ಹಫೀಜ್ ಸಯೀದ್ ಉಗ್ರ ಎಂದು ಪಾಕಿಸ್ತಾನ ಘೋಷಣೆ, ಈ ವಿಚಾರದಲ್ಲಿ ಪರೋಕ್ಷವಾಗಿ ಭಾರತದ ಮುಂದೆ ಚೀನಾ ಸೋತಿದ್ದು ಹೇಗೆ?

ಡಿಜಿಟಲ್ ಕನ್ನಡ ವಿಶೇಷ:

ಜಾಗತಿಕ ಮಟ್ಟದಲ್ಲಿ ಭಾರತ ಹಾಗೂ ಅಮೆರಿಕದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನನ್ನು ಉಗ್ರ ಎಂದು ಪರಿಗಣಿಸಿದೆ. ಇದರೊಂದಿಗೆ ಉಗ್ರರ ವಿಚಾರದಲ್ಲಿ ಪರೋಕ್ಷವಾಗಿ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದ ಚೀನಾಕ್ಕೆ ಮುಖಭಂಗವಾಗಿದೆ.

1997ರ ಭಯೋತ್ಪಾದನಾ ನಿಗ್ರಹ ಕಾಯಿದೆಯನ್ನು ತಿದ್ದುಪಡಿ ಮಾಡಿದ ಪಾಕ್ ಅಧ್ಯಕ್ಷ ಮನ್ಮೂನ್ ಹುಸೇನ್ ಭಯೋತ್ಪಾದನ ನಿಗ್ರಹ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಇದರ ಪ್ರಕಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಷೇಧಿಸಿರುವ ಭಯೋತ್ಪಾದನಾ ಸಂಘಟನೆಗಳು ಹಾಗೂ ವ್ಯಕ್ತಿಗಳನ್ನು ಮಟ್ಟಹಾಕಬೇಕು. ಈ ಸುಗ್ರೀವಾಜ್ಞೆಯ ಪ್ರಕಾರದಲ್ಲಿ ಹಫೀಜ್ ಕೂಡ ವಿಶ್ವಸಂಸ್ಥೆ ಉಗ್ರ ಪಟ್ಟಿಯಲ್ಲಿದ್ದು, ಆತನ್ನು ಉಗ್ರ ಎಂದು ಪರಿಗಣಿಸಬೇಕಾಗಿದೆ. ಕೇವಲ ಹಫೀಜ್ ಸಯೀದ್ ಮಾತ್ರವಲ್ಲದೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಷೇಧಿಸಿರುವ ಅಲ್ ಖೈದಾ, ತಾಲಿಬಾನ್, ಲಷ್ಕರ್ ಇ ತೊಯ್ಬಾ, ಲಷ್ಕರ್ ಇ ಝಾಂಗ್ವಿ, ಜಮಾತ್ ಉದ್ ದವಾ, ಫಲಾಹ್ ಇನ್‌ಸಾನಿಯತ್ ಫೌಂಡೇಶನ್ (ಎಫ್‌ಐಎಫ್) ಸೇರಿದಂತೆ ಇತರೆ ಸಂಘಟನೆಗಳನ್ನು ನಿಷೇಧಿಸಿದ್ದು, ಇವುಗಳ ವಿರುದ್ಧವೂ ಪಾಕಿಸ್ತಾನ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಸುಗ್ರೀವಾಜ್ಞೆ ತಕ್ಷಣದಿಂದಲೇ ಜಾರಿಯಾಗೊಳಿಸಲು ನಿರ್ಧರಿಸಿದ್ದು, ಈ ನಿಷೇಧಿತ ಸಂಘಟನೆಗಳ ಆಸ್ತಿ ಮುಟ್ಟಗೋಲು ಹಾಕಿಕೊಳ್ಳಲಾಗುವುದು.

ಇಷ್ಟು ದಿನಗಳ ಕಾಲ ಯಾರ ಮಾತು ಕೇಳದೇ ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ನವರಂಗಿ ಆಟವಾಡುತ್ತಿದ್ದ ಪಾಕಿಸ್ತಾನ ಈಗ ಇದ್ದಕ್ಕಿದ್ದಂತೆ ಹಫೀಜ್ ಸಯೀದ್ ನನ್ನು ಉಗ್ರ ಎಂದು ಪ್ರಕಟಿಸಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸೋದು ಸಹಜ. ಅದಕ್ಕೆ ಪ್ರಮುಖ ಕಾರಣ ಇದೇ ತಿಂಗಳು ಪ್ಯಾರಿಸ್ ನಲ್ಲಿ ನಡೆಯಲಿರುವ ಎಫ್‌ಎಟಿಎಫ್ (ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ‌ಫೋರ್ಸ್) ಸಭೆ. ಅದು ಹೇಗೆ ಅಂದರೆ, ವಿಶ್ವದ ಬಹುತೇಕ ರಾಷ್ಟ್ರಗಳನ್ನು ಹೊಂದಿರುವ ಈ ವೇದಿಕೆಯಲ್ಲಿ ಹಣ ಅವ್ಯವಹಾರ, ಭಯೋತ್ಪಾದನೆಗೆ ಆರ್ಥಿಕ ನೆರವು ಸೇರಿದಂತೆ ಇತರೆ ಕಾನೂನು ಬಾಹೀರ ಚಟುವಟಿಕೆಗಳ ನಿಯಂತ್ರಣಕ್ಕೆ ಅಗತ್ಯ ಕಾನೂನು ರೂಪಿಸಲಾಗುತ್ತದೆ.

ಫೆ.18-22ರವರೆಗೆ ಸರ್ವಸದಸ್ಯರ ಸಭೆ ನಡೆಯಲಿದ್ದು, ಇಲ್ಲಿ ಭಯೋತ್ಪಾದನೆ ವಿಚಾರವಾಗಿ ಭಾರತ ಹಾಗೂ ಅಮೆರಿಕ ತನ್ನನ್ನು ಮೂಲೆ ಗುಂಪು ಮಾಡುವ ಆತಂಕ ಪಾಕಿಸ್ತಾನವನ್ನು ಕಾಡಲಾರಂಭಿಸಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಬುದ್ಧಿವಂತಿಕೆ ಬಳಸಿ ಭಯೋತ್ಪಾದನೆ ಕುರಿತಾಗಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಭಾರತ ಹಾಗೂ ಅಮೆರಿಕದ ಪ್ರಯತ್ನಗಳಿಗೆ ಅಡ್ಡಿಯಾಗಿ ನಿಲ್ಲುತ್ತಿದ್ದ ಚೀನಾ, ಎಫ್‌ಎಟಿಎಫ್ ಸಭೆಯಲ್ಲಿ ಸರಿಯಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕಳೆದ ವರ್ಷ ನಡೆದ ಎಫ್‌ಎಟಿಎಫ್ ಸಭೆಯಲ್ಲಿ ಚೀನಾದ ವಿರೋಧದ ನಡುವೆ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣ ವಿವರ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಈಗ ಈ ಬಾರಿಯ ಸಭೆಯಲ್ಲಿ ಮತ್ತೆ ಭಾರತ ಹಾಗೂ ಅಮೆರಿಕ ಭಯೋತ್ಪಾದನೆ ವಿಚಾರವನ್ನು ಮುಂದಿಟ್ಟುಕೊಂಡು ಪಾಕಿಸ್ತಾನವನ್ನು ಮೂಲೆಗುಂಪು ಮಾಡುವ ಆತಂಕ ನಿರ್ಮಾಣವಾಗಿದೆ. ಅತ್ತ ಪಾಕಿಸ್ತಾನಕ್ಕೆ ಹಿಂದೆಯಿಂದ ಪ್ರೋತ್ಸಾಹ ನೀಡುತ್ತಿದ್ದ ಚೀನಾ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ.

ಕಳೆದ ವರ್ಷ ಗೃಹ ಬಂಧನದಿಂದ ಬಿಡುಗಡೆಯಾಗಿದ್ದ ಹಫೀಜ್, ಮಿಲ್ಲಿ ಮುಸ್ಲಿಂ ಲೀಗ್ ಪಕ್ಷ ಸ್ಥಾಪಿಸಿ ಈ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದ. ಅಲ್ಲದೆ 2018ರ ವರ್ಷವನ್ನು ಕಾಶ್ಮೀರದ ಹೋರಾಟಕ್ಕೆ ಮೀಸಲಿಡುತ್ತೇನೆ ಎಂದು ಸವಾಲು ಹಾಕಿದ್ದ. ಆದರೆ ಈಗ ಹೊರಡಿಸಲಾಗಿರುವ ನೂತನ ಸುಗ್ರೀವಾಜ್ಞೆ ಹಫೀಜ್ ಗೆ ಅಂಕುಶವಾಗಿ ಪರಿಣಮಿಸಿದೆ.

Leave a Reply