳಿಯಲು ಹೊರಟಿರುವುದರ ಹಿಂದೆ ಬಿಜೆಪಿ ಕೈವಾಡವನ್ನು ಕಾಂಗ್ರೆಸ್ ಶಂಕಿಸಿದೆ. ಉತ್ತರ ಪ್ರದೇಶದಲ್ಲಿ ಮಾಡಿದಂತೆ ಇಲ್ಲಿಯೂ ಓವೈಸಿ ಮುಂದಿಟ್ಟುಕೊಂಡು ಮುಸ್ಲಿಂ ಮತವಿಭಜನೆಗೆ ಮುಂದಾಗಿದೆ ಎಂಬುದು ಆದರ ಆರೋಪ.

ಕಾಂಗ್ರೆಸ್ ಅನುಮಾನ, ಆರೋಪದಲ್ಲಿ ಹುರುಳಿಲ್ಲದೇ ಏನಿಲ್ಲ. ಮಿಮ್ ಕರ್ನಾಟಕ ಘಟಕದ ಮುಖ್ಯಸ್ಥ ಉಸ್ಮಾನ್ ಘನಿ ಹೇಳಿಕೆ ಶೈಲಿಯೇ ಇದಕ್ಕೆ ಬ್ಯಾಟರಿ ಹಿಡಿದಿದೆ.‘ಹುಸಿ ಜಾತ್ಯತೀತತೆ ಹೆಸರಲ್ಲಿ ಮುಸ್ಲಿಂ ಮತಗಳನ್ನು ಕಬಳಿಸಿದ್ದು ಬಿಟ್ಟರೆ ಕಾಂಗ್ರೆಸ್ ಬೇರೇನನ್ನೂ ಮಾಡಿಲ್ಲ. ಮುಸ್ಲಿಮರು ಕಾಂಗ್ರೆಸ್ಸಿನ ಸ್ವತ್ತೂ ಅಲ್ಲ. ಅವರ ಮೇಲೆ ಅದಕ್ಕೆ ಯಾವುದೇ ಅಧಿಕಾರವೂ ಇಲ್ಲ. ದಲಿತರು, ಮುಸ್ಲಿಮರು ನಮ್ಮ ಗುರಿ. ಕರ್ನಾಟಕದಲ್ಲಿ ಮಿಮ್ ಬಾವುಟ ಹಾರಿಸುವುದೇ ನಮ್ಮ ಗುರಿ. ಅದರಲ್ಲಿ ಯಶಸ್ವಿಯಾಗುತ್ತೇವೆ’ಎಂದು ಗುಡುಗಿದ್ದಾರೆ.

ಕರ್ನಾಟಕದಲ್ಲಿ ಮಿಮ್ ಯಶಸ್ವಿಯಾಗುತ್ತದೋ ಬಿಡುತ್ತದೋ ಅದು ಬೇರೆ ಪ್ರಶ್ನೆ. ಆದರೆ ಮುಸ್ಲಿಮರೇ ಹೆಚ್ಚು ಇರುವ ಕ್ಷೇತ್ರಗಳನ್ನು ಹುಡುಕಿ, ಹುಡುಕಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ ಮತವಿಭಜನೆ ಆಗಿ ಕಾಂಗ್ರೆಸ್ಸಿಗೆ ತೊಡಕಾಗುವುದು ಸುಳ್ಳಲ್ಲ. ಇದು ಸಹಜವಾಗಿಯೇ ಬಿಜೆಪಿಗೆ ಅನುಕೂಲವಾಗುತ್ತದೆ. ಈ ಸೂಕ್ಷ್ಮ ಅರಿತಿರುವ ಸಿದ್ದರಾಮಯ್ಯನವರು ಈಗಾಗಲೇ ಆರೋಗ್ಯ ಸಚಿವ ಯು.