ಮಹದಾಯಿ ಬಗ್ಗೆ ಮಾತನಾಡದೇ ಚುನಾವಣಾ ರಣಕಹಳೆ ಊದಿದ ಮೋದಿ

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆ ಚುನಾವಣೆ ಕೌಂಟ್ ಡೌನ್ ಶುರುವಾಗಿರುವ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಧಿಕೃತವಾಗಿ ರಣಕಹಳೆ ಊದಿದ್ದಾರೆ.ಎಲ್ಲರ ನಿರೀಕ್ಷೆಯಾಗಿದ್ದ ಮಹದಾಯಿ ವಿಚಾರದ ಬಗ್ಗೆ ಒಂದು ಮಾತನ್ನೂ ಆಡದ ಮೋದಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದು ನವ ಕರ್ನಾಟಕ ನಿರ್ಮಾಣಕ್ಕೆ ಕರೆ ನೀಡಿದರು.

ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರದ ಯೋಜನೆಗಳು, ರಾಜ್ಯಕ್ಕೆ ನೀಡಿರುವ ಅನುದಾನದ ವಿವರ ನೀಡಿ ರಾಜ್ಯ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡರು. ಮೋದಿ ಅವರ ಭಾಷಣದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿದ್ದವು. ಅದಕ್ಕೆ ಪ್ರಮುಖ ಕಾರಣ, ಕೇಂದ್ರ ಬಜೆಟ್ ಮಂಡನೆಯಾದ ನಂತರ ಮೋದಿ ಮೊದಲ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು.

ಮಹದಾಯಿ ವಿಚಾರವಾಗಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿರುವ ಜನರಿಗೆ ಮೋದಿ ಹೇಗೆ ಸಮಾಧಾನ ಮಾಡಲಿದ್ದಾರೆ ಎಂಬ ಕುತೂಹಲವಿತ್ತು. ಆದರೆ ಈ ಬಗ್ಗೆ ತುಟಿ ಬಿಚ್ಚದ ಮೋದಿ ತಮ್ಮದೇ ವಾಕ್ಚಾತುರ್ಯದಿಂದ ಜನರನ್ನು ಆಕರ್ಷಿಸಿದರು. ಮೋದಿ ಭಾಷಣದ ಪ್ರಮುಖ ಅಂಶಗಳು ಹೀಗಿವೆ…

  • ಕರ್ನಾಟಕ ಮತ್ತು ಬೆಂಗಳೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮಗೆ ನನ್ನ ನಮಸ್ಕಾರಗಳು. ನಾಡಪ್ರಭು ಕೆಂಪೇಗೌಡ, ಬಸವೇಶ್ವರ, ವೀರರಾಣಿ ಕಿತ್ತೂರು ಚೆನ್ನಮ್ಮ, ಮಾದಾರ ಚೆನ್ನಯ್ಯ, ಸಂಗೊಳ್ಳಿ ರಾಯಣ್ಣ, ಶಿಶುನಾಳ ಷರೀಫ, ಸರ್.ಎಂ.ವಿಶ್ವೇಶ್ವರಯ್ಯ ಅವರಂಥ ಮಹಾತ್ಮರು ಹುಟ್ಟಿದ ನಾಡು ಕರ್ನಾಟಕ.
  • ಕರ್ನಾಟಕ ರಾಜ್ಯ ಎಂದರೆ ದೇಶದ ಜನರು ಹೆಮ್ಮೆ ಪಡುವ ರಾಜ್ಯವಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್ ನಲ್ಲಿ ನಡೆದ ಕಿರಿಯರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಹುಡುಗರು ಜಯಭೇರಿ ಭಾರಿಸಿ ದೇಶದ ಗೌರವ, ಹಿರಿಮೆ ಹೆಚ್ಚಿಸಿದ್ದಾರೆ. ಕಿರಿಯರ ವಿಶ್ವಕಪ್ ಗೆಲುವಿನ ಹಿಂದೆ ಕನ್ನಡ ನಾಡಿನ ಮಗ ಕೋಚ್ ರಾಹುಲ್ ದ್ರಾವಿಡ್‌ರ ಪಾತ್ರ ಮಹತ್ತರವಾಗಿದೆ.
  • ಹೇಗೆ ಜೀವನ ನಡೆಸಬೇಕು ಎಂಬುದನ್ನು ಬೇರೆಯವರಿಗೆ ಪಾಠ ಹೇಳಿಕೊಡುವವರು ಇಲ್ಲಿಯ ಜನ. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ಜನರ ಪರಿಶ್ರಮಕ್ಕೆ ತಣ್ಣೀರು ಎರಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನವರಿಗೆ ಕೇವಲ ತಮ್ಮ ವಿಕಾಸದ ಬಗ್ಗೆ ಮಾತ್ರ ಕಾಳಜಿ ಇದೆ. ಬೇರೊಬ್ಬರ ಜೀವನದ ಬಗ್ಗೆ ಅಲ್ಲ.
  • ಕಾಂಗ್ರೆಸ್ ಮುಕ್ತ ಕರ್ನಾಟಕ ಬಹಳ ದೂರವಿಲ್ಲ. ಕಾಂಗ್ರೆಸ್‌ನ ವಿಭಜನೆ ರಾಜನೀತಿ, ಭ್ರಷ್ಟಾಚಾರ, ವಂಶಪರಂಪರೆಯಿಂದ ರಾಜ್ಯವನ್ನು ಮುಕ್ತಗೊಳಿಸಿ. ಬೆಂಗಳೂರಿನಲ್ಲಿ ಕೇಸರಿ ಅಲೆ ನೋಡಿದರೆ ಗೊತ್ತಾಗುತ್ತದೆ, ಶೀಘ್ರದಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ನಿರ್ಗಮನಕ್ಕೆ ಕೌಂಟ್‌ಡೌನ್ ಆರಂಭವಾಗಿದೆ ಎಂಬುದು ದೃಢಪಡುತ್ತದೆ.
  • ಬಿಜೆಪಿ ಎಂದರೆ ಅಭಿವೃದ್ಧಿ. ತ್ರಿವಳಿ ತಲಾಖ್ ಸಂಬಂಧ ಕೇಂದ್ರ ಸರಕಾರ ಕಾನೂನು ತರಲು ಯತ್ನಿಸುತ್ತಿದೆ. ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಶ್ರಮಿಸುತ್ತಿದೆ. ಆದರೆ ಕಾಂಗ್ರೆಸ್‌ಮತ ಬ್ಯಾಂಕ್‌ಗಾಗಿ ಆ ಕಾನೂನು ತರಲು ಸಂಸತ್ತಿನಲ್ಲಿ ತಡೆಯೊಡ್ಡುತ್ತಿದೆ.
  • ಕೇಂದ್ರ ಸರಕಾರ ನೀಡುವ ಅನುದಾನವನ್ನು ರಾಜ್ಯ ಸರಕಾರ ಸದ್ಬಳಕೆ ಮಾಡಿಲ್ಲ. ಕೇಂದ್ರದಲ್ಲಿ ಯುಪಿಎ ಇದ್ದಾಗ ರಾಜ್ಯಕ್ಕೆ 73 ಸಾವಿರ ಕೋಟಿ ಮಾತ್ರ ಸಿಗುತ್ತಿತ್ತು. ಆದರೆ, ಎನ್‌ಡಿಎ ಸರಕಾರ ಬಂದ ಮೇಲೆ ಸುಮಾರು 2 ಲಕ್ಷ ಕೋಟಿ ಅನುದಾನ ಸಿಗುತ್ತಿದೆ. ಕೇಂದ್ರ ರಾಜ್ಯಕ್ಕೆದ ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಕೋಟ್ಯಂತರ ಅನುದಾನ ನೀಡಿದೆ. ಆದರೆ, ರಾಜ್ಯ ಸರಕಾರ ಅದನ್ನು ಸದ್ಬಳಕೆ ಮಾಡಿದೆಯೇ?
  • ಈ ಬಾರಿ ಬಜೆಟ್‌ನಲ್ಲಿ ಕರ್ನಾಟಕಕ್ಕೆ 17 ಸಾವಿರ ಕೋಟಿ ರು. ಮೊತ್ತದ ಸಬ್‌ಅರ್ಬನ್ ರೈಲ್ವೆ ಯೋಜನೆ ಜಾರಿಗೊಳಿಸಿದೆ. ರಾಜ್ಯಕ್ಕೆ ಮಾತ್ರ 82 ಸಾವಿರ ಕೋಟಿ ರು. ಅನುದಾನ ನೀಡಿ 44 ದೊಡ್ಡ ಯೋಜನೆ ಕೈಗೊಳ್ಳಲಾಗುತ್ತಿದೆ. ಈ ಪೈಕಿ 38 ಯೋಜನೆಗಳು ರಸ್ತೆ ಮತ್ತು ರೈಲ್ವೆಗೆ ಸಂಬಂಧಿಸಿವೆ.
  • ಕರ್ನಾಟಕದಲ್ಲಿ ಕಾಂಗ್ರೆಸ್‌ ಸೋಲಿಸಿ ಬಿಜೆಪಿ ಅಭೂತಪೂರ್ವ ಜಯಗಳಿಸಲಿದೆ ಎಂಬ ವಿಶ್ವಾಸ ನನಗಿದೆ.

Leave a Reply