ಶತ್ರು ಸಂಹಾರ ಅಮವಾಸ್ಯೆ ಪೂಜೆ: ದೇವೇಗೌಡರಿಗೇ ಶಿಷ್ಯರ ತಿರುಮಂತ್ರ!

ಡಿಜಿಟಲ್ ಕನ್ನಡ ಟೀಮ್:
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಎಲ್ಲಾ ಪಕ್ಷಗಳ ನಾಯಕರು ದೇಗುಲ, ಮಸೀದಿ, ಚರ್ಚ್ ಗಳಿಗೆ ಪರೇಡ್ ನಡೆಸುತ್ತಿದ್ದಾರೆ. ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರೂ ಹೊರತಲ್ಲ. ಅಪಾರ ದೈವ ಭಕ್ತಿ ಇರುವ ದೇವೇಗೌಡರು ಕುಟುಂಬ ಸಮೇತ ಹಲವಾರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ದೇವೇಗೌಡ್ರು ರಾಜಕೀಯ ಎದುರಾಳಿಗಳನ್ನು ಮಣಿಸುವ ಉದ್ದೇಶದೊಂದಿಗೆ 9 ಅಮವಾಸ್ಯೆ ಪೂಜೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ಗೌಡರ ಗರಡಿಯಲ್ಲೇ ಪಳಗಿದ ಶಿಷ್ಯಂದಿರು ದೈವಿ ಶಕ್ತಿ ಮೂಲಕವೇ ಗೌಡರಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ.
ಕಳೆದ ವರ್ಷ ಜೆಡಿಎಸ್ ವರಿಷ್ಠ ದೇವೇಗೌಡ್ರು ಅಮವಾಸ್ಯೆ ಪೂಜೆ ನಡೆಸಿದ್ರು. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಮತ್ತು ವಿರೋಧಿಗಳ ಸಂಹಾರಕ್ಕಾಗಿ ಶತ್ರು ಸಂಹಾರ ಯಾಗ ಮಾಡಿದ್ದಾರೆ ಅನ್ನೋ ಸುದ್ದಿಯಾಗಿತ್ತು. ಇದೀಗ ನಾಗಮಂಗಲ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿಯ ನೇತೃತ್ವದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ರಮೇಶ್ ಬಾಬು ಬಂಡ್ಡಿಸಿದ್ದೇಗೌಡ ಹಾಗೂ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಶ್ರೀ ಕ್ಷೇತ್ರ ಆದಿ ಚುಂಚನಗಿರಿಯಲ್ಲಿ ದಂಪತಿ ಸಮೇತರಾಗಿ ಶ್ರೀ ಕಾಲ ಭೈರವೇಶ್ವರನಿಗೆ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ದಾರೆ.
ಈ ಪೂಜೆ ಯಾರ ವಿರುದ್ಧವೂ ಅಲ್ಲ. ರಾಜ್ಯಕ್ಕೆ ಉತ್ತಮ ಮಳೆ ಬೆಳೆ ಆಗಲಿ ಅನ್ನೋ ಕಾರಣಕ್ಕೆ ಪೂಜೆ ಮಾಡಿದ್ದೇವೆ ಎಂದಿದ್ದಾರೆ ಬಂಡಾಯ ಶಾಸಕರು. ಆದ್ರೆ ಚಲುವರಾಯಸ್ವಾಮಿ ಮಾತನಾಡುತ್ತ ಚುನಾವಣೆ ಹತ್ತಿರ ಬರ್ತಿದೆ. ಆ ಕಾರಣಕ್ಕಾಗಿಯೇ ನಾವು ಪೂಜೆ ಮಾಡಿದ್ದೇವೆ.  ಕುಮಾರಸ್ವಾಮಿ ಪದೇ ಪದೇ ಬಂಡಾಯ ಶಾಸಕರು ತಪ್ಪು ಮಾಡಿದ್ದಾರೆ ಎನ್ನುತ್ತಾರೆ. ನಾವ್ಯಾರು ತಪ್ಪು ಮಾಡಿಲ್ಲ ಎಂದು ಈ ಕಾಲ ಭೈರವೇಶ್ವರನ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೇಳಿದ್ದೇನೆ. ಒಂದು ವೇಳೆ ನಾವು ತಪ್ಪು ಮಾಡಿದ್ದರೆ, ಆ ದೇವರೇ ಶಿಕ್ಷೆ ಕೊಡಲಿ ಎಂದಿದ್ದಾರೆ. ಇನ್ನು ಇವತ್ತಿನ ಬಂಡಾಯ ಶಾಸಕರ ಅಮವಾಸ್ಯೆ ಪೂಜೆ ಅವ್ರ ರಾಜಕೀಯ ಬದುಕಿನ ಕೊನೆಯ ಹೋರಾಟ ಅನ್ನೋ ಮಾತುಗಳು ಕೇಳಿ ಬಂದಿದ್ದು, ಪೂಜೆ ಪುರಸ್ಕಾರದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುವ ದೊಡ್ಡ ಗೌಡರಿಗೆ ಧಾರ್ಮಿಕವಾಗಿಯೇ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ ಶಿಷ್ಯಂದಿರು ಎಂದರೆ ತಪ್ಪಲ್ಲ.

Leave a Reply