ಜೆಡಿಎಸ್‌-ಬಿಎಸ್ಪಿ ಮೈತ್ರಿ ಹಿಂದಿನ ಗೌಡರ ಲೆಕ್ಕಾಚಾರ ಏನು?

ಸರ್ವಧರ್ಮ ಸಮನ್ವಯತೆ ಅನ್ನೋದು ಅದ್ಯಾವಾಗ ಪಾಲನೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಈ ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ರಾಜಕೀಯ ನಾಯಕರಿಗೆ ಎಲ್ಲ ಧರ್ಮ, ಜಾತಿ ಬಗ್ಗೆ ಇನ್ನಿಲ್ಲದ ಪ್ರೀತಿ, ಗೌರವ, ಮಮಕಾರ, ಕಾಳಜಿ, ಕಕ್ಕುಲತೆ ಉಕ್ಕಿ ಹರಿಯುತ್ತದೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲರ ಹಣೆಬರಹವೂ ಇದೇ. ಉಳಿದ ಅವಧಿಗೆ ತಾವು ಪ್ರತಿನಿಧಿಸುವ, ತಮ್ಮಿಷ್ಟದ ಜಾತಿ, ಧರ್ಮದ ಹಿಂದೆ ನಾಯಕರು ಚುನಾವಣೆ ಸಂದರ್ಭದಲ್ಲಿ ಮಾತ್ರ ಥಟ್ಟನೆ ತಮ್ಮ ಮನೋಧರ್ಮ ಬದಲಿಸಿ ಬಿಡುತ್ತಾರೆ. ಎಲ್ಲರನ್ನೂ ಆತುಕೊಳ್ಳುತ್ತಾರೆ. ಅನುಕೂಲಸಿಂಧು ರಾಜಕೀಯ ಅಲ್ಲಿ ಕೆಲಸ ಮಾಡಿರುತ್ತದೆ. ಅಧಿಕಾರ ಗಳಿಕೆ ತಂತ್ರ ಅದರೊಳಗೆ ಅಡಗಿರುತ್ತದೆ.

ಎದುರಾಳಿ ಉರುಳಿಸುವ ದಾಳ ನೋಡಿಕೊಂಡು ಅದಕ್ಕೆ ಪ್ರತಿತಂತ್ರ ರಚಿಸುವುದು ರಾಜಕೀಯ ಸೂತ್ರ. ಒಂದು ಪಕ್ಷ ನಿರ್ದಿಷ್ಟ ಜಾತಿ, ಧರ್ಮದ ಓಲೈಕೆಗೆ ಇಳಿದರೆ, ಮತ್ತೊಂದು ಪಕ್ಷ ಇನ್ನೊಂದು ಜಾತಿ, ಧರ್ಮದ ಬೆನ್ನು ಹತ್ತುತ್ತದೆ. ಇಲ್ಲವೇ ಒಂದು ಪಕ್ಷ ಕಣ್ಣಿಟ್ಟಿರುವ ಜಾತಿ, ಮತಗಳನ್ನು ತನ್ನತ್ತ ತಿರುಗಿಸಿಕೊಳ್ಳಲು ಮತ್ತೊಂದು ಪಕ್ಷ ವ್ಯೂಹ ನಿರ್ಮಿಸುತ್ತದೆ. ಗೆಲ್ಲಲೇಬೇಕು ಅನ್ನುವ ಛಲ ಅದರ ಮಿದುಳನ್ನು ತಂತ್ರ-ಪ್ರತಿತಂತ್ರದ ತಿರುಗಣಿ ಆಗಿರಿಸಿರುತ್ತದೆ. ಹೀಗಾಗಿ ಯಾರಿಗೆ ಯಾರು, ಯಾಕಾಗಿ, ಯಾವಾಗ ದಕ್ಕುತ್ತಾರೆ ಎಂಬುದನ್ನು ಹೇಳಲು ಆಗುವುದಿಲ್ಲ. ಆದರೆ ಪ್ರಯತ್ನ ಮಾತ್ರ ಮುಂದುವರಿದಿರುತ್ತದೆ. ಇದೊಂದು ನಿರಂತರ ಪ್ರಕ್ರಿಯೆ. ಜೆಡಿಎಸ್ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಡುವಣ ಚುನಾವಣೆಪೂರ್ವ ಮೈತ್ರಿ ಈ ರಾಜಕೀಯ ದಾಳದ ಒಂದು ಭಾಗ.

