ಜೆಡಿಎಸ್ ರಣತಂತ್ರಕ್ಕೆ ಕಾಂಗ್ರೆಸ್, ಬಿಜೆಪಿಗೆ ಸಂಕಷ್ಟ!

ಡಿಜಿಟಲ್ ಕನ್ನಡ ಟೀಮ್:

ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಎಂದು ಜೆಡಿಎಸ್ ಹರಸಾಹಸ ಪಡ್ತಿದೆ. ಅದರ ಭಾಗವಾಗಿ ಜೆಡಿಎಸ್ ದಲಿತರ ಮತ ಬುಟ್ಟಿಗೆ ಕೈ ಹಾಕಿದ್ದು, ಬಿಎಸ್ ಪಿ ಜೊತೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ. ಇಂದು ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ರಾಷ್ಟೀಯ ಡ್ಯಾನಿಷ್ ಅಲಿ ಹಾಗೂ ಬಿಎಸ್ ಪಿಯ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ರು. ಇತ್ತ ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಹೌದು ದಲಿತರ ಮತಗಳನ್ನು ಪಡೆಯುವ ಉದ್ದೇಶದಿಂದ ಬಿಎಸ್ ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಬಿಎಸ್ ಪಿ ಗೆಲ್ಲುವಂತೆ 20 ಸ್ಥಾನಗಳನ್ನು ಅವರಿಗೆ ಬಿಟ್ಟುಕೊಡಲಾಗುವುದು ಎಂದಿದ್ದಾರೆ. ಜೆಡಿಎಸ್ ನ ಈ ನಿರ್ಧಾರ ಹಾಗೂ ನಡೆ ಕಾಂಗ್ರೆಸ್ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜೆಡಿಎಸ್ ಹಾಗೂ ಬಿಎಸ್ ಪಿ ಮೈತ್ರಿಕೂಟ ವರ್ಕ್ ಔಟ್ ಆದ್ರೆ ಗೆಲ್ಲುವ ಅಭ್ಯರ್ಥಿ ಸೋಲ್ತಾರೆ.. ಸೋಲುವ ಅಭ್ಯರ್ಥಿ ಗೆಲ್ತಾರೆ. ಈ ಮಾತು ನೂರಕ್ಕೆ ನೂರು ಸತ್ಯ. ಹೇಗೆಂದ್ರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರ ಹಣಾಹಣಿ ಇರುತ್ತೆ ಎಂದಿಟ್ಟುಕೊಳ್ಳಿ. ಅಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಜೆಡಿಎಸ್ ಅಭ್ಯರ್ಥಿ ಸೋಲುವ ಭೀತಿ ಎದುರಿಸ್ತಾರೆ. ಅಂತಹ ಸಮಯದಲ್ಲಿ ಬಿಎಸ್ ಪಿ ಮತಗಳು ಜೆಡಿಎಸ್ ಪಕ್ಷಕ್ಕೆ ಹರಿದು ಬಂದ್ರೆ ಕಾಂಗ್ರೆಸ್ ಅಭ್ಯರ್ಥಿ ಸೋಲುವುದು ನಿಚ್ಚಳ. ಐದಾರು ಸಾವಿರ ಮತಗಳು ಬಿಎಸ್ ಪಿ ಮೈತ್ರಿಕೂಟದಿಂದ ಬಂದರೂ ಹಳೇ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವುದು ನಿಚ್ಚಳವಾಗಿದೆ. ಹೀಗಾಗಿ ತೆನೆ ಹೊತ್ತ ಮಹಿಳೆಯ ತಂತ್ರಗಾರಿಕೆಯಿಂದ ಕಾಂಗ್ರೆಸ್ ವಿಚಲಿತವಾಗಿದೆ. ಈಗಾಗಲೇ ಸಿದ್ದರಾಮಯ್ಯ ಸರ್ಕಾರದ ಸದಾಶಿವ ಆಯೋಗದ ವರದಿ ಮುಳುವಾಗಿದ್ದು ದಲಿತರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಈ ಸಮಯದಲ್ಲೇ ಗೌಡರು ಬಿಎಸ್ ಪಿ ಜೊತೆ ಹೊಂದಾಣಿಕೆ ರಾಜಕೀಯದ ಬಲೆ ಎಣಿದಿದ್ದು ಸಿದ್ದು ಅಂಡ್ ಟೀಂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.

ಬಿಜೆಪಿ ದಲಿತರ ಮತಗಳ ಮೇಲೆ ಹೆಚ್ಚು ಅವಲಂಭಿಸಿಲ್ಲದಿದ್ರೂ ಕೆಲವೊಂದು ಮತಕ್ಷೇತ್ರಗಳಲ್ಲಿ ಅಂದರೆ ಮೀಸಲು ಕ್ಷೇತ್ರಗಳಲ್ಲಿ ಹೊಡೆತ ಬೀಳೋದು ಗ್ಯಾರಂಟಿ. ಉದಾಹರಣೆಗೆ ನೆಲಮಂಗಲ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿದ್ದರೂ ಬಿಎಸ್ ಪಿ ಅಭ್ಯರ್ಥಿ ಕಣಕ್ಕಿಳಿದರೆ ಬಿಜೆಪಿ ಅಭ್ಯರ್ಥಿ ಸೋಲುವ ಸಾಧ್ಯತೆ ಹೆಚ್ಚಾಗುತ್ತದೆ. ಏಕೆಂದರೆ ಮೊದಲೇ ಮೀಸಲು ಕ್ಷೇತ್ರ ಆಗಿರೋದ್ರಿಂದ ಎಲ್ಲರೂ ಅಭ್ಯರ್ಥಿಗಳು ಎಸ್ ಸಿ ಎಸ್ ಟಿ ವರ್ಗಕ್ಕೆ ಸೇರಿದವರೇ ಆಗಿತ್ತಾರೆ, ಇಂತಹ ವೇಳೆಯಲ್ಲಿ ಒಕ್ಕಲಿಗ ಮತಗಳ ಮೇಲೆ ಹಿಡಿತ ಸಾಧಿಸಿರುವ ಜೆಡಿಎಸ್ ನ ಪಾರಂಪರಿಕ ಮತಗಳು ಬಿಎಸ್ ಪಿ ಅಭ್ಯರ್ಥಿ ಪಾಲಾದ್ರೆ ಬಿಎಸ್ ಪಿ ಅಭ್ಯರ್ಥಿ ಸುಲಭವಾಗಿ ಗೆಲುವಿನ ನಗೆ ಬೀರಬಹುದು. ಹಲವು ವರ್ಷಗಳ ಕಾಲ ಪಕ್ಷ ಇದ್ದು ಅಭ್ಯರ್ಥಿ ಗೆಲ್ಲಿಸಲು ಸಾಧ್ಯವಾಗದೆ ಇರುವ ಬಿಎಸ್ ಪಿ ಜೆಡಿಎಸ್ ಜೊತೆಗಿನ ಮೈತ್ರಿ ಕನಸು ಚಿಗುರಿಸಿದ್ರೆ, ಕಾಂಗ್ರೆಸ್, ಬಿಜೆಪಿ ಪಾಲಿಗೆ ನುಂಗಲಾರದ ಬಿಸಿ ತುಪ್ಪ ಅಂದ್ರೆ ಸುಳ್ಳಲ್ಲ. ದಲಿತರು ಈ ಬಾರಿ ಒಗ್ಗಟ್ಟು ಪ್ರದರ್ಶನ ಮಾಡಿದ್ರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಶಯ ಹುಸಿಯಾಗಲ್ಲ.

Leave a Reply