ರಾಹುಲ್ ಅಬ್ಬರಕ್ಕೆ ವೇದಿಕೆ ಸಜ್ಜು

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಗುಜರಾತ್ ಚುನಾವಣೆಯಲ್ಲಿ ಮೋದಿ ವಿರುದ್ಧ ಅಬ್ಬರಿಸಿ ನಿರೀಕ್ಷಿತ ಫಲಿತಾಂಶ ಪಡೆಯದಿದ್ರೂ ಬಿಜೆಪಿ ಗೆಲುವಿಗಾಗಿ ಪ್ರಯಾಸ ಪಡುವಂತೆ ಮಾಡಿತ್ತು. ಗುಜರಾತ್‌ನಲ್ಲಿ ಬಳಸಿದ್ದ ಟೆಂಪಲ್ ರನ್ ಕೂಡ ಯಶಸ್ಸು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಚುನಾವಣೆ ನಡೆಯುತ್ತಿದ್ದು ಇಂದಿನಿಂದ ಟೆಂಪಲ್ ರನ್ ಜೊತೆ ಕಾರ್ಯಕರ್ತರಲ್ಲಿ ಚುನಾವಣೆ ಚುರುಕು ಮುಟ್ಟಿಸಲಿದೆ.

ಇಂದಿನಿಂದ ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯಲಿರುವ ರಾಹುಲ್ ಗಾಂಧಿ, ಮೊದಲ ಹಂತದಲ್ಲಿ 4 ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಜನಾಶೀರ್ವಾದ ಯಾತ್ರೆ ಹೆಸರಲ್ಲಿ ನಡೆಯುತ್ತಿರುವ ರಾಹುಲ್ ಪ್ರವಾಸ ವಿಶೇಷವಾಗಿ ವಿನ್ಯಾಸಗೊಳಿಲಿಸಿರುವ ಬಸ್ ನಲ್ಲಿ ನಡೆಯಲಿದೆ ಅನ್ನೋದು ವಿಶೇಷ. ಬೆಳಗ್ಗೆ 10 ಗಂಟೆಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಿಂದ ಹೊರಡಲಿರುವ ರಾಹುಲ್ ಗಾಂಧಿ ಅವರ ವಿಶೇಷ ವಿಮಾನ ಮಧ್ಯಾಹ್ನ ಬಳ್ಳಾರಿ ತಲುಪಿದ್ದಾರೆ. ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ರಾಹುಲ್ ಸ್ವಾಗತಕ್ಕೆ ಈಗಾಗಲೇ ಕಾದು ಕುಳಿತಿದ್ದು, ಬಳ್ಳಾರಿಯಲ್ಲಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 12.30 ಕ್ಕೆ ಹೆಲಿಕಾಪ್ಟರ್ ಮೂಲಕ ಹೊಸಪೇಟೆಗೆ  ಆಗಮಿಸಲಿದ್ದು, 1 ರಿಂದ 2.30 ರ ತನಕ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಹೊಸಪೇಟೆ ಶಾಸಕರಾಗಿದ್ದ ಆನಂದ್ ಸಿಂಗ್ ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಕಾಂಗ್ರೆಸ್ ಸಮಾವೇಶಕ್ಕೆ ಲಕ್ಷ ಲಕ್ಷ ಜನರನ್ನು ಸೇರಿಸುವ ಮೂಲಕ ಹೈಕಮಾಂಡ್ ಗಮನ ಸೆಳೆಯಲು ಮುಂದಾಗಿದ್ದಾರೆ. ಮುನ್ಸಿಪಲ್ ಗ್ರೌಂಡ್ ನಲ್ಲಿ ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದು, ರಾಹುಲ್ ಭಾಷಣಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಒಟ್ಟು 1 ಲಕ್ಷದ 75 ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 3 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು ಬಿಜೆಪಿ ನಡೆಸಿದ ಬೆಂಗಳೂರು ಸಮಾವೇಶ ಮೀರಿಸಲು ಪಣತೊಟ್ಟಿದೆ.

ರಾಹುಲ್ ಗಾಂಧಿ ಭಾಷಣ ಮಾಡುವ ಸುತ್ತಮುತ್ತ  ಎಸ್ ಪಿಜಿ ಭದ್ರತೆ ಇರಲಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಸಮಾರಂಭದಲ್ಲಿ ರಾಹುಲ್ ಗೆ ಘಟಾನುಘಟಿ ರಾಜ್ಯ ಕಾಂಗ್ರೆಸ್ ‌ ನಾಯಕರುಗಳು ಸಾಥ್ ನೀಡಲಿದ್ದಾರೆ. ಸಮಾವೇಶದ ಬಳಿಕ ಮಧ್ಯಾಹ್ನ ಕೊಪ್ಪಳಕ್ಕೆ ತೆರಳಲಿರುವ ರಾಹುಲ್ 3.15 ಕ್ಕೆ ಡಿಸಿಸಿ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ 3.50 ಕ್ಕೆ ಹುಲಿಗೆಮ್ಮ ದೇಗುಲಕ್ಕೆ ಭೇಟಿ ನೀಡಲಿದ್ದು, ಸಂಜೆ ೫ ಗಂಟೆಗೆ ಗವಿಸಿದ್ದೇಶ್ವರ ಮಠಕ್ಕೂ ಭೇಟಿ ನೀಡಿ ಚರ್ಚೆ ನಡೆಸುತ್ತಾರೆ. ಸಂಜೆ 6.15ಕ್ಕೆ ಕೊಪ್ಪಳದಲ್ಲಿ ಕಾರ್ಯಕರ್ತರ ಸಭೆ ನಿಗದಿಯಾಗಿದ್ದು, ಸಂಜೆ 6.45 ರಿಂದ 7.45 ರವರೆಗೆ ಕುಕನೂರಿನ ಸಭೆಯಲ್ಲಿ ಭಾಗಿಯಾಗಿ ರಾತ್ರಿ 8 ಗಂಟೆಗೆ ಕುಕನೂರಿನ ಸರ್ಕಿಟ್ ಹೌಸ್ ನಲ್ಲಿ ರಾಹುಲ್ ಗಾಂಧಿ  ವಾಸ್ತವ್ಯ ಹೂಡಲಿದ್ದಾರೆ.

Leave a Reply