ಶೋಭಾ ಪಕ್ಕದಲ್ಲಿ ಕೂರಿಸ್ಕೊಂಡು ಯಡಿಯೂರಪ್ಪ ತಪ್ಪು ಮಾಡಿದ್ರಾ?

ಡಿಜಿಟಲ್ ಕನ್ನಡ ಟೀಮ್:

ಶೋಭಾ ಕರಂದ್ಲಾಜೆ ಅವರನ್ನು ಆಪ್ತ ವಲಯದಲ್ಲಿ ಇಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಪ್ಪು ಮಾಡಿದ್ರಾ? ಈ ಮಾತು ಬಿಜೆಪಿ ರಾಜ್ಯ ನಾಯಕರ ವಲಯದಲ್ಲಿ ಸಾಕಷ್ಟು ಬಾರಿ ಚರ್ಚೆಯಾದ ವಿಚಾರ. ಇದೀಗ ಮತ್ತೆ ಆ ಪ್ರಶ್ನೆ ಮೂಡಿದೆ. ಈ ಬೆಳವಣಿಗೆಗೆ ಸ್ವತಃ ಯಡಿಯೂರಪ್ಪ ಅವರೇ ಕಾರಣ. ಯಾಕಂದ್ರೆ ಅವರೇ ಈ ಮಾತನ್ನು ಹೇಳಿದ್ದಾರೆ. ಒಪ್ಪಿಕೊಂಡಿದ್ದಾರೆ. “ಶೋಭಾರನ್ನು ಪಕ್ಕದಲ್ಲಿ ಕೂರಿಸಿಕೊಂಡು ತಪ್ಪು ಮಾಡಿದೆ” ಎಂದಿದ್ದಾರೆ. ಪಶ್ಚಾತ್ತಾಪದ ಮಾತೋ.. ತಮಾಷೆಗೆ ಹೇಳಿದ್ದೋ ಅನ್ನೋ ಪ್ರಶ್ನೆ ಬೇರೆ. ಆದರೆ ಮನಸ್ಸಿನಲ್ಲಿದ್ದ ಮಾತು ಹೊರಬಿತ್ತು ಅನ್ನೋ ಗುಸುಗುಸು ಬಿಎಸ್ ಯಡಿಯೂರಪ್ಪ ಮಾತಿನ ಬಳಿಕ ಕಿವಿಯಿಂದ ಕಿವಿಗೆ ಹರಿದಾಡ್ತಿತ್ತು.

ಬಿಎಸ್ ವೈ ಅವರ ಮಾತಿಗೆ ಕಾರಣವೂ ಇದೆ. ಬೆಂಗಳೂರಿನ ಬಂಜಾರ ಸಮಾವೇಶದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಇಬ್ಬರು ಭಾಗಿಯಾಗಿದ್ರು. ಅಲ್ಲಿನ ಮಹಿಳಾ ನಾಯಕಿಯೊಬ್ಬರು ಮಾತನಾಡುತ್ತಾ ಅಪ್ಪಾಜಿ ಅವರು, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸಿಎಂ ಮಾಡಬೇಕು, ಅದಕ್ಕೆ ಅಪ್ಪಾಜಿ ಅವರ ಆಶೀರ್ವಾದ ಬೇಕು, ಶೋಭಾ ಮೇಡಂ ಸಿಎಂ ಆಗಬೇಕು ಅನ್ನೋದು ನಮ್ಮ ಆಸೆ ಅಂದ್ರು.. ಈ ಹೇಳಿಕೆ ವೇದಿಕೆಯಲ್ಲಿದ್ದ ಬಿಎಸ್ ಯಡಿಯೂರಪ್ಪ ಅವರಿಗೆ ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಈ ಸಂದರ್ಭವನ್ನು ಪ್ಯಾಚ್ ಅಪ್ ಮಾಡಲು ಪಕ್ಕದಲ್ಲಿದ್ದ ಶೋಭಾ ಅವರನ್ನು ನೋಡಿ ನಸುನಕ್ಕೆ ಬಿಎಸ್ ಯಡಿಯೂರಪ್ಪ ಪಕ್ಕದಲ್ಲಿ ಶೋಭಾ ಅವರನ್ನು ಕೂರಿಸಿಕೊಂಡು ನಾನು ತಪ್ಪು ಮಾಡಿದೆ ಅಂತ ಹೇಳಿದ್ರು.

ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಸಿಎಂ ಆಗುವ ಉಮೇದಿನಲ್ಲಿರುವ ಬಿಎಸ್ ಯಡಿಯೂರಪ್ಪಗೆ ಬಂಜಾರ ಸಮಾವೇಶದಲ್ಲಿ ಈ ರೀತಿಯ ಪ್ರಸಂಗ ಎದುರಾಗುತ್ತೆ ಅನ್ನೋ ಊಹೆ ಕೂಡ ಇರಲಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಆಗಿರೋದ್ರಿಂದ ಜೈಕಾರ, ಜಿಂದಾಬಾದ್ ಘೋಷಣೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾಗವಹಿಸಿದ್ದ ಯಡಿಯೂರಪ್ಪ ಪೆಚ್ಚು ಮೋರೆ ಹಾಕುವ ಪರಿಸ್ಥಿತಿ ಬಂದೊದಗಿತು. ಇದರಿಂದ ಪಾರಾಗಲು ಈ ಮಾತು ಹೇಳಿದ್ದು ಸತ್ಯ. ಆದರೆ ಪಕ್ಷದಲ್ಲಿ ಶೋಭಾ ಕರಂದ್ಲಾಜೆ ಬಿಎಸ್ ಯಡಿಯೂರಪ್ಪ ಅವರನ್ನೇ ರೋಲ್ ಮಾಡೆಲ್ ಆಗಿ ಅನುಕರಿಸುತ್ತಾ ಸಾಗುತ್ತಿರುವ ಮಹಿಳಾ ನಾಯಕಿ. 90ರ ದಶಕದಲ್ಲಿ ಬಿಎಸ್ ಯಡಿಯೂರಪ್ಪ ಯಾವ ರೀತಿ ಫೈರ್ ಬ್ರಾಂಡ್ ಆಗಿದ್ದರೋ ಅದೇ ದಾರಿಯಲ್ಲಿ ಸಾಗಿರುವ ಈಗಿನ ನಾಯಕರಲ್ಲಿ ಶೋಭಾ ಒಂದು ಕೈ ಮೇಲು. ಅದೇ ಕಾರಣಕ್ಕೆ ಬಿಎಸ್ ವೈ ಕೆಲವೊಮ್ಮೆ ಶೋಭಾ ಅವರಿಗೆ ಮಹತ್ವ ಕೊಡುವುದು ಸತ್ಯ. ಆದರೇ ಅದನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಪಕ್ಷೀಯ ನಾಯಕರು ಬಿಎಸ್ ವೈ ಸುತ್ತಮುತ್ತ ಶೋಭಾ ಒಬ್ಬರೇ ಇರುತ್ತಾರೆ. ನಮ್ಮನ್ನು ಬಿಎಸ್ ವೈ ಕಡೆಗಣಿಸಿದ್ದಾರೆ ಅಂತ ಹೈಕಮಾಂಡ್ ಮಟ್ಟದಲ್ಲಿ ದೂರು ಸಲ್ಲಿಸ್ತಾರೆ. ಆದ್ರೀಗ ಅದೇ ಶೋಭಾ ಮೇಡಂ ಬಿಎಸ್ ವೈ ಬುಡಕ್ಕೆ ಬಂದಿರೋದ್ರಿಂದ ಬಿಎಸ್ ಯಡಿಯೂರಪ್ಪ ಅವರಿಗೆ ಕ್ಷಣಕಾಲ ದಿಗುಲು ಹುಟ್ಟಿಸಿದ್ದು ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಮಾತು ಹೇಳಿರುವ ಸಾಧ್ಯತೆ ಇರಬಹುದು. ಅದನ್ನು ನಗುಮೊಗದಲ್ಲಿ ಹೇಳಿ ಮುಗಿಸಿದ್ರು ಅಷ್ಟೆ.

Leave a Reply