ಸಿದ್ರಾಮಯ್ಯಗೆ ಸಾಕಾಯ್ತು ಮಠ ಮಂದಿರಗಳ ಸಹವಾಸ!

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಹೊಸ್ತಿಲಲ್ಲಿರುವ ಸಮಯದಲ್ಲಿ ಮಠ ಹಾಗೂ ಅವುಗಳಿಗೆ ಸಂಬಂಧಿಸಿದ ದೇವಸ್ಥಾನಗಳನ್ನು ಮುಟ್ಟುವುದು ಒಳ್ಳೆಯದಲ್ಲ ಎಂಬ ಜ್ಞಾನೋದಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗಿರುವುದು ಸ್ಪಷ್ಟವಾಗಿದೆ.

ರಾಜ್ಯದಲ್ಲಿರುವ ಮಠಗಳು ಹಾಗೂ ಮಠಗಳ ನಿಯಂತ್ರಣಗಳಲ್ಲಿರುವ ದೇವಾಲಯಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಕುರಿತು ಸಾರ್ವಜನಿಕರ ಅಭಿಪ್ರಾಯ ಕೋರಿ ಸಲ್ಲಿಸಲಾಗಿದ್ದ ಸುತ್ತೋಲೆ ತಮಗೆ ಮಾರಕವಾಗುವ ಸೂಚನೆಯನ್ನು ಸಿದ್ರಾಮಯ್ಯ ಬೇಗನೆ ಅರಿತು ಎಚ್ಚೆತ್ತುಕೊಂಡಿದ್ದಾರೆ. ಪರಿಣಾಮ ಮಠ ಮಾನ್ಯಗಳ ಉಸಾಬರಿ ನಮಗೇಕೆ ಎಂಬ ರಾಗ ಎಳೆದಿದ್ದಾರೆ.

ರಾಜ್ಯ ಸರ್ಕಾರದ ಈ ಸುತ್ತೋಲೆಗೆ ಸಂಬಂಧಿಸಿದಂತೆ ರಾಜಕೀಯವಾಗಿ ಮಾತ್ರವಲ್ಲದೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಸುತ್ತೋಲೆ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಹೀಗೆ ಬಿಟ್ಟರೆ ಮುಂದೆ ತಮ್ಮ ಸರ್ಕಾರಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂಬ ಸೂಚನೆ ಅರಿತ ಸಿಎಂ, ಇಂದು ವಿಧಾನ ಪರಿಷತ್ತಿನಲ್ಲಿ ಸರ್ಕಾರ ತನ್ನ ಸುತ್ತೋಲೆ ಹಿಂಪಡೆಯುವುದಾಗಿ ತಿಳಿಸಿದೆ. ಈ ಬಗ್ಗೆ ಅವರು ಹೇಳಿದಿಷ್ಟು…

‘ಮಠ, ಮಂದಿರ, ದೇವಸ್ಥಾನಗಳ ಉಸಾಬರಿ ನಮಗೆ ಬೇಡವೇ ಬೇಡ. ಮಠ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದಿಲ್ಲ. ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರೋ ಸುತ್ತೋಲೆಯನ್ನು ಇಂದೇ ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಠ-ಮಂದಿರಗಳನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಲಿದೆ ಎಂಬುದು ಕೇವಲ ವದಂತಿ. ಆ ಪ್ರಸ್ತಾವನೆ ನಮ್ಮ ಮುಂದಿಲ್ಲ.

ಹೈಕೋರ್ಟ್ ವಿಭಾಗೀಯ ಪೀಠ ಸೂಚನೆಯಂತೆ ಸಾರ್ವಜನಿಕರ ಅಭಿಪ್ರಾಯ ಪಡೆಯಲಷ್ಟೇ ಸರ್ಕಾರ ಮುಂದಾಗಿತ್ತು. ಹೀಗಾಗಿ ಅಭಿಪ್ರಾಯಕ್ಕಷ್ಟೇ ಪ್ರಕಟಣೆ ನೀಡಿದ್ದೆವು. ಇದರಿಂದ ಸಾರ್ವಜನಿಕರಿಗೆ ಮನಸ್ಸಿಗೆ ನೋವಾಗಿದ್ದು, ಈ ಪ್ರಕಟಣೆಯನ್ನೂ ಹಿಂಪಡೆಯುತ್ತೇವೆ. ಈ ಕುರಿತಾಗಿ ಯಾವುದೇ ಸಂಶಯ ಬೇಡ.’

Leave a Reply