ಸ್ಲಮ್ ರಾಜಕೀಯ ವರ್ಕ್ ಔಟ್ ಆಗುತ್ತಾ?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರು, ನಾಯಕರು ನಿನ್ನೆ ರಾತ್ರಿ ಸ್ಲಮ್ ಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಸ್ಲಮ್ ನಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಹಾಗೂ ಸ್ಲಮ್ ಜನರ ಮನ ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಬಿಜೆಪಿ ನಾಯಕರ ಸ್ಲಮ್ ವಾಸ್ತವ್ಯವನ್ನು ಕಾಂಗ್ರೆಸ್ ಟೀಕಿಸಿದ್ದು, ರೆಸಾರ್ಟ್ ಪ್ರೇಮಿಗಳಿಗೆ ಸ್ಲಮ್ ಜನರ ಕಷ್ಟ ಅರ್ಥ ಆಗಲ್ಲ. ವಿಧಾನಸಭಾ ಚುನಾವಣೆ ಸನಿಹ ಆಗ್ತಿರೋದ್ರಿಂದ ಗಿಮಿಕ್ ಮಾಡ್ತಿದ್ದಾರೆ ಅಂತ ವಾಗ್ದಾಳಿ ಮಾಡಿದೆ.

ಲಕ್ಷ್ಮಣ್ ಪುರಿ ಕೊಳಗೇರಿಯ ಮುನಿರತ್ನಂ ಎಂಬುವರ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಲು ಆಗಮಿಸಿದ ಬಿಎಸ್ ಯಡಿಯೂರಪ್ಪ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯ್ತು. ಯಡಿಯೂರಪ್ಪ ಜೊತೆ ಆರ್ ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡ ಸಾಥ್ ನೀಡಿದ್ರು. ಅನ್ನ ಸಾಂಬಾರ್ ಸೇವಿಸಿದ ನಾಯಕರು ಹೊಸ ಚಾಪೆ ದಿಂಬು ಹಾಕಿಕೊಂಡು ನಿದ್ರೆಗೆ ಜಾರಿದ್ರು. ಇದೇ ರೀತಿ ಎಲ್ಲಾ ನಾಯಕರುಗಳು ತಮ್ಮ ತಮ್ಮ ಕೇತ್ರ ವ್ಯಾಪ್ತಿಯ ಸ್ಲಮ್ ಳಲ್ಲಿ ಮಲಗುವ ಮೂಲಕ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವ ಯತ್ನ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಗೆ ಎದ್ದು ಪೇಪರ್ ಓದಿ ಸ್ಲಮ್ ಸುತ್ತ ವಾಯುವಿಹಾರ, ದೇವಸ್ಥಾನ ಭೇಟಿ ಮುಗಿಸಿ ತಿಂಡಿಗೆ ವಾಪಸ್ ಆದ್ರು. ಎಲ್ಲಾ ನಾಯಕರೂ ಕೂಡ ಯಥಾವತ್ತಾಗಿ ಇದನ್ನೇ ಮಾಡಿದ್ದಾರೆ.

ಮೈಸೂರಿನಲ್ಲಿ ಸ್ಲಮ್ ವಾಸ್ತವ್ಯ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ, ಸಂಜೆ 7 ಗಂಟೆಗೆ ಕ್ಯಾತಮಾರನಹಳ್ಳಿಯ ಹುಲಿಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಎತ್ತಪ್ಪನ ಕಾಲೋನಿಯಲ್ಲಿರುವ ರಾಮ ಮಂದಿರದಲ್ಲಿ ಹಿಂದುಳಿದ ಮುಖಂಡರೊಡನೆ ಸಂವಾದ ಮಾಡಿದ್ರು. ಬಳಿಕ ಗಾರೆ ಕೆಲಸ ಮಾಡುವ ಇಂದ್ರೇಶ್ ಮನೆಯಲ್ಲಿ ವಾಸ್ತವ್ಯ ಹೂಡಿದ್ರು.
ಬೆಳಗ್ಗೆ ಎದ್ದು ಪತ್ರಿಕೆಗಳ ಮೇಲೆ ಕಣ್ಣಾಡಿಸಿ ತಿಂಡಿ ಸೇವನೆ ಮಾಡಿದ್ರು.

ಸ್ಲಮ್ ವಾಸ್ತವ್ಯದ ಬಳಿಕ ಸ್ಲಂ ದೌರ್ಭಾಗ್ಯ ಪುಸ್ತಕ ಬಿಡುಗಡೆ ಮಾಡಿದ ಬಿಎಸ್ ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ ತಲೆತಿರುಕ ಅಂತೆಲ್ಲಾ ವಾಗ್ದಾಳಿ ಮಾಡಿದ್ದಾರೆ. ಆದ್ರೆ ಬಿಜೆಪಿ ನಾಯಕರು ಸ್ಲಮ್ ವಾಸ್ತವ್ಯದಲ್ಲಿ ಕೊಳಗೇರಿಯವರು ಬಳಸುವ ಸ್ನಾನದ ಮನೆ, ಶೌಚಾಲಯ ಬಳಸಿದ್ರಾ..? ಶೌಚಾಲಯಕ್ಕಾಗಿ ಹೊಸ ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದು ಎಷ್ಟು ಸರಿ..? ವಾಸ್ತವ್ಯ ಮಾಡಿದವರ ಮನೆಗೆ ಮಾತ್ರ ಶೌಚಾಲಯ ಮಾಡಿಕೊಟ್ಟರೆ ಉಳಿದವರ ಕಥೆ ಏನು..? ಹೊಸದಾಗಿ ಹಾಸಿಗೆ ದಿಂಬು ತಂದ ಮೇಲೆ ಕೊಳಗೇರಿ ಫೀಲ್ ಬರುತ್ತಾ..? ನಾಯಕರು ಬರ್ತಾರೆ ಅಂತ ಸ್ವಚ್ಛತೆ ಮಾಡಿದ್ರು ಅನ್ನೋ ಮಾತುಗಳು ಕೇಳಿ ಬಂದಿವೆ..

ಒಟ್ಟಾರೆ ಬಿಜೆಪಿ ನಾಯಕರು ಸ್ಲಮ್ ಜನರನ್ನು ಸೆಳೆಯಲು ಒಂದು ಪುಸ್ತಕ ಸಿದ್ದ ಮಾಡಿದ್ದು, ಆ ಪುಸ್ತಕ ಬಿಡುಗಡೆಗೆ ಸೂಕ್ತ ವೇದಿಕೆ ಹುಡುಕುತ್ತಿದ್ರು. ಎಲ್ಲೋ ಒಂದು ಕಡೆ ಪುಸ್ತಕ ಬಿಡುಗಡೆ ಮಾಡಿದರೆ ಪ್ರಚಾರ ಸಿಗುವುದು ಅನುಮಾನ ಅನ್ನೋ ಕಾರಣಕ್ಕೆ ಸ್ಲಮ್ ನಲ್ಲಿ ಮಲಗಿ ಬೆಳಗ್ಗೆ ಪುಸ್ತಕ ಬಿಡುಗಡೆ ಮಾಡೋಣ ಎಂಬ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು ಅನ್ನೋ ಮಾತುಗಳು ಬಿಜೆಪಿ ಆಸುಪಾಸಲ್ಲೇ ಕೇಳಿ ಬರುತ್ತಿದೆ. ವಿಚಿತ್ರ ಅಂದ್ರೆ ಸ್ಲಮ್ ನಲ್ಲಿ ಮಲಗಿ ಆ ಬಳಿಕ ಪುಸ್ತಕ ರೆಡಿ ಮಾಡಬೇಕಿದ್ದ ಬಿಜೆಪಿ ನಾಯಕರು ಮೊದಲೇ ಪುಸ್ತಕ ಸಿದ್ಧ ಮಾಡಿ ಇಟ್ಟುಕೊಂಡು ಬಿಡುಗಡೆ ಮಾಡಲು ಅನುಭವ ಪಡೆದುಕೊಂಡ್ರು.

Leave a Reply