ಸಾಮಾಜಿಕ ನ್ಯಾಯ, ಸಾಮಾಜಿಕ ತಂತ್ರಗಾರಿಕೆ, ಸಮೀಕರಣ ರಾಜಕೀಯ ತಂತ್ರಗಾರಿಕೆಯಲ್ಲಿ ದೇವೇಗೌಡರದು ಪಳಗಿದ ಕೈ. ಎದುರಾಳಿಯ ಪಟ್ಟುಗಳನ್ನು ತಮ್ಮ ಒಳಪಟ್ಟುಗಳಿಂದ ಸಡಿಲಗೊಳಿಸುವ ಕಲೆ ಅವರಿಗೆ ಕರಗತ. ಅವರು ಎಲ್ಲೋ ನೋಡಿಕೊಂಡು ಮತ್ತೆಲ್ಲಿಗೋ ಬೀಸಿದ ಕಲ್ಲು ಇನ್ಯಾವುದೋ ಗುರಿ ತಲುಪಿರುತ್ತದೆ. ಎಲ್ಲರ ಎಣಿಕೆ ಬುಡಮೇಲಾಗಿರುತ್ತದೆ. ಗೌಡರ ಅಂಥ ತಂತ್ರಗಾರಿಕೆ ಜೆಡಿಎಸ್-ಬಿಎಸ್ಪಿ ಮೈತ್ರಿ ಹಿಂದಿದೆ.

ನಿಜ, ಮತರಾಜಕಾರಣ ರಾಜ್ಯದಲ್ಲೀಗ ಜಾತಿ-ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕಿದೆ. ನಾನಾ ವಿವಾದಗಳು ತಾಂಡವವಾಡುತ್ತಿವೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ತಾರ್ಕಿಕ ಅಂತ್ಯ ಕಾಣುವ ಲಿಂಗಾಯತ ಮತ್ತು ವೀರಶೈವ ವಿಭಜನೆ ಮತ್ತದೇ ಮತರಾಜಕಾರಣದ ಕೊಡುಗೆ. ಮೀಸಲು, ಒಳಮೀಸಲು ಜಾತಿಗಳನ್ನು ಇಬ್ಭಾಗ ಮಾಡಿಟ್ಟಿವೆ. ಪರಿಶಿಷ್ಟ ಸಮುದಾಯದಲ್ಲಿ ಸೃಷ್ಟಿಯಾಗಿರುವ ಒಳಮೀಸಲು ಬೇಡಿಕೆ ಎಡಗೈ-ಬಲಗೈ ಗುಂಪಿನ ನಡುವೆ ಕಚ್ಚಾಟ ತಂದಿಟ್ಟಿದೆ. ಎರಡೂ ಗುಂಪುಗಳನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಕಾಂಗ್ರೆಸ್ ಚುನಾವಣೆಯಲ್ಲಿ ಮತಹಾಲು ಕರೆದುಕೊಳ್ಳಲು ಹವಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಕಾಲದಲ್ಲಿ ರಾಜಕೀಯ ಒಳಪಟ್ಟುಗಳನ್ನು ಕಲಿಸಿದ ಗುರು ದೇವೇಗೌಡರು. ಅಂಥ ಸಿದ್ದರಾಮಯ್ಯ ಇವತ್ತು ಗುರುವಿಗೇ ತಿರುಮಂತ್ರ ಹೇಳುವ ಮಟ್ಟಕ್ಕೆ ನಿಂತಿದ್ದಾರೆ. ಈವರೆಗೂ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿಕೆ ಆಗುತ್ತಿತ್ತು.