ಟಿ. ಖಾದರ್ ನಿವಾಸದಲ್ಲಿ ರಾಜ್ಯದ ನಾನಾ ಕಡೆಗಳಿಂದ ನೂರಾರು ಮಂದಿ ಮೌಲ್ವಿಗಳನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯನವರ ಆತ್ಮಿಯ ಬಳಗ ಸೇರಿಕೊಂಡಿರುವ ಜೆಡಿಎಸ್ ಪರಿತ್ಯಕ್ತ ನಾಯಕ ಜಮೀರ್ ಅಹಮದ್ ಖಾನ್ ಈ ಸಭೆಯ ರುವಾರಿ. ಮುಸ್ಲಿಂ ಮತವಿಭಜನೆಯಿಂದ ಆಗುವ ಅನಾಹುತಗಳು, ಬಿಜೆಪಿಗೆ ಆಗುವ ಲಾಭಗಳು, ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಆಗಬಹುದಾದ ತೊಡಕುಗಳ ಬಗ್ಗೆ ಈ ಸಭೆಯಲ್ಲಿ ಕೂಲಂಕಷ ಚರ್ಚೆ ನಡೆದಿದೆ. ಹಿಂದೆ ಇದೇ ರೀತಿ ಮತವಿಭಜನೆ ಕಾರಣಕ್ಕೆ ಜೆಡಿಎಸ್ ಬೆಂಬಲಿಸದಂತೆ, ಒಂದೊಮ್ಮೆ ಬೆಂಬಲಿಸಿದರೆ ಅದರಿಂದ ಜೆಡಿಎಸ್ ಗೆ ಲಾಭವಾಗುವುದಿಲ್ಲ. ಬದಲಿಗೆ ಬಿಜೆಪಿಗೆ ಅನೂಕೂಲವಾಗುತ್ತದೆ ಎಂದು ಸಿದ್ದರಾಮಯ್ಯ ಮುಸ್ಲಿಂ ಮುಖಂಡರ ಸಬೆಯಲ್ಲಿ ಹೇಳಿದ್ದರು. ಈಗ ಅದನ್ನೇ ಮಿಮ್ ವಿಚಾರದಲ್ಲೂ ಮರುಪ್ರಸ್ತಾಪಿಸಿದ್ದಾರೆ. ಹೀಗಾಗಿ ಮಿಮ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಂತೆ ಓವೈಸಿ ಮನವೊಲಿಸುವ, ಒಂದೊಮ್ಮೆ ಓವೈಸಿ ಇದಕ್ಕೆ ಒಪ್ಪದಿದ್ದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಅನ್ನೇ ಬೆಂಬಲಿಸುವಂತೆ ಮಾಡುವ ಹೊಣೆಯನ್ನು ಈ ಮೌಲ್ವಿಗಳಿಗೆ ವಹಿಸಲಾಗಿದೆ. ಮುಸ್ಲಿಂ ಕಲ್ಯಾಣಕ್ಕೆ ಶಾದಿ ಭಾಗ್ಯ ಸೇರಿದಂತೆ ತಮ್ಮ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ವಿವರಿಸಲಾಗಿದೆ. ಅಲ್ಲದೆ ಮುಂದೆ ಅಧಿಕಾರಕ್ಕೆ ಬಂದರೆ ಮತ್ತಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿಯೂ ಮನವರಿಕೆ ಮಾಡಿಕೊಡಲಾಗಿದೆ. ಸಿದ್ದರಾಮಯ್ಯ ಸರಕಾರ ಕೂಡ ಸೇರಿಗೆ ಸವ್ವಾಸೇರು ಎಂಬಂತೆ ಬಿಜೆಪಿ ಒಳತಂತ್ರಕ್ಕೆ ಪ್ರತಿಯಾಗಿ ತನ್ನದೇ ಆದ ರಣತಂತ್ರವನ್ನೂ ರೂಪಿಸುತ್ತಿದೆ.

