ಅಯೋಧ್ಯೆ ವಿವಾದವನ್ನು ಬಗೆಹರಿಸ್ತಾರಾ ರವಿಶಂಕರ್ ಗುರೂಜಿ?

ಡಿಜಿಟಲ್ ಕನ್ನಡ ಟೀಮ್:

ಅಯೋಧ್ಯೆ ವಿವಾದ ಮತ್ತೆ ಚರ್ಚೆಯಾಗುತ್ತಿರೋ ಹೊತ್ತಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್) ಕಾರ್ಯಕಾರಿ ಸದಸ್ಯ … ‘ಇಸ್ಲಾಂನಲ್ಲಿ ಮಸೀದಿ ಸ್ಥಳಾಂತರಕ್ಕೆ ಅವಕಾಶವಿದೆ’ ಎಂದು ನೀಡಿರುವ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಅನೇಕ ವರ್ಷಗಳಿಂದ ಬಗೆಹರಿಯದ ಅಯೋಧ್ಯೆ ವಿವಾದವನ್ನು ರವಿ ಶಂಕರ್ ಗುರೂಜಿ ಬಗೆಹರಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಅತ್ತ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ವಿಚಾರಣೆ ಆರಂಭವಾದರೆ ಇತ್ತ ಬೆಂಗಳೂರಿನಲ್ಲಿ ಆರ್ಟ್ ಆಫ್ ಲೀವಿಂಗ್ ಸಂಸ್ಥಾಪಕ ರವಿ ಶಂಕರ್ ಗುರೂಜಿ ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿನಿಧಿಗಳು ಸೇರಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸತತ ಮೂರು ಗಂಟೆ ಸಭೆ ನಡೆಸಿದ್ದಾರೆ. ಸಭೆಯ ನಂತರ ಎರಡೂ ಕಡೆಯವರು ನೀಡಿರುವ ಹೇಳಿಕೆಗಳು ಅಯೋಧ್ಯೆ ವಿವಾದ ಶೀಘ್ರದಲ್ಲೇ ಬಗೆಹರಿಯುವ ಭರವಸೆ ಗೆರೆಗಳು ಮೂಡಿಸಿವೆ.

 ಎಐಎಂಪಿಎಲ್ ನ ಮೌಲಾನ ಸಲ್ಮಾನ್ ಹುಸೈನಿ ನದ್ವಿ ಈ ಹೇಳಿಕೆ ನೀಡಿದ್ದು, ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರುಗಳು ವಿವಾದಿತ ಅಯೋಧ್ಯೆ ಪ್ರದೇಶದಿಂದ ಬೇರೆಡೆಗೆ ಮಸೀದಿ ಕಟ್ಟಿಕೊಳ್ಳಲು ಮನಸ್ಸು ಮಾಡಿರುವ ಸೂಚನೆಗಳು ಬರುತ್ತಿವೆ. ಈ ವಿಚಾರವಾಗಿ ಮತ್ತೊಂದು ದೊಡ್ಡ ಮಟ್ಟದ ಸಭೆ ಅಯೋಧ್ಯೆಯಲ್ಲಿಯೇ ನಡೆಯಲಿದ್ದು, ಈ ಸಭೆಯ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಇತ್ತ ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿದೆ.

ಸಭೆಯ ನಂತರ ಆರ್ಟ್ ಆಫ್ ಲೀವಿಂಗ್ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ‘ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಸ್ತಾವನೆಗೆ ಮುಸ್ಲಿಂ ಸಮುದಾಯದ ಅನೇಕ ಮುಖಂಡರುಗಳು ಒಪ್ಪಿಗೆ ನೀಡಿದ್ದಾರೆ’ ಎಂದು ರವಿಶಂಕರ್ ಗುರೂಜಿ ತಿಳಿಸಿದ್ದಾರೆ. ಮಸೀದಿಯನ್ನು ಬೇರೆಡೆ ನಿರ್ಮಾಣ ಮಾಡಲು ಜಾಗ ನೀಡಲು ಸರ್ಕಾರ ಸಹ ಒಪ್ಪಿಗೆ ನೀಡಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಗಮನ ಸೆಳೆದಿದೆ.

Leave a Reply