ವಿರಾಗಿಗೆ ಮಹಾಮಜ್ಜನ!

ಡಿಜಿಟಲ್ ಕನ್ನಡ ಟೀಮ್:

ಬಿಸಿಲ ಝಳಕ್ಕೆ ಮೈಯೊಡ್ಡಿ ಶತಮಾನದಿಂದ ನಿಂತ ವೈರಾಗಿ ಬಾಹುಬಲಿಗೆ ಕ್ಷೀರಧಾರೆಯ ಅಭ್ಯಂಜನ. ಸುಡು ಬಿಸಿಲಿನ ನಡುವೆ ಬಾಹುಬಲಿಯ ನೆತ್ತಿ ಮೇಲೆ ಅಷ್ಟದ್ರವ್ಯದ ಮಜ್ಜನ ಈ ಶತಮಾನದ ಎರಡನೇ ಮಹಾ ನೇತ್ಯೋತ್ಸವದ ಅದ್ದೂರಿ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಈ ಅಭೂತಪೂರ್ವ ಕ್ಷಣವನ್ನು ಸಾವಿರಾರು ಮಂದಿ ಕಂಡು ಪುನೀತರಾದರು.

ರಾಜಸ್ಥಾನ ಮೂಲದ ಆಶೋಕ್ ಪಾಟ್ನಿ ಕುಟುಂಬದ ಸದಸ್ಯರು, ಮೊದಲ ಕಳಶವನ್ನು ಬಾಹುಬಲಿ ಮೇಲೆ ಸುರಿದ ಕ್ಷಣದಲ್ಲಿ ಬೆಟ್ಟದ ಮೇಲೆ ನೆರದಿದ್ದ ಐದು ಸಾವಿರಕ್ಕೂ ಹೆಚ್ಚು ಗಣ್ಯರು ಜಯಘೋಷ ಕೂಗಿದರು. ಶನಿವಾರದ ಮುಂಜಾವಿನಿಂದಲೇ ಜೈನ ಸಮುದಾಯದ ಆರ್ಚಾಯರು, ನಾನಾ ಪಂಥದ ಮುನಿಗಳು 108 ಕಳಶಗಳನ್ನು ಸಿದ್ದಪಡಿಸಿದ್ದರು. ಮಧ್ಯಾಹ್ನ 2 ಗಂಟೆಗೆ ಜಲಾಭಿಷೇಕದ ಮೂಲಕ ಮಹಾಮಜ್ಜನ ಆರಂಭವಾಯಿತು. ಎಳನೀರು, ಕ್ಷೀರ, ಗಂಧ, ಅರಿಶಿಣ, ಕಬ್ಬಿನ ರಸ, ಚಂದನ, ನಾನಾ ಗಿಡಮೂಲಿಕೆ ಸೇರಿ ಹಲವು ದ್ರವ್ಯಗಳನ್ನು ಸರತಿ ಸಾಲಿನಲ್ಲಿ ನಿಂತು ಅಜಾನುಬಾಹು ಬಾಹುಬಲಿಯ ನೆತ್ತಿ ಮೇಲೆ ಸುರಿದು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡರು.

ಮೊದಲ ದಿನದಂದು 108 ಕಳಶ ನೀಡಿದ್ದರೂ, ಅನೇಕರು ತಮ್ಮ ಕುಟುಂಬಸ್ಥರೊಂದಿಗೆ ಆಗಮಿಸಿ, ಹೆಚ್ಚು ಜಲಾಭಿಷೇಕ ಮಾಡಲು ಅಪೇಕ್ಷಿಸಿದ್ದರಿಂದ ಮೊದಲ ಅಭಿಷೇಕ ಮುಗಿಯುವುದು ತಡವಾಯಿತು. ಇದರೊಂದಿಗೆ ನಾನಾ ಶ್ವೇತಾಂಬರ ಹಾಗೂ ದಿಗಂಬರ ಮುನಿಗಳು ಅಭಿಷೇಕ ಮಾಡಲು ಆಗಮಿಸಿದಾಗ, ಜಲಾಭಿಷೇಕ 40 ನಿಮಿಷ ಹೆಚ್ಚಿನ ಅವಧಿ ನಡೆಯಿತು.

ಮಸ್ತಕಾಭಿಷೇಕದ ಮೊದಲ ಕಳಶವನ್ನು ರಾಜಸ್ಥಾನ ಮೂಲದ ಆಶೋಕ್ ಪಾಟ್ನಿ ಕುಟುಂಬಸ್ಥರು ₹ 11.61 ಕೋಟಿ ನೀಡಿ ಹರಾಜಿನಲ್ಲಿ ಪಡೆದಿದ್ದರು. ಇದೇ ಕುಟುಂಬ 2006ರಲ್ಲಿ ಮೊದಲ ಕಳಶವನ್ನು ಹರಾಜಿನಲ್ಲಿ ₹ 1.08 ಕೋಟಿಗೆ ಪಡೆದಿದ್ದು ವಿಶೇಷ.

ಈ ಮಹಾಮಜ್ಜನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಅವರನ್ನು ಬೆಟ್ಟಕ್ಕೆ ಹೊತ್ತೊಯ್ಯಲು ಭದ್ರತಾ ಸಿಬ್ಬಂದಿ ಡೋಲಿ ಮತ್ತು ಹೊರುವವರೊಂದಿಗೆ ಸಿದ್ಧವಾಗಿದ್ದರು. ಆದರೆ, ಅಹಿಂಸೆಯ ಪ್ರತಿರೂಪದ ತ್ಯಾಗಮೂರ್ತಿ ಬಾಹುಬಲಿಯ ದರ್ಶನಕ್ಕೆ ಬಂದ ಸಿದ್ದರಾಮಯ್ಯ ಇದ್ಯಾವುದು ಬೇಡ ಎಂದು ನಿರಾಕರಿಸಿ ಮೆಟ್ಟಿಲುಗಳ ಮೂಲಕವೇ ಬೆಟ್ಟ ಹತ್ತಿ ಪೂಜಾ ಕಾರ್ಯ ಪೂರ್ಣಗೊಳಿಸಿದರು.

Leave a Reply