ಕೊಹ್ಲಿ ಆಟಕ್ಕೆ ಮನಸೋತ ಗಂಗೂಲಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್ ನ ಧ್ರವತಾರೆಯಾಗಿ ಮೆರೆಯುತ್ತಿದ್ದಾರೆ. ತವರಿನ ಅಂಗಳದಲ್ಲಾಗಲಿ ವಿದೇಶಿ ಅಂಗಣವಾಗಲಿ, ಕೊಹ್ಲಿ ಬ್ಯಾಟಿಂದ ರನ್ ಹರಿಯುವ ವೇಗ ಮಾತ್ರ ಕಡಿಮೆಯಾಗುತ್ತಿಲ್ಲ. ಅದರೊಂದಿಗೆ ತಾನೊಬ್ಬ ಶ್ರೇಷ್ಠ ಕ್ರಿಕೆಟಿಗ ಎಂಬುದನ್ನು ಕೊಹ್ಲಿ ಪ್ರತಿ ಪಂದ್ಯದಲ್ಲೂ ಸಾಕ್ಷಿ ಎಂಬಂತೆ ಪ್ರದರ್ಶನ ನೀಡುತ್ತಿದ್ದಾರೆ. ಕೊಹ್ಲಿಯ ಈ ಆಟಕ್ಕೆ ಮನಸೋತ ಮಾಜಿ ನಾಯಕ ಸೌರವ್ ಗಂಗೂಲಿ ಟೀಂ ಇಂಡಿಯಾದ ‘ಫ್ಯಾಬ್ ಫೋರ್’ ಆಟಗಾರರ ಜತೆಗೆ ಕೊಹ್ಲಿ ಅವರ ಹೆಸರನ್ನು ಸೇರಿಸಿದ್ದಾರೆ.

ಟೀಂ ಇಂಡಿಯಾದಲ್ಲಿ ಫ್ಯಾಬ್ ಫೋರ್ ನಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೆಹ್ವಾಗ್ ಹಾಗೂ ಲಕ್ಷ್ಮಣ್ ಸ್ಥಾನ ಪಡೆದಿದ್ದು, ಗಂಗೂಲಿ ಫ್ಯಾಬ್ ಫೈವ್ ಅಲ್ಲಿ ಸ್ಥಾನ ಪಡೆದಿದ್ದರು. ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಶತಕ ಬಾರಿಸಿರೋ ಕೊಹ್ಲಿ ತಮ್ಮ ವೃತ್ತಿ ಜೀವನದ 34ನೇ ಶತಕ ಬಾರಿಸಿದ್ದಾರೆ. ಕೇವಲ 204 ಪಂದ್ಯಗಳಲ್ಲಿ ಈ ಸಾಧನೆ ಮಾಡುವ ಮೂಲಕ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಎರಡನೇ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 34ನೇ ಏಕದಿನ ಶತಕ ಬಾರಿಸಲು 307 ಇನಿಂಗ್ಸ್ ತೆಗೆದುಕೊಂಡಿದ್ದರು. ಅದರೊಂದಿಗೆ 100ಕ್ಕೂ ಹೆಚ್ಚು ಪಂದ್ಯಗಳ ಅಂತರದಲ್ಲಿ ಕೊಹ್ಲಿ ಈ ಸಾಧನೆ ಮಾಡಿರುವುದು ನಿಜಕ್ಕೂ ಆತನ ಸಾಮರ್ಥ್ಯ ಏನು ಎಂಬುದು ಸಾಬೀತಾಗಿದೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ತಮ್ಮ ಅಂಕಣದಲ್ಲಿ ಹೊಗಳಿರುವ ಗಂಗೂಲಿ ಹೇಳಿದಿರುವುದಿಷ್ಟು…

‘ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು, 3-0 ಅಂತರದ ಮುನ್ನಡೆ ಸಾಧಿಸಿದೆ. ಟೆಸ್ಟ್ ಸರಣಿ ಸಲಿನ ಬಳಿಕ ಈ ರೀತಿ ಪ್ರದರ್ಶನ ಹೊರ ಬಂದಿರುವುದು ತಂಡದ ಸಾಮರ್ಥ್ಯಕ್ಕೆ ಸಾಕ್ಷಿ. ನಾನು ಸಚಿನ್, ರಾಹುಲ್, ಸೆಹ್ವಾಗ್, ಪಾಂಟಿಂಗ್ ಹಾಗೂ ಲಾರಾರಂತಹ ಶ್ರೇಷ್ಠ ಆಟಗಾರರ ಜತೆ ಆಡುವ ಅದೃಷ್ಟ ಮಾಡಿದ್ದೆ. ಈಗ ಕೊಹ್ಲಿ ಆ ಮಹಾನ್ ಆಟಗಾರರ ಸಾಲಿಗೆ ನಿಲ್ಲುತ್ತಾರೆ. ಪ್ರತಿ ಇನಿಂಗ್ಸ್ ನಲ್ಲೂ ಅತ್ಯುನ್ನತ ಮಟ್ಟದ ನಿಯಂತ್ರಣ, ಶಕ್ತಿ ಪ್ರದರ್ಶಿಸುತ್ತಿರುವುದು ನನಗೆ ಅಚ್ಚರಿ ಮೂಡಿಸಿದೆ. ಟೀಂ ಇಂಡಿಯಾ ಕಂಡ ಫ್ಯಾಬ್ ಫೋರ್ ಆಟಗಾರರ ಜತೆಯಲ್ಲಿ ಕೊಹ್ಲಿ ಸ್ಥಾನ ಪಡೆಯುತ್ತಾರೆ.’

Leave a Reply