ಪಾಲುದಾರಿಕೆಯಲ್ಲಿ ಕಾಂಗ್ರೆಸ್ ಪ್ರಮಾಣವೇ ಸ್ವಲ್ಪ ಹೆಚ್ಚಿದ್ದರೂ ಜೆಡಿಎಸ್ ಅಲ್ಪಸಂಖ್ಯಾತ ಮತಬ್ಯಾಂಕ್ ಯಥಾಸ್ಥಿತಿಯಲ್ಲಿತ್ತು. ಆದರೆ ಈಗ ಸಿದ್ದರಾಮಯ್ಯನವರು ಜೆಡಿಎಸ್ ಪಾಳೆಯದಲ್ಲಿದ್ದ ಮುಸ್ಲಿಂ ಮುಖಂಡರಾದ ಜಮೀರ್ ಅಹಮದ್ ಖಾನ್, ಇಕ್ಬಾಲ್ ಅನ್ಸಾರಿ ಅವರನ್ನು ತಮ್ಮ ಪಕ್ಷದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಸ್ಲಿಂ ಸಮುದಾಯದ ಮುಖಂಡರ ಜತೆ ಉತ್ತಮ ಸಂಪರ್ಕ ಹೊಂದಿರುವ ಈ ಮುಖಂಡರು ಮುಸ್ಲಿಂ ಧರ್ಮ ಗುರುಗಳ ಮೂಲಕ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವ ಕಾಯಕದಲ್ಲಿ ಪ್ರಗತಿ ಹಾದಿಯಲ್ಲಿದ್ದಾರೆ. ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್‌ಗೆ ಕರೆತರಲು ಗೌಡರು ಮಾಡಿದ ಯತ್ನಕ್ಕೂ ತಡೆಯೊಡ್ಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಅಂಥ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಪಾಠ ಕಲಿಸುವ ಗುರಿಯೊಂದಿಗೆ ಗೌಡರು ಇದೀಗ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್ಪಿ ಜತೆಗೆ ಚುನಾವಣೆಪೂರ್ವ ಮೈತ್ರಿ ಸಾಧಿಸಿದ್ದಾರೆ. ಪರಿಶಿಷ್ಟ ಸಮುದಾಯದ ಶ್ರೇಯೋಭಿವೃದ್ಧಿ ಸಂಕಲ್ಪದ, ಅದೇ ಕಾಲಕ್ಕೆ ಪರಿಶಿಷ್ಟ ಸಮುದಾಯದ ತಮ್ಮದೇ ಪಕ್ಷ ಎಂದು ಒಪ್ಪಿಕೊಂಡಿರುವ ಬಿಎಸ್ಪಿ ಜತೆ ಗೌಡರು ಮಾಡಿಕೊಂಡಿರುವ ಹೊಂದಾಣಿಕೆ ಹಿಂದೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದಷ್ಟು ಹೊಡೆತ ನೀಡುವ ಇರಾದೆ ಅಡಗಿದೆ.

ನಿಜ, ಗೌಡರು ತಮ್ಮ ಪೇಟೆಂಟ್ ಆಗಿರುವ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆವ ತಂತ್ರವನ್ನು ಇಲ್ಲಿ ಪ್ರಯೋಗಿಸಿದ್ದಾರೆ. ಬಿಎಸ್ಪಿ ಈವರೆಗೂ ಕರ್ನಾಟಕದಲ್ಲಿ ಸ್ಥಾನ ಗೆಲ್ಲಲು ಸಾಧ್ಯವಾಗದಿದ್ದರೂ ಒಂದಷ್ಟು ಮತಗಳ ಪಲ್ಲಟ ಮಾಡಿ ಕಾಂಗ್ರೆಸ್ ಗೆಲುವಿಗೆ ಮುಳ್ಳಾಗಿರುವುದು ಸುಳ್ಳಲ್ಲ. 2004 ರ ಚುನಾವಣೆಯಲ್ಲಿ ಸುಮಾರು 25 ರಿಂದ 30 ಸೀಟುಗಳನ್ನು ಕಳೆದುಕೊಳ್ಳಲು ಬಿಎಸ್ಪಿ ನೇರವಾಗಿ ಕಾರಣವಾಗಿತ್ತು. ಪರಿಶಿಷ್ಟ ಸಮುದಾಯದ ಮತಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದ ಕಾಂಗ್ರೆಸ್‌ಗೆ ಆಗ ಬರೀ 65 ಸ್ಥಾನಗಳು ಬಂದಿದ್ದವು. ಆ ಸಮುದಾಯದ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಬಿಎಸ್ಪಿ ಬಾಚಿಕೊಂಡಿತ್ತು. ಇಲ್ಲದೇ ಹೋಗಿದ್ದರೆ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ 13 ಸ್ಥಾನ ಗೆದ್ದಿದ್ದ ಪಕ್ಷೇತರರ ಒಡಗೂಡಿ ಸರಕಾರ ಮಾಡುವ ಸಾಧ್ಯತೆ ಇತ್ತು. ಎಸ್.ಎಂ. ಕೃಷ್ಣ ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಆಗಬಹುದಿತ್ತು. ಆದರೆ ಹೊಡೆತಕ್ಕೆ ಕಾಂಗ್ರೆಸ್ ಮಕಾಡೆ ಮಲಗಿದ್ದು, 79 ಸ್ಥಾನ ಗೆದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

58 ಸ್ಥಾನಗಳನ್ನು ಗೆದ್ದ ಜೆಡಿಎಸ್ ಜತೆ ಮೈತ್ರಿ ಸರಕಾರ ಮಾಡುವುದು ಕಾಂಗ್ರೆಸ್‌ಗೆ ಅನಿವಾರ್ಯವಾಯಿತು. ಆಗ ಗೌಡರು ಸೂಚಿಸಿದ ಧರ್ಮಸಿಂಗ್ ಮುಖ್ಯಮಂತ್ರಿ ಆದರು. ಬಿಎಸ್ಪಿಯ ಈ ಪರಹಿತ ಹೊಡೆತ ಶಕ್ತಿಯನ್ನೇ ತಮ್ಮ ಚುನಾವಣೆ ಯುಕ್ತಿಯನ್ನಾಗಿ ಪರಿವರ್ತಿಸಿಕೊಂಡಿರುವ ಗೌಡರು ಕಾಂಗ್ರೆಸ್‌ಗೆ ಆ ಮೂಲಕ ಸಿದ್ದರಾಮಯ್ಯ ಅವರಿಗೆ ರಾಜಕೀಯ ಗುದ್ದು ಕೊಡಲು ಹೊರಟಿದ್ದಾರೆ. ಯಾವುದೇ ಚುನಾವಣೆಯಲ್ಲಿ ಶೇಕಡಾ ರಿಂದ 3 ರಷ್ಟು ಮತಹಂಚಿಕೆ ವ್ಯತ್ಯಾಸವಾದರೂ ‘ವಿಜಯಲಕ್ಷ್ಮಿ ಪಕ್ಷಪಾತ್ರ’ ಬದಲಾಗಿ ಹೋಗುತ್ತದೆ. ಅಂದರೆ ಸುಮಾರು 10 ರಿಂದ 15 ಸ್ಥಾನಗಳು ಅದಲು ಬದಲಾಗಿ ಹೋಗುತ್ತವೆ. ಮತಹಂಚಿಕೆ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ ಸ್ಥಾನಗಳ ವ್ಯತ್ಯಾಸವೂ ವೃದ್ಧಿಸುತ್ತಾ ಹೋಗುತ್ತದೆ. ಪರಿಶಿಷ್ಟ ಸಮುದಾಯದ ಒಳಮೀಸಲು ಕುರಿತು ಎಡಗೈ-ಬಲಗೈ ಪಂಗಡಗಳಲ್ಲಿ ಉಂಟಾಗಿರುವ ವೈಮನಸ್ಯಕ್ಕೆ ಕಾಂಗ್ರೆಸ್ಸೇ ಕಾರಣ ಎಂಬ ಚಾಲ್ತಿಯಲ್ಲಿರುವ ಆರೋಪವನ್ನು ಜೆಡಿಎಸ್ ಪರ ವರವಾಗಿ ಮಾಡಿಕೊಳ್ಳಲು ಗೌಡರು ಮುಂದಾಗಿದ್ದಾರೆ.

ರಾಜ್ಯಾದ್ಯಂತ ಪರಿಶಿಷ್ಟರಿಗೆ ಬಿಎಸ್ಪಿ ತಮ್ಮದೇ ಎಂಬ ಭಾವನೆಯಿದೆ. ಅದು ಸಿದ್ಧಾಂತವೋ, ರಾಜಕೀಯ ವೇದಿಕೆಯೋ – ಕಾರಣ ಏನೇ ಇರಲಿ ಒಟ್ಟಾರೆ ಅವರಿಗೆ ಪಕ್ಷದ ಬಗ್ಗೆ ಅಭಿಮಾನವಿದೆ. ಆದರೆ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವ ತಾಕತ್ತು ಪಕ್ಷಕ್ಕೆ ಇನ್ನೂ ಬಂದಿಲ್ಲ. ಆದರೆ ಈಗಾಗಲೇ ನೆಲೆಯೂರಿರುವ ಪಕ್ಷದ ಜತೆ ಮೈತ್ರಿ ಮಾಡಿಕೊಂಡರೆ ಪರಿಸ್ಥಿತಿ ಹೀಗೆಯೇ ಎಂದು ಹೇಳಲು ಬರುವುದಿಲ್ಲ. ವಿಧಾನಸಭೆಯಲ್ಲಿ ಖಾತೆ ತೆರೆಯುವ ಸಾಧ್ಯತೆಗಳೂ ಇವೆ. ಅದೇ ರೀತಿ ಮೈತ್ರಿ ಮಾಡಿಕೊಂಡ ಪಕ್ಷಕ್ಕೂ ಪರಿಶಿಷ್ಟ ಸಮುದಾಯದ ಮತಗಳನ್ನು ಒಂದು ಕ್ರೋಡೀಕರಿಸಿ ಕೊಡುವ ಶಕ್ತಿಯೂ ಇದೆ. ಏಕೆಂದರೆ ರಾಜ್ಯದ ಒಟ್ಟು ಮತದಾರರ ಪೈಕಿ ಪರಿಶಿಷ್ಟರ ಸಂಖ್ಯೆ ಶೇಕಡಾ 22. ಆ ಪೈಕಿ ಬಿಎಸ್ಪಿ ಜತೆ ಮೈತ್ರಿ ಕಾರಣಕ್ಕೆ ಶೇಕಡಾ 3 ರಿಂದ 5 ಜೆಡಿಎಸ್ ಕಡೆ ತಿರುಗಿದರೆ ಫಲಿತಾಂಶದ ದಿಕ್ಕೇ ಬದಲಾಗುತ್ತದೆ. ಜೆಡಿಎಸ್‌ಗೆ 15 ರಿಂದ 20 ಸೀಟುಗಳು ಹೆಚ್ಚು ಬರುತ್ತವೆ ಎಂಬುದು ದೇವೇಗೌಡರ ಹೊಂದಾಣಿಕೆ ರಾಜಕೀಯ ಹಿಂದಿರುವ ಎಣಿಕೆ. 2004 ರಲ್ಲಾದಂತೆ ಬಿಎಸ್ಪಿ ರಾಜ್ಯಾದ್ಯಂತ ಕಾಂಗ್ರೆಸ್ ಸೀಟುಗಳನ್ನು ಎಷ್ಟು ಮಾಡುತ್ತದೋ ಅಷ್ಟು ತಮ್ಮ ಹಾಗೂ ಬಿಜೆಪಿ ಖಾತೆಗೆ ಜಮಾ ಆಗುತ್ತದೆ, ಈ ಪೈಕೆ ಜೆಡಿಎಸ್ ಪಾಲು ಹೆಚ್ಚಿರುತ್ತದೆ ಎಂಬ ನಂಬಿಕೆ ಗೌಡರದು. ಹೀಗಾಗಿ 20 ವಿಧಾನಸಭೆ ಕ್ಷೇತ್ರಗಳನ್ನು ಬಿಎಸ್ಪಿಗೆ ಬಿಟ್ಟುಕೊಟ್ಟು, ಉಳಿದೆಡೆ ಅದರ ಬೆಂಬಲ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

ಬಿಜೆಪಿ-ಜೆಡಿಎಸ್ ಅಧಿಕಾರ ಹಂಚಿಕೆ ಗಲಾಟೆ ಪ್ರಯುಕ್ತ ಅನುಕಂಪದ ಅಲೆ ಏರಿದ್ದ ಯಡಿಯೂರಪ್ಪ ಪರವಾಗಿ ಪರಿಶಿಷ್ಟರು 2008 ರಲ್ಲಿ ಬಿಜೆಪಿ ಕೈ ಹಿಡಿದಿದ್ದರು. ಆಗ ಬಿಜೆಪಿಯಿಂದ 35 ಕ್ಕೂ ಹೆಚ್ಚು ಪರಿಶಿಷ್ಟ ಸಮುದಾಯದ ಶಾಸಕರು ಆರಿಸಿ ಬಂದಿದ್ದರು. ಆದರೆ ಒಂದೇ ಅವಧಿಗೆ ಮೂವರು ಮುಖ್ಯಮಂತ್ರಿಗಳನ್ನು ಕಂಡ ಬಿಜೆಪಿ ಬಗ್ಗೆ ಜುಗುಪ್ಸೆಗೊಂಡು 2013 ರಲ್ಲಿ ‘ಅಹಿಂದ’ ರಥವೇರಿದ್ದ ಸಿದ್ದರಾಮಯ್ಯ ಕಾರಣಕ್ಕೆ ಮತ್ತೆ ಕಾಂಗ್ರೆಸ್‌ನತ್ತಲೇ ಹೋದರು. ಆದರೆ ಈಗ ಎಡಗೈ-ಬಲಗೈ ನಡುವೆ ಒಳಮೀಸಲು ಗಲಾಟೆ ನಡೆದಿದೆ. ಅದಕ್ಕೆ ಆಡಳಿತಾರೂಢ ಸರಕಾರವೇ ಕಾರಣ ಎಂಬ ಆಪಾದನೆ ಇದೆ. ಜತೆಗೆ ಡಾ. ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನಲ್ಲಿರುವ ಪರಿಶಿಷ್ಟ ಮುಖಂಡರಿಗೂ ಪಕ್ಷ ರಾಜ್ಯ ಬಗ್ಗೆ ಸಮಾಧಾನವಿಲ್ಲ. ಪಕ್ಷದೊಳಗಣ ಒಳರಾಜಕೀಯ ಪರಿಣಾಮವಾಗಿ ಪರಮೇಶ್ವರ ಅವರು ವಿಧಾನಸಭೆಗೇ ಗೆದ್ದು ಬರಲಾಗಲಿಲ್ಲ.

ಇನ್ನು ಮಲ್ಲಿಕಾರ್ಜುವ ಖರ್ಗೆ ಅವರು ರಾಜ್ಯಕ್ಕೇ ಬರಲಾಗಲಿಲ್ಲ. ಪುತ್ರ ಪ್ರಿಯಾಂಕ್ ಖರ್ಗೆಗೆ ಮಂತ್ರಿ ಪಟ್ಟ ಕೊಟ್ಟು ಖರ್ಗೆ ಅವರನ್ನು ರಾಷ್ಟ್ರೀಯ ರಾಜಕಾರಣಕ್ಕೆ ಸೀಮಿತಗೊಳಿಸಲಾಯಿತು. ಶ್ರೀನಿವಾಸ ಪ್ರಸಾದ್ ಅವರು ಪಕ್ಷ ಬಿಟ್ಟು ಹೋಗುವಂತೆ ಮಾಡಲಾಯಿತು. ಅವರು ನಂಜನಗೂಡು ಶಾಸಕರಾಗಿಯೂ ಉಳಿಯದಂತೆ ನೋಡಿಕೊಳ್ಳಲಾಯಿತು. ಇದೆಲ್ಲದರ ಪರಿಣಾಮವಾಗಿ ಪರಿಶಿಷ್ಟರಿಗೆ ಕಾಂಗ್ರೆಸ್ ಮೇಲೆ ಸಾತ್ವಿಕ ಸಿಟ್ಟಿದೆ. ಇದನ್ನು ತಮ್ಮ ಪಕ್ಷದ ತಿರುಗಿಸಿಕೊಳ್ಳುವುದು ಗೌಡರ ತಂತ್ರ. ಇನ್ನೊಂದೆಡೆ ಬಿಜೆಪಿ ಕೂಡ ಪರಿಶಿಷ್ಟರನ್ನು ವಿನಾಕಾರಣ ಮೈಮೇಲೆ ಎಳೆದುಕೊಂಡಿದೆ. ಧಾಂಧೂಂ, ಢಂಢಮಾರ್ ಹೇಳಿಕೆಗಳಿಂದ ಪಕ್ಷದ ‘ಅಂತಾರಾಷ್ಟ್ರೀಯ ಮುಖಂಡ’ರಾಗಿ ಹೊರಹೊಮ್ಮಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಯಾವುದೇ ಪ್ರಚೋದನೆ ಇಲ್ಲದಿದ್ದರೂ ಅಂಬೇಡ್ಕರ್ ತಂಡ ವಿರಚಿತ ಸಂವಿಧಾನದ ಬದಲಾವಣೆ ಆಗಬೇಕು ಎಂಬ ಅನಾಹುತಕಾರಿ ಹೇಳಿಕೆ ಕೊಟ್ಟರು. ಇದು ಪರಿಶಿಷ್ಟರ ಸ್ವಾಭಿಮಾನ ಕೆರಳಿಸಿ, ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೂ ಕಾರಣವಾಯಿತು. ಪುಣ್ಯಾತ್ಮ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮನ್ನು ಟೀಕಿಸಿದರವನ್ನು, ‘ಬೀದಿನಾಯಿಗಳು ನಾನ್ಯಾಕೆ ತಲೆಕೆಡಿಸಿಕೊಳ್ಳಲಿ’ ಎಂದು ಮೂದಲಿಸಿದರು.

ಅವರ ಪ್ರಕಾರ ಬೀದಿನಾಯಿಗಳು ಅಂದರೆ ಯಾರು? ಪರಿಶಿಷ್ಟರಿಗೆ ಇದು ಅರ್ಥವಾಗದ ವಿಚಾರವೇನೂ ಅಲ್ಲ. ಹಿಂದೆ ಯಡಿಯೂರಪ್ಪ ಅವರು ದಲಿತರ ಮನೆಗಳಲ್ಲಿ ಉಪಾಹಾರ ಸೇವನೆ ಮಾಡಿ ಆ ಸಮುದಾಯವನ್ನು ಒಲಿಸಿಕೊಳ್ಳಲು ಯತ್ನಿಸಿದ್ದರು. ಯಾಕೆಂದರೆ 2008 ರಲ್ಲಿ ಆ ಸಮುದಾಯ ತಮ್ಮ ಪಕ್ಷದ ಕೈಹಿಡಿದಿದ್ದುದು ಅವರ ಸ್ಮೃತಿಪಟಲದಲ್ಲಿ ಅಚ್ಚಾಗಿ ಉಳಿದಿತ್ತು. ಆದರೆ ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಗಾದೆ ಮಾತಿನಂತೆ ಯಡಿಯೂರಪ್ಪ ಹಾಕಿದ್ದ ಶ್ರಮವನ್ನೆಲ್ಲ ಹೆಗಡೆ ಅವರು ‘ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದಂತೆ’ ಮಾಡಿಬಿಟ್ಟರು. ಒಂದು ಕಡೆ ನಾಯಕರು ಕಟ್ಟುವ ಕೆಲಸ ಮಾಡುತ್ತಿದ್ದರೆ ಇನ್ನೊಂದೆಡೆ ಹೆಗಡೆ ಅಂಥವರಿಂದ ಕೆಡವುವ ಕೆಲಸ. ಈ ಪ್ರಸಂಗದ ನಂತರ ಅನಂತಕುಮಾರ ಹೆಗಡೆ ಬಾಯಿಗೆ ರಾಷ್ಟ್ರೀಯ ನಾಯಕರೇ ಬೀಗ ಜಡಿದಿದ್ದಾರೆ ಎಂಬುದು ಬೇರೆ ಮಾತು. ಆದರೆ ಆಗಿರುವ ಅನಾಹುತ ಅನಾಹುತವೇ ಅಲ್ಲವೇ? ಈಗ ಆಗಿರುವ ಹಾನಿ ಸರಿಪಡಿಸಿಕೊಳ್ಳಲು ಯಡಿಯೂರಪ್ಪ ಮತ್ತೆ ಸ್ಲಂಗಳಲ್ಲಿ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.

ಜಾತಿ ಸಮೀಕರಣ ಮತಹಂಚಿಕೆ ಪ್ರಕಾರ ಒಟ್ಟಾರೆ ಪರಿಶಿಷ್ಟರ ಮತಗಳ ಪೈಕಿ ಶೇಕಡಾ 30 ರಿಂದ 50 ರಷ್ಟು ಕಾಂಗ್ರೆಸ್‌ಗೆ, ಶೇಕಡಾ 20 ರಿಂದ 30 ರಷ್ಟು ಬಿಜೆಪಿಗೆ ಹೋಗಿ ಜೆಡಿಎಸ್‌ಗೆ ಶೇಕಡಾ 20 ರಿಂದ 25 ಮತಗಳು ಬಂದರೂ 15 ರಿಂದ 20 ಸೀಟುಗಳು ಹೆಚ್ಚಿಗೆ ಸಿಗುತ್ತವೆ. ಏಕೆಂದರೆ ಇಲ್ಲಿ ಪರಿಶಿಷ್ಟ ಮತಗಳ ಜತೆಗೆ ಜೆಡಿಎಸ್ ಪ್ರಬಲ ಶಕ್ತಿಯಾಗಿರುವ ಒಕ್ಕಲಿಗ ಮತಗಳೂ ಕೂಡಿಕೊಳ್ಳುತ್ತವೆ. ಮತರಾಜಕೀಯದಲ್ಲಿ ಯಾವುದೇ ಒಂದು ಜಾತಿ ನಂಬಿ ಯಾರೂ ರಾಜ್ಯಾಭಾರ ಮಾಡಲು ಆಗುವುದಿಲ್ಲ. ಸೀಟುಗಳನ್ನು ಗೆಲ್ಲಲ್ಲೂ ಆಗುವುದಿಲ್ಲ. ಒಂದು ಸಮುದಾಯದ ಪ್ರಾಬಲ್ಯಕ್ಕೆ ಮತ್ತೊಂದು ಸಮುದಾಯದ ಬೆಂಬಲ ಬೇಕೇ ಬೇಕು. ಅದು ಲಿಂಗಾಯತರೇ ಇರಲಿ, ಕುರುಬರೇ ಇರಲಿ, ಅಲ್ಪಸಂಖ್ಯಾತ ಸಮುದಾಯದ ಮತಗಳೇ ಇರಲಿ. ಒಂದು ಮತ್ತೊಂದರ ಜತೆಗೆ ಕೈಜೋಡಿಸಿದರೆ ಇಬ್ಬರಿಗೂ ಲಾಭ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹೊಡೆತ ತಿಂದಿರುವುದರಿಂದ ಪರಿಶಿಷ್ಟರ ಅನಿವಾರ್ಯ ಪರ್ಯಾಯ ಜೆಡಿಎಸ್ ಆಗುತ್ತದೆ ಎಂಬ ಅಚಲ ನಂಬಿಕೆ ಗೌಡರದು. ಜೆಡಿಎಸ್-ಬಿಎಸ್ಪಿ ಮೈತ್ರಿ ನಂಬಿಕೆಯ ಸಂಕೇತ!

ಲಗೋರಿ : ಲೆಕ್ಕದಲ್ಲಿ ಸರಿ, ತಪ್ಪು ಎರಡೂ ಇರುತ್ತದೆ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply