‘ಶ್ರಮವಿಲ್ಲದೆ ಪಲ್ಲಂಗ ಏರಿದವರು’ ಎಂದು ಟೀಕಿಸಿ ಜಗ್ಗೇಶ್ ಗಳಿಸಿದ್ದಾದರೂ ಏನು?

ಡಿಜಿಟಲ್ ಕನ್ನಡ ಟೀಮ್:

‘ಶ್ರಮವಿಲ್ಲದೆ ಪಲ್ಲಂಗ ಏರಿದವರು ಯಾರನ್ನ ಬೇಕಾದರೂ ಹಂಗಿಸ್ತಾರೆ. ಕನ್ನಡದ ಗೊತ್ತಿಲ್ಲದ ಕಾಡುಪಾಪ. ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿದವರು…’ ಹೀಗೆಲ್ಲಾ ಮನಸೋ ಇಚ್ಛೆ ಟ್ವೀಟ್ ಮಾಡಿ ವಾಗ್ದಾಳಿ ಮಾಡಿರೋದು ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕನೆಂದೇ ಖ್ಯಾತಿ ಗಳಿಸಿರುವ ಬಿಜೆಪಿ ನಾಯಕ ಜಗ್ಗೇಶ್. ಈ ಟ್ವೀಟ್ ಯಾರಿಗೆ ಅನ್ನೋದನ್ನು ನೇರವಾಗಿ ಹೆಸರು ಹಾಕದೇ ಇದ್ದರು ಮಾಡಿರುವ ಟ್ವೀಟ್​ ಯಾರಿಗೆ ಅನ್ನೋದನ್ನು ಆ ಭಾಷೆಯೇ ಸಾರಿ ಹೇಳುತ್ತಿದೆ. ಮುಂದುವರಿದ ಟ್ವೀಟ್ ನಲ್ಲಿ, ‘ದೊಡ್ಡವರ ನೆರಳಲ್ಲಿ ರಾಜಕೀಯಕ್ಕೆ ಬಂದ್ರಿ, ಮೆಟ್ಟಿಲು ಏರೋಕೆ ಹೆಡ್​ ಆಫೀಸ್​ಗೆ ಕ್ಯಾಚ್​ ಹಾಕಿದ್ರಿ. ಕ್ಯಾಚ್​ ಹಾಕಿದವರಿಗೆ ಮೋದಿ ಆದರೇನು, ಗಾಂಧಿ ಆದರೇನು ಹಂಗಿಸ್ತಾರೆ. ಶ್ರಮವಿಲ್ಲದೆ ಪಲ್ಲಂಗ ಏರಿದವರಲ್ಲವೇ ನೀವು’ ಎಂದು ನಟ ಜಗ್ಗೇಶ್​ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದರು. ಇದಕ್ಕೆ ಟ್ವೀಟರ್ ನಲ್ಲಿ ತಿರುಗೇಟು ನೀಡಿದ ರಮ್ಯಾ, ‘ಪ್ರಧಾನಿ ನಶೆಯಲ್ಲಿ ಮಾತನಾಡ್ತಿದ್ದಾರೆ’ ಎನ್ನುವ ಅರ್ಥದಲ್ಲಿ ವಾಗ್ದಾಳಿ ಮಾಡಿದ್ರು. ರಮ್ಯಾರ ಈ ಟ್ವೀಟ್ ಗೆ ತಿರುಗೇಟು ಕೊಡಲು ಜಗ್ಗೇಶ್, ಅವರ ಹೆಸರು ಹೇಳದೆ ವೈಯಕ್ತಿಕವಾಗಿ ದಾಳಿ ನಡೆಸಿದ್ದಾರೆ. ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿದ್ರಿ, ಹೆಡ್ ಆಫೀಸ್ ಅನ್ನೇ ಕ್ಯಾಚ್ ಹಾಕಿಕೊಂಡ್ರಿ, ಮೋದಿ ಬಗ್ಗೆ ಮಾತನಾಡೋದಕ್ಕೆ ಈಕೆ ಯಾರು..? ಶ್ರಮವಿಲ್ಲದೆ ಪಲ್ಲಂಗ ಏರಿದವರು ಯಾರನ್ನು ಬೇಕಾದರೂ ಹಂಗಿಸ್ತಾರೆ ಅಂತಾ ಸಣ್ಣತನ ಪ್ರದರ್ಶನ ಮಾಡಿದ್ದಾರೆ.

ನಟ ಜಗ್ಗೇಶ್ ಹಾಗೂ ರಮ್ಯಾ ನಡುವಣ ಇಂತಹ ಕಿತ್ತಾಟ ಇಂದು ನಿನ್ನೆಯದಲ್ಲ. ನೀರ್ ದೋಸೆ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡು ನಂತರ ಅರ್ಧಕ್ಕೆ ಕೈಕೊಟ್ಟು, ನಾನು ಜಗ್ಗೇಶ್ ಜೊತೆಯಲ್ಲಿ ಸಿನಿಮಾ ಮಾಡೋದಿಲ್ಲ ಎಂದು ಕಾರಣ ಕೊಟ್ಟಾಗಿನಿಂದಲೇ ಇವರಿಬ್ಬರ ನಡುವಣ ಕಿತ್ತಾಟ ಶುರುವಾಯಿತು. ಚಿತ್ರದ ವಿಚಾರವಾಗಿ ಆರಂಭವಾದ ಇವರಿಬ್ಬರ ನಡುವಣ ಭಿನ್ನಾಭಿಪ್ರಾಯ ಈಗ ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಿದೆ. ಅದರಲ್ಲೂ ಪರಸ್ಪರ ಎದುರಾಳಿ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದು, ರಾಜಕೀಯಕ್ಕೆ ಸೀಮಿತವಾಗಬೇಕಿದ್ದ ಟೀಕೆ ತೀರಾ ವೈಯಕ್ತಿಕ ಮಟ್ಟಕ್ಕೆ ತಲುಪಿದೆ.

ವೈಯಕ್ತಿಕ ದ್ವೇಶ ಏನೇ ಇರಲಿ ಟೀಕೆ ಮಾಡಲು ಸಾವಿರ ದಾರಿಗಳಿವೆ. ಅದೂ ಅಲ್ಲದೇ‌ ಹೆಣ್ಣುಮಕ್ಕಳಿಗೆ ಮಾತೃಭಾವ ತೋರುತ್ತೇವೆ ಅನ್ನುವ ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು ಓರ್ವ ಹೆಣ್ಣನ್ನು ಶ್ರಮವಿಲ್ಲದೆ ಮಂಚಕ್ಕೆ ಏರಿದವರಲ್ಲವೇ ಎಂದರೆ ಏನರ್ಥ..? ಓರ್ವ ಹೆಣ್ಣು ಮಗಳಿಗೆ ಗೌರವ ಕೊಡದ ಈ ರೀತಿಯ ವ್ಯಕ್ತಿಗಳನ್ನು ಬಿಜೆಪಿ ಇನ್ನೂ ಉಳಿಸಿಕೊಂಡಿದೆ ಅಂದರೆ, ಜಗ್ಗೇಶ್ ಮಾತಿಗೆ ಸಹಮತ ಇದೇ ಅಂತ ಅರ್ಥವೆ ಅನ್ನೊದು ಸಾಕಷ್ಟು ಜನರ ಪ್ರಶ್ನೆಯಾಗಿದೆ. ಇನ್ನು ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿದವರು… ಹೆಡ್ ಆಫೀಸ್ ಕ್ಯಾಚ್ ಹಾಕೊಂಡ್ರಿ… ಎಂಬ ಸಾಲುಗಳ ಹಿಂದೆ ಕೇವಲ ರಾಜಕೀಯ ಟೀಕ ಅಡಗಿಲ್ಲ. ಅಲ್ಲಿ ವ್ಯಕ್ತಿತ್ವ ಹಾಗೂ ಘನತೆಯ ಮೇಲೆ ದಾಳಿ ಮಾಡುವ ಪ್ರಯತ್ನವಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದ ಜನತೆ ಇನ್ನು ಅದ್ಯಾವ ರೀತಿಯ ಆರೋಪ ಪ್ರತ್ಯಾರೋಪಗಳನ್ನು ನೋಡಿ, ಕೇಳಿ ಪುನೀತರಾಗಬೇಕೋ ಎಂಬುದನ್ನು ಕಾದು ನೋಡಬೇಕು.

Leave a Reply