ಈಗ ಜೆಡಿಎಸ್ಗೂ ಓವೈಸಿಯದೇ ತಲೆನೋವು. ಈವೆರೆಗೂ ಅಲ್ಪಸಂಖ್ಯಾತರ ಮತಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲು ಮಾಡಿಕೊಂಡಿದ್ದವು. ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಅಲ್ಪಸಂಖ್ಯಾತರು ಈ ಎರಡೂ ಪಕ್ಷಗಳನ್ನು ಬಿಟ್ಟು ಕದಲಿದ್ದುದು ಇಲ್ಲ. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ಇಕ್ಬಾಲ್ ಅನ್ಸಾರಿ, ಜಮೀರ್ ಅಹಮದ್ ಖಾನ್ ಅವರಂಥವರು ಜೆಡಿಎಸ್ ತೊರೆದು ಹೋಗಿ ಪಕ್ಷ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರನ್ನು ಬಾಯಿಗೆ ಬಂದಂತೆ ಜರಿಯುತ್ತಿದ್ದಾರೆ. ಕುಮಾರಸ್ವಾಮಿ ತಮಗೆ ಮಾತ್ರವಲ್ಲ, ಇಡೀ ಸಮುದಾಯಕ್ಕೇ ಮೋಸ ಮಾಡಿದ್ದಾರೆ ಎಂದು ಮುಸ್ಲಿಮರನ್ನು ಭಾವನಾತ್ಮಕವಾಗಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದಕ್ಕವರಿಗೆ ಕಾಂಗ್ರೆಸ್ ಮುಖಂಡರಿಂದಲೂ ಸುಪಾರಿ ಸಿಕ್ಕಿದೆ. ಇದಕ್ಕೆ ಪ್ರತಿರೋಧ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ತಮಗಿರುವ ಬದ್ಧತೆ ಸಾರಲು ಕುಮಾರಸ್ವಾಮಿ ಈಗಾಗಲೇ ತುಮಕೂರಿನಲ್ಲಿ ಮುಸ್ಲಿಮರ ಸಮಾವೇಶವನ್ನೂ ಮಾಡಿದ್ದಾರೆ. ಜತೆಗೆ ಕಾಂಗ್ರೆಸ್ಸಿನಲ್ಲಿ ಮುನಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹಾಗೂ ರಾಜ್ಯದ ಸಚಿವ ತನ್ವೀರ್ ಸೇಠ್ ಅವರನ್ನು ಜೆಡಿಎಸ್ಸಿಗೆ ಸೆಳೆಯಲು ಯತ್ನ ಮುಂದುವರಿಸಿದ್ದಾರೆ. ಇವರಿಬ್ಬರೂ ಬಂದರೆ ಜಮೀರ್ ಮತ್ತು ಅನ್ಸಾರಿ ಅವರಿಂದ ಪಕ್ಷಕ್ಕೆ ಆಗಿರುವ ಲುಕ್ಸಾನು ತುಂಬಿಕೊಳ್ಳಬಹುದು. ಮುಸ್ಲಿಂ ಸಮುದಾಯಕ್ಕೂ ಸಕಾರಾತ್ಮಕ ಸಂದೇಶ ರವಾನೆ ಮಾಡಬಹುದು ಎಂಬ ಚಿಂತನೆ ಅಡಗಿದೆ. ಸಿಎಂ ಇಬ್ರಾಹಿಂ ಅವರನ್ನೇ ಜೆಡಿಎಸ್ ರಾಜ್ಯಾದ್ಯಕ್ಷರನ್ನಾಗಿ ಮಾಡುವ ವಿಚಾರವೂ ಚರ್ಚೆಯಲ್ಲಿದೆ.

ಅಂದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರುಪಕ್ಷಗಳ ಕಣ್ಣು ಮುಸ್ಲಿಂ ಸಮುದಾಯದ ಸುತ್ತಲೇ ಸುತ್ತುತ್ತಿದೆ. ಶೇಕಡಾ 12 ರಷ್ಟಿರುವ ಮುಸ್ಲಿಮರು ಚುನಾವಣೆ ರಾಜಕೀಯದಲ್ಲಿ ರಾಜ್ಯದ ಅಧಿಕಾರ ಸೂತ್ರವನ್ನು ಅದಲು-ಬದಲು ಮಾಡಬಲ್ಲರು ಎಂಬುದು ಸುಳ್ಳಲ್ಲ. ಹಾಗೆ ನೋಡಿದರೆ ಈ ಓಲೈಕೆ ರಾಜಕಾರಣ ಮೊದಲಿಂದಲೂ ನಡೆದು ಬಂದಿದೆ. ಮೂರು ಪಕ್ಷಗಳೂ ಮಾಡಿಕೊಂಡು ಬಂದಿವೆ. ಮತರಾಜಕಾರಣದಲ್ಲಿ ಯಾವ ಪಕ್ಷಕ್ಕೆ ಯಾವುದೇ ಸಮುದಾಯವೂ ಅಸ್ಪೃಶ್ಯವಲ್ಲ. ಎಲ್ಲರೂ ಅವುಗಳಿಗೆ ಬೇಕು. ಅದಕ್ಕೆ ಬೇಕಾದ ಶಸ್ತ್ರಗಳನ್ನು ಎಲ್ಲರೂ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದಾರೆ. ಬಹಿರಂಗದಲ್ಲಿ ತಾನು ಅಲ್ಪಸಂಖ್ಯಾತರ ಪರ ಎನ್ನುತ್ತಲೇ ಕಾಂಗ್ರೆಸ್ ಸ್ವಾತಂತ್ರ್ಯ ನಂತರ ಈ ದೇಶದ ಚುಕ್ಕಾಣಿ ಹಿಡಿದ ನಂತರ ಸ್ಥಾಪಿಸಿದ ಬಹುದೇಕ ಸಾರ್ವಜನಿಕ ಉದ್ದಿಮೆಗಳಿಗೆ ದೇಶಭಕ್ತಿ ಸಂಕೇತವಾದ ಭಾರತ, ಹಿಂದೂಸ್ತಾನ ಎಂಬುದನ್ನು ಸೇರಿಸಿಕೊಂಡೇ ನಾಮಕರಣ ಮಾಡಿದ್ದು ಕಾಕತಾಳೀಯವೇನೂ ಇಲ್ಲ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಎಚ್ಎಂಟಿ), ಭಾರತ್ ಅರ್ಥ್ ಮೂವರ್ಸ್ (ಬಿಇಎಲ್), ಭಾರತೀಯ ದೂರವಾಣಿ ಕೈಗಾರಿಕೆ (ಐಟಿಐ), ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) – ಹೀಗೆ ಹತ್ತಾರು ಹೆಸರುಗಳು ಕಾಂಗ್ರೆಸ್ ಸರಕಾರದ ಹಿಂದೂಪ್ರೀತಿಗೆ ಸಿಗುತ್ತವೆ. ಅಷ್ಟೇ ಅಲ್ಲ, ಬಾಬರಿ ಮಸೀದಿ ಧ್ವಂಸ ಮಾಡುವಾಗ ಅಂದಿನ ಕಾಂಗ್ರೆಸ್ ಪ್ರಧಾನಿ ಪಿ.ವಿ. ನರಸಿಂಹರಾವ್ ಮುಗುಮ್ಮಾಗಿ ಕೂತಿದ್ದು ಕೂಡ ಹಿಂದೂಪ್ರೇಮದ ಸಂಕೇತ. ಆದರೆ ಮೇಲ್ನೋಟದಲ್ಲಿ ರಾರಾಜಿಸಿದ್ದು ಮಾತ್ರ ಕಾಂಗ್ರೆಸ್ನ ಅಲ್ಪಸಂಖ್ಯಾತ ತುಷ್ಠೀಕರಣ ಚಿತ್ರ!

ಆದರೆ ಬಿಜೆಪಿಯದ್ದು ಇದಕ್ಕೆ ವ್ಯತಿರಿಕ್ತ ತಂತ್ರ. ಅವರು ಎಷ್ಟೇ ಹಿಂದುತ್ವ ಪ್ರತಿಪಾದಿಸಿದರೂ, ಹಿಂದೂವಾದ ಮಂಡಿಸಿದರೂ ವಾಜಪೇಯಿ, ನರೇಂದ್ರ ಮೋದಿ ಅವರ ಸರಕಾರ ಉದ್ದಿಮೆಗಳಿಗೆ, ಸಂಸ್ಥೆಗಳಿಗೆ ಹಿಂದೂಸ್ತಾನ, ಭಾರತ ಅಂತ ಸೇರಿಸಿ ಹೆಸರಿಟ್ಟಿದ್ದು ಕಡಿಮೆಯೇ ಅಥವಾ ಇಲ್ಲವೇ ಇಲ್ಲ ಎಂದೇ ಹೇಳಬೇಕು. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು (ಅವರು ಅರ್ಹರಿದ್ದರು ಎಂಬುದು ಬೇರೆ ಮಾತು) ಜಮ್ಮು ಮತ್ತು ಕಾಶ್ಮೀರದಲ್ಲಿ ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡು ಮೆಹಬೂಬ ಮುಫ್ತಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ಪೂರ್ವಯೋಜನೆ ಇಲ್ಲದಿದ್ದರೂ ರಷ್ಯಾ-ಆಪ್ಘಾನಿಸ್ತಾನದಿಂದ ಭಾರತಕ್ಕೆ ಮರಳುವ ಮಾರ್ಗಮಧ್ಯದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮೊಮ್ಮಗಳ ವಿವಾಹಕ್ಕೆ ಪ್ರಧಾನಿ ಮೋದಿ ಹಠಾತ್ ಭೇಟಿ ನೀಡಿದ್ದು ಮುಸ್ಲಿಂ ಓಲೈಕೆ ರಾಜಕಾರಣದ ಪಟ್ಟುಗಳನ್ನು ಕಾಂಗ್ರೆಸ್ಸಿನಿಂದ ಹೈಜಾಕ್ ಮಾಡುತ್ತಿರುವುದರ ಧ್ಯೋತಕವೇ ಸರಿ. ಇದೀಗ ಓವೈಸಿ ಜತೆ ಒಳಒಪ್ಪಂದ ಅದರ ಮುಂದುವರಿದ ಭಾಗವಷ್ಟೇ.

ಹಿಂದುತ್ವ ಆಗಲಿ, ರಾಷ್ಟ್ರೀಯತೆ ಆಗಲಿ, ಅಲ್ಪಸಂಖ್ಯಾತರ ತುಷ್ಠೀಕರಣವಾಗಲಿ ನಿರ್ದಿಷ್ಟ ಪಕ್ಷಗಳ ಸ್ವತ್ತಲ್ಲ. ಅವಕಾಶವಾದ ರಾಜಕಾರಣದ ಆದ್ಯತೆಗಳನ್ನು ಅದಲು-ಬದಲು ಮಾಡುತ್ತದೆ ಎಂಬುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಬಣ್ಣಗಳು ಮೇಲೊಂದು ಒಳಗೊಂದು ಕಾಣುತ್ತಿರುವುದೇ ಸಾಕ್ಷಿ. ಅದಕ್ಕೇ ಹೇಳುವುದು ರಾಜಕಾರಣಿಗಳ ಮನಸ್ಸನ್ನು ಅರಿಯುವುದು ಅಷ್ಟು ಸುಲಭವಲ್ಲ ಎಂದು!

ಲಗೋರಿಕರುಣೆ ಗೆಲುವಿನ ಶತ್ರು.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply