ಜನಮನ ಗೆಲ್ಲೋ ಗುಟ್ಟು ಕಲಿತ ರಾಹುಲ್!

ಡಿಜಿಟಲ್ ಕನ್ನಡ ವಿಶೇಷ:

ಪ್ರಧಾನಿ ನರೇಂದ್ರ ಮೋದಿಗೆ ದೇಶದ ಜನರ ನಾಡಿ ಮಿಡಿತ ಅರ್ಥವಾಗಿದೆ. ದೇಶಾಭಿಮಾನದ ಹೆರಸಲ್ಲಿ ಭಾಷಣ ಮಾಡಿ ಜನರನ್ನ ಸೆಳೆಯುವುದು ಅವರ ತಂತ್ರ. ಇದೀಗ ಜನರನ್ನ ಸೆಳೆಯುವ ಗುಟ್ಟು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೂ ಅರ್ಥವಾದಂತೆ ಕಾಣ್ತಿದೆ. ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ ಜೊತೆಗೆ ಸಮಾವೇಶದಲ್ಲಿ ಅಬ್ಬರಿಸುತ್ತಿದ್ದಾರೆ. ರೋಡ್ ಶೋಗಳಲ್ಲಿ ಪ್ರಧಾನಿ ಮೋದಿಗೆ ಗುಜರಾತ್ ನಲ್ಲಿ ಸೇರುವ ಸಾವಿರಾರು ಮಂದಿ ರಾಹುಲ್ ಗಾಗಿ ಕಾದು ಕುಳಿತ್ತಿರುತ್ತಾರೆ. ರಾಹುಲ್ ಕೂಡ ಅವರನ್ನು ನಿರಾಸೆ ಮಾಡದೆ ಹ್ಯಾಂಡ್ ಶೇಕ್ ಮಾಡುತ್ತಾ ಸಾಗುತ್ತಿದ್ದಾರೆ. ಸಾಗರೋಪಾದಿಯಲ್ಲಿ ಸೇರುತ್ತಿರುವ ಜನಸಂಖ್ಯೆ ಕಾಂಗ್ರೆಸ್ ನಾಯಕರ ಹುಮ್ಮಸ್ಸು ಇಮ್ಮಡಿಗೊಳ್ಳುವಂತೆ ಮಾಡಿದೆ.

ಜನಾಶೀರ್ವಾದ ಹೆಸರಲ್ಲಿ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತ ಜನರನ್ನು ಆಕರ್ಷಿಸುತ್ತ ಸಾಗುತ್ತಿದ್ದಾರೆ. ರಾಯಚೂರಿನಲ್ಲಿ ಪ್ರವಾಸ ಮುಂದುವರಿಸಿರುವ ರಾಹುಲ್, ದೇವದುರ್ಗಕ್ಕೆ ತೆರಳುವ ಮಾರ್ಗದಲ್ಲಿ ರಸ್ತೆ ಪಕ್ಕದ ಮಾರವ್ವನ ಹೋಟೆಲ್ ನಲ್ಲಿ ಬಜ್ಜಿ, ಮಂಡಕ್ಕಿ, ಖಡಕ್ ಚಹಾ ಹೀರಿ ಗಮನಸೆಳೆದ್ರು. ಡೈಲಿ ಎಷ್ಟು ವ್ಯಾಪಾರ ಮಾಡ್ತೀರಿ ಎಂದು ಅಜ್ಜಿಯನ್ನು ರಾಹುಲ್ ಪ್ರಶ್ನಿಸಿದಾಗ, ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ 2 ಸಾವಿರ ನೋಟನ್ನು ಹೋಟೆಲ್ ನವರಿಗೆ ನೀಡಿದ್ರು. ಕಾಂಗ್ರೆಸ್ ನಾಯಕರು ಹೋಟೆಲ್ ಬಂದಿದ್ದರಿಂದ ಖುಷಿಯಾಗಿದ್ದ ಮಾಲೀಕರು ಹಣ ವಾಪಸ್ ನೀಡಿದ್ರು. ಇದಕ್ಕೂ ಮೊದಲು ಗಂಜ್ ಸರ್ಕಲ್ ನ ದರ್ಗಾಗೆ ಭೇಟಿ ಕೊಟ್ಟು, ಟೆಂಪಲ್ ರನ್ ನಡುವೆ ದರ್ಗಾ ರನ್ ಕೂಡ ಗಮನಸೆಳೆದಿದೆ. ರಸ್ತೆಯಲ್ಲೇ ನಿಂತು ಭಾಷಣ ಮಾಡಿದ ರಾಹುಲ್ ಗೆ ಭಾರೀ ಶಿಳ್ಳೆ ಚಪ್ಪಾಳೆ ಸಿಕ್ಕಿದೆ.

ದೇವದುರ್ಗದಲ್ಲಿ ನಡೆದ ಆದಿವಾಸಿಗಳ ಸಮಾವೇಶದಲ್ಲಿ ರಾಹುಲ್​ ಅಬ್ಬರಿಸಿದ್ದು, ಗುಜರಾತ್​ನಲ್ಲಿ ಆದಿವಾಸಿಗಳ ಭೂಮಿಯನ್ನು ಕಿತ್ತುಕೊಂಡ ಮೋದಿ, ಟಾಟಾ ನ್ಯಾನೋ ಕಾರು ಉತ್ಪಾದನಾ ಘಟಕಕ್ಕೆ ಕೊಟ್ಟಿದ್ದಾರೆ. ಯುಪಿಎ ಸರ್ಕಾರದಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಮೀಸಲಿಟ್ಟ ಹಣವನ್ನು ಟಾಟಾ ಸಂಸ್ಥೆಗೆ ಸಾಲದ ರೂಪದಲ್ಲಿ ನೀಡಿದ್ದಾರೆ ಎಂದು ಕಿಡಿಕಾರಿದ್ರು. ಇಷ್ಟೇ ಅಲ್ಲದೇ ಆದಿವಾಸಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ದೇಶಾದ್ಯಂತ 54 ಸಾವಿರ ಕೋಟಿ ಮೀಸಲಿಟ್ಟಿದೆ. ಆದ್ರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಒಂದೇ ರಾಜ್ಯಕ್ಕೆ 27 ಸಾವಿರ ಕೋಟಿ ಮೀಸಲಿಟ್ಟಿದೆ. ಮೋದಿಗೆ ಆದಿವಾಸಿಗಳ ಪರವಿಲ್ಲ ಎನ್ನುವ ಮೂಲಕ ಅಬ್ಬರಿಸಿದ್ದಾರೆ.

ಪ್ರಚಾರದ ಮೊರೆ ಹೋದ ರಾಹುಲ್ ಗಾಂಧಿ ನಿನ್ನೆ ಕೊಪ್ಪಳದಲ್ಲಿ ಬಸ್ ಹಿಂದೆ ಓಡಿ ಬರುತ್ತಿದ್ದ ಬಾಲಕನ್ನು ಅಪ್ಪಿಕೊಂಡು ಫೋಟೋಗೆ ಪೋಸ್ ನೀಡಿದ್ರು.‌ ಇಂದು ದೇವದುರ್ಗಕ್ಕೆ ತೆರಳುವಾಗ ತೆರಳುವಾಗ ಬಾಲಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಬಸ್ ಏರಿಬಿಟ್ಟ. ಈ ವೇಳೆ ತಾವುದೇ ಅಮ್ಮುಬಿಮ್ಮು ತೋರಿಸದ ರಾಹುಲ್ ಗಾಂಧಿ ಸೆಲ್ಫಿಗೆ ಪೋಸ್ ಕೊಟ್ಟು ಕಳುಹಿಸಿದ್ದಾರೆ. ಜೊತೆಗೆ ಸಮಾವೇಶಕ್ಕೂ ಮೊದಲು ಯುವಕರು ರಾಹುಲ್ ಜೊತೆ ಸೆಲ್ಫಿಗಾಗಿ ಮುಗಿಬಿದ್ರು. ಈ ವೇಳೆ ಜನರನ್ನು ತಡೆಯಲು ಎಸ್ ಪಿ ಜಿ ತಂಡೆ ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು. ಒಟ್ಟಾರೆ ವೇದಿಕೆ ಮೇಲೆ ಎಷ್ಟೇ ಮಾತನಾಡಿದರೂ ವ್ಯರ್ಥ ಅನ್ನೋದನ್ನು ಅರಿತಿರುವ ರಾಹುಲ್ ಗಾಂಧಿ ಜನಸಾಮಾನ್ಯರ ಜೊತೆ ಬೆರೆಯೋದನ್ನು ಕಲಿತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿಯೂ ಆಗಿದ್ದಾರೆ. ಇದೇ ಜನಾಭಿಮಾನ ಮತಗಳಾಗಿ ಬದಲಾಗುತ್ತವಾ ಅಂದ್ರೆ ಹೌದ ಅಂತ ಹೇಳುವುದಕ್ಕೆ ಧೈರ್ಯ ಸಾಲಲ್ಲ. ಯಾಕಂದ್ರೆ ಇನ್ನೂ ತುಂಬಾ ಕಾಲಾವಕಾಶ ಇದೆ.

Leave a Reply