ಪಕೋಡ ಮಾರುವುದು ಒಂದು ಉದ್ಯೋಗ ನಿಜ, ಅದರಲ್ಲಿ ಬಿಜೆಪಿ ಸರ್ಕಾರದ ಸಾಧನೆ ಏನು?

ಡಿಜಿಟಲ್ ಕನ್ನಡ ಟೀಮ್:

‘ಒಬ್ಬ ವ್ಯಕ್ತಿ ಪಕೋಡ ಮಾರುತ್ತಾ ದಿನಕ್ಕೆ ₹ 200 ಸಂಪಾದನೆ ಮಾಡಿದರೆ ಅದೂ ಕೂಡ ಉದ್ಯೋಗ…’ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಾಧ್ಯಮದ ಮುಂದೆ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಯಾಗಿದೆ. ಮೋದಿಯವರ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ರಾಜ್ಯಸಭೆಯ ತಮ್ಮ ಮೊದಲ ಭಾಷಣದಲ್ಲಿ, ‘ನಿರುದ್ಯೋಗಕ್ಕಿಂತ ಪಕೋಡ ಮಾರುವುದು ಉತ್ತಮ’ ಎಂದು ಸಮರ್ಥಿಸಿಕೊಂಡಿದ್ದರು.

ಬಿಜೆಪಿ ನಾಯಕರ ಈ ಹೇಳಿಕೆಯಲ್ಲಿ ಸರ್ಕಾರದ ಸಾಧನೆಗಿಂತ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನವೇ ಹೆಚ್ಚಾಗಿದೆ ಕಾಣುತ್ತಿದೆ. ದೇಶದ ಯುವಕರು ಪಕೋಡ ಮಾರಿ ಉದ್ಯೋಗ ಗಿಟ್ಟಿಸಿಕೊಳ್ಳುವುದರಲ್ಲಿ ಸರ್ಕಾರದ ಸಾಧನೆಯಾದರೂ ಏನಿದೆ. ಅಥವಾ ಪಕೋಡ ಮಾರಿ ಸಂಪಾದಿಸಲು ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತೆ? 2014ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇವೆ ಎಂದು ದೇಶದ ವಿದ್ಯಾವಂತ ಯುವಕರಿಗೆ ಭರವಸೆ ಕೊಟ್ಟಿತ್ತೆ ಅಥವಾ ನಿಮ್ಮಿಂದ ಪಕೋಡ ಮಾರಿಸುತ್ತೇವೆ ಎಂಬ ಭರವಸೆ ಕೊಟ್ಟಿತ್ತೇ? ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು.

ನಿಜ, ಅಮಿತ್ ಶಾ ಹೇಳಿಕೆಯಂತೆ ನಿರುದ್ಯೋಗಿಗಳಾಗಿರುವುದಕ್ಕಿಂತ ಪಕೋಡ ಮಾರುವುದೇ ಲೇಸು. ಅವರ ಈ ಹೇಳಿಕೆಯಲ್ಲಿ ನಾವು ನಿಮಗೆ ಉದ್ಯೋಗ ನೀಡಲು ವಿಫಲರಾಗಿದ್ದೇವೆ. ನೀವು ಪಕೋಡ ಮಾರುತ್ತಾ ಜೀವನ ಸಾಗಿಸಿ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರ ಪರೋಕ್ಷವಾಗಿ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಐದು ವರ್ಷಕ್ಕೂ ಹೆಚ್ಚು ಸಮಯದಿಂದ ಭರ್ತಿಯಾಗದ ಹುದ್ದೆಗಳನ್ನು ವಜಾಗೊಳಿಸುವಂತೆ ಎಲ್ಲಾ ಸಚಿವಾಲಯಗಳಿಗೆ ಸುತ್ತೋಲೆ ಹೊರಡಿಸಿದ್ದು, ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಯುವಕರಿಗೆ ನೀಡಲು ಸರ್ಕಾರ ವಿಫಲವಾಗಿರುವುದಕ್ಕೆ ಸಾಕ್ಷಿ. ಒಂದು ವೇಳೆ 125 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಆ ಹುದ್ದೆಗಳನ್ನು ಅಲಂಕರಿಸಲು ಅರ್ಹ ಅಭ್ಯರ್ಥಿಗಳೇ ಇಲ್ಲವಾದರೆ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ಒಟ್ಟಿನಲ್ಲಿ ದೇಶದ ಜನರು ಪಕೋಡ ಮಾರುವುದಾಗಲಿ ಇತರೆ ಯಾವುದೇ ಸಣ್ಣಪುಟ್ಟ ವ್ಯಾಪಾರ ಮಾಡುವುದನ್ನು ಹೇಳಿಕೊಡಲು ಜನರು ಬಿಜೆಪಿಗೆ ಅಧಿಕಾರ ಕೊಟ್ಟಿಲ್ಲ ಎಂಬುದನ್ನು ನಾಯಕರು ಅರಿತುಕೊಳ್ಳುವುದು ಉತ್ತಮ. ಇಲ್ಲವಾದರೆ, ನಾವು ಉದ್ಯೋಗ ಸೃಷ್ಟಿಸುತ್ತೇವೆ ಎಂದು ನೀಡಿದ್ದ ಮಾತನ್ನು ಉಳಿಸಿಕೊಂಡಿಲ್ಲ ಎಂದು ಜನರ ಮುಂದೆ ಸತ್ಯಾಂಶ ಒಪ್ಪಿಕೊಳ್ಳಲಿ. ಅದನ್ನು ಬಿಟ್ಟು ತಪ್ಪನ್ನು ಮುಚ್ಚಿಕೊಳ್ಳಲು ಬಾಲಿಷ ಸಮರ್ಥನೆ ಕೊಟ್ಟರೆ ಜನರ ಭರವಸೆ ನುಚ್ಚುನೂರಾಗುವುದರಲ್ಲಿ ಅನುಮಾನವಿಲ್ಲ.

Leave a